
ಒಂದು ಸತ್ಯನಾರಾಯಣ ಪೂಜೆಗೆ ತಗಲುವ ಖರ್ಚೆಷ್ಟು? ಒಂದು ಸಾವಿರ? ಐದು ಸಾವಿರ? ಇಪ್ಪತ್ತು ಸಾವಿರ? ಐವತ್ತು ಸಾವಿರ? ಇದು ಖರ್ಚು ಮಾಡುವವರ ಸಾಮರ್ಥ್ಯವನ್ನು ಹೊಂದಿಕೊಂಡಿದೆ. (ಕದ್ರಿ ದೇವಸ್ಥಾನದಲ್ಲಿ 125 ರೂಪಾಯಿಯಲ್ಲಿಯೂ ಸತ್ಯನಾರಾಯಣ ಪೂಜಾ ಆಗುತ್ತದೆ). ಇಪ್ಪತ್ತೈದು, ಐವತ್ತು ಸಾವಿರ ಖರ್ಚಿನ ಸತ್ಯನಾರಾಯಣ ಪೂಜೆಗಳು ಮುಂಬಾಯಿಯಲ್ಲಿ ಸಾಮಾನ್ಯ. ಬಡಾಯಿ ಕೊಚ್ಚಿಕೊಳ್ಳುವ ಬಂಟರಿಗೆ ತಾವು ಸತ್ಯನಾರಾಯಣ ಪೂಜೆಗೆ ಇಷ್ಟು ಸಾವಿರ ಖರ್ಚು ಮಾಡಿದ್ದೇವೆ ಅಂತ ಹೇಳಿಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಿದೆ. ಹೋಟೆಲ್ ಉದ್ಘಾಟನೆಗೆ ಸಾವಿರಾರು ರೂಪಾಯಿಯ ಸತ್ಯನಾರಾಯಣ ಪೂಜೆ ಮಾಡಿಸಿದ ಸೇಟುಗಳು ಉದ್ಧಾರವಾಗಿದ್ದಾರೋ ಇಲ್ಲವೋ ಗೊತ್ತಿಲ್ಲ, ಪುರೋಹಿತರು ಉದ್ಧಾರವಾದದ್ದಂತೂ ಸತ್ಯ.
ಅದೇ ಮರಾಠಿ ಭಟ್ಟರನ್ನು ಕರೆದು ಪೂಜೆ ಮಾಡಿಸಿದರೆ ಬರೇ ಎರಡು ಸಾವಿರದಲ್ಲೂ ಪೂಜೆ ಮುಗಿಸುತ್ತಾರೆ. ಆದರೆ ಅವರನ್ನು ಕರೆಯಲು ನಮಗೆ ಹಮ್ಮು ಬಿಡುವುದಿಲ್ಲ. ಇಂದು ಮುಂಬಯಿಯ ಪುರೋಹಿತರಿಗೆ ಸತ್ಯನಾರಾಯಣ ಪೂಜೆ ಹಣ ಗಳಿಸುವ ಸುಲಭ ಮಾರ್ಗವಾಗಿದೆ. ಪೂಜೆ ಮುಗಿದ ನಂತರ ಹರಿವಾಣಕ್ಕೆ ದುಡ್ಡು ಹಾಕುವುದರಲ್ಲಿಯೂ ಪೈಪೋಟಿ ಇದೆ. ಇಂದು ಪೌರೋಹಿತ್ಯವೇ ಒಂದು ಬೃಹತ್ ಉದ್ಯಮವಾಗಿದೆ. ಹೂವಿನ ಡೆಕೋರೇಷನ್ ನಿಂದ ಹಿಡಿದು ವಿಡಿಯೋ ಶೂಟಿಂಗ್ ವರೆಗಿನ ಎಲ್ಲಾ ಕೆಲಸಗಳನ್ನು ಮಾಡಿಕೊಡುವ ‘single window’ ಪುರೋಹಿತರೂ ಮುಂಬಾಯಿಯಲ್ಲಿ ಅಲ್ಲಲ್ಲಿ ಸಿಗುತ್ತಾರೆ. ಪೂಜೆಯ ಸಮಯದಲ್ಕಿ ಗಂಟೆ ಬಾರಿಸಲು, ಆರತಿಗೆ ಬತ್ತಿ ಹಚ್ಚಿಕೊಡಲು, ಆರತಿ ತಟ್ಟೆಯನ್ನು ಸಭೆಯಲ್ಲಿ ಹಿಡಿದು ತಿರುಗುತ್ತಾ ಕಲೆಕ್ಷನ್ ಮಾಡಲು ಹೀಗೆ ಮರಿ ಪುರೋಹಿತರ ಒಂದು ಗಡಣವೇ ಇರುತ್ತದೆ. (ಮರಾಟಿ ಬ್ರಾಹ್ಮಣರು ಈ ಎಲ್ಲಾ ಕೆಲಸವನ್ನು ತಾವೇ ಮಾಡುತ್ತಾರೆ)


