
FKCCI ಮಾಜಿ ಅಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿಯವರು ಫೆಬ್ರವರಿ 12 ರಂದು ಜನತಾದಳ (ಸೇಕ್ಯುಲರ್) ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಮಾಜಿ ಪ್ರಧಾನಮಂತ್ರಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಹೆಚ್.ಡಿ ದೇವೇಗೌಡರವರ ದೆಹಲಿಯ ನಿವಾಸದಲ್ಲಿ ಸುಧಾಕರ್ ಎಸ್ ಶೆಟ್ಟಿಯವರಿಗೆ ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿಗಳು, ಸಾರ್ವಜನಿಕ ಜೀವನದಲ್ಲಿ ದೀರ್ಘಕಾಲದ ಅನುಭವ, ಜ್ಞಾನ ಮತ್ತು ಬದ್ಧತೆಯನ್ನು ಹೊಂದಿರುವ ಸುಧಾಕರ್ ಎಸ್ ಶೆಟ್ಟಿಯವರು ಪಕ್ಷದ ನೀತಿಗಳು ಮತ್ತು ದೃಷ್ಟಿಕೋನವನ್ನು ರಾಷ್ಟ್ರೀಯ ಮಟ್ಟದಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸುವಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಹೊಸ ಜವಾಬ್ದಾರಿಯಲ್ಲಿ ಅವರು ಯಶಸ್ವಿಯಾಗಲಿದ್ದಾರೆ ಎಂಬ ನಂಬಿಕೆ ಪಕ್ಷದ ನಾಯಕತ್ವಕ್ಕಿದೆ ಎಂದು ಹೇಳಿದರು. ಗೌರವದ ನೇಮಕಾತಿಗೆ ಕೃತಜ್ಞತೆ ಸಲ್ಲಿಸಿದ ಸುಧಾಕರ್ ಎಸ್ ಶೆಟ್ಟಿಯವರು, ಪಕ್ಷದ ನಾಯಕತ್ವ ತಮಗೆ ವಹಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕತೆ, ಸಮರ್ಪಣೆ ಮತ್ತು ನಿಷ್ಠೆಯಿಂದ ನಿರ್ವಹಿಸುವುದಾಗಿ ಭರವಸೆ ನೀಡಿದರು. ದೇಶದಾದ್ಯಂತ ಪಕ್ಷದ ಬಲವರ್ಧನೆ ಹಾಗೂ ಸಂಘಟನೆ ಬಲಪಡಿಸುವ ದಿಶೆಯಲ್ಲಿ ಕಾರ್ಯ ನಿರ್ವಹಿಸುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಸುಧಾಕರ್ ಎಸ್. ಶೆಟ್ಟಿ ಅವರೊಂದಿಗೆ ಜೆಡಿಎಸ್ ಹಿರಿಯ ನಾಯಕರಾದ ಎಚ್.ಜಿ ವೆಂಕಟೇಶ್, ಮಂಜುನಾಥ್ ಗಂಡಘಟ್ಟ, ಶೃಂಗೇರಿ ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ವಿವೇಕಾನಂದ ಭಟ್, ಕಣಿವೆ ವಿನಯ್, ದೀಪಕ್ ಕೊಳೆಲೆ, ವಾಸಪ್ಪ ಕುಂಚೂರು, ಗುರುಪ್ರಸಾದ್ ಭಟ್, ಉದಯ ಸುವರ್ಣರವರು ಸೇರಿದಂತೆ ಭರತ್ ಗಿಣಿಕಲ್ ಹಾಗೂ ಶಿವಶಂಕರ್ ಗೋರಿಗಂಡಿರವರು ಉಪಸ್ಥಿತರಿದ್ದರು.





















































































































