ಹಂಪಿ ಎಂದಾಕ್ಷಣ ರಾಜ ವೈಭವಗಳು ಕಣ್ಮಂದೆ ಎದ್ದು ಬರುತ್ತದೆ. ಇಂತಹ ಪಾರಂಪರಿಕ ತಾಣವನ್ನು ಸುತ್ತಾಡುವುದೇ ಒಂದು ಸೊಗಸು. ವಾರಂತ್ಯದಲ್ಲಿ ಪಯಣಿಸಲು ಹಂಬಲಿಸುವ ಮನಕ್ಕೆ ಖಂಡಿತವಾಗಿ ಎರಡು ದಿನ ಸುತ್ತಿ ನೋಡುವಷ್ಟು ಇಲ್ಲಿದೆ. ಅದರಲ್ಲೂ ಮುಖ್ಯವಾಗಿ ವಿರೂಪಾಕ್ಷ ದೇವಾಲಯದ ಕೌತುಗಳು ಅನೇಕ. ಮುಂಜಾನೆ ಸುಮಾರು 8 ಗಂಟೆಗೆ ಹಂಪಿಯ ಅಂಗಣ ತಲುಪಿದ್ದೇವು ನಾವು. ಬಿಸಿಲಿನಲ್ಲಿ ಇಲ್ಲಿ ತಿರುಗಾಟ ಕಷ್ಟ ಅಂತ ಬೇಗನೆ ಬಂದು ನೋಡಿದರೆ ನಮ್ಮ ಗೈಡ್ ಒಂದು ಕಡೆ ನಮ್ಮ ವಾಹನ ನಿಲ್ಲಿಸಿ ಹೇಳಿದರು, ಇಲ್ಲಿಂದಲೇ ನಡೆದು ಸಾಗಬೇಕು. ಹಾಗೆ ಅಂದದ್ದೆ ತಡ ಕಾಲ್ನಡಿಗೆಯಲ್ಲಿ ಸಾಗಲು ಕೆಲವರು ನಮ್ಮಿಂದ ಅಸಾಧ್ಯ ಎಂದು ವಾಹನದಲ್ಲೇ ಕುಳಿತಿದ್ದರು. “ಕಣ್ಣಿದ್ದರೆ ಕನಕಗಿರಿ, ಕಾಲಿದ್ದರೆ ಹಂಪಿ ಎಂದೂ ಹಂಪಿಯನ್ನು ನಡೆದು ನೋಡು. ಉಜ್ಜಯಿನಿಯನ್ನು ಕುಂತು ನೋಡು” ಎಂದು ಬಣ್ಣಿಸಿದ್ದು ನಿಜವಾಗಿಯೂ ಸತ್ಯದ ನುಡಿ. ಈ ಕಲಾತ್ಮಕತೆಯನ್ನು ಗುರುತಿಸುವ ಒಳಗಣ್ಣು ಬೇಕು. ಬಗೆದಷ್ಟು ದೊರಕುವ ಕೌತುಕ ಮೊಗೆದಷ್ಟೂ ಹೊಸತನ ಮೂಕ ವಿಸ್ಮಯಗೊಳಿಸುವ ಶಿಲ್ಪಕಲಾ ಬೆರಗು ಇಲ್ಲಿದೆ. ಆಚೆ ಈಚೆ ಎಲ್ಲಾ ಕಡೆ ಅಲೆದು ತಿರುಗಿ ಸಾಗುವಾಗ ನಾನೇ ಬಳಲಿದ್ದೆ. ನಮ್ಮ 22 ಜನರ ಸಮೂಹದಲ್ಲಿ ನಾನು ಪ್ರಾಯದಲ್ಲಿ ಕಿರಿಯವಳು. ಮೀನಾಕ್ಷಿ ಕಾಳವಾರ ನನಗೆ baby of the Team ಎನ್ನುತ್ತಿದ್ದರು. ನಾನೆ ದಣಿದ ಮೇಲೆ ಉಳಿದವರ ಕೇಳ ಬೇಕೆ? ನಾವೆಲ್ಲ ಎಷ್ಟೇ ದಣಿದರೂ ವಿರೂಪಾಕ್ಷ ದೇವಾಲಯ ನೋಡಿ ಮನಸ್ಸು ತುಂಬಾ ಹಗುರವಾಗಿತ್ತು.
