ಆಟಿಡೊಂಜಿ ದಿನ, ಆಟಿದ ಕೂಟ, ಆಟಿದ ನೆಂಪು ಹೀಗೆ ಬೇರೆ ಬೇರೆ ಹೆಸರುಗಳಿಂದ ಆಟಿ ತಿಂಗಳನ್ನು ಆಚರಿಸುವ ಕ್ರಮ ಈಗ ಅರ್ಭುದ ರೋಗದ ಹಾಗೆ ಎಲ್ಲಾ ಸಂಘ ಸಂಸ್ಥೆಗಳಿಗೂ ಹಬ್ಬಿದೆ. ಮಹಿಳಾ ವಿಭಾಗಗಳಂತೂ ಆಟಿಡೊಂಜಿ ದಿನವನ್ನು ಆಚರಿಸುವುದನ್ನು ತಮ್ಮ ವರ್ಷದ ಕಾರ್ಯಕ್ರಮದ ಮಹತ್ತರ ದಿನ ಅಂತ ಭಾವಿಸುತ್ತವೆ. ನಂಬಿಕೆಯೊಂದು ಹೇಗೆ ನಗೆ ಪಾಟಲಿಗೆ ಗುರಿಯಾಗುತ್ತದೆ ಅನ್ನೋದಕ್ಕೆ ಈ ಆಟಿಡೊಂಜಿ ದಿನ ಜ್ವಲಂತ ಸಾಕ್ಷಿ. ಆಟಿ ತಿಂಗಳು ಅಂದರೆ ಏನು? ಆ ತಿಂಗಳಿನ ಕಷ್ಟಗಳೇನು? ಅಂತಹ ಸ್ವತಃ ಕಣ್ಣಾರೆ ಕಂಡ ನನ್ನಂತವರಿಗೆ ಆಟಿಡೊಂಜಿ ದಿನವನ್ನು ಆಚರಿಸುವ ಔಚಿತ್ಯ ಏನು ಅಂತ ಇನ್ನೂ ಅರ್ಥ ಆಗಿಲ್ಲ. ಈಗ ಆಟಿಡೊಂಜಿ ದಿನವನ್ನು ಆಚರಿಸಿ ಸಂಭ್ರಮಿಸುವ ಹೆಚ್ಚಿನವರಿಗೆ ಆಟಿ ತಿಂಗಳ ಕಷ್ಟ ಏನು ಅನ್ನುವ ಕಲ್ಪನೆಯೇ ಇಲ್ಲ. ಸುಮಾರು 50- 60 ವರ್ಷಗಳ ಹಿಂದೆ ನಮ್ಮ ತುಳುನಾಡಿನಲ್ಲಿ ಪ್ರಧಾನ ಕಸುಬು ಕೃಷಿ. ಇಡೀ ವರ್ಷ ಕೃಷಿ ಕೆಲಸದಲ್ಲಿ ನಿರತರಾಗಿರುತ್ತಿದ್ದ ನಮ್ಮವರು ಆಟಿ ತಿಂಗಳಲ್ಲಿ ಅಕ್ಷರಶಃ ನಿರುದ್ಯೋಗಿಗಳಾಗುತ್ತಿದ್ದರು. ಕೃಷಿಯ ಕೆಲಸಗಳೆಲ್ಲಾ ಅಷ್ಟರಲ್ಲಿ ಮುಗಿದಿರುತ್ತಿದ್ದವು. ಹಗಲು ರಾತ್ರಿ ಎನ್ನದೆ ಧೋ ಎಂದು ಸುರಿಯುತ್ತಿರುವ ಮಳೆ ಒಂದೆಡೆಯಿಂದ ಇನ್ನೊಂದೆಡೆ ಸಂಚಾರಕ್ಕೂ ಸಮಸ್ಯೆ ಆಗುತ್ತಿತ್ತು. ಬಡತನ ಆ ಕಾಲದಲ್ಲಿ ಎಲ್ಲರ ಮನೆಯ ಶಾಶ್ವತ ಸಂಗಾತಿ. ಹೆಚ್ಚಿನ ಮನೆಗಳಲ್ಲಿ ಮೂರು ಹೊತ್ತು ಬಿಡಿ, ಎರಡು ಹೊತ್ತಿನ ಊಟಕ್ಕೂ ತತ್ವಾರ. ಬಡ ಕೂಲಿ ಕಾರ್ಮಿಕರು ಜಮೀನ್ದಾರರ ಮನೆಗಳಿಗೆ ಬಂದು, ಹಟ್ಟಿಗೆ ಒಂದು ಹೊರೆ ಸೊಪ್ಪು ಹಾಕುತ್ತೇನೆ ಒಂದು ಸೇರು ಅಕ್ಕಿ ಕೊಡಿ ಅಂತ ಗೋಗರೆಯುವ ದೃಶ್ಯ ಸಾಮಾನ್ಯವಾಗಿತ್ತು. ಮಕ್ಕಳು ಮರಿಗಳು ಇದ್ದ ಮನೆಯಲ್ಲಿ ಅರ್ಧ ಸೇರು ಅಕ್ಕಿಗೆ ತೆಳಿ ಹೆಚ್ಚು ಬರುವಂತೆ ನೀರು ಸೇರಿಸಿ ಅನ್ನ ಮಾಡುತ್ತಿದ್ದರು. ಮನೆಯವರು ಬಟ್ಟಲಿನಲ್ಲಿ ತೆಳಿಯ ಮಧ್ಯೆ ಇಲ್ಲದ ಅನ್ನದ ಅಗುಳನ್ನು ಹುಡುಕುತ್ತಿದ್ದರು. (ಅದಕ್ಕೆ ತುಳುವಿನಲ್ಲಿ ತಮಾಷೆಗೆ ‘ಮೊರಂಟೆ ಪತ್ತುನಿ’ ಅನ್ನುತ್ತಿದ್ದರು) ಹಸಿವು ಹೆಚ್ಚಾದಾಗ ನೀರುಪ್ಪಡ್, ಅಟ್ಟದಲ್ಲಿ ಸಂಗ್ರಹಿಸಿಟ್ಟ ಸಾಂತಣಿ ತಿನ್ನುತ್ತಿದ್ದದ್ದು ಇದೆ. ಹಸಿವು ಇಲ್ಲದೇ ಇರುತ್ತಿದ್ದರೆ ಸಾಂತಣಿಯನ್ನು ಯಾರೂ ನೋಡುತ್ತಲೂ ಇರಲಿಲ್ಲ, ಅಷ್ಟು ಟೇಸ್ಟ್ ಲೆಸ್ ವಸ್ತು ಅದು.



