
ತುಳುನಾಡಿನ ಕಾಲಜ್ಞಾನವು ಕೇವಲ ತಿಂಗಳುಗಳ ಲೆಕ್ಕಾಚಾರವಲ್ಲ. ಅದು ಪ್ರಕೃತಿ, ಕೃಷಿ, ಆಹಾರ, ಆರೋಗ್ಯ ಮತ್ತು ಮಾನವ ಜೀವನಶೈಲಿಯನ್ನು ಒಂದೇ ವ್ಯವಸ್ಥೆಯಾಗಿ ನೋಡುವ ಜೀವನದರ್ಶನವಾಗಿದೆ. ಈ ವ್ಯವಸ್ಥೆಯಲ್ಲಿ ಆಟಿ ಮತ್ತು ಸೋಣ ಎರಡು ಪ್ರಮುಖ ಅಧ್ಯಾಯಗಳಾಗಿವೆ. ಒಂದು ದೇಹವನ್ನು ಪ್ರಕೃತಿಯೊಂದಿಗೆ ಹೊಂದಿಸಿಕೊಳ್ಳುವ ಕಾಲವಾದರೆ, ಇನ್ನೊಂದು ದೇಹಕ್ಕೆ ಹೊಸ ಶಕ್ತಿ ಮತ್ತು ಸಮೃದ್ಧಿಯನ್ನು ತುಂಬುವ ಕಾಲವಾಗಿದೆ. ಮಲಯಾಳದಲ್ಲಿ ಇದೇ ತಿಂಗಳನ್ನು ಕರ್ಕಟಕಂ ಮತ್ತು ಚಿಂಗಂ ಎಂದು ಕರೆಯುತ್ತಾರೆ. ತುಳುನಾಡಿನ ಆಟಿ ಮತ್ತು ಕೇರಳದ ಕರ್ಕಟಕಂ ಒಂದೇ ಸೌರ ಮಾಸವಾಗಿದ್ದು, ಎರಡೂ ಪ್ರದೇಶಗಳಲ್ಲಿ ಇದನ್ನು ಋತುಬದಲಾವಣೆಗೆ ಹೊಂದಿಕೊಳ್ಳುವ ಅವಧಿಯಾಗಿ ಪರಿಗಣಿಸಲಾಗಿದೆ. ತುಳುನಾಡಿನಲ್ಲಿ ಆಟಿ ಗಂಜಿ, ಆಟಿ ಕಷಾಯ ಮತ್ತು ಋತುಸಹಜ ಸೊಪ್ಪುಗಳಿಗೆ ಮಹತ್ವವಿದ್ದರೆ, ಕೇರಳದಲ್ಲಿ ಕರ್ಕಟಕ ಗಂಜಿ ಮತ್ತು ಆಯುರ್ವೇದದ ಋತುಚರ್ಯೆ ಬೆಳವಣಿಗೆಯಾಯಿತು. ದಕ್ಷಿಣ ಪಶ್ಚಿಮ ಮಾರುತ ಮಳೆಯ ಸಮಯದಲ್ಲಿ ಪ್ರಕೃತಿಯಲ್ಲಿ ಮಹತ್ತರ ಬದಲಾವಣೆಗಳು ನಡೆಯುತ್ತವೆ. ಇದೇ ಅವಧಿಯಲ್ಲಿ ಖಗೋಳಶಾಸ್ತ್ರದ ಪ್ರಕಾರ ಭೂಮಿಯು ತನ್ನ ಕಕ್ಷೆಯಲ್ಲಿ ಸೂರ್ಯನಿಂದ ಅತ್ಯಂತ ದೂರದ ಸ್ಥಾನವಾದ ಅಪ್ಹೀಲಿಯನ್ (Aphelion) ಸಮೀಪದಲ್ಲಿರುತ್ತದೆ. ಆದಾಗ್ಯೂ, ಮಳೆ, ಹೆಚ್ಚಿದ ಆರ್ದ್ರತೆ, ತೇವಾಂಶ ಮತ್ತು ಋತುಬದಲಾವಣೆಯ ಪರಿಣಾಮವಾಗಿ ಪ್ರಕೃತಿಯಲ್ಲೂ ಹಾಗೂ ಮಾನವ ದೇಹದಲ್ಲೂ ಗಮನಾರ್ಹ ಬದಲಾವಣೆಗಳು ಉಂಟಾಗುತ್ತವೆ. ಬೀಜಗಳು ಮೊಳಕೆಯೊಡೆಯುತ್ತವೆ, ಕಾಡು ಸೊಪ್ಪುಗಳು ಬೆಳೆಯುತ್ತವೆ, ಹೊಲಗಳಲ್ಲಿ ಭತ್ತ ಬೇರುಬಿಡುತ್ತದೆ. ಆದ್ದರಿಂದ ಆಟಿಯನ್ನು ಜೀವ ಮರುಸೃಷ್ಟಿಯ ಕಾಲವೆಂದು ಕರೆಯಬಹುದು. ಪ್ರಕೃತಿಯಲ್ಲಿ ನಡೆಯುವ ಈ ಬದಲಾವಣೆಗಳು ಮಾನವನ ಆರೋಗ್ಯದಲ್ಲಿಯೂ ಪರಿಣಾಮ ಬೀರುತ್ತವೆ ಎಂಬುದನ್ನು ತುಳುವರು ತಮ್ಮ ಅನುಭವದಿಂದ ಅರಿತಿದ್ದರು. ತುಳುವರ ತತ್ವಚಿಂತನೆಯ ಪ್ರಕಾರ, ಪ್ರಕೃತಿಯೇ ಈ ಸಮಯದಲ್ಲಿ ದೇಹವನ್ನು ಶುದ್ಧೀಕರಿಸಿ ಹೊಸ ಚೈತನ್ಯವನ್ನು ನೀಡುವ ಪ್ರಕ್ರಿಯೆಯನ್ನು ಆರಂಭಿಸುತ್ತದೆ. ಈ ಸಂದರ್ಭದಲ್ಲಿ ದೇಹದಲ್ಲಿ ಆಯಾಸ, ನೋವು, ಜೀರ್ಣಕ್ರಿಯೆಯ ಏರುಪೇರು ಹಾಗೂ ಆರೋಗ್ಯದಲ್ಲಿ ಬದಲಾವಣೆಗಳು ಕಂಡುಬರಬಹುದು ಎಂಬುದು ಜನಪದ ಅನುಭವವಾಗಿತ್ತು. ಆದ್ದರಿಂದಲೇ ಅವರು ತಮ್ಮ ಆಹಾರ ಮತ್ತು ಜೀವನಕ್ರಮವನ್ನು ಋತುಮಾನಕ್ಕೆ ಅನುಗುಣವಾಗಿ ಬದಲಾಯಿಸುತ್ತಿದ್ದರು.


ಆಟಿ ತಿಂಗಳಲ್ಲಿ ಸಾಮಾನ್ಯ ದಿನಗಳಂತೆ ಆಹಾರ ಸೇವಿಸಿದರೆ ದೇಹ ಮತ್ತಷ್ಟು ಅಸಮತೋಲನಗೊಳ್ಳುತ್ತದೆ ಎಂಬ ನಂಬಿಕೆ ಇತ್ತು. ಆಯುರ್ವೇದದ ಪ್ರಕಾರ ವರ್ಷಾ ಋತುವಿನಲ್ಲಿ ಜೀರ್ಣಾಗ್ನಿ ಕ್ಷೀಣಿಸಬಹುದು ಮತ್ತು ವಾತ, ಪಿತ್ತ, ಕಫಗಳ ಸಮತೋಲನದಲ್ಲಿ ವ್ಯತ್ಯಾಸ ಉಂಟಾಗಬಹುದು ಎಂದು ವಿವರಿಸಲಾಗಿದೆ. ಆದ್ದರಿಂದ ದೇಹದ ಸಮತೋಲನವನ್ನು ಕಾಪಾಡುವ ಉದ್ದೇಶದಿಂದ ಆಟಿ ತಿಂಗಳಲ್ಲಿ ಆಹಾರದಲ್ಲಿ ಸಂಯಮ ಪಾಲಿಸಲಾಗುತ್ತಿತ್ತು. ಪ್ರಕೃತಿಯಲ್ಲಿ ಸಹಜವಾಗಿ ಬೆಳೆಯುವ ಸೊಪ್ಪುಗಳು, ತರಕಾರಿಗಳು, ಆಟಿ ಗಂಜಿ, ಆಟಿ ಕಷಾಯ ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸುವ ಮೂಲಕ ದೇಹವನ್ನು ಮುಂದಿನ ಋತುಗಳಿಗೆ ಸಜ್ಜುಗೊಳಿಸುವ ಪದ್ಧತಿ ರೂಪುಗೊಂಡಿತ್ತು. ತುಳುನಾಡಿನ ತತ್ವಚಿಂತನೆಯ ಪ್ರಕಾರ ಆಟಿ ತಿಂಗಳು ದೇಹವನ್ನು ಶುದ್ಧೀಕರಿಸುವ ಅವಧಿಯಾಗಿದೆ. ಇದನ್ನು ಆಧುನಿಕ ವೈದ್ಯಕೀಯದ “ಡಿಟಾಕ್ಸ್” ಎಂಬ ಪದದೊಂದಿಗೆ ನೇರವಾಗಿ ಸಮೀಕರಿಸ ಬಹುದು. ಋತುಸಹಜ ಜೀವನಶೈಲಿಯ ಮೂಲಕ ದೇಹವನ್ನು ಹೊಸ ಪರಿಸರಕ್ಕೆ ಹೊಂದಿಸುವ ಜನಪದ ಆರೋಗ್ಯ ಜ್ಞಾನವೆಂದು ಅರ್ಥೈಸಬಹುದು. ಇಂದಿನ ಪೌಷ್ಟಿಕ ವಿಜ್ಞಾನವೂ ಸ್ಥಳೀಯ, ಋತುಸಹಜ ಮತ್ತು ವೈವಿಧ್ಯಮಯ ಆಹಾರ ಆರೋಗ್ಯಕ್ಕೆ ಅನುಕೂಲಕರವೆಂದು ಒಪ್ಪಿಕೊಳ್ಳುತ್ತದೆ. ಆದ್ದರಿಂದ ಆಟಿಯ ಆಹಾರ ಪದ್ಧತಿಯನ್ನು ಅನುಭವದ ಆಧಾರದ ಮೇಲೆ ರೂಪುಗೊಂಡ ಜನಪದ ಆರೋಗ್ಯ ವಿಜ್ಞಾನವಾಗಿ ಅಧ್ಯಯನ ಮಾಡುವ ಅಗತ್ಯವಿದೆ.
ತುಳುವರು ಆಟಿಯನ್ನು “ಬಂಞದ ತಿಂಗಳು” ಎಂದು ಕರೆಯುತ್ತಾರೆ. ಆದರೆ ಇದರ ಅರ್ಥ ಆಹಾರದ ಕೊರತೆ ಎಂಬುದಲ್ಲ. ದೇಹವನ್ನು ಆರೋಗ್ಯಪೂರ್ಣವಾಗಿಡಲು ಹೆಚ್ಚು ಜಾಗ್ರತೆ, ಸಂಯಮ ಮತ್ತು ಶಿಸ್ತು ಪಾಲಿಸಬೇಕಾದ ದಿನಗಳು ಎಂಬುದೇ ಅದರ ಅರ್ಥ. ಹೀಗಾಗಿ ಆಟಿ ಕಷ್ಟದ ತಿಂಗಳಲ್ಲ; ಅದು ಹನ್ನೊಂದು ತಿಂಗಳ ಜೀವನಶೈಲಿಯ ನಂತರ ದೇಹವನ್ನು ಮರುಸಜ್ಜುಗೊಳಿಸಿ ಇನ್ನೊಂದು ವರ್ಷ ಆರೋಗ್ಯದಿಂದ ಬದುಕಲು ಸಿದ್ಧಗೊಳಿಸುವ ಬದುಕುಳಿಯುವ (Survival) ತಿಂಗಳು. ಈ ಸಂದರ್ಭದಲ್ಲಿ ಪಾಲೆ ಕಷಾಯ ಸೇರಿದಂತೆ ವಿವಿಧ ಔಷಧೀಯ ಕಷಾಯಗಳನ್ನು ಸೇವಿಸುವ ಸಂಪ್ರದಾಯವಿತ್ತು. ಜನಪದ ನಂಬಿಕೆಯ ಪ್ರಕಾರ ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತದೆ. ಈ ನಂಬಿಕೆಯನ್ನು ಆಧುನಿಕ ವೈದ್ಯಕೀಯದಲ್ಲಿ ಕೂಡ ಸಾಬೀತು ಆಗಿದ್ದು ಇನ್ನಷ್ಟು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಅಗತ್ಯವಿದೆ.