ಜಗತ್ತಿನ ಅತೀ ವಿಸ್ತಾರವಾದ ಚಾರಿತ್ರಿಕ ನೆಲೆ, ಅತೀ ಹೆಚ್ಚು ಸ್ಮಾರಕಗಳಿರುವ ಹಂಪಿ ಅರಮನೆ ವಸತಿ ಕಟ್ಟಡ, ಕೋಟೆ ಕೊತ್ತಲ, ಕೆರೆಕಟ್ಟೆ ಕಾಲುವೆ, ಬಾವಿ, ಕೊಳ, ಪುಷ್ಕರಣಿ, ದೇವಾಲಯ ಮಠ, ರಥಬೀದಿ, ಬಜಾರು ಸಾಲುಮಂಟಪಗಳು ಇಲ್ಲಿನ ಸೊಬಗಿಗೆ ಬೆಟ್ಟ, ಗುಡ್ಡ, ಕಣಿವೆಗಳು, ಬಂಡೆಗಲ್ಲು, ನದಿ ಹಳ್ಳ, ಕೊಳ್ಳಗಳಿಂದ ಆವೃತವಾಗಿದೆ. ಇದನ್ನೆಲ್ಲಾ ನೋಡುವಾಗ ವಿಜ್ಞಾನ ಮುಂದುವರಿಯದ ಕಾಲದಲ್ಲೂ ಇಷ್ಟು ದೊಡ್ಡ ಮಟ್ಟದ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವುದನ್ನು ಊಹಿಸಲಾಗಿದೆ ಎನ್ನುವುದು ಒಂದು ಬೆರಗು.
ವಿರೂಪಾಕ್ಷ ದೇವಾಲಯ :
ಬೃಹದಾಕಾರದ ಅಡಿಪಾಯ ಹೊಂದಿರುವ ಇಲ್ಲಿನ ದೇವಾಲಯ ವಾಸ್ತು ಶಿಲ್ಪಗಳಲ್ಲಿ ಮುಳುಗಿದಂತಿದ್ದು. ಹಂಪಿಯಲ್ಲಿ ಇಂದಿಗೂ ಪೂಜೆ ಸಲ್ಲಿಸಲಾಗುತ್ತಿರುವ ಒಂದೇ ಒಂದು ದೇವಾಲಯವೆಂದರೆ ವಿರೂಪಾಕ್ಷ ದೇವಾಲಯ. ಒಂಬತ್ತು ಮಹಲಿನ ಗೋಪುರವಿರುವ ಶಿವ ಮತ್ತು ಪಂಪಾದೇವಿಯ ದೇವಾಲಯ ವಿರೂಪಾಕ್ಷ ವಿಜಯನಗರ ಅರಸರ ಕುಲದೇವರು ಪಂಪಾಮಯಿ ದೇವಾಲಯ ಎಂಬ ಹೆಸರಿನಿಂದಲೂ ಕೂಡ ಕರೆಯಲಾಗುತ್ತದೆ. ಒಂದನೇ ಹರಿಹರ ಕಟ್ಟಿಸಿದ ಎನ್ನಲಾಗುವ ಈ ದೇವಾಲಯ ಹಂಪಿಯ ಮುಖ್ಯ ದೇವಾಲಯಗಳಲ್ಲಿ ಅತ್ಯಂತ ಹಳೆಯದು. ಭವ್ಯವಾಗಿ ಕಂಗೊಳಿಸುವ ವಿರೂಪಾಕ್ಷ ದೇವಾಲಯದ ಗೋಪುರ 165 ಅಡಿ ಎತ್ತರದ 150 ಅಡಿ ಅಗಲದ ದೇಗುಲ. 7 ನೇ ಶತಮಾನದಲ್ಲಿ ನಿರ್ಮಿಸಲಾದ ಹನ್ನೊಂದು ಅಂತಸ್ತುಗಳಿಂದ ಕೂಡಿದ ವಿರೂಪಾಕ್ಷ ದೇವಾಲಯಕ್ಕೆ ಸುಂದರ ಕೆತ್ತನೆಯ ಧ್ವಜಸ್ತಂಭ, ದೀಪಸ್ತಂಭಗಳು ಇವೆ. ದೇವಾಲಯದ ಕಂಬಗಳು ಚರಜಯಂತ್ರದಿಂದ ಸುತ್ತಿಕೊರೆದಿದೆ.