ಸತ್ಯನಾರಾಯಣ ಪೂಜೆಯ ಬಹು ಮುಖ್ಯ ಅಂಗ ಆ ಪೂಜೆಯ ಹಿನ್ನೆಲೆಯ ಕಥೆ. ಕೆಲವೊಮ್ಮೆ ಕೆಲವು ಪುರೋಹಿತರು ಆ ಕಥೆಯನ್ನು ಹೇಳುವುದಿಲ್ಲ. ಸತ್ಯನಾರಾಯಣ ಪೂಜೆಯ ಪ್ರಸಾದದ ಮಹಿಮೆಯನ್ನು ವಿವರಿಸುವ ಒಂದು ಕಥೆ ಹೀಗಿದೆ- ಒಮ್ಮೆ ಕಾಡಿನಲ್ಲಿ ದನ ಮೇಯಿಸುವ ಮಕ್ಕಳು ಸೇರಿ ಕಾಡಿನಲ್ಲೇ ಸಿಗುವ ಫಲಗಳಿಂದ ಒಂದು ಮರದ ಬುಡದಲ್ಲಿ ಸತ್ಯನಾರಾಯಣ ಪೂಜೆಯನ್ನು ಮಾಡುತ್ತಾರೆ. ನಂತರ ಆ ಹಣ್ಣುಗಳನ್ನೇ ಪ್ರಸಾದವಾಗಿ ತಿನ್ನುತ್ತಾರೆ. ಆಗ ಅದೇ ದಾರಿಯಾಗಿ ಒಬ್ಬ ಅರಸ ಕುದುರೆಯಲ್ಲಿ ಬರುತ್ತಿರುತ್ತಾನೆ. ಆ ಮಕ್ಕಳು ಅವನಿಗೂ ಸತ್ಯನಾರಾಯಣ ಪೂಜೆಯ ಪ್ರಸಾದವಾಗಿ ಕಾಡಿನ ಹಣ್ಣುಗಳನ್ನು ಕೊಡುತ್ತಾರೆ. ರಾಜ ಅದನ್ನು ನಿರಾಕರಿಸುತ್ತಾನೆ. ಮುಂದೆ ಅವನಿಗೆ ಅನೇಕ ವಿಪತ್ತುಗಳು ಬಂದು ಅವನು ರಾಜ್ಯಭ್ರಷ್ಟನಾಗುತ್ತಾನೆ. ಮತ್ತೆ ಅವನು ಪಾಪ ಕಳೆಯಲು ಸತ್ಯನಾರಾಯಣ ಪೂಜೆ ಮಾಡಿಸಿ ಹಿಂದಿನ ರಾಜ್ಯವನ್ನು ಮರಳಿ ಪಡೆಯುತ್ತಾನೆ. ಈ ಕಥೆಯನ್ನು ಕೇಳಿದ ಮೇಲೆ ನನ್ನಲ್ಲಿ ಕೆಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಸಂಸ್ಕ್ರತದ ಮಂತ್ರಗಳನ್ನು, ವೈದಿಕ ಪೂಜಾ ವಿಧಾನಗಳನ್ನು ಅರಿಯದ ನಿರಕ್ಷರಕುಕ್ಷಿ ಮಕ್ಕಳ ಪೂಜೆಯನ್ನೂ ದೇವರು ಸ್ವೀಕರಿಸುತ್ತಾನೆಯೇ? ದೇವರು ಇಷ್ಟು ಸರಳ ಪೂಜೆಯನ್ನು ಸ್ವೀಕರಿಸುತ್ತಾನಾದರೆ ನಮಗೆ ವೈದಿಕರು ಮಾಡುವ ಅದ್ದೂರಿ ಪೂಜೆ ಯಾಕೆ ಬೇಕು? ಬರೇ ಪ್ರಸಾದ ಸ್ವೀಕರಿಸದಿದ್ದುಕ್ಕೆ ನಮ್ಮ ದೇವರು ಇಷ್ಟು ‘ಬೆಚ್ಚ’ ಆಗುತ್ತಾನೆಯೇ? ಇದು ಒಂದು ರೀತಿಯ ‘ಬ್ಲಾಕ್ಮೇಲ್’ ತಂತ್ರ ಅಲ್ಲವೇ? ಕೆಲವು ವೈದಿಕರು ಪೂಜಾ ಮಂಟಪವನ್ನು ತಿರುಪತಿ ದೇವರ ಹಾಗೆ ಶೃಂಗರಿಸುತ್ತಾರೆ. ಅಲ್ಲಿ ಪೂಜೆ ತಿಮ್ಮಪ್ಪನಿಗೋ, ಸತ್ಯನಾರಾಯಣನಿಗೋ?
ನನಗಂತೂ ಈ ಪ್ರಶ್ಣೆಗಳಿಗೆ ಉತ್ತರ ಸಿಕ್ಕಿಲ್ಲ. ನಿಮಗೆ ಗೊತ್ತಿದ್ದರೆ ತಿಳಿಸಿ.
ಬರಹ : ದಾಮೋದರ ಶೆಟ್ಟಿ ಇರುವೈಲು





















































































