ಆಟಿ ತಿಂಗಳಲ್ಲಿ ಆಟಿಕಳಂಜ ಮನೆಮನೆಗೆ ಬಂದು ಮಾರಿಯನ್ನು ಕಳೆಯುವ ಆಚರಣೆ ನಡೆಯುತ್ತದೆ. ಇದು ಕೇವಲ ಧಾರ್ಮಿಕ ಆಚರಣೆಯಲ್ಲ; ಜನರಲ್ಲಿ ಆತ್ಮಸ್ಥೈರ್ಯ, ಧೈರ್ಯ, ಆಶಾಭಾವನೆ ಮತ್ತು ಹೊಸ ಬದುಕಿನ ವಿಶ್ವಾಸವನ್ನು ಮೂಡಿಸುವ ಸಾಮಾಜಿಕ ಸಾಂಸ್ಕೃತಿಕ ವ್ಯವಸ್ಥೆಯಾಗಿದೆ. ಆಟಿ ತಿಂಗಳ ನಂತರ ಬರುವ ಸೋಣ ತುಳುವರ ಕಾಲಜ್ಞಾನದಲ್ಲಿ ಸಮೃದ್ಧಿಯ ಸಂಕೇತವಾಗಿದೆ. ಆಟಿಯಲ್ಲಿ ದೇಹ ಸಂಯಮ ಮತ್ತು ಶುದ್ಧೀಕರಣದ ಹಂತವನ್ನು ದಾಟಿದ ನಂತರ, ಸೋಣದಲ್ಲಿ ಮತ್ತೆ ದೇಹಕ್ಕೆ ಶಕ್ತಿ, ಉಲ್ಲಾಸ ಮತ್ತು ಪೌಷ್ಟಿಕಾಂಶಗಳನ್ನು ನೀಡುವ ಜೀವನಚಕ್ರ ಆರಂಭವಾಗುತ್ತದೆ. ಇಂದಿಗೂ ತುಳುನಾಡಿನ ಕೆಲವು ಕಡೆಗಳಲ್ಲಿ ಸೋಣ ಶನಿವಾರ ಉಣ್ಪುನೆ, ಸೋಣ ಸೋಮವಾರ ಉಣ್ಪುನೆ ಮತ್ತು ಸೋಣ ಶುಕ್ರವಾರ ಉಣ್ಪುನೆ ಎಂಬ ವಿಶೇಷ ಭೋಜನದ ಸಂಪ್ರದಾಯ ಜೀವಂತವಾಗಿದೆ. ಈ ವಿಶೇಷ ಊಟಗಳು ಆಟಿಯ ನಂತರ ದೇಹಕ್ಕೆ ವೈವಿಧ್ಯಮಯ ಪೌಷ್ಟಿಕಾಂಶಗಳನ್ನು ಒದಗಿಸುವ ಜನಪದ ಆರೋಗ್ಯ ಪದ್ಧತಿಯ ಭಾಗವೆಂದು ಅರ್ಥೈಸಬಹುದು.
ಕೇರಳದಲ್ಲಿ ಇದೇ ಅವಧಿಯನ್ನು ಓಣಂ ಹಬ್ಬದ ಮೂಲಕ ಆಚರಿಸಲಾಗುತ್ತದೆ. ಓಣಸದ್ಯೆ ಮತ್ತು ತುಳುನಾಡಿನ ಸೋಣದ ವಿಶೇಷ ಭೋಜನ ಎರಡೂ ಮಳೆಗಾಲದ ನಂತರ ಪ್ರಕೃತಿಯ ಸಮೃದ್ಧಿಗೆ ಸಲ್ಲಿಸುವ ಕೃತಜ್ಞತೆಯ ಅಭಿವ್ಯಕ್ತಿಗಳಾಗಿವೆ. ಆಟಿಯಲ್ಲಿ ಆಟಿಕಳಂಜ ಬಂದರೆ, ಸೋಣದಲ್ಲಿ ಜೋಗಿ ಮನೆಮನೆಗೆ ಬರುತ್ತಾನೆ. ಜೋಗಿಯು ಹೊಸ ಚೈತನ್ಯ, ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ಜನರಲ್ಲಿ ತುಂಬುತ್ತಾನೆ ಎಂಬ ನಂಬಿಕೆ ಇದೆ. ಆಟಿಕಳಂಜನನ್ನು ಬೆರ್ಮೆರನ ಮಗ ಎಂದು, ಜೋಗಿಯನ್ನು ಬಲಿ ಚಕ್ರವರ್ತಿಯ ಆಗಮನ ಎಂದು ನಂಬುವ ಸಂಪ್ರದಾಯವಿದೆ. ಕೇರಳದಲ್ಲಿ ಇದೇ ಪರಂಪರೆಯನ್ನು ಮಾವೇಲಿ ಆಗಮನವೆಂದು ಆಚರಿಸಲಾಗುತ್ತದೆ. ತುಳು ಪಾಡ್ದನಗಳಲ್ಲಿಯೂ ಬಲಿ ಚಕ್ರವರ್ತಿಯ ಆಗಮನದ ಉಲ್ಲೇಖಗಳು ಕಂಡುಬರುತ್ತವೆ. ಜನಪದ ನಂಬಿಕೆಯ ಪ್ರಕಾರ ಬಲಿ ಚಕ್ರವರ್ತಿಯು ಆಟಿದ ಅಮಾಸೆಗ್, ಸೋಣದ ಸಂಕ್ರಾಂತಿಗ್ ಮತ್ತು ಬೊಂತೆಲ್ದ ಕೊಡಿ ಪರ್ಬೊಗ್ ಮೂರು ಸಂದರ್ಭಗಳಲ್ಲಿ ಬರುತ್ತಾನೆ ಎಂಬ ನಂಬಿಕೆಯೂ ಪ್ರಚಲಿತವಾಗಿದೆ. “ಬಿತ್ತಿಲ್ ಮಾರ್ದಾಂಡಲ, ಸೋಣ ಉಣೊಡು” ಎಂಬ ತುಳು ಗಾದೆಯ ಅರ್ಥ ಮನೆ ಮಾರಿಯಾದರೂ ಸೋನದಲ್ಲಿ ಊಟ ಮಾಡಬೇಕು ಎಂದು. ಅಂದರೆ ಇದರ ಅರ್ಥ ಮನೆ ಮಾರುವುದಲ್ಲ; ಆರೋಗ್ಯವನ್ನು ಮೊದಲ ಆದ್ಯತೆಯಾಗಿ ಕಾಪಾಡಿ, ಸಮೃದ್ಧಿ ಬಂದಾಗ ಅದನ್ನು ಕುಟುಂಬ ಮತ್ತು ಸಮಾಜದೊಂದಿಗೆ ಹಂಚಿಕೊಳ್ಳಬೇಕು ಎಂಬುದು.
ಇಂದು ಆಧುನಿಕ ವಿಜ್ಞಾನ ಋತುಸಹಜ ಆಹಾರ, ಸ್ಥಳೀಯ ಆಹಾರ, ಸುಸ್ಥಿರ ಜೀವನ, ಪರಿಸರ ಹೊಂದಾಣಿಕೆ ಮತ್ತು ಸಮುದಾಯದ ಆರೋಗ್ಯದ ಮಹತ್ವವನ್ನು ಒತ್ತಿ ಹೇಳುತ್ತಿದೆ. ತುಳುವರ ಆಟಿ–ಸೋಣ ಜೀವನಪದ್ಧತಿಯಲ್ಲಿ ಈ ಎಲ್ಲ ತತ್ವಗಳ ಅನುಭವಜನ್ಯ ರೂಪವನ್ನು ಕಾಣಬಹುದು. ಆಟಿ ಗಂಜಿ, ಕಾಡು ಸೊಪ್ಪುಗಳು, ಪಾಲೆ ಕಷಾಯ ಹಾಗೂ ಇತರ ಜನಪದ ಆಚರಣೆಗಳ ಆರೋಗ್ಯ ಪ್ರಯೋಜನಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಅಗತ್ಯ ಇನ್ನೂ ಇದೆ. ಹೀಗಾಗಿ ಆಟಿ ಮತ್ತು ಸೋಣ ಕೇವಲ ಎರಡು ತಿಂಗಳುಗಳಲ್ಲ. ಅವು ಪ್ರಕೃತಿ, ಆರೋಗ್ಯ, ಆಹಾರ, ಕೃಷಿ ಮತ್ತು ಮಾನವ ಜೀವನವನ್ನು ಸಮತೋಲನದಿಂದ ನಡೆಸುವ ತುಳುವರ ಕಾಲಜ್ಞಾನದ ಜೀವಂತ ಜೈವ ವಿಜ್ಞಾನವಾಗಿದೆ. ಸಂಯಮದಿಂದ ಆರಂಭವಾಗಿ ಸಮೃದ್ಧಿಯಲ್ಲಿ ಪೂರ್ಣಗೊಳ್ಳುವ ಈ ಜೀವನಚಕ್ರವು ಇಂದಿನ ಸುಸ್ಥಿರ ಬದುಕಿನ ಚಿಂತನೆಗೂ ಮಹತ್ವದ ಪ್ರೇರಣೆಯಾಗಿದೆ.






























































































































