
ಸಮಯಕ್ಕೆ ಅದೆಷ್ಟು ವೇಗ. ಹಿಂದೆ ಹತ್ತಾರು ವರ್ಷಗಳಲ್ಲಿ ಆಗುತ್ತಿದ್ದ ಬದಲಾವಣೆ ಮೂರ್ನಾಲ್ಕು ವರ್ಷಕ್ಕೆ ಇಳಿದದ್ದು ಇಂದಿಗೆ ಇತಿಹಾಸ. ಇವತ್ತು ಐದಾರು ತಿಂಗಳಲ್ಲಿ ಹತ್ತಾರು ವರ್ಷಗಳಲ್ಲಿ ಆಗುತ್ತಿದ್ದ ಬದಲಾವಣೆ ಆಗುತ್ತಿದೆ. ನಗರೀಕರಣ, ಡೆವಲಪ್ಮೆಂಟ್, ಉದ್ಯೋಗ, ಅವಕಾಶಗಳ ಹೆಸರಿನಲ್ಲಿ ನಾವು ಇಂದಿನ ಪರಿಸ್ಥಿತಿಯಲ್ಲಿ ಬಂದು ನಿಂತಿದ್ದೇವೆ. ಇದನ್ನು ನಾನು ಪಾಯಿಂಟ್ ಆಫ್ ನೋ ರಿಟರ್ನ್ ಎಂದುಕೊಂಡಿದ್ದೆ. ಆದರೆ ಯಾವುದನ್ನೂ ಕೂಡಾ ನಾವು ಇಂದಿಗೆ ಇಷ್ಟೇ ಎಂದು ಹೇಳಲು ಆಗುವುದಿಲ್ಲ ಎನ್ನುವುದಕ್ಕೆ ಉದಾಹರಣೆ ಸಿಕ್ಕಿದೆ. ಆಂಥ್ರೋಪಿಕ್ ಕ್ಲೌಡ್ ಎಐ ನಮ್ಮ ಬದುಕನ್ನು ಆ ಮಟ್ಟಿಗೆ ಬದಲಿಸಬಲ್ಲದು. ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಬಗ್ಗೆ ಇನ್ನಷ್ಟು ಹೇಳುವ ಮುಂಚೆ ಒಂದೆರೆಡು ಉದಾಹರಣೆಗಳನ್ನು ಹೇಳುವೆ. ನಮ್ಮಲ್ಲಿದ್ದ ಕ್ಷಮತೆಯನ್ನು ನಾವೇ ಹೇಗೆ ಕೈಯಾರೆ ಅಭಿವೃದ್ಧಿಯ ಬೆನ್ನು ಹತ್ತಿ ಹಾಳು ಮಾಡಿಕೊಂಡೆವು ಎನ್ನುವುದನ್ನು ಹೇಳಿದಾಗ ಮಾತ್ರ ಆಂಥ್ರೋಪಿಕ್ ಎಐ ಅಥವಾ ಸಾಮಾನ್ಯವಾಗಿ ಮುಂದಿನ ದಿನಗಳಲ್ಲಿ ಒಟ್ಟಾರೆ ಎಐ ತರಬಹುದಾದ ಬದಲಾವಣೆಗಳಿಗೆ ನಾವೆಷ್ಟು ಸಿದ್ದ ಎನ್ನುವುದರ ಅರಿವು ಹೆಚ್ಚಾಗುತ್ತದೆ. ಮೊನ್ನೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಕಣ್ಣಿಗೆ ಬಿತ್ತು. ಅದರಲ್ಲಿ ಅಪ್ಪ ತನ್ನ ಮಗಳಿಗೆ ಕಾರಿನ ಟೈರುಗಳಿಗೆ ಗಾಳಿ ತುಂಬಿಸಿಕೊಂಡು ಬರಲು ಹೇಳುತ್ತಾರೆ. ಮಗಳು ಅಪ್ಪ ನನ್ನ ಬಳಿ ಕೇವಲ ೮೦೦ ರೂಪಾಯಿಯಿದೆ, ಅಷ್ಟರಲ್ಲಿ ಕಾರಿನ ಟೈರಿಗೆ ಗಾಳಿ ತುಂಬಿಸಲು ಸಾಧ್ಯವಾಗುತ್ತದೆಯೇ? ಎನ್ನುತ್ತಾಳೆ. ಇದು ಇಂದಿನ ಯುವ ಜನತೆಯನ್ನು ಅದರಲ್ಲೂ ವೇಗವಾಗಿ ಬೆಳೆದಿರುವ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಮಕ್ಕಳ ಕಥೆ. ಆ ಹುಡುಗಿಯನ್ನು ಅಥವಾ ಈಗಿನ ಮಕ್ಕಳನ್ನು ನಿಂದಿಸಿ ಪ್ರಯೋಜನವೇನು? ಇನ್ನೊಂದು ಘಟನೆ. ಅದರಲ್ಲಿ ಅಪ್ಪನಿಗೆ ಹೊಸ ಮೊಬೈಲ್ನಲ್ಲಿರುವ ಅಪ್ಲಿಕೇಶನ್ಸ್ ಇತ್ಯಾದಿಗಳನ್ನು ಹೇಗೆ ಬಳಸಬೇಕು ಎನ್ನುವುದು ಗೊತ್ತಿರುವುದಿಲ್ಲ. ಆತ ಬಹಳಷ್ಟು ಪರದಾಡುತ್ತಿರುತ್ತಾರೆ. ಆತನ ಮಗಳು ಬಂದವಳೇ ಅಯ್ಯೋ ಅಪ್ಪ ಇದು ಬಹಳ ಸಿಂಪಲ್ ಎಂದವಳೇ ಒಂದೆರೆಡು ನಿಮಿಷದಲ್ಲಿ ಅವರಪ್ಪನ ಸಮಸ್ಯೆ ಬಗೆಹರಿಸಿ ಅದನ್ನು ಹೇಗೆ ಉಪಯೋಗಿಸಬೇಕು ಎಂದು ಹೇಳಿಕೊಡುತ್ತಾಳೆ.

ಮೇಲಿನ ಎರಡು ಉದಾಹರಣೆಯನ್ನು ಗಮನಿಸಿ ನೋಡಿ. ಕಾರಿಗೆ ಗಾಳಿ ತುಂಬಿಸಲು ಹಣ ಬೇಕಿಲ್ಲ. ಹಾಗೊಮ್ಮೆ ಕೊಟ್ಟರೂ ಹತ್ತು ರೂಪಾಯಿ ಭಕ್ಷೀಸು ರೀತಿಯಲ್ಲಿ ಕೊಟ್ಟರೆ ಸಾಕು ಎನ್ನುವುದು ಗೊತ್ತಿರಲಿಲ್ಲ. ಏಕೆಂದರೆ ಇದರ ಬಗ್ಗೆ ಆ ಮಗುವಿಗೆ ಅರಿವಿಲ್ಲ ಅನುಭವವಿಲ್ಲ. ಇವತ್ತಿನ ಮಕ್ಕಳು ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ಜನ್ಮ ತಳೆಯುತ್ತಾರೆ ಎನ್ನುವಷ್ಟು ಮೊಬೈಲ್ ಸಾಂಗತ್ಯ ಅವರಲ್ಲಿದೆ. ಸಹಜವಾಗೇ ಅನುಭವ, ಅರಿವು ಎರಡೂ ಅದರ ಬಗ್ಗೆಯಿದೆ. ಹೀಗಾಗಿ ಮೊಬೈಲಿಗೆ ಸಂಬಂಧಿಸಿದ ಸಮಸ್ಯೆಯನ್ನು ಇನ್ನೊಂದು ಮಗು ಸುಲಭವಾಗಿ ಬಗೆಹರಿಸಿತು. ಇದರರ್ಥ ನಾವು ಯಾವುದನ್ನು ಗಮನವಿಟ್ಟು ಮಾಡುತ್ತೇವೆ, ಯಾವುದಕ್ಕೆ ನಮ್ಮನ್ನು ನಾವು ತೆರೆದುಕೊಳ್ಳುತ್ತೇವೆ, ಅದರಲ್ಲಿ ನಾವು ಕ್ಷಮತೆಯನ್ನು ಗಳಿಸಿಕೊಳ್ಳುತ್ತಾ ಹೋಗುತ್ತೇವೆ. ಇವತ್ತಿನ ಮಕ್ಕಳು ಎಂದು ಅವರನ್ನು ಮಾತ್ರ ಟಾರ್ಗೆಟ್ ಮಾಡುವುದು ಬೇಡ. ನಮ್ಮ ಬೆನ್ನನ್ನು ಕೂಡ ನಾವು ಒಂದಷ್ಟು ನೋಡಿಕೊಳ್ಳುವ ಮನಸ್ಸು ಮಾಡೋಣ. ಮನೆಯಲ್ಲಿ ನಲ್ಲಿಯ ಸಮಸ್ಯೆಯಾದರೆ ನಮ್ಮಲ್ಲಿ ಎಷ್ಟು ಜನಕ್ಕೆ ಅದನ್ನು ರಿಪೇರಿ ಮಾಡಲು ಬರುತ್ತದೆ. ಕಾರಿನ ಟೈರು ನಾವು ಬದಲಿಸಬಲ್ಲೆವೇ? ಅಡುಗೆ ಮಾಡಬಲ್ಲವೇ? ಮನೆಯನ್ನು ಕ್ಲೀನ್ ಮಾಡಬಲ್ಲವೇ? ಐರನ್ ಮಾಡಬಲ್ಲವೇ? ನಾಳೆ ಡೂಮ್ಸ್ ಡೇ ಎದುರಾದರೆ ನಾವು ಅದಕ್ಕೆ ಸಿದ್ಧವಿದ್ದೇವೆಯೇ? ಅಂದರೆ ಮತ್ತೆ ಕೃಷಿ ಮಾಡುವುದು, ಹಾಲು ಕರೆಯುವುದು ಮಾಡಬಲ್ಲವೇ? ನಮ್ಮ ಹೆತ್ತವರು ಅಥವಾ ಅಜ್ಜ ಅಜ್ಜಿ ಬದುಕಿದ್ದ ಆ ಕೃಷಿ ಬದುಕನ್ನು ನಾವು ಅಪ್ಪಿಕೊಳ್ಳಬಲ್ಲವೆ? ಇದ್ಯಾಕೆ ಕೃಷಿ ಬದುಕು, ಹಳ್ಳಿ ಬದುಕುಗಳ ಬಗ್ಗೆ ಮಾತಾಡುತ್ತಿದ್ದೇನೆ ಎನ್ನುವ ಸಂಶಯ ನಿಮ್ಮಲ್ಲಿ ಉತನ್ನವಾಗಿರುವ ಸಾಧ್ಯತೆಯಿದೆ. ಗಮನಿಸಿ ಎಐ ಎನ್ನುವುದು ಅಮ್ಮ ಊಟ ಮಾಡದೇ ಹಠ ಮಾಡುತ್ತಿದ್ದ ಮಗುವಿಗೆ ‘ಗುಮ್ಮ’ ಬರುತ್ತಾನೆ ಬೇಗ ತಿನ್ನು ಎಂದು ಹೆದರಿಸಿದ ಗುಮ್ಮನಲ್ಲ. ಅದು ರಿಯಾಲಿಟಿ. ಈ ಮಾತುಗಳನ್ನು ನಾನು ಬಹಳ ಬಾರಿ ಹೇಳಿದ್ದೇನೆ. ೨೦೩೦ ರ ವೇಳೆಗೆ ಜಗತ್ತು ಬಹಳ ಬದಲಾಗಿ ಹೋಗುತ್ತದೆ. ಇವತ್ತು ನಾವು ನೋಡುತ್ತಿರುವ ಬಹುತೇಕ ಉದ್ಯೋಗ, ದಿನ ಐದಾರು ವರ್ಷದಲ್ಲಿ ಮೇಲಿನ ಸಾಲುಗಳಲ್ಲಿ ಹೇಳಿದಂತೆ ಬದುಕುವ ರೀತಿ ಬದಲಾಗುತ್ತದೆ. ಇವತ್ತಿನ ಕೆಲಸಗಳು ಇರುವುದಿಲ್ಲ. ಈ ಮಾತನ್ನು ಈಗಾಗಲೇ ಬಹಳಷ್ಟು ಜನ ಹೇಳಿದ್ದಾರೆ. ಇದಕ್ಕೆ ನಾವು ಹೇಗೆ ಸಿದ್ಧರಾಗಬೇಕು? ಇದಕ್ಕೆ ಬೇಕಾದ ಪ್ರಮುಖ ಅಂಶಗಳೇನು? ಎನ್ನುವುದನ್ನು ಕೂಡ ನೋಡೋಣ.
ಎಲ್ಲಕ್ಕೂ ಮುಖ್ಯವಾಗಿ ನಮಗೆ ಬೇಕಿರುವುದು ನೆಲ. ನಾವು ಅಭಿವೃದ್ಧಿಯ ಹೆಸರಿನಲ್ಲಿ ಪೂರ್ವಜರು ಮಾಡಿಟ್ಟ ನೆಲವನ್ನು ಮಾರಿ ಅಪಾರ್ಟ್ಮೆಂಟ್ ಕೊಂಡೆವು. ಇವತ್ತು ಈ ಅಪಾರ್ಟ್ಮೆಂಟ್ ಯಾರಿಗೆ ಮಾರೋಣ? ನೆಲವನ್ನು ಹೇಗೆ ಕೊಳ್ಳೋಣ? ನೆಲ ಕೊಳ್ಳುವುದು ಪ್ರಥಮ. ಆ ನಂತರ ಅಲ್ಲಿಗೆ ಸೋಲಾರ್ ಅಳವಡಿಸಿ ಎನರ್ಜಿ ಪಡೆದುಕೊಳ್ಳಬೇಕು. ಆಹಾರ ಉತ್ಪಾದನೆ, ಹಾಲು ಇತ್ಯಾದಿಗಳನ್ನು ಉತ್ಪಾದಿಸುವುದು ಕಲಿಯಬೇಕು. ಇವೆಲ್ಲವನ್ನೂ ನಾವೊಬ್ಬರೇ ಮಾಡುವ ಕ್ಷಮತೆಯನ್ನು ಕಳೆದುಕೊಂಡಿದ್ದೇವೆ. ಹೀಗಾಗಿ ಪುಟ್ಟ ಪುಟ್ಟ ಕಮ್ಯುನಿಟಿಗಳನ್ನು ಕಟ್ಟಿಕೊಳ್ಳುವುದು ನಾವು ಮಾಡಲೇಬೇಕಾದ ಇನ್ನೊಂದು ಅಂಶ. ಇವತ್ತಿನ ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿ ಮಾಡುವುದು ಕಲಿಯಬೇಕಾಗಿರುವ ಪ್ರಮುಖ ಅಂಶ. ಮಜಾ ನೋಡಿ ಅರವತ್ತು ಎಪ್ಪತ್ತು ವರ್ಷಗಳ ಹಿಂದೆ ಅಮೇರಿಕಾ ದೇಶ ಶುರು ಮಾಡಿದ ಅಭಿವೃದ್ಧಿ ಆಟ ಬಸವಳಿದಿದೆ. ನಾವು ಎಲ್ಲಿ ಆಟವನ್ನು ಶುರು ಮಾಡಿದ್ದೆವು ಅಲ್ಲಿಗೆ ಮರಳಿದ್ದೇವೆ. ನೀವು ಇನ್ನೊಂದು ಅಂಶವನ್ನು ಗಮನಿಸಿ ನೋಡಿ, ನಾವು ಮರಳುತ್ತಿರುವ ಬದುಕು ಸಾವಿರಾರು ವರ್ಷಗಳ ಕಾಲ ಬದಲಾವಣೆಯಿಲ್ಲದೆ ಗೆದ್ದ ಸಸ್ಟೇನಬಲ್ ಮಾಡಲ್. ಇವತ್ತಿನ ಅಭಿವೃದ್ಧಿ ಮಾಡಲ್ ಅರವತ್ತಕ್ಕೆ ರಿಟೈರ್ ಆಗಲಿದೆ. ಯಾವುದು ಸ್ಥಿರವಾಗಿ ಉಳಿದುಕೊಳ್ಳಬಹುದು ಅದರ ಹಿಂದೆ ನಮ್ಮ ಓಟವಿರಬೇಕಿತ್ತು. ಇವತ್ತಿಗೂ ಕಾಲ ಮಿಂಚಿಲ್ಲ. ನಾವು ಮರಳಿ ಮಣ್ಣಿಗೆ ಹೋಗಬೇಕಾದ ಸಮಯ ಸನಿಹವಾಗಿದೆ. ಹೀಗೆ ನಾವು ಮರಳಿ ಮಣ್ಣಿಗೆ ಹೋಗುವ ನಿರ್ಧಾರ ಸುಲಭವಲ್ಲ. ನಾವು ಆ ಬದುಕಿಗೆ ಬೇಕಾದ ಎಲ್ಲಾ ಕ್ಷಮತೆಗಳನ್ನು ಕೂಡಾ ಕಳೆದುಕೊಂಡು ಬಿಟ್ಟಿದ್ದೇವೆ. ನಿಧಾನವಾಗಿ ಮರಳುವ ಕೆಲಸವಾಗಬೇಕಿದೆ. ಇದನ್ನು ನಾವು ಸ್ವಇಚ್ಛೆಯಿಂದ ಮಾಡುವುದು ಒಳ್ಳೆಯದು. ಇಲ್ಲವಾದಲ್ಲಿ ಎಐ ನಮ್ಮನ್ನು ಆ ಬದುಕು ಅಪ್ಪಿಕೊಳ್ಳುವಂತೆ ಮಾಡುತ್ತದೆ. ಅಂಥ್ರೋಪಿಕ್ಸ್ ಎನ್ನುವ ಒಂದು ಎಐ ಟೂಲ್ ಭಾರತೀಯ ಐಟಿ ಕ್ಷೇತ್ರದಲ್ಲಿ ಫೆಬ್ರವರಿ ತಿಂಗಳಲ್ಲಿ ಎರಡು ಲಕ್ಷ ಕೋಟಿ ರೂಪಾಯಿ ಹಣದ ಮೌಲ್ಯವನ್ನು ಕಳೆದುಕೊಂಡಿದೆ. ಜಾಗತಿಕವಾಗಿ ೯೫ ಲಕ್ಷ ಕೋಟಿ ರೂಪಾಯಿಗೂ ಮೀರಿದ ಹಣವನ್ನು ಕಳೆದುಕೊಳ್ಳುವಂತೆ ಮಾಡಿದೆ. ಹೀಗೆ ಹಣ ಕಳೆದುಕೊಳ್ಳುವುದು ಎಂದರೇನು? ಎನ್ನುವ ಪ್ರಶ್ನೆ ಕೂಡಾ ನಿಮ್ಮಲ್ಲಿ ಉದ್ಭವವಾಗಿರಬಹುದು. ಅಂದರೆ ಗಮನಿಸಿ, ಈ ಹಿಂದೆ ಮಾಡುತ್ತಿದ್ದ ಕೆಲಸವನ್ನು ಈ ಅಂಥ್ರೋಪಿಕ್ಸ್ ಎಐ ಸಹಾಯದಿಂದ ಕೆಲಸಗಾರರ ಅವಶ್ಯಕತೆ ಬಹಳಷ್ಟು ಕಡಿಮೆ ಮಾಡಿಕೊಂಡು ಅತ್ಯಂತ ವೇಗವಾಗಿ ಮುಗಿಸಬಹುದು. ಉದಾಹರಣೆಗೆ ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸಂಖ್ಯೆ ಸಾವಿರ ಎಂದುಕೊಳ್ಳಿ. ನಾಳೆಯಿಂದಲೇ ೪೦೦/೫೦೦ ಜನರು ಅಥವಾ ಅದಕ್ಕಿಂತ ಹೆಚ್ಚಿನ ಜನರ ಅವಶ್ಯಕತೆ ಇರುವುದಿಲ್ಲ. ಈ ಸುದ್ದಿ ಮಾರುಕಟ್ಟೆಯಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಮಾರುಕಟ್ಟೆಯಲ್ಲಿ ಇಂತಹ ಐಟಿ ಕಂಪನಿಗಳ ಮೇಲೆ ಹಣವನ್ನು ಹೂಡಿದ ಹೂಡಿಕೆದಾರ ಈಗ ಕಂಗಾಲಾಗಿದ್ದಾರೆ. ಸಾವಿರ ರೂಪಾಯಿ ಹಣವನ್ನು ಹೂಡಿದ್ದ ವ್ಯಕ್ತಿಗಳ ಹಣ ಬೆಳೆದು ಹತ್ತಾರು ಸಾವಿರ ರೂಪಾಯಿ ಆಗಿತ್ತು. ಇದೀಗ ಈ ಸುದ್ದಿ ಆ ಹಣವನ್ನು ಕರಗಿಸಿ ಬಿಟ್ಟಿದೆ. ಐಟಿ ಕ್ಷೇತ್ರಕ್ಕೆ ಭವಿಷ್ಯವಿಲ್ಲ ಎನ್ನುವ ಭಯ ಶುರುವಾಗಿದೆ. ಭಾರತೀಯ ಐಟಿ ಕ್ಷೇತ್ರಕ್ಕೆ ಕ್ರಿಕೆಟ್ ಆಟಕ್ಕೆ ಸಿಕ್ಕಷ್ಟು ಮನ್ನಣೆ ಸಿಕ್ಕಿದೆ. ಹೀಗಾಗಿ ಎಲ್ಲರೂ ಅದರ ಬಗ್ಗೆ ಮಾತಾಡುತ್ತಾರೆ. ಇದನ್ನು ಹೊರತುಪಡಿಸಿ ಕೂಡಾ ಅಂಥ್ರೋಪಿಕ್ಸ್ ಲಾಯರುಗಳ, ಅಕೌಂಟೆಟ್ಗಳ, ಬಹಳಷ್ಟು ವೃತ್ತಿಪರರ ಕೆಲಸವನ್ನು ಕದಿಯಲಿದೆ. ಅಂದರೆ ಗಮನಿಸಿ ಹತ್ತು ಜನರು ಬೇಕಾಗುವ ಜಾಗದಲ್ಲಿ ಐದು ಜನ ಸಾಕು ಎನ್ನುವ ಮಟ್ಟಕ್ಕೆ ಅದು ಕೆಲಸವನ್ನು ಕಡಿಯಲಿದೆ. ಇದು ಯಾವ ಡೂಮ್ಸ್ ಡೇ ಗೂ ಕಡಿಮೆಯಲ್ಲ. ಇಷ್ಟು ದಿನ ಕೆಲಸದ ಮಧ್ಯೆ ಮತ್ತು ಅದರ ಸುತ್ತಾ ಜೀವನ ಕಟ್ಟುಕೊಂಡಿದ್ದ ಸಮಾಜಕ್ಕೆ ಇದೊಂದು ಆಘಾತವಾಗಲಿದೆ.
