ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ನ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ವತಿಯಿಂದ ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಯೋಗದಲ್ಲಿ ಹಾಗೂ ಎಂ.ಆರ್.ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ 5ನೇ ಬೃಹತ್ ಉದ್ಯೋಗ ಮೇಳ ಮತ್ತು ಸ್ಟಡಿ ಅಬ್ರಾಡ್ ಎಕ್ಸ್ಪೋ -2026 ಅನ್ನು ಅಕ್ಟೋಬರ್ 9ರ ಶುಕ್ರವಾರ ಕುಂತಳ ನಗರದ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ತಿಳಿಸಿದರು. ಕಾಪು ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದು ಹಾಗೂ ಅವರ ಕೌಶಲ್ಯ ಅಭಿವೃದ್ಧಿಗೆ ನೆರವಾಗುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಬೆಳಿಗ್ಗೆ 9 ಗಂಟೆಗೆ ಅಭ್ಯರ್ಥಿಗಳ ನೋಂದಣಿ ಮತ್ತು ಸಂದರ್ಶನ ಪ್ರಕ್ರಿಯೆ ಆರಂಭವಾಗಲಿದ್ದು, ಸಂಜೆ 5 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ. ಟ್ರಸ್ಟ್ ಇದುವರೆಗೆ ನಾಲ್ಕು ಬೃಹತ್ ಉದ್ಯೋಗ ಮೇಳಗಳನ್ನು ಆಯೋಜಿಸಿದೆ. ಅವುಗಳ ಮೂಲಕ ಸುಮಾರು 3,500 ಅಭ್ಯರ್ಥಿಗಳ ಆಯ್ಕೆ ಅಥವಾ ಮುಂದಿನ ಹಂತಕ್ಕೆ ಶಿಫಾರಸಿಗೆ ನೆರವಾಗಿದೆ. ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಮೂಲಕ ಎಂಜಿನಿಯರಿಂಗ್, ಡಿಪ್ಲೊಮಾ, ಐಟಿಐ ಹಾಗೂ ಪದವಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 1,800 ಮಂದಿಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸುಮಾರು 440 ಮಂದಿಗೆ ಒಂದು ತಿಂಗಳ ಡಿಜಿಟಲ್ ಸಾಕ್ಷರತೆ ಮತ್ತು ಕಂಪ್ಯೂಟರ್ ತರಬೇತಿ ನೀಡಲಾಗಿದೆ. ಮಹಿಳಾ ಸಬಲೀಕರಣ ಕಾರ್ಯಕ್ರಮಗಳನ್ನೂ ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ‘ಉದ್ಯಮಶೀಲತೆಯ ಮೂಲಕ ಗ್ರಾಮೀಣಾಭಿವೃದ್ಧಿ’ ಎಂಬ ಧ್ಯೇಯದೊಂದಿಗೆ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ವಿವರಿಸಿದರು.




ಈ ಬಾರಿಯ ಉದ್ಯೋಗ ಮೇಳದಲ್ಲಿ ಉತ್ಪಾದನೆ, ಮಾಹಿತಿ ತಂತ್ರಜ್ಞಾನ, ಸೇವಾ ವಲಯ, ನಿರ್ವಹಣೆ, ಲೆಕ್ಕಪತ್ರ ಮತ್ತು ಹಣಕಾಸು, ಸೌಲಭ್ಯ ನಿರ್ವಹಣೆ, ನವೀಕರಿಸಬಹುದಾದ ಇಂಧನ, ವಾಹನೋದ್ಯಮ ಹಾಗೂ ಚಿಲ್ಲರೆ ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳ ಸುಮಾರು 50 ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಸುಮಾರು 2,500 ಉದ್ಯೋಗಾವಕಾಶಗಳು ಲಭ್ಯವಾಗುವ ನಿರೀಕ್ಷೆಯಿದ್ದು, 3,000ಕ್ಕೂ ಹೆಚ್ಚು ಅಭ್ಯರ್ಥಿಗಳು ಮೇಳದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಅಶೋಕ್ ಕುಮಾರ್ ಶೆಟ್ಟಿ ಹೇಳಿದರು. ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳು ಮತ್ತು ಬಯೋಡೇಟಾದ ಸುಮಾರು 10 ಪ್ರತಿಗಳನ್ನು ತರಬೇಕು. ಇದರಿಂದ ಒಂದೇ ಸ್ಥಳದಲ್ಲಿ ಹಲವು ಕಂಪನಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ. ಅಂತಿಮ ವರ್ಷದ ವಿದ್ಯಾರ್ಥಿಗಳೂ ಮೇಳದಲ್ಲಿ ಭಾಗವಹಿಸಬಹುದು ಎಂದು ಅವರು ತಿಳಿಸಿದರು. ಉದ್ಯೋಗ ಮೇಳದ ಜೊತೆಗೆ ಸ್ಟಡಿ ಅಬ್ರಾಡ್ ಎಕ್ಸ್ಪೋ ಕೂಡ ನಡೆಯಲಿದೆ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಲಹೆಗಾರರ ಪ್ರತಿನಿಧಿಗಳಿಂದ ಕೋರ್ಸ್ಗಳು, ಪ್ರವೇಶ ಪ್ರಕ್ರಿಯೆ, ಭಾಷಾ ಅರ್ಹತಾ ಪರೀಕ್ಷೆಗಳು, ಶಿಕ್ಷಣ ಸಾಲ ಹಾಗೂ ವೀಸಾ ಪ್ರಕ್ರಿಯೆಯ ಕುರಿತು ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಅಂತಿಮ ವರ್ಷದ ವಿದ್ಯಾರ್ಥಿಗಳು ಮತ್ತು ಪದವೀಧರರು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಎಂಜಿನಿಯರಿಂಗ್ನ ಎಲ್ಲಾ ವಿಭಾಗಗಳು, ಡಿಪ್ಲೊಮಾ, ಐಟಿಐ, ಯಾವುದೇ ವಿಷಯದ ಪದವಿ, ಎಂಬಿಎ, ಪಿಯುಸಿ ಹಾಗೂ ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳಿಗೆ ಈ ಮೇಳದಲ್ಲಿ ಅವಕಾಶಗಳಿವೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಂಪನಿಗಳ ಪ್ರತಿನಿಧಿಗಳೊಂದಿಗೆ ನೇರವಾಗಿ ಸಂದರ್ಶನ ನಡೆಸುವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತರಬೇತಿ ಮತ್ತು ಉದ್ಯೋಗ ನಿಯೋಜನೆ ವಿಭಾಗದ ಭರತ್ ಕುಮಾರ್ ಹೇಳಿದರು. ನಿಟ್ಟೆ ವಿಶ್ವವಿದ್ಯಾಲಯ, ಮಾಹೆ ಹಾಗೂ ಬಂಟಕಲ್ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಸಹಕಾರದಿಂದ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ತನ್ನ ಕಾರ್ಯಕ್ರಮಗಳನ್ನು ವಿಸ್ತರಿಸಲು ಸಾಧ್ಯವಾಗಿದೆ. ಈ ಉದ್ಯೋಗ ಮೇಳವು ಉಭಯ ಜಿಲ್ಲೆಗಳ ಯುವ ಜನರಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣದ ಅವಕಾಶಗಳನ್ನು ಪರಿಚಯಿಸುವ ಮಹತ್ವದ ವೇದಿಕೆಯಾಗಲಿದೆ ಎಂದು ಅಶೋಕ್ ಕುಮಾರ್ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಖಜಾಂಚಿ ವಿಜಿತ್ ಶೆಟ್ಟಿ ಸ್ವಾಗತಿಸಿದರು. ಟ್ರಸ್ಟಿ ಪದ್ಮನಾಭ ಹೆಗ್ಡೆ ವಂದಿಸಿದರು. ಸತೀಶ್ ಶೆಟ್ಟಿ ಮತ್ತು ದಯಾನಂದ ಶೆಟ್ಟಿ ಕಲ್ಮoಜೆ ಇವರು ಉಪಸ್ಥಿತರಿದ್ದರು.















































































































