
ಇವತ್ತಿನ ದಿನ ನನ್ನ ಜೀವನದ ಸೌಭಾಗ್ಯ ದಿನವಾಗಿದೆ. ನನ್ನ ಹಸ್ತಗಳಿಂದ ಪಾವಿತ್ರ್ಯತೆಯ ದೇವಸ್ಥಾನಕ್ಕೆ ಶಿಲಾನ್ಯಾಸ ನಡೆಸಿದ್ದು ನನ್ನ ಪುಣ್ಯ ಎಂದೆಣಿಸಿದ್ದೇನೆ. ಸನಾತನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೈಗೊಪ್ಪಿಸಲು ಇಂತಹ ಪಾವನ ಕ್ಷೇತ್ರಗಳ ಜೀರ್ಣೊದ್ಧಾರದ ಕಾರ್ಯಗಳು ಅಗತ್ಯವಾಗಿವೆ. ನನಗೆ ಇಲ್ಲಿ ಭಗವಂತನೂ, ಭ್ರಮರಾಂಭಿಕೆಯೇ ಕರೆದು ತಂದಂತಿದೆ. ಕಾರಣ ಶ್ರೀ ಕ್ಷೇತ್ರ ಕಟೀಲು ಭೇಟಿ ನೀಡಿ ದರ್ಶನ ಪಡೆದಿದ್ದೇನೆ. ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ. ಧರ್ಮವನ್ನು ಉಳಿಸಲು ಮಠ ಮಂದಿರಗಳಿಂದ ಮಾತ್ರ ಸಾಧ್ಯ. ಆದ್ದರಿಂದ ಈ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭ ನನ್ನ ತಂದೆಯೂ ಮಹಾರಾಷ್ಟ್ರ ಸರ್ಕಾರದ ಮಾಜಿ ಮುಖ್ಯಮಂತ್ರಿ (ಹಾಲಿ ಉಪಮುಖ್ಯಮಂತ್ರಿ) ಏಕನಾಥ್ ಶಿಂಧೆ ಅವರನ್ನು ಕರೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಮಹಾರಾಷ್ಟ್ರ ರಾಜ್ಯದ ಕಲ್ಯಾಣ್ ಲೋಕಸಭಾ ಸಂಸದ ಡಾ. ಶ್ರೀಕಾಂತ್ ಏಕನಾಥ ಶಿಂಧೆ ನುಡಿದರು. ಕಳೆದ ಗುರುವಾರ (ಜು.೦೨) ಮಂಗಳೂರು ಮೂಡುಶೆಡ್ಡೆ ಅಲ್ಲಿನ ಶೆಡ್ಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನೂತನ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿದ್ದು, ಸಂಸದ ಡಾ. ಶ್ರೀಕಾಂತ್ ಶಿಂಧೆ ದೇವಾಲಯದ ಕರಪತ್ರ (ಬ್ರೋಶರ್) ಬಿಡುಗಡೆಗೊಳಿಸಿ ಮಾತನಾಡಿ ಶುಭ ಹಾರೈಸಿದರು. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಮಂದಿರದ ವಂಶಪಾರಂಪರಿಕ ಧರ್ಮದರ್ಶಿ ಕೆ. ಹರಿನಾರಾಯಣ ಅಸ್ರಣ್ಣ, ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ್
ಪರಮಹಂಸ ಸ್ವಾಮೀಜಿ, ಶ್ರೀ ಗುರು ರಾಮಾಂಜನೇಯ ಮಠ (ವಜ್ರದೇಹಿ ಧರ್ಮಕ್ಷೇತ್ರ ಗುರುಪುರ) ಇದರ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ದೀಪ ಪ್ರಜ್ವಲನೆಗೈದ ಸಮಾರಂಭಕ್ಕೆ ಚಾಲನೆಯನ್ನೀಡಿ ಅನುಗ್ರಹಿಸಿದರು. ಕುಡುಪು ಶ್ರೀ ನರಸಿಂಹ ತಂತ್ರಿ, ಕುಡುಪು ಶ್ರೀ ಕೃಷ್ಣರಾಜ ತಂತ್ರಿ, ಶ್ರೀನಿವಾಸ ಉಡುಪ, ರಾಮಚಂದ್ರ ಉಡುಪ ಅವರು ನೂತನ ದೇವಸ್ಥಾನದ ಶಿಲಾನ್ಯಾಸ ನೆರವೇರಿಸಿ ಹರಸಿದರು.




