ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಯೋಜಿಸುವ ರಾಷ್ಟ್ರಮಟ್ಟದ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ಆಳ್ವಾಸ್ ನುಡಿಸಿರಿ – ವಿರಾಸತ್ನ್ನು ಮುಂಬರುವ ವರ್ಷದ ಜನವರಿಯಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು. ಈ ಹಿನ್ನೆಲೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವರವರ ಸ್ವಗೃಹದಲ್ಲಿ ನಡೆದ ಪ್ರಥಮ ಸಮಾಲೋಚನಾ ಸಭೆಯಲ್ಲಿ ಈ ಬಾರಿ ಆಳ್ವಾಸ್ ನುಡಿಸಿರಿ ಹಾಗೂ ಆಳ್ವಾಸ್ ವಿರಾಸತ್ ಉತ್ಸವಗಳನ್ನು ಒಂದೇ ವೇಳೆಯಲ್ಲಿ ಅದ್ದೂರಿಯಾಗಿ ಆಯೋಜಿಸುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ, ಪ್ರತೀ ವರ್ಷವೂ ಹೊಸ ಆಲೋಚನೆ, ಹೊಸ ಪರಿಕಲ್ಪನೆ ಮತ್ತು ಹೊಸ ತಲೆಮಾರಿನ ಭಾಗವಹಿಸುವಿಕೆಗೆ ಆದ್ಯತೆ ನೀಡುತ್ತಾ ಉತ್ಸವವನ್ನು ವಿಸ್ತರಿಸುತ್ತಿದ್ದೇವೆ. ಜನವರಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುವುದರ ಜೊತೆಗೆ ಯುವಜನತೆ, ಕನ್ನಡದ ಭವಿಷ್ಯ, ದೇಶೀಯತೆ, ಪರಿಸರ ಸಂರಕ್ಷಣೆ ಹಾಗೂ ಸಹಬಾಳ್ವೆಯಂತಹ ಸಮಕಾಲೀನ ವಿಷಯಗಳ ಕುರಿತು ಗಂಭೀರ ಚರ್ಚೆಗಳಿಗೆ ವೇದಿಕೆ ಕಲ್ಪಿಸಲಾಗುವುದು ಎಂದು ತಿಳಿಸಿದರು. ಸಮಾಜದ ವಿವಿಧ ವರ್ಗಗಳನ್ನು ಒಂದೇ ವೇದಿಕೆಗೆ ತಂದು ಸಂವಾದ, ಸೃಜನಶೀಲತೆ, ಸಂಸ್ಕೃತಿ ಮತ್ತು ಸಾಮಾಜಿಕ ಬದ್ಧತೆಯನ್ನು ಬೆಸೆಯುವ ಸಮಗ್ರ ಉತ್ಸವವಾಗಿ ಆಳ್ವಾಸ್ ನುಡಿಸಿರಿ – ವಿರಾಸತ್ನ್ನು ರೂಪಿಸುವ ಸಂಕಲ್ಪ ನಮ್ಮದು ಎಂದರು.
ಸಭೆಯಲ್ಲಿ ಮಾತನಾಡಿದ ಹಿರಿಯ ಸಾಹಿತಿ ಪಾದೆಕಲ್ಲು ವಿಷ್ಣು ಭಟ್, ಪ್ರಜಾಪ್ರಭುತ್ವದ ಮೌಲ್ಯಗಳು, ಸಹಿಷ್ಣುತೆ ಮತ್ತು ವೈಚಾರಿಕತೆ ಬೆಳೆಸುವ ಚಿಂತನೆಗಳಿಗೆ ಆಳ್ವಾಸ್ ನುಡಿಸಿರಿ ಸದಾ ವೇದಿಕೆಯಾಗಿದೆ. ಸಾಹಿತ್ಯ, ಸಂಸ್ಕೃತಿ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಬೆಸೆಯುವ ಈ ಉತ್ಸವವು ಸಮಾಜದಲ್ಲಿ ಆರೋಗ್ಯಕರ ಚಿಂತನೆಗೆ ಸದೃಢ ನೆಲೆ ಒದಗಿಸಿದೆ. ನುಡಿಸಿರಿಗೆ ಭವಿಷ್ಯದ ಕುರಿತು ದೊಡ್ಡ ಕನಸುಗಳಿವೆ. ಆ ಕನಸುಗಳು ಸಾಕಾರಗೊಂಡು, ನುಡಿಸಿರಿ ಮತ್ತಷ್ಟು ಜನಮುಖಿಯಾಗಿ, ಯುವ ಜನರನ್ನು ಸೆಳೆಯುವ ಸಾಂಸ್ಕೃತಿಕ ಚಳವಳಿಯಾಗಿ ಬೆಳೆಯಬೇಕು ಎಂದರು. ಉತ್ಸವದ ರೂಪುರೇಷೆಗಳನ್ನು ಶ್ಲಾಘಿಸಿದ ಅವರು ಕಾಲದ ಅಗತ್ಯಗಳಿಗೆ ಅನುಗುಣವಾಗಿ ಹೊಸ ವಿಚಾರಗಳು, ಹೊಸ ತಲೆಮಾರಿನ ಭಾಗವಹಿಸುವಿಕೆ ಮತ್ತು ಸಮಾಜಮುಖಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ನುಡಿಸಿರಿ ಮತ್ತಷ್ಟು ಅರ್ಥಪೂರ್ಣವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ಸಭೆಯಲ್ಲಿ ಮಾತನಾಡಿದ ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ, ಡಾ. ಎಂ ಮೋಹನ ಆಳ್ವರು ಶಿಕ್ಷಣ ತಜ್ಞರಷ್ಟೇ ಅಲ್ಲ, ಸಮಾಜದ ಸಾಂಸ್ಕೃತಿಕ ಪ್ರಜ್ಞೆಯನ್ನು ರೂಪಿಸಿದ ದೂರದೃಷ್ಟಿಯ ನಾಯಕ. ನುಡಿಸಿರಿಯಂತಹ ಮಹತ್ವದ ಸಾಹಿತ್ಯಿಕ ಕಾರ್ಯಕ್ರಮದ ಮೂಲಕ ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಜನಸಾಮಾನ್ಯರಿಗೆ ತಲುಪಿಸುವ ಅಪೂರ್ವ ಕಾರ್ಯವನ್ನು ಅವರು ನಿರಂತರವಾಗಿ ಮಾಡುತ್ತಿದ್ದಾರೆ. ಯುವ ಜನರಲ್ಲಿ ಕನ್ನಡದ ಬಗ್ಗೆ ಅಭಿಮಾನ, ಸಂಸ್ಕೃತಿಯ ಬಗ್ಗೆ ಗೌರವ ಮತ್ತು ಸಮಾಜಮುಖಿ ಚಿಂತನೆಗಳನ್ನು ಬೆಳೆಸುವಲ್ಲಿ ಡಾ. ಆಳ್ವರ ಕೊಡುಗೆ ಅನನ್ಯವಾದುದು. ಈ ಬಾರಿಯ ನುಡಿಸಿರಿ – ವಿರಾಸತ್ ಇನ್ನಷ್ಟು ವೈವಿಧ್ಯಮಯವಾಗಿ, ಯಶಸ್ವಿಯಾಗಿ ನಡೆಯಲಿ ಎಂದು ಆಶಿಸಿದರು.



ಸಭೆಯಲ್ಲಿ ನುಡಿಸಿರಿಯ ಪರಿಕಲ್ಪನೆ, ಸರ್ವಾಧ್ಯಕ್ಷರ ಆಯ್ಕೆ, ಉದ್ಘಾಟಕರ ಹೆಸರುಗಳು, ವಿವಿಧ ಗೋಷ್ಠಿಗಳ ವಿಷಯಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳ ಆಯ್ಕೆ, ವಿಶೇಷೋಪನ್ಯಾಸಗಳ ವಿಷಯ ಮತ್ತು ಉಪನ್ಯಾಸಕರ ಪಟ್ಟಿ, ನುಡಿಸಿರಿ ಪ್ರಶಸ್ತಿಗೆ ಅರ್ಹರ ಹೆಸರುಗಳು ಹಾಗೂ ವಿವಿಧ ವೇದಿಕೆಗಳಿಗೆ ನಾಮಕರಣ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಉತ್ಸವವನ್ನು ಇನ್ನಷ್ಟು ಅರ್ಥಪೂರ್ಣ, ವೈವಿಧ್ಯಮಯ ಹಾಗೂ ಜನಸಾಮಾನ್ಯರ ಭಾಗವಹಿಸುವಿಕೆಗೆ ಉತ್ತೇಜನ ನೀಡುವ ರೀತಿಯಲ್ಲಿ ಆಯೋಜಿಸುವ ಬಗ್ಗೆ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದ ಗುಣಮಟ್ಟವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು. ವೇದಿಕೆಯಲ್ಲಿ ಪ್ರಮುಖರಾದ ಡಾ. ಎಂ.ಪಿ ಶ್ರೀನಾಥ್, ಬಾಲಕೃಷ್ಣ ಶೆಟ್ಟಿ, ತುಕಾರಾಮ್ ಪೂಜಾರಿ, ಶಕುಂತಲಾ ಶೆಟ್ಟಿ, ಸತ್ಯನಾರಾಯಣ ಮಲ್ಲಿಪಟ್ಣ, ವೇಣುಗೋಪಾಲ ಶೆಟ್ಟಿ ಇದ್ದರು. ಉಪನ್ಯಾಸಕ ಡಾ| ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರ್ವಹಿಸಿದರು.




















































































































