
ತೆಂಕಿನ ಚಂದ್ರಗಿರಿ ನದಿಯಿಂದ ಬಡಗಿನ ಬಾರ್ಕೂರುವರೆಗೆ ಹಾಗೂ ಪೂರ್ವದ ಘಟ್ಟದ ಬದಿಯಿಂದ ಪಡುವಣ ಕಡಲಿನವರೆಗೆ ವ್ಯಾಪಿಸಿರುವ ಸುಂದರ ಭೂಪ್ರದೇಶವೇ ನಮ್ಮ ತುಳುನಾಡು. ನಾಗನಡೆಯ ಪಂಚವರ್ಣದ ಮಣ್ಣಿನ ಪುಣ್ಯಭೂಮಿ ನಮ್ಮ ತುಳುನಾಡು. ನಾವು ರಾಜಕೀಯವಾಗಿ ಕರ್ನಾಟಕ ಹಾಗೂ ಕೇರಳ ರಾಜ್ಯದ ಭಾಗವಾದರೂ ನಮ್ಮ ಭಾಷೆ, ಆಹಾರ ಪದ್ಧತಿ, ಧಾರ್ಮಿಕ ಆಚರಣೆ, ಉಡುಗೆ ತೊಡುಗೆಯಲ್ಲಿ ಕರ್ನಾಟಕದ ಬೇರೆ ಭಾಗಕ್ಕಿಂತ ತೀರಾ ಭಿನ್ನ. ತುಳುನಾಡಿನ ಜನ ಸಾಹಸಿಗಳು, ರಸಿಕರು, ದೈವ ಭಕ್ತರು, ವಿನಯಶೀಲರು. ಭಾರತದ ಐದು ಬಹು ದೊಡ್ಡ ಬ್ಯಾಂಕ್ ಗಳು ಹುಟ್ಟಿದ್ದು ನಮ್ಮ ತುಳುನಾಡಿನಲ್ಲಿ. ಯಕ್ಷಗಾನ, ನಾಗಾರಾಧನೆ ಹಾಗೂ ಭೂತಾರಾಧನೆ ನಮ್ಮ ನಾಡಿನ ವಿಷೇಷತೆಗಳು. ಭಾರತದ ಬೇರೆ ಭಾಗಗಳಲ್ಲಿ ನಾಗರಪಂಚಮಿಯಂದು ನಾಗನನ್ನು ಪೂಜಿಸಿ ಬೇರೆ ದಿನಗಳಲ್ಲಿ ಕೊಲ್ಲುವ ಕ್ರಮವಿದ್ದರೆ, ನಮ್ಮಲ್ಲಿ ಸತ್ತ ನಾಗ ಕಂಡುಬಂದರೂ ಅದಕ್ಕೆ ಸಂಸ್ಕಾರ ಮಾಡುವವರು ನಾವು. ತನು, ಆಶ್ಲೇಶ ಬಲಿ, ಬ್ರಹ್ಮಮಂಡಲ, ನಾಗಮಂಡಲ ಇವು ನಾಗನನ್ನು ತೃಪ್ತಿಪಡಿಸುವ ಪೂಜಾ ವಿಧಾನಗಳು. ಬಹುಷಃ ತುಳುನಾಡಿನಲ್ಲಿ ನಡೆಯುವಷ್ಟು ನಾಗಮಂಡಲ, ಬ್ರಹ್ಮಕಲಶ, ನೇಮ ಬಲಿ ಇವು ಭಾರತದ ಯಾವ ಭಾಗದಲ್ಲೂ ನಡೆಯುತ್ತಿಲ್ಲ. ವರ್ಷದಲ್ಲಿ ಹತ್ತಾರು ದೇವಸ್ಥಾನಗಳು ಜೀರ್ಣೋದ್ದಾರಗೊಂಡು ಬ್ರಹ್ಮಕಲಶ ಆಚರಿಸುತ್ತಿವೆ. ದೀಪಾವಳಿಯಿಂದ ಪ್ರಾರಂಭವಾಗಿ ಪತ್ತನಾಜೆಯವರೆಗೆ ರಾತ್ರಿ ಹೊತ್ತು ಹಳ್ಳಿಗಳಲ್ಲಿ ಮನೆಯಿಂದ ಹೊರಗೆ ಬಂದು ನಿಂತರೆ ಯಾವುದಾದರೂ ಕಡೆಯಿಂದ ಚೆಂಡೆಯ ಶಬ್ದವೋ, ತಾಸೆಯ ಶಬ್ದವೋ ಅಥವಾ ದೇವಸ್ಥಾನದ ‘ಕದೊನಿ’ಯೋ ಖಂಡಿತ ಕೇಳಿಸಿಯೇ ಕೇಳುತ್ತದೆ. ಇದರಲ್ಲಿ ಕೋಟಿಗಟ್ಟಲೆ ಹಣದ ವ್ಯವಹಾರ ನಡೆಯುತ್ತದೆ. ಈ ದುಡ್ಡಿನ ಸಿಂಹಪಾಲು ಬರುವುದು ಹೊರನಾಡಿನಿಂದ.


ಇಂದು ತುಳುನಾಡಿನ ಹೆಚ್ಚಿನ ದೇವಸ್ಥಾನಗಳಲ್ಲಿ ಮಧ್ಯಾಹ್ನದ ಹಾಗೂ ರಾತ್ರಿಯ ಉಚಿತ ಅನ್ನ ಪ್ರಸಾದದ ವ್ಯವಸ್ಥೆ ಇದೆ. ದೇಶದ ಬೇರೆ ಕಡೆ ಈ ಸಂಪ್ರದಾಯ ತೀರಾ ವಿರಳ. ಆರ್ಥಿಕವಾಗಿ ಇಂದು ಜನ ಬಲಿಷ್ಟರಾಗಿದ್ದಾರೆ. ನಮ್ಮಲ್ಲಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅತ್ಯುತ್ತಮ. (ಸ್ವಲ್ಪ ದುಬಾರಿ) ದೇವಸ್ಥಾನಗಳಿಂದ ನಡೆಸಲ್ಪಡುವ ಯಕ್ಷಗಾನ ಮೇಳಗಳು ಹತ್ತಾರು ವರ್ಷಗಳವರೆಗೆ ಆಡಿ ಮುಗಿಸಲಾರದಷ್ಟು ಆಟಗಳು ಬುಕ್ ಆಗಿರುವುದು ವಿಶೇಷ. ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ವೃತ್ತಿಪರ ಯಕ್ಷಗಾನ ಮೇಳಗಳು ತುಳುನಾಡಿನಲ್ಲಿ ಸಕ್ರಿಯವಾಗಿವೆ. ಉತ್ತರ ಕರ್ನಾಟಕದ ಹಲವು ಪಟ್ಟಣಗಳಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ದುಡಿದ ನನ್ನ ಬಂಧುವೊಬ್ಬರು ಹೇಳುವ ಪ್ರಕಾರ ತುಳುನಾಡಿನ ಜನತೆಯಷ್ಟು ವಿನಯಶೀಲತೆ, ಸೌಜನ್ಯ ಬೇರೆಡೆ ಅಪರೂಪವಂತೆ. ಆದರೆ ಇಂದು ಹೊರನಾಡಿನಿಂದ ಉದ್ಯೋಗ ಅರಸಿ ಬರುತ್ತಿರುವವರು ಈ ನಾಡಿನ ಸಾಮಾಜಿಕ ವ್ಯವಸ್ಥೆಯನ್ನು ಹಾಳುಗೆಡವುತ್ತಿದ್ದಾರೆ. ಅಪರಾಧಗಳು ನಿಧಾನವಾಗಿ ಹೆಚ್ಚುತ್ತಿವೆ. ಇಂಡಸ್ಟ್ರಿಯಲ್ ನಿಂದಾಗಿ ಸಸ್ಯಶ್ಯಾಮಲೆಯಾಗಿದ್ದ ತುಳುನಾಡಿನ ಹಸಿರು ಹೊದಿಕೆ ಮಾಯವಾಗುತ್ತಿದೆ. ನದಿಗಳು ಬರಡಾಗುತ್ತಿವೆ. ತಾಪಮಾನ ದಾಖಲೆ ಮಟ್ಟಕ್ಕೆ ಏರುತ್ತಿದೆ. ಕೊಳಚೆ ನೀರು ಹಾಗೂ ಏರುತ್ತಿರುವ ತಾಪಮಾನ ಸಮುದ್ರದ ಮತ್ಸ್ಯ ಸಂತತಿಗೂ ಅಪಾಯ ಒಡ್ಡಿದೆ. ಅವ್ಯಾಹತವಾಗಿ ಕೊರೆಯುತ್ತಿರುವ ಕೊಳವೆ ಬಾವಿಗಳಿಂದಾಗ ಅಂತರ್ಜಲದ ಮಟ್ಟ ಕುಸಿಯುತ್ತದೆ. ನಮ್ಮ ತುಳುನಾಡು ಮತ್ತೆ ಮೊದಲಿನಂತಾಗಲಿ ಅಂತ ಹಾರೈಸುವ ಹೊರತು ನಾವೇನೂ ಮಾಡಲಾರೆವು. ಬದಲಾವಣೆ ಜಗದ ನಿಯಮ. ಕಾಲಾಯ ತಸ್ಮೈ ನಮಃ.
ಬರಹ : ದಾಮೋದರ ಶೆಟ್ಟಿ ಇರುವೈಲು





















































































