ವಿರೂಪಾಕ್ಷ ದೇವಾಲಯಕ್ಕೆ ಮೂರು ಗೋಪುರಗಳುಂಟು, ಮೊದಲ ಪ್ರಾಕಾರದಿಂದ ಪಶ್ಚಿಮ ದಿಕ್ಕಿನಲ್ಲಿ ಸಾಗಿದರೆ ಮತ್ತೊಂದು ಗೋಪುರ ಕಾಣಸಿಗುತ್ತದೆ. ಇದೇ ರಾಯಗೋಪುರ. ಇದನ್ನು ಶ್ರೀ ಕೃಷ್ಣ ದೇವರಾಯ ತನ್ನ ಪಟ್ಟಾಭಿಷೇಕದ ಸವಿನೆನಪಿಗಾಗಿ ಕಟ್ಟಿಸಿದ್ದರಂತೆ. ಇಲ್ಲಿಂದ ಪ್ರವೇಶಿಸುತ್ತಿದಂತೆ ಎರಡನೇ ಪ್ರಾಕಾರ ಸಿಗುತ್ತದೆ. ಈ ಪ್ರಾಕಾರದಲ್ಲಿ ಧ್ವಜಸ್ತಂಭ, ದೀಪ ಸ್ತಂಭಗಳು, ಚಿಕ್ಕ ಚಿಕ್ಕ ಗುಡಿಗಳು ಕಾಣಬಹುದು. ವಿರೂಪಾಕ್ಷ ದೇವಾಲಯದ ಹಿಂಭಾಗದಿಂದ ಒಂದಿಷ್ಟು ಮೆಟ್ಟಿಲುಗಳನ್ನು ಹತ್ತಿ ಹೋದರೆ ಹಿಂದಿನ ಬಾಗಿಲನ್ನು ತಲುಪುವ ಮೊದಲ ಬಲಭಾಗದಲ್ಲಿ ಕಟ್ಟೆಯೊಂದು ಕಾಣುತ್ತದೆ. ಅಲ್ಲಿಂದ ಗೋಡೆಯ ಮೇಲೆ ಗೋಪುರದ ತಲೆ ಕೆಳಗಾದ ನೆರಳನ್ನು ಕಾಣಬಹುದು. ಎದುರುಗಡೆಯ ಮೇಲೆ ಕಿಂಡಿಯೊಂದಿದೆ. 165 ಅಡಿ ಎತ್ತರವಿರುವ ರಾಯಗೋಪುರದ ನೆರಳು 300 ಅಡಿ ದೂರದಲ್ಲಿರುವ ಸಣ್ಣ ರಂದ್ರದ ಮೂಲಕ ಹಾಯ್ದು ತಲೆಕೆಳಗಾದ ನೆರಳನ್ನು ಉಂಟು ಮಾಡುವ ಪ್ರಕ್ರಿಯೆ ಆಶ್ಚರ್ಯವೇ ಸರಿ. ಅಂದಿನ ವಾಸ್ತು ಶಿಲ್ಪದ ಅದ್ಬುತಕ್ಕೆ ಇದು ಕೂಡಾ ಒಂದು ಸಾಕ್ಷಿ. ನನ್ನ ಅರಿವಿಗೆ ಬಂದ ಪ್ರಕಾರ ಈ ಸ್ಥಳದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾಹಿತಿ ಕಲೆ ಹಾಕುತ್ತಿರುತ್ತಾರೆ. ಹಿರಿಯರು ಭಕ್ತಿಯಿಂದ ನಮಿಸಿದರೆ, ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಕುತೂಹಲ, ಇತಿಹಾಸಕಾರರಿಗೆ ಸಂಶೋಧನಾ ಸ್ಥಾನ.
ವಿರೂಪಾಕ್ಷ ದೇಗುಲ ರಂಗ ಮಂಟಪದ ಚಾವಣಿಯಲ್ಲಿ ವಿದ್ಯಾರಣ್ಯರನ್ನು ಪಲ್ಲಕ್ಕಿಯಲ್ಲಿ ಹೊತ್ತು ತರುವ ಚಿತ್ರ, ಗಿರಿಜ ಕಲ್ಯಾಣ, ಕಾಮ ದಹನ, ಮಹಾಭಾರತ, ಅರ್ಜುನ ಮತ್ಸ್ಯ ಬೇದಿಸುವ ಚಿತ್ರ, ದ್ರೌಪದಿಯ ಮದುವೆ ವರ್ಣ ಚಿತ್ರ, ಪುರಾಣ, ಪುಣ್ಯ ಕಥೆಗಳ ದೃಶ್ಯಗಳನ್ನೊಳಗೊಂಡ ಸುಂದರ ಚಿತ್ರಗಳ ಪೈಂಟಿಂಗ್ ಬಿಡಿಸಲಾಗಿದೆ. ಇದನ್ನೆಲ್ಲಾ ನೋಡಲು ಗಂಟೆ ಕಟ್ಟಲೆ ಬೇಕು. ಕಣ್ಣಿಗೆ ಸಿಗುವ ಆನಂದವನ್ನು ಅನುಭವಿಸಿಯೇ ತೀರಬೇಕು. ಹಂಪಿಯ ನೋಟ ಮೈ ಮಸ್ಸಿಗೆ ಹೊಸ ಸ್ಪೂರ್ತಿ ನೀಡುವುದು ಸತ್ಯ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಳಿಯಿರುವ ಐತಿಹಾಸಿಕ ತಾಣ. ಶಿಲ್ಪ ಕಲೆಯ ತವರು “ಹಂಪಿ” ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ಸೊಬಗಿನ ಚಿತ್ತಾರಕ್ಕೆ ತಲೆ ದೂಗದವರಾರು. ಹಂಪಿ ಬರೆ ಸ್ಮಾರಕಗಳ ಗುಚ್ಚವಲ್ಲ. ಭಾರತಿಯ ಶ್ರದ್ದಾ ಕೇಂದ್ರವು ಹೌದು. ಇಲ್ಲಿ ಕಲ್ಲು ಹಾಡುತ್ತಾ ಕಲೆಯಲ್ಲಿ ಅರಳುತ್ತದೆ. ಇಲ್ಲಿನ ಇತಿಹಾಸವು ರೋಚಕವಾಗಿದ್ದು ಐತಿಹಾಸಿಕ ಸ್ಮಾರಕಗಳ ನೆಲೆ ಬೀಡು. ಶಿಲ್ಪಕಲಾ ಸಾಮ್ರಾಜ್ಯದ ಮುಕುಟಮಣಿ ಹಂಪಿಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ. ಹರಿ-ಹರ, ಹಕ್ಕ-ಬುಕ್ಕರು ವಿದ್ಯಾರಣ್ಯ ಗುರುಗಳ ಆಶೀರ್ವಾದದಿಂದ ವಿಜಯನಗರವನ್ನು ಸ್ಥಾಪಿಸಿದರು. ಹಂಪಿಯ ಪರಿಸರದ ಸೌಂದರ್ಯಕ್ಕೆ ಜನಪದರು ಅಂದಕ್ಕೆ ಆನೆಗೊಂದಿ, ಚಂದಕ್ಕೆ ವಿಜಯನಗರ ಹೊಂದಿಸಿ ಕಟ್ಟಿದ ಹೊಸಪೇಟೆ ಎನ್ನುತ್ತಾರೆ.
