
ಸಾಮಾನ್ಯವಾಗಿ ರಾಜಕೀಯ ಅಂದ್ರೆ ಕೇವಲ ಆರೋಪ ಪ್ರತ್ಯಾರೋಪ, ಕಾಲೆಳೆಯುವ ತಂತ್ರಗಳು ಅಂತಲೇ ನಾವು ನೋಡಿರುತ್ತೇವೆ. ಆಡಳಿತ ಪಕ್ಷ ಏನೇ ಮಾಡಿದರೂ ಅದನ್ನು ವಿರೋಧಿಸುವುದೇ ಪ್ರತಿಪಕ್ಷಗಳ ಧರ್ಮ ಎಂಬಂತಾಗಿರುವ ಈ ಕಾಲಘಟ್ಟದಲ್ಲಿ, ಅದು ಸರ್ವೇ ಸಾಮನ್ಯ ಆಗಿಬಿಟ್ಟಿದೆ. ಬೈಂದೂರಿನಲ್ಲಿ ನಡೆದ ಒಂದು ಘಟನೆ ರಾಜಕೀಯದ ಸೀಮೋಲ್ಲಂಘನ ಮಾಡಿ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ನಿಸ್ವಾರ್ಥ ಸೇವೆಯ ದೇಗುಲ ಶ್ರೀ ರಾಘವೇಂದ್ರ ಮಠದ ಸಮೀಪದ ಹೇನಬೇರುವಿನಲ್ಲಿ ತಲೆ ಎತ್ತಿರುವ ಕಟ್ಟಡವೊಂದು ಕೇವಲ ಇಟ್ಟಿಗೆ ಸಿಮೆಂಟ್ನ ನಿರ್ಮಾಣವಲ್ಲ. ಅದು ನೊಂದ ಜೀವಗಳಿಗೆ ಆಸರೆಯಾಗುವ ಭರವಸೆಯ ಗೂಡು. ಹೌದು, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆಯವರ ಮುತುವರ್ಜಿಯಲ್ಲಿ ನಿರ್ಮಾಣವಾಗಿರುವ “ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ” ಇಂದು ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ವಿಧಿಯಾಟಕ್ಕೆ ಸಿಲುಕಿ, ಬೆನ್ನುಹುರಿ ಸಮಸ್ಯೆಯಿಂದ ಹಾಸಿಗೆ ಹಿಡಿದು ಬದುಕು ಮುಗಿಯಿತೇನೋ ಎಂದು ಕೊರಗುವವರಿಗೆ ಈ ಕೇಂದ್ರ ಮರುಜನ್ಮ ನೀಡುವ ಸಂಜೀವಿನಿಯಾಗಿದೆ.

ಶಾಸಕರಾಗಿ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಕ್ಷೇತ್ರದುದ್ದಕ್ಕೂ ಬೆನ್ನುಹುರಿ ಆಘಾತಕ್ಕೊಳಗದವರ ಮನೆಬಾಗಿಲಿಗೆ ತೆರಳಿ, ಅವರ ಕಷ್ಟ ನಷ್ಟಗಳನ್ನು ಕೇಳಿಕೊಂಡು ಅವರಿಗಾಗಿ ಸಹಕಾರ ಸಹಾಯ ಮಾಡಲೇಬೇಕೆಂದು ನಿಶ್ಚಯಿಸಿ ಈ ಕಾರ್ಯವನ್ನು ಮಾಡಿರುವುದು. ಕೊಟ್ಟ ಮಾತಿನಂತೆ ನಡೆದುಕೊಂಡ ಶಾಸಕರು ಎನ್ನುವುದಕ್ಕೆ ಜ್ವಲಂತ ಉದಾಹರಣೆ ಆಗಿದೆ. ಈ ಕೇಂದ್ರದ ಉದ್ಘಾಟನೆ ಅಥವಾ ವೀಕ್ಷಣೆಯ ಸಂದರ್ಭದಲ್ಲಿ ಕಂಡುಬಂದ ದೃಶ್ಯವಂತೂ ಅಪರೂಪದಲ್ಲಿ ಅಪರೂಪ. ಶಾಸಕರ ಈ ನಿಸ್ವಾರ್ಥ ಸೇವಾ ಕಾರ್ಯಕ್ಕೆ ಸ್ವತಃ ವಿರೋಧ ಪಕ್ಷದ ನಾಯಕರುಗಳೇ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ರಾಜಕೀಯದಲ್ಲಿ ನಮ್ಮ ಸಿದ್ಧಾಂತಗಳು ಬೇರೆ ಇರಬಹುದು, ಆದರೆ ಜನಸೇವೆಯಲ್ಲಿ ನಾವೆಲ್ಲ ಒಂದೇ” ಎಂಬ ಸಂದೇಶವನ್ನು ಈ ದೃಶ್ಯ ಸಾರುವಂತಿತ್ತು. ವಿರೋಧ ಪಕ್ಷದ ನಾಯಕರು ಗಂಟಿಹೊಳೆಯವರ ಕಾರ್ಯಕ್ಕೆ ತಲೆದೂಗುತ್ತಿದ್ದಾರೆಂದರೆ, ಆ ಕೆಲಸದಲ್ಲಿ ಅದೆಷ್ಟು ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಇದೆ ಎಂಬುದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ. ಒಳ್ಳೆಯ ಕೆಲಸವನ್ನು ‘ಒಳ್ಳೆಯದು’ ಎಂದು ಒಪ್ಪಿಕೊಳ್ಳಲು ಎದೆಯಾಳದಲ್ಲಿ ಮನುಷ್ಯತ್ವ ಇರಬೇಕು. ಆ ಮನುಷ್ಯತ್ವ ಬೈಂದೂರಿನ ರಾಜಕೀಯ ಅಖಾಡದಲ್ಲಿ ಗೆದ್ದಿದೆ.
“ಜನಸೇವೆಯೇ ಜನಾರ್ಧನ ಸೇವೆ” ಎಂಬ ಮಾತು ಕೇವಲ ಭಾಷಣಕ್ಕೆ ಸೀಮಿತವಾಗಬಾರದು. ದೇವರನ್ನು ಗುಡಿಯಲ್ಲಿ ಹುಡುಕುವುದು ಸಾಮಾನ್ಯ. ನೋವಿನಲ್ಲಿರುವ ಮನುಷ್ಯನ ಕಣ್ಣೀರು ಒರೆಸುವುದರಲ್ಲಿ ದೇವರನ್ನು ಕಾಣಬೇಕು ಎಂಬ ತತ್ವವನ್ನು ಗುರುರಾಜ್ ಗಂಟಿಹೊಳೆಯವರು ಅಕ್ಷರಶಃ ಪಾಲಿಸಿದ್ದಾರೆ. ಬೆನ್ನುಹುರಿ ಅಪಘಾತಕ್ಕೊಳಗಾದವರ ಪುನಶ್ಚೇತನಕ್ಕೆ ಮುಂದಾಗಿರುವುದು ಅವರ ಸಂವೇದನಾಶೀಲತೆಗೆ ಕನ್ನಡಿ ಹಿಡಿದಿದೆ. ಪಕ್ಷ, ಜಾತಿ, ಮತಗಳ ಹಂಗಿಲ್ಲದೆ ಮನುಷ್ಯನ ನೋವಿಗೆ ಸ್ಪಂದಿಸುವ ಇಂತಹ ಕಾರ್ಯಗಳೇ ನಿಜವಾದ ‘ರಾಜಧರ್ಮ’. ಹೇನಬೇರುವಿನಲ್ಲಿ ಬೆಳಗಿದ ಈ ಮಾನವೀಯತೆಯ ಹಣತೆ, ರಾಜ್ಯದ ಇತರೆಲ್ಲಾ ಕ್ಷೇತ್ರಗಳಿಗೂ ಮಾದರಿಯಾಗಲಿ. ಟೀಕೆಗಳ ಅಬ್ಬರದಲ್ಲಿ ಕಳೆದು ಹೋಗದಂತೆ, ಇಂತಹ ಸತ್ಕಾರ್ಯಗಳಿಗೆ ಪಕ್ಷಾತೀತವಾಗಿ ಸಿಗುತ್ತಿರುವ ಬೆಂಬಲ ನಿಜಕ್ಕೂ ಸ್ವಾಗತಾರ್ಹ.
-ಶೋಧನ್ ಕುಂದಾಪುರ





















































































