ಮೂಡುಶೆಡ್ಡೆ ಅಲ್ಲಿನ ಹೊಸಲಕ್ಕೆ ಶ್ರೀ ದುರ್ಗಾಪರಮೇಶ್ವರಿ ಕೃಪಾ ನಿವಾಸಿ, ಶೆಡ್ಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮೂಡುಶೆಡ್ಡೆ ಇದರ ಮುಂಬಯಿ ಸಮಿತಿ ಅಧ್ಯಕ್ಷ ಮೂಡುಶೆಡ್ಡೆ ವಿಶ್ವನಾಥ ಎಸ್ ಶೆಟ್ಟಿ ಮುಂದಾಳುತ್ವ ಹಾಗೂ
ಎಂಆರ್ಜಿ ಗ್ರೂಪ್ ಕಾರ್ಯಾಧ್ಯಕ್ಷ ಡಾ| ಕೆ.ಪ್ರಕಾಶ್ ಶೆಟ್ಟಿ ಅವರ ಸಭಾಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಾಕ್ರಮದಲ್ಲಿ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ಉತ್ತರ ಶಾಸಕ ಭರತ್ ವೈ ಶೆಟ್ಟಿ, ಮಾಜಿ ಸಂಸದ ಆನಂದ ವಾರಂಜಾಪೆ, ಮಹಾರಾಷ್ಟ್ರದ ಕಲ್ಯಾಣ್ ಕ್ಷೇತ್ರದ ಶಾಸಕ ರಾಜೇಶ್ ಜೆ ಮೋರೆ, ಕಲ್ಯಾಣ್ ಜಿಲ್ಲಾ ಶಿವಸೇನಾ ಪ್ರಮುಖ ಗೋಪಾಲ್ ಆರ್ ಲಾಡ್ಗೆ, ಕೆಡಿಎಂಸಿ ಮಾಜಿ ನಗರ ಸೇವಕ ಪ್ರಭುನಾಥ ಆತ್ಮಾರಾಮ್ ಭೋಯಿರ್, ಸೋನಿ ಸ್ಟೀಲ್ಸ್ ಇಂಡಸ್ಟೀಸ್ ಪ್ರೈವೇಟ್ ಲಿಮಿಟೆಡ್ನ ಕಾರ್ಯಾಧ್ಯಕ್ಷ ಪಾಂಡುರಂಗ ಎಸ್ ಶೆಟ್ಟಿ, ನಿರ್ದೇಶಕಿ ವನಿತಾ ಪಾಂಡುರಂಗ ಶೆಟ್ಟಿ, ಮಾಜಿ ಸಚಿವ ಕೆ ನಾಗರಾಜ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ನ್ಯಾಯವಾದಿ ಆರ್ ಪದ್ಮರಾಜ್, ದ.ಕ ಅಪಾರ ಜಿಲ್ಲಾಡಾಳಿತಾಧಿಕಾರಿ ರಾಜು ಕೆ.ಎಸ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ ರೈ, ಭಿವಂಡಿ ಬಿಜೆಪಿ ಅಧ್ಯಕ್ಷ ಸಂತೋಷ್ ಎಂ ಶೆಟ್ಟಿ ಮೂಡುಬೆಳ್ಳೆ, ಉದ್ಯಮಿಗಳಾದ ರವಿರಾಜ ಶೆಟ್ಟಿ ನಿಟ್ಟೆಗುತ್ತು, ಭುವನೇಶ್ ಪಚ್ಚಿನಡ್ಕ, ಕ್ಯಾ| ಮನೋಜ್ ಶೆಟ್ಟಿ, ಮಲ್ಲಿಕಾ ಪಕ್ಕಳ, ಡಾ| ಅಭಿಲಾಷ್ ಪಿ.ವಿ., ಸುಧಾಕರ ಶೆಟ್ಟಿ, ಶಂಕರ ರಾವ್ ಪುಣೆ, ಎ ಮಂಜುನಾಥ ಭಂಡಾರಿ ಶೆಡ್ಡೆ, ಸುಜೀತ್ ಆಳ್ವ, ಉರ್ಮಿಳಾ ರಮೇಶ್ ಕುಮಾರ್ ಮತ್ತಿತರ ಗಣ್ಯರು ವೇದಿಕೆಯನ್ನು ಅಲಂಕರಿಸಿದ್ದರು.


ಡಾ| ಪ್ರಕಾಶ್ ಶೆಟ್ಟಿ ಅಧ್ಯಕ್ಷೀಯ ಭಾಷಣಗೈದು, ನಾನು ಹಲವು ಶಿಲಾನ್ಯಾಸಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಇಂತಹ ಸಭೆ, ವೇದಿಕೆ, ಚಾವಡಿ ಎಲ್ಲೂ ಕಂಡಿಲ್ಲ. ಈ ದೇವಸ್ಥಾನದ ಮೇಲೆ ಯಾರಿಗೆ ಭಕ್ತಿ, ವಾತ್ಸಲ್ಯವಿದೆ ಅವರೆಲ್ಲಾ ನಿಶಬ್ಧರಾಗಿ ಕೂತಿದ್ದಾರೆ. ನನ್ನ ಆರಾಧ್ಯ ದೇವರು, ನನ್ನ ಗ್ರಾಮದ ದೇವರೂ ವಿಷ್ಣುಮೂರ್ತಿ. ನನ್ನ ಮತ್ತು ನನ್ನ ಗ್ರಾಮ ದೇವರ ಸಂಬಂಧ, ಅಂತೆಯೇ ಮೂಡುಶೆಡ್ಡೆ ಭಕ್ತರ ಸಂಬಂಧ ಅನ್ಯೋನತೆಯ ಬೆಸುಗೆಯಾಗಿದೆ. ದೇವಸ್ಥಾನದ ಕೆಲಸ ಬೇಗ ಆರಂಭಿಸುವ ಸಂಕಲ್ಪ ಕೈಗೊಳ್ಳಿರಿ. ಆವಾಗ ಮಾತ್ರ ದೇವಸ್ಥಾನದ ಕೆಲಸ ಸಮಯೋಚಿತವಾಗಿ ಮುಗಿಯುತ್ತದೆ. ಒಂದು ವರ್ಷದ ಒಳಗೆ ದೇವಸ್ಥಾನದ ಬ್ರಹ್ಮಕಲಶ ಸಮಾರಂಭ ನೇರವೇರಲಿ ಎಂದು ಹಾರೈಸಿದರು.

ಮುಂಬಯಿ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿವಾಕರ್ ರೈ, ಮುಂಬಯಿ ಸಮಿತಿಯ ಅನುಪಮ ಶೆಟ್ಟಿ, ಶರ್ಮಿಳಾ ಡಿ ರೈ, ಸುಭಾಷ್ ಶೆಟ್ಟಿ ಇನ್ನಂಜೆ, ಅನುಪಮ ಶೆಟ್ಟಿ ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು. ಶರಣ್ ಶೆಟ್ಟಿ ಹೊಸಲಕ್ಕೆ ಪ್ರಾರ್ಥನೆಗೈದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಹಾಸ ಡಿ ಶೆಟ್ಟಿ (ತುಳು ಕನ್ನಡ) ಮತ್ತು ಮುಂಬಯಿ ಸಮಿತಿ ಅಧ್ಯಕ್ಷ ಮೂಡುಶೆಡ್ಡೆ ವಿಶ್ವನಾಥ ಶೆಟ್ಟಿ (ಹಿಂದಿ ಮರಾಠಿ ಭಾಷೆಯಲ್ಲಿ) ಸ್ವಾಗತಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಎಸ್ ಶಿವರಾಮ ಮಲ್ಲಿ ಅರ್ಬಿ ಪ್ರಸ್ತಾವನೆಗೈದರು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯನಿರ್ವಹಣಾ ಕಾರ್ಯಾಧ್ಯಕ್ಷ ಗಿರಿಧರ್ ಶೆಟ್ಟಿ ಜೀರ್ಣೋದ್ಧಾರದ ಬಗ್ಗೆ ಮಾಹಿತಿ ನೀಡಿದರು. ನಿತೇಶ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಹರೀಶ್ ಕೆ ಧನ್ಯವಾದಗೈದರು.
ಚಿತ್ರ, ವರದಿ : ರೋನ್ಸ್ ಬಂಟ್ವಾಳ






























































































