ಐಟಿ ಕ್ಷೇತ್ರದಲ್ಲಿರುವ ವ್ಯಕ್ತಿಗಳು ಬಹಳ ಬೇಗ ಮಾಡಬೇಕಿರುವ ಒಂದು ಕೆಲಸವೆಂದರೆ ಅದು ಪುಟ್ಟ ಕಮ್ಯುನಿಟಿಗಳನ್ನು ಕಟ್ಟಿಕೊಳ್ಳುವುದು. ಇದು ಹತ್ತು ಕುಟುಂಬಕ್ಕಿಂತ ಹೆಚ್ಚಾಗುವುದು ಬೇಡ. ಏಕೆಂದರೆ ಅದು ಕಪ್ಪೆಯನ್ನು ತಕ್ಕಡಿಗೆ ಹಾಕಿದಂತೆ ಆಗುತ್ತದೆ. ಸಮಾನ ಮನಸ್ಕರ ಒಕ್ಕೂಟ ಮಾಡಿಕೊಂಡು ಭೂಮಿ ಕೊಳ್ಳುವುದು ಮತ್ತು ಅಲ್ಲಿ ಬದುಕಲು ಬೇಕಾದ ಎಲ್ಲಾ ಮೂಲಭೂತ ಅಂಶಗಳನ್ನು ಕಟ್ಟಿಕೊಳ್ಳುವುದು ಮಾಡಬೇಕು. ಇದರ ಜೊತೆಗೆ ಎಐ ನಿಭಾಯಿಸುವ ಕಲೆಯನ್ನು ಕೂಡ ಕಲಿಯುವುದು ಮಾಡಬೇಕು. ಮೇಲಿನ ಎಲ್ಲಾ ಸಾಲುಗಳ ಅರ್ಥ ನಾವು ಎಐ ಗೆ ಹೆದರಿ ಓಡಬೇಕು ಎಂದಲ್ಲ. ಪರ್ಯಾಯ ಬದುಕನ್ನು ಕಟ್ಟಿಕೊಂಡು, ಬದುಕನ್ನು ಭದ್ರ ಮಾಡಿಕೊಂಡು ಎಐ ಮೂಲಕ ಈ ಬದುಕನ್ನು ಹೇಗೆ ಇನ್ನಷ್ಟು ವೃದ್ದಿಸಿಕೊಳ್ಳಬಹುದು ಎನ್ನುವುದನ್ನು ಮಾಡಬೇಕು ಎನ್ನುವುದಾಗಿದೆ. ಇದೆಲ್ಲವೂ ಆಗಬೇಕು ಎಂದರೆ ಮೊದಲಿಗೆ ನಾವು ಸಸ್ಟೈನಬಲ್ ಜೀವನ ಶೈಲಿಯನ್ನು ನಮ್ಮದಾಗಿಸಿಕೊಳ್ಳಬೇಕು. ಇದರ ಜೊತೆಗೆ ನಮ್ಮ ಮಕ್ಕಳಿಗೆ ನಾವು ಬದುಕಲು ಬೇಕಾದ ಮೂಲಭೂತ ಕೌಶಲಗಳನ್ನು ಕಲಿಸಬೇಕು. ಅಡುಗೆ, ಈಜು, ಸೈಕಲ್ ಸವಾರಿ, ಮರ ಹತ್ತುವುದು, ಹಾಲು ಕರೆಯುವುದು, ಒಟ್ಟಾರೆ ದೈಹಿಕ ಮತ್ತು ಮಾನಸಿಕವಾಗಿ ಅವರು ಸಿದ್ಧವಾಗಿರುವಂತೆ ನೋಡಿಕೊಳ್ಳಬೇಕು. ಗೊತ್ತಿಲ್ಲ, ನನಗೆ ಬರುವುದಿಲ್ಲ ಎನ್ನುವ ಪದಗಳು ಪೋಷಕರಾಗಿ ನಾವು ಮಾಡಿದ ತಪ್ಪುಗಳ ಫಲಿತಾಂಶ. ಹಿಂದೆ ಯಾವುದು ಸಹಜವಾಗಿತ್ತು, ಇಂದು ನಾವದನ್ನು ಕಲಿಯಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ. ಎಐ ನಾವಂದು ಕೊಂಡಷ್ಟು ದೊಡ್ಡ ವಿಪ್ಲವವನ್ನು ಸೃಷ್ಟಿಸದೇ ಹೋದರೂ ಕೂಡಾ ಮರಳಿ ಮಣ್ಣಿನ ಕಡೆಗೆ ಸಾಗುವುದು ಖಂಡಿತಾ ಕೆಟ್ಟ ಆಯ್ಕೆಯಲ್ಲ. ಆರೋಗ್ಯದ ದೃಷ್ಟಿಯಿಂದ, ಕುಟುಂಬದ ಸದಸ್ಯರ ಜೊತೆಗೆ ಸಮಯ ಕೆಳೆಯುವ ದೃಷ್ಟಿಯಿಂದ ನೋಡಿದಾಗ ಕೂಡಾ ಇದು ಅತ್ಯುತ್ತಮ ಆಯ್ಕೆಯಾಗುತ್ತದೆ. ಅಭಿವೃದ್ಧಿಯ ಹಿಂದೆ ಹೋದುದರ ದೊಡ್ಡ ಲಾಭವೆಂದರೆ ತಂತ್ರಜ್ಞಾನ. ಇವತ್ತಿಗೆ ಈ ಮಟ್ಟಿಗೆ ಬೆಳೆದಿರುವ ತಂತ್ರಜ್ಞಾನವನ್ನು ನಾವು ಕೆಟ್ಟದ್ದು ಎಂದು ನೋಡಬೇಕಾಗಿಲ್ಲ. ಅದನ್ನು ಬಳಸಿಕೊಂಡು ನಮ್ಮ ಜೀವನವನ್ನು ಇನ್ನಷ್ಟು ಹಸನಾಗಿಸಿಕೊಳ್ಳಬಹುದು. ತಂತ್ರಜ್ಞಾನ ಇವತ್ತಿಗೆ ಭೌಗೋಳಿಕವಾಗಿ ನಾವೆಲ್ಲಿದ್ದೇವೆ? ಅಥವಾ ಎಲ್ಲಿರಬೇಕು ಎನ್ನುವ ಪ್ರಶ್ನೆಯನ್ನು ಅಪ್ರಸ್ತುತವನ್ನಾಗಿಸಿದೆ. ನಾವು ನಮ್ಮಿಷ್ಟದ ಊರಿನಲ್ಲಿ, ಹಳ್ಳಿಯಲ್ಲಿ ಕುಳಿತು ಒಂದೊಳ್ಳೆ ಬದುಕು ಕಟ್ಟಿಕೊಳ್ಳಬಹುದು. ಅದರ ಜೊತೆಗೆ ಕೌಶಲ ವೃದ್ಧಿಸಿಕೊಂಡರೆ ಹತ್ತಾರು, ನೂರಾರು ಜನರ ಬದುಕಿನಲ್ಲಿ ಕೂಡಾ ಬದಲಾವಣೆ ತರಬಹುದು. ನಾವದಕ್ಕೆ ಸಿದ್ಧವಿರಬೇಕು ಅಷ್ಟೇ.





















































































