ಜಗತ್ತಿನಲ್ಲಿ ಕಡ್ಡಾಯವಾಗಿ ನೋಡಲೇಬೇಕಾದ 52 ಪ್ರವಾಸಿ ತಾಣಗಳನ್ನು ನ್ಯೂಯಾರ್ಕ್ ಟೈಮ್ಸ್ ಗುರುತಿಸಿದ್ದು, ಅದರಲ್ಲಿ ವಿಶ್ವವಿಖ್ಯಾತ ಹಂಪಿಗೆ ಎರಡನೇ ಸ್ಥಾನ ಕಲ್ಪಿಸಿದೆ. ನ್ಯೂಯಾರ್ಕ್ ಟೈಮ್ಸ್ ಜಾಗತಿಕ ಪ್ರವಾಸ ತಾಣಗಳಲ್ಲಿ ಹಂಪಿಯನ್ನು ಹೆಸರಿಸುವುದರಿಂದ ದೇಶ ವಿದೇಶಗಳಲ್ಲಿ ಅದರ ಹಿರಿಮೆ ಹೆಚ್ಚಿದಂತಾಗಿದೆ. ಅನ್ಯ ದೇಶದ ಪತ್ರಿಕೆಯೊಂದು ಹಂಪಿಯನ್ನು ಗುರುತಿಸಿ ಇದಕ್ಕೆ ಎರಡನೇ ಸ್ಥಾನ ಕೊಟ್ಟಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಹಂಪಿ ಗತವೈಭವ ಇತಿಹಾಸ ಕಣ್ತುಂಬಿ ಕೊಳ್ಳಬೇಕು. ಹಂಪಿಯಲ್ಲಿ ನಡೆದು ಸುತ್ತಾಡಿ ಬನ್ನಿ. ಅಬ್ಬಾ ಒಂದೇ ಎರಡೇ ಒಳ್ಳೆಯ ಗೈಡ್ ಸಿಕ್ಕರಂತು ಹೆಜ್ಜೆ ಹೆಜ್ಜೆಗೂ ಇತಿಹಾಸದ ಒಂದೊಂದು ಮಗ್ಗಲನ್ನು ವಿವರಿಸುತ್ತಾರೆ. ವೈಜ್ಞಾನಿಕ ಜಗತ್ತೇ ಬೆರಗುಗೊಳ್ಳುವ ಹಾಗಿದೆ ಇಲ್ಲಿನ ಚಿತ್ರ ಕಲೆ, ವಾಸ್ತು ಶಿಲ್ಪಕ್ಕೆ ಯಾವುದೇ ಸರಿಸಾಟಿ ಇಲ್ಲ. ಬಿಸಿಲು ತುಂಬಾ ಇದ್ದ ಕಾರಣ, ಕಣ್ಣಿಗೆ ತಂಪಿನ ಕಪ್ಪು ಕನ್ನಡಕ, ತಲೆಯನ್ನು ಬಟ್ಟೆಯಿಂದ ಬಿಗಿದುಕೊಂಡೇ ತಿರುಗಾಡಿದೆ. ಸೂರ್ಯಾಸ್ತವಾದರೂ ಬೇಸರವಿಲ್ಲದೆ ನೋಡಿ ಬಂದೆವು. ನಿತ್ಯ ನೂತನವೆಂದೆನಿಸುವ ಇಲ್ಲಿನ ಸೌಂದರ್ಯವನ್ನು ಬರಿಯ ಶಬ್ದಗಳಲ್ಲಿ ವರ್ಣಿಸಲಾಗದು.
