
ಒಂದು ನಾಗರಿಕತೆಯ ಶ್ರೇಷ್ಠತೆಯನ್ನು ಅದರ ಅರಮನೆಗಳು, ದೇವಾಲಯಗಳು ಅಥವಾ ಸಾಹಿತ್ಯದಿಂದ ಮಾತ್ರ ಅಳೆಯಲಾಗುವುದಿಲ್ಲ. ಆ ಸಮಾಜವು ಕಾಲವನ್ನು ಹೇಗೆ ಅರ್ಥ ಮಾಡಿಕೊಂಡಿತು? ಋತುಗಳನ್ನು ಹೇಗೆ ಗುರುತಿಸಿತು? ಕೃಷಿಯನ್ನು ಹೇಗೆ ಸಂಘಟಿಸಿತು? ಮತ್ತು ಪ್ರಕೃತಿಯ ಚಲನೆಯನ್ನು ಹೇಗೆ ವೈಜ್ಞಾನಿಕವಾಗಿ ಗಮನಿಸಿತು? ಎಂಬುವುದು ಅದರ ನಾಗರಿಕತೆಯ ಪ್ರಮುಖ ಮಾನದಂಡಗಳಾಗಿವೆ. ಆದ್ದರಿಂದಲೇ ಜಗತ್ತಿನ ಪ್ರತಿಯೊಂದು ಪ್ರಾಚೀನ ನಾಗರಿಕತೆಯು ತನ್ನದೇ ಆದ ಕಾಲಗಣನಾ ಪದ್ಧತಿಯನ್ನು ರೂಪಿಸಿಕೊಂಡಿದೆ. ಈಜಿಪ್ಟಿನವರು ನೈಲ್ ನದಿಯ ಪ್ರವಾಹವನ್ನು ಆಧರಿಸಿ ತಮ್ಮ ಕ್ಯಾಲೆಂಡರ್ ನಿರ್ಮಿಸಿದರು. ಮಾಯಾ ನಾಗರಿಕತೆಯು ಸೂರ್ಯ, ಚಂದ್ರ ಮತ್ತು ಗ್ರಹಗಳ ಚಲನೆಯನ್ನು ಆಧರಿಸಿದ ಅತ್ಯಂತ ನಿಖರ ಕಾಲಗಣನಾ ವ್ಯವಸ್ಥೆಯನ್ನು ರೂಪಿಸಿತು. ಭಾರತೀಯ ಉಪಖಂಡದಲ್ಲಿ ಸೌರಮಾನ ಮತ್ತು ಚಂದ್ರಮಾನ ಪರಂಪರೆಗಳು ಸಾವಿರಾರು ವರ್ಷಗಳಿಂದ ಬೆಳವಣಿಗೆಯಾದವು. ಈ ಹಿನ್ನೆಲೆಯಲ್ಲಿ ತುಳುನಾಡಿನಲ್ಲಿ ಇಂದಿಗೂ ಜೀವಂತವಾಗಿರುವ ತುಳು ಕ್ಯಾಲೆಂಡರ್ ಕೇವಲ ತಿಂಗಳುಗಳ ಹೆಸರಿನ ಪಟ್ಟಿಯಲ್ಲ. ಅದು ತುಳುನಾಡಿನ ಜನರ ಖಗೋಳ ಜ್ಞಾನ, ಪ್ರಕೃತಿ ಅರಿವು, ಕೃಷಿ ಜೀವನ, ಋತು ವಿಜ್ಞಾನ ಮತ್ತು ಸಾಂಸ್ಕೃತಿಕ ಸಂಘಟನೆಯ ಜೀವಂತ ದಾಖಲೆ. ಪಗ್ಗು, ಬೇಶ್ಯ, ಕಾರ್ತೆಲ್, ಆಟಿ, ಸೋಣ, ನಿರ್ನಾಳ, ಬೊಂತೆಲು, ಜಾರ್ದೆ, ಪೆರಾರ್ದೆ, ಪೊನ್ನಿ, ಮಾಯಿ ಮತ್ತು ಸುಗ್ಗಿ ಎಂಬ ಹನ್ನೆರಡು ತಿಂಗಳ ಹೆಸರುಗಳು ಇಂದಿಗೂ ತುಳುನಾಡಿನ ಜನಜೀವನದಲ್ಲಿ ಬಳಕೆಯಲ್ಲಿವೆ. ಈ ಹೆಸರುಗಳು ಕೇವಲ ಕಾಲದ ಗುರುತುಗಳಲ್ಲ. ಅವು ಪ್ರಕೃತಿಯ ಚಕ್ರದೊಂದಿಗೆ ಬೆಸೆದುಕೊಂಡಿರುವ ಜೀವನ ತತ್ತ್ವಗಳಾಗಿವೆ.


ತುಳು ಕ್ಯಾಲೆಂಡರ್ ಒಂದು ಸೌರಮಾನ ಕಾಲಗಣನಾ ವ್ಯವಸ್ಥೆ. ತಿಂಗಳುಗಳು ಸೂರ್ಯನ ಸಂಕ್ರಮಣದ ಆಧಾರದ ಮೇಲೆ ಆರಂಭವಾಗುತ್ತವೆ. ಪ್ರತಿ ತಿಂಗಳ ಮೊದಲ ದಿನವನ್ನು ಸಿಂಗೊಡೆ (ತಿಂಗೊಡೆ) ಎಂದು ಕರೆಯಲಾಗುತ್ತದೆ. ತಿಂಗಳ ಪರಿವರ್ತನೆಯನ್ನು ಸಂಕ್ರಮಣದ ಮೂಲಕ ಗುರುತಿಸುವ ಈ ಪದ್ಧತಿ ತುಳುನಾಡಿನ ಸ್ವಂತ ಕಾಲ ಪರಿಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ. ಇದರಿಂದ ತುಳುನಾಡಿನ ಜನರು ಸೂರ್ಯನ ಚಲನೆಯನ್ನು ಗಮನಿಸಿ ಕಾಲವನ್ನು ವಿಭಾಗಿಸುವ ಜ್ಞಾನವನ್ನು ಹೊಂದಿದ್ದರು ಎಂಬುದನ್ನು ಊಹಿಸಬಹುದು. ತುಳುನಾಡಿನ ಹೊಸ ವರ್ಷವನ್ನು ಬಿಸು ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಏಪ್ರಿಲ್ 14 ಅಥವಾ 15ರಂದು, ಸೂರ್ಯನು ಮೇಷ ರಾಶಿಗೆ ಪ್ರವೇಶಿಸುವ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ಇದೇ ದಿನ ಕೇರಳದಲ್ಲಿ ವಿಷು, ತಮಿಳುನಾಡಿನಲ್ಲಿ ಪುತಾಂಡು, ಅಸ್ಸಾಂನಲ್ಲಿ ರೊಂಗಾಲಿ ಬಿಹು, ಪಂಜಾಬಿನಲ್ಲಿ ವೈಶಾಖಿ ಆಚರಿಸಲಾಗುತ್ತದೆ. ಭಾರತದ ವಿವಿಧ ಭಾಗಗಳಲ್ಲಿ ಇದೇ ಸಮಯದಲ್ಲಿ ಸೌರ ಹೊಸ ವರ್ಷದ ಆಚರಣೆ ನಡೆಯುವುದು. ಪ್ರಾಚೀನ ಸೌರ ಕಾಲಗಣನೆಯ ವಿಶಾಲ ಪರಂಪರೆಯನ್ನು ಸೂಚಿಸುತ್ತದೆ.
ಇಲ್ಲಿ ಒಂದು ಕುತೂಹಲಕಾರಿ ಭಾಷಾ ಶಾಸ್ತ್ರೀಯ ಪ್ರಶ್ನೆ ಉದ್ಭವಿಸುತ್ತದೆ. ತುಳುವಿನ ಬಿಸು, ಅಸ್ಸಾಮಿನ ಬಿಹು, ಕೇರಳದ ವಿಷು ಮತ್ತು ಸಂಸ್ಕೃತದ ವಿಷುವ ಈ ಪದಗಳ ನಡುವೆ ಯಾವುದಾದರೂ ಐತಿಹಾಸಿಕ ಅಥವಾ ಸಾಂಸ್ಕೃತಿಕ ಸಂಬಂಧವಿದೆಯೇ? ಕೆಲವು ಭಾಷಾ ಶಾಸ್ತ್ರಜ್ಞರು ‘ವಿಷು’ ಮತ್ತು ‘ವಿಷುವ’ ನಡುವಿನ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಆದರೆ ‘ಬಿಸು’ ಮತ್ತು ‘ಬಿಹು’ ಪದಗಳ ಕುರಿತು ಇನ್ನೂ ಸಮಗ್ರ ತೌಲನಿಕ ಅಧ್ಯಯನ ನಡೆದಿಲ್ಲ. ಆದ್ದರಿಂದ ಈ ಪದಗಳ ಪರಸ್ಪರ ಸಂಬಂಧವನ್ನು ಭಾಷಾಶಾಸ್ತ್ರ, ಜನಪದ ಮತ್ತು ಇತಿಹಾಸದ ಬೆಳಕಿನಲ್ಲಿ ಮರು ಪರಿಶೀಲಿಸುವ ಅಗತ್ಯವಿದೆ. ಖಗೋಳಶಾಸ್ತ್ರದ ಪ್ರಕಾರ ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ವಸಂತ ವಿಷುವ (Spring Equinox) ಮತ್ತು ಮೇಷ ಸಂಕ್ರಾಂತಿ ಬಹುತೇಕ ಒಂದೇ ಸಮಯದಲ್ಲಿ ಸಂಭವಿಸುತ್ತಿದ್ದವು. ಭೂಮಿಯ ಅಕ್ಷದ ಅಯನಚಲನ (Precession of the Equinoxes) ಪರಿಣಾಮವಾಗಿ ಇಂದಿಗೆ ಅವುಗಳ ನಡುವೆ ದಿನಗಳ ಅಂತರ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ‘ಬಿಸು’ ಎಂಬ ಹೆಸರು ಪ್ರಾಚೀನ ವಿಷುವಿನ ಸ್ಮೃತಿಯನ್ನು ಉಳಿಸಿಕೊಂಡಿರಬಹುದೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಅಭಿಪ್ರಾಯವನ್ನು ಇನ್ನೂ ಐತಿಹಾಸಿಕವಾಗಿ ಸಾಬೀತುಪಡಿಸಲಾಗಿಲ್ಲ. ಆದ್ದರಿಂದ ಇದನ್ನು ಒಂದು ಸಂಶೋಧನಾ ಊಹೆಯಾಗಿ ಮಾತ್ರ ಪರಿಗಣಿಸಬೇಕು.
ತುಳು ಭಾಷೆಯಲ್ಲಿ ಕಾಲವನ್ನು ಸೂಚಿಸುವ ಕೆಲವು ವಿಶಿಷ್ಟ ಪದಗಳು ಇಂದಿಗೂ ಬಳಕೆಯಲ್ಲಿವೆ. ಸಿಂಗೊಡೆ ತಿಂಗಳ ಮೊದಲ ದಿನವನ್ನು, ಕೋಡೆ ನಿನ್ನೆಯನ್ನು, ಇಡೆ ಮಧ್ಯಂತರ ಸಮಯವನ್ನು, ಅಮಾಸೆ ಅಮಾವಾಸ್ಯೆಯನ್ನು ಮತ್ತು ಪುನ್ನಮೆ ಹುಣ್ಣಿಮೆಯನ್ನು ಸೂಚಿಸುತ್ತವೆ. ಈ ಪದಗಳು ತುಳುನಾಡಿನ ಕಾಲ ಪರಿಕಲ್ಪನೆಯ ಜೀವಂತ ಭಾಷಾ ಅವಶೇಷಗಳಾಗಿರಬಹುದು. ಪಾಡ್ದನಗಳು, ಹಳೆಯ ತುಳು ನಿಘಂಟುಗಳು, ಮೌಖಿಕ ಪರಂಪರೆ ಮತ್ತು ಶಾಸನಗಳಲ್ಲಿ ಈ ಪದಗಳ ಬಳಕೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿದರೆ ತುಳುನಾಡಿನ ಕಾಲಗಣನೆಯ ಇತಿಹಾಸವನ್ನು ಇನ್ನಷ್ಟು ಸ್ಪಷ್ಟಪಡಿಸಲು ಸಾಧ್ಯವಾಗಬಹುದು. ಈ ಪದಗಳ ಅಧ್ಯಯನದ ಸಂದರ್ಭದಲ್ಲಿ ಮತ್ತೊಂದು