
ಡಾ. ಆಶಾಜ್ಯೋತಿ ರೈಯವರು ಆಸರೆ ಚಾರಿಟೇಬಲ್ ಟ್ರಸ್ಟ್ನ ಸ್ಥಾಪಕಾಧ್ಯಕ್ಷೆ ಮತ್ತು ಧಾರ್ಮಿಕ, ವೈದ್ಯಕೀಯ ರಂಗದಲ್ಲಿ ಸಕ್ರಿಯರಾಗಿರುವ ಸಾಧಕಿ. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಅವರ ಧರ್ಮಪತ್ನಿಯಾದ ಇವರು, ಜನಪರ ಕಾರ್ಯಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಡಾ. ಆಶಾಜ್ಯೋತಿ ರೈಯವರು ಆಸರೆ ಚಾರಿಟೇಬಲ್ ಟ್ರಸ್ಟ್ ಮೂಲಕ ನೊಂದವರಿಗೆ, ರೋಗಿಗಳಿಗೆ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಾಮಾಜಿಕ, ಧಾರ್ಮಿಕ ಮತ್ತು ವೈದ್ಯಕೀಯ ರಂಗದಲ್ಲಿ ಸಕ್ರಿಯರಾಗಿದ್ದು, ಜನಜಾಗೃತಿ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಸಮಾಜಕ್ಕೆ ಸಂದೇಶ ನೀಡುತ್ತಿದ್ದಾರೆ. ಇವರು ವಿವಿಧ ಸಾಂಸ್ಕೃತಿಕ ಮತ್ತು ಆಯುರ್ವೇದ ಸಂಬಂಧಿತ ಸಮಾರಂಭಗಳಲ್ಲಿ ಭಾಗವಹಿಸಿ, ಆಯುರ್ವೇದವನ್ನು ಮೊದಲ ಚಿಕಿತ್ಸಾ ಆಯ್ಕೆಯಾಗಿ ಬಳಸಬೇಕೆಂದು ಉತ್ತೇಜಿಸುತ್ತಾ ಬಂದಿದ್ದಾರೆ.


ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಾಗಿ ಪ್ರತಿಷ್ಠಿತ ವೀರ ರಾಣಿ ಅಬ್ಬಕ್ಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ABRSM- KRMSS, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಮಂಗಳೂರು ವಿಭಾಗ) ಆಯೋಜಿರುವ ಅಬ್ಬಕ್ಕ 500 ಪ್ರೇರಣಾದಾಯಿ 100 ಉಪನ್ಯಾಸಗಳ ಸರಣಿ ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಇವರ ಧಾರ್ಮಿಕ ರಂಗ, ವೈದ್ಯಕೀಯ ರಂಗ ಹಾಗೂ ಸಮಾಜ ಸೇವೆಗೆ ವೀರರಾಣಿ ಅಬ್ಬಕ್ಕ ಪ್ರಶಸ್ತಿಯ ಗೌರವವು ಇನ್ನಷ್ಟು ಉತ್ತುಂಗಕ್ಕೆ ಏರಲು ಅನುವು ಮಾಡಿಕೊಟ್ಟಂತಾಗಿದೆ. ಪ್ರಶಸ್ತಿ ಪ್ರಧಾನ ಸಮಾರಂಭವು ಫೆಬ್ರವರಿ 16 ರಂದು ಪುತ್ತೂರು ನೆಹರೂ ನಗರದ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ.





















































































