ವಿರೂಪಾಕ್ಷ ದೇವಾಲಯದ ಸ್ಥಳ ಪುರಾಣ- ಶ್ರೀ ವಿರೂಪಾಕ್ಷನಿಗೆ ಪಂಪಾ ಎಂದು ಕರೆಯುವುದಕ್ಕೆ ಪೌರಾಣಿಕ ಕಥೆಯೊಂದಿದೆ. ಪಂಪಾದೇವಿಯು ಈ ಪವಿತ್ರ ಸ್ಥಳದಲ್ಲಿ ಶಿವನ ಕುರಿತು ತಪಸ್ಸನ್ನಾಚರಿಸಿದ್ದಳಂತೆ.ಅವಳ ಭಕ್ತಿಗೆ ಶಿವ ಪ್ರತ್ಯಕ್ಷವಾಗಿ ಇಲ್ಲೇ ನೆಲೆಯಾಗಲು ಲಿಂಗರೂಪವನ್ನು ತಾಳಿದ ಮೂರ್ತಿಯೇ ವಿರೂಪಾಕ್ಷ. ಇಲ್ಲಿ ವಿರೂಪಾಕ್ಷ ದರ್ಶನಕ್ಕೆ ಪೂರ್ವ ದಿಕ್ಕಿನಿಂದ ಪ್ರವೇಶ ಇಲ್ಲದಿರುವುದಕ್ಕೆ ವಿರೂಪಾಕ್ಷ ಹೆಸರು ಬರಲು ಪೌರಾಣಿಕ ಕಥೆಯೊಂದು ಇದೆ. ದಕ್ಷ ಯಜ್ಞದ ನಂತರ ಪಾರ್ವತಿ ದೇವಿಯ ಅಗಲಿಕೆಯಿಂದ ಕೈಲಾಸವನ್ನು ತೊರೆದ ಶಿವನು ಭೂಲೋಕದಲ್ಲಿ ಹೇಮಕೂಟ ಪರ್ವತದಲ್ಲಿ ತಪೋಮಗ್ನನಾಗಿ ನಲೆಸಿದ ಸಮಯದಲ್ಲಿ, ತಾರಾಕಾಸುರನ ಹಾವಳಿ ಹೆಚ್ಚಾಗಿ ಇಂದ್ರರಾದಿ ದೇವತೆಗಳೆಲ್ಲರಿಗೂ ಸಂಕಷ್ಟಗಳನ್ನು ಕೊಡುತ್ತಾ ಅಟ್ಟಹಾಸದಿಂದ ಮೆರೆಯತೊಡಗಿದನು. ಅದೇ ಸಮಯದಲ್ಲಿ ಶಿವನು ಭೂಲೋಕದಲ್ಲಿ ಅಂದರೆ ಹಂಪಿಯ ಹೇಮಕೂಟದಲ್ಲಿ ತಪಸ್ಸನ್ನು ಮಾಡುತ್ತಿರುವುದರಿಂದ ಬೇರೆ ಉಪಾಯ ಕಾಣದೆ ಪಾರ್ವತಿ ಶಿವನಲ್ಲಿಗೆ ಪಂಪಾ ಸರೋವರದಿಂದ ಬರುವ ಸಮಯದಲ್ಲಿ ರತಿ ಮನ್ಮಥರನ್ನು ಅಲ್ಲಿಗೆ ಕಳುಹಿಸಿ, ಹೇಮ ಕೂಟಕ್ಕೆ ಪಂಪಾಂಬೆ ಬರುವ ವೇಳೆ ನೋಡಿ ಹೂಬಾಣಗಳನ್ನು ಶಿವನ ಮೇಲೆ ಪ್ರಯೋಗಿಸುತ್ತಾನೆ . ಶಿವನ ತಪಸ್ಸು ಭಂಗವಾಗಿ ಕಣ್ಣು ತೆರೆದು ಉಗ್ರ ರೂಪದಿಂದ ಮೂರನೇ ಕಣ್ಣು ತೆರೆದಾಗ ಎದುರಿಗಿದ್ದ ಮನ್ಮಥ ಸುಟ್ಟು ಭಸ್ಮವಾಗುತ್ತಾನೆ.