ಕುತೂಹಲಕಾರಿ ಪ್ರಶ್ನೆಯೂ ಉದ್ಭವಿಸುತ್ತದೆ. ತುಳು ಭಾಷೆಯ ಇಡೆ, ಕೋಡೆ, ಸಿಂಗೊಡೆ ಮೊದಲಾದ ಕಾಲಸೂಚಕ ಪದಗಳು ಮತ್ತು ಇಂಗ್ಲಿಷಿನ day ಎಂಬ ಪದದ ನಡುವೆ ಕಂಡು ಬರುವ ಧ್ವನಿಸಾಮ್ಯ ಕೇವಲ ಯಾದೃಚ್ಛಿಕವೇ? ಅಥವಾ ಅದು ಯಾವುದಾದರೂ ಅತ್ಯಂತ ಪ್ರಾಚೀನ ಭಾಷಾ ಸಂಪರ್ಕದ ದೂರದ ಪ್ರತಿಧ್ವನಿಯೇ? ಈ ಲೇಖಕನ ಅಭಿಪ್ರಾಯದಲ್ಲಿ ಇದು ಮುಂದಿನ ಸಂಶೋಧನೆಗೆ ಅರ್ಹವಾದ ಒಂದು ಭಾಷಾ ಶಾಸ್ತ್ರೀಯ ಊಹೆ ಮಾತ್ರ. ಪ್ರಸ್ತುತ ಅಂಗೀಕೃತ ಭಾಷಾಶಾಸ್ತ್ರವು ಇಂಗ್ಲಿಷಿನ day ಪದಕ್ಕೆ ಜರ್ಮನಿಕ್ ಮೂಲವನ್ನು ಸೂಚಿಸುತ್ತದೆ. ಆದ್ದರಿಂದ ಈ ಲೇಖನದಲ್ಲಿ ಮಂಡಿಸಿರುವ ಅಭಿಪ್ರಾಯವು ಯಾವುದೇ ನಿರ್ಣಾಯಕ ತೀರ್ಮಾನವಲ್ಲ. ಬದಲಿಗೆ ಹೊಸ ಸಂಶೋಧನೆಗೆ ಆಹ್ವಾನ ನೀಡುವ ಪರಿಕಲ್ಪನೆಯಾಗಿದೆ.
ತುಳು ಕ್ಯಾಲೆಂಡರ್ ಕೃಷಿ ಜೀವನದೊಂದಿಗೆ ಅತ್ಯಂತ ನಿಕಟವಾಗಿ ಸಂಬಂಧ ಹೊಂದಿದೆ. ಆಟಿ ತಿಂಗಳು ಭಾರೀ ಮಳೆಯ ಕಾಲವಾಗಿದ್ದು, ಕೃಷಿ ವಿಶ್ರಾಂತಿ, ಆಟಿಕಳೆಂಜ, ಔಷಧೀಯ ಆಹಾರ ಮತ್ತು ಆರೋಗ್ಯ ಸಂಪ್ರದಾಯಗಳೊಂದಿಗೆ ಸಂಬಂಧ ಹೊಂದಿದೆ. ಸುಗ್ಗಿ ಕೊಯ್ಲಿನ ಕಾಲವನ್ನು ಸೂಚಿಸುತ್ತದೆ. ಈ ರೀತಿಯಾಗಿ ತಿಂಗಳುಗಳ ಹೆಸರುಗಳು ಮತ್ತು ಕೃಷಿ ಚಟುವಟಿಕೆಗಳ ನಡುವಿನ ಸಂಬಂಧವು ತುಳುನಾಡಿನ ಜನರು ಋತುಚಕ್ರವನ್ನು ಸೂಕ್ಷ್ಮವಾಗಿ ಗಮನಿಸಿ ತಮ್ಮ ಜೀವನವನ್ನು ಅದರೊಂದಿಗೆ ಹೊಂದಿಸಿಕೊಂಡಿದ್ದರು ಎಂಬುದನ್ನು ಸೂಚಿಸುತ್ತದೆ. ಇಂದಿನ ಗ್ರೆಗೋರಿಯನ್ ಕ್ಯಾಲೆಂಡರ್ ಕೂಡಾ ಸೌರಮಾನ ಪದ್ಧತಿಯೇ ಆಗಿದ್ದರೂ, ಅದರ ರಚನೆ ತುಳು ಕ್ಯಾಲೆಂಡರಿಗಿಂತ ಭಿನ್ನವಾಗಿದೆ. ಗ್ರೆಗೋರಿಯನ್ ಕ್ಯಾಲೆಂಡರ್ ನಿಗದಿತ ದಿನಾಂಕಗಳನ್ನು ಅನುಸರಿಸುತ್ತದೆ. ತುಳು ಕ್ಯಾಲೆಂಡರ್ ಸೂರ್ಯನ ಸಂಕ್ರಮಣವನ್ನು ಅನುಸರಿಸುತ್ತದೆ. ಎರಡೂ ಸೌರಮಾನ ಪದ್ಧತಿಗಳಾಗಿದ್ದರೂ, ಅವುಗಳ ಸಾಂಸ್ಕೃತಿಕ ಹಿನ್ನೆಲೆ, ಕಾಲ ವಿಭಜನೆಯ ವಿಧಾನ ಮತ್ತು ಸ್ಥಳೀಯ ಜೀವನದೊಂದಿಗೆ ಹೊಂದಿರುವ ಸಂಬಂಧ ವಿಭಿನ್ನವಾಗಿದೆ. ತುಳು ಕ್ಯಾಲೆಂಡರ್ ಒಂದೇ ಆಧಾರದ ಮೇಲೆ ತುಳುನಾಡಿನ ಪ್ರಾಚೀನ ನಾಗರಿಕತೆಯನ್ನು ಸಾಬೀತುಪಡಿಸಲು ಸಾಧ್ಯವಿಲ್ಲ. ಆದರೆ ಅದು ತುಳುನಾಡಿನ ಪ್ರಾಚೀನ ಜ್ಞಾನ ಪರಂಪರೆಯ ಒಂದು ಪ್ರಮುಖ ಸಾಂಸ್ಕೃತಿಕ ಸಾಕ್ಷಿಯಾಗಿದೆ. ಶಾಸನಗಳು, ಪುರಾತತ್ತ್ವದ ಆವಿಷ್ಕಾರಗಳು, ಪಾಡ್ದನಗಳು, ಸ್ಥಳನಾಮಗಳು, ಭಾಷಾ ಶಾಸ್ತ್ರೀಯ ಅಧ್ಯಯನಗಳು ಮತ್ತು ಕಾಲಗಣನಾ ಪರಂಪರೆಗಳನ್ನು ಒಟ್ಟಾಗಿ ವಿಶ್ಲೇಷಿಸಿದಾಗ ಮಾತ್ರ ತುಳುನಾಡಿನ ಪ್ರಾಚೀನ ಇತಿಹಾಸದ ಸಮಗ್ರ ಚಿತ್ರಣವನ್ನು ರೂಪಿಸಲು ಸಾಧ್ಯವಾಗುತ್ತದೆ. ಬಹುಶಃ ಭವಿಷ್ಯದ ಸಂಶೋಧನೆಗಳು ಬಿಸು, ಬಿಹು, ವಿಷು, ವಿಷುವ, ಸಿಂಗೊಡೆ, ಕೋಡೆ, ಇಡೆ, ಆಟಿ ಮತ್ತು ಸುಗ್ಗಿ ಮೊದಲಾದ ಪದಗಳ ಹಿಂದಿರುವ ಸಾಂಸ್ಕೃತಿಕ ಮತ್ತು ಭಾಷಾ ಶಾಸ್ತ್ರೀಯ ಪದರಗಳನ್ನು ಇನ್ನಷ್ಟು ಸ್ಪಷ್ಟಪಡಿಸಬಹುದು. ಅವುಗಳ ಮೂಲಕ ತುಳುನಾಡಿನ ಪ್ರಾಚೀನ ಕಾಲಗಣನಾ ಜ್ಞಾನವು ಹೊಸ ಆಯಾಮಗಳಲ್ಲಿ ಬೆಳಕಿಗೆ ಬರಬಹುದು. ತುಳು ಕ್ಯಾಲೆಂಡರ್ ಕೇವಲ ಕಾಲವನ್ನು ಅಳೆಯುವ ಸಾಧನವಲ್ಲ. ಅದು ಕಾಲವನ್ನೇ ಮೀರಿ ಉಳಿದುಕೊಂಡಿರುವ ತುಳುನಾಡಿನ ಸಾಂಸ್ಕೃತಿಕ ಸ್ಮೃತಿ, ಪ್ರಕೃತಿ ಜ್ಞಾನ ಮತ್ತು ನಾಗರಿಕತೆಯ ಜೀವಂತ ಸಾಕ್ಷಿಗಳಲ್ಲಿ ಒಂದಾಗಿದೆ. ಅದರ ಕುರಿತು ನಡೆಯುವ ಪ್ರತಿಯೊಂದು ಹೊಸ ಸಂಶೋಧನೆಯೂ ತುಳುನಾಡಿನ ಇತಿಹಾಸವನ್ನು ಇನ್ನಷ್ಟು ಸಮೃದ್ಧಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.




























































































