ಇದು ಯಾವುದೂ ನಾನು ಕೇಳಿದ ಕಥೆಯಲ್ಲ. ಅನುಭವಿಸಿದ ವ್ಯಥೆ. ಇಂತಿಪ್ಪ ಆಟಿ ತಿಂಗಳನ್ನು ಆಚರಿಸುವ ಪದ್ಧತಿ ಯಾರಿಂದ ಯಾವಾಗ ಪ್ರಾರಂಭವಾಯಿತೋ ಗೊತ್ತಿಲ್ಲ. ಈಗ ಆಟಿ ತಿಂಗಳನ್ನು ಆಚರಿಸುವ ಹೆಚ್ಚಿನ ಮಹಿಳೆಯರು 25 ರಿಂದ 50 ವಯಸ್ಸಿನವರು. ಅವರಿಗೆ ಆ ಕಷ್ಟದ ದಿನಗಳ ಕಲ್ಪನೆಯೇ ಇಲ್ಲ. ವಿವಿಧ ರೀತಿಯ ತರಕಾರಿ ವ್ಯಂಜನಗಳು, ಪಾಯಸ, ಚಿಕನ್ ಮಟನ್ ಗಳು ತಿನ್ನೋದು ಬಿಡಿ, ಆ ಕಾಲದ ನಮ್ಮ ಹಿರಿಯರು ಕನಸಿನಲ್ಲಿಯೂ ಕಲ್ಪಿಸಲು ಸಾಧ್ಯವಿಲ್ಲದ ಕಷ್ಟದ ದಿನಗಳು ಅವು. ಇಂತಹ ಕಷ್ಟದ ಆಟಿ ತಿಂಗಳಲ್ಲಿ ಆಚರಿಸುವಂತದ್ದು ಏನಿದೆ? ಆ ಕಾಲದಲ್ಲಿ ತುಳುವರ ಮುಖದಲ್ಲಿ ಸ್ವಲ್ಪವಾದರೂ ನಗು ಮೂಡುತ್ತಿದ್ದದ್ದು ‘ಕನ್ಯ ಬೊಂತೇಲ್’ ತಿಂಗಳಲ್ಲಿ. ಆಗ ಪೈರು ಕಟಾವಿಗೆ ಬರುತ್ತಿತ್ತು. ಸಾಕಷ್ಟು ಕೃಷಿಯ ಕೆಲಸವೂ ಇರುತ್ತಿತ್ತು. ಆಚರಿಸುವುದೇ ಆದರೆ ‘ಕನ್ಯ ಬೊಂತೇಲ್’ ನಲ್ಲಿ ಒಂದು ದಿನ ಆಚರಿಸುವುದು ಹೆಚ್ಚು ಔಚಿತ್ಯಪೂರ್ಣ ಅಂತ ಅನಿಸುತ್ತದೆ. ತಮ್ಮ ಹೊಸ ಸೀರೆ, ಚಿನ್ನದ ಆಭರಣ, ಪಾಕಶಾಸ್ತ್ರದಲ್ಲಿ ತಮಗಿರುವ ನೈಪುಣ್ಯ ಇವುಗಳನ್ನೆಲ್ಲ ಪ್ರದರ್ಶಿಸಲಿಕ್ಕೆ ಒಂದು ವೇದಿಕೆ ಬೇಕಾದರೆ ‘ಆಟಿಡೊಂಜಿ ದಿನ’ ‘ಸೋಣೊಡೊಂಜಿ ದಿನ’ ಯಾವುದನ್ನು ಬೇಕಾದರೂ ಆಚರಿಸಬಹುದು.
ಬರಹ : ದಾಮೋದರ ಶೆಟ್ಟಿ ಇರುವೈಲು




















































































