ಆಗ ಎಲ್ಲರ ಮೊರೆ ಆಲಿಸಿದ ಶಿವ ಮನ್ಮಥನಿಗೆ ರೂಪವಿಲ್ಲದೆ ಬಾಳಲು ಅನುಗ್ರಹಿಸಿದ. ಲೋಕ ಕಲ್ಯಾಣಕ್ಕಾಗಿ ಪಂಪಾಂಬೆಯ ಪಾಣಿಗ್ರಹಣದಿಂದ ಹುಟ್ಟಿದ ಕುಮಾರಸ್ವಾಮಿ ತಾರಕಾಸುರನ ವದಿಸುತ್ತಾನೆ. ಇಲ್ಲಿ ಇಂದಿಗೂ ಮನ್ಮಥ ಸರೋವರವಿದೆ. ಮನ್ಮಥನನ್ನು ಸುಟ್ಟಿದ್ದರಿಂದ ವಿರುಪಾಕ್ಷನೆಂದು, ಪಂಪಾಂಬೆಯನ್ನು ಮದುವೆಯಾದ್ದರಿಂದ ಪಂಪಾಪತಿಯಂತಲೂ ಹೆಸರಾಯಿತು.
ಹಾಳು ಹಂಪಿ- ವಿಜಯ ನಗರದ ವರ್ತಕರು ಹಂಪಿಯಲ್ಲಿ ಅಂದಿನ ಕಾಲದಲ್ಲಿ ಚಿನ್ನ ಮುತ್ತು ರತ್ನಗಳಿಗೆ ಅಲ್ಲದೇ ಅತ್ಯುತ್ತಮ ಸಿಲ್ಕ್ ಗಳನ್ನು ಮಾರಾಟ ಮಾಡುತ್ತಿದ್ದರಂತೆ. ಆದರೆ ಇಂದು ಹಂಪಿ ಎಂದಾಕ್ಷಣ ಹಾಳಾದ, ಒಡವೆ ಮೂರ್ತಿಗಳು, ಬಂಡೆ ಕಲ್ಲಿನ ಕೆತ್ತನೆಗಳ ಚಿತ್ರಣ ಮನದಲ್ಲಿ ಮೂಡುವುದು, ಅನೇಕ ಮೂರ್ತಿಗಳು ದೇವಾಲಯಗಳು ವಿರೂಪಗೊಂಡಿದೆ. ಸುವರ್ಣ ಯುಗಕ್ಕೆ ಸಾಕ್ಷಿಯಾದ ಹಂಪಿ ಕಲ್ಲು ಧೂಳಿನಿಂದ ತುಂಬಿದೆ ಅನಿಸಿದರೂ ಅಲ್ಲಿನ ಇಡಿ ಪ್ರದೇಶದಲ್ಲಿ ನಡೆದಾಡಿ ಸೂಕ್ಷ್ಮತೆಯಿಂದ ನೋಡಿದರೆ ಅಲ್ಲಿನ ಒಂದೊಂದು ಬಂಡೆಗಳು ತನ್ನ ವೈಭವವನ್ನು ಸಾರುವುದು ಕೇಳುತ್ತದೆ. ಹಂಪಿಯ ಶಿಲ್ಪ ವೈಭವಗಳು ಎಷ್ಟು ಹಾಳಾಗಿದ್ದರೂ, ಅಳಿದುಳಿದ ಶಿಲೆಗಳು ಗತ ವೈಭವವನ್ನು ಸಾರುತ್ತಿವೆ. ಎಂಥವರನ್ನೂ ಅಚ್ಚಬೆರಗಾಗಿಸುವ ಪ್ರವಾಸಿಗರ ನೆಚ್ಚಿನ ತಾಣವಾಗಿಯೇ ಉಳಿದಿದೆ. ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದೇ ಇದಕ್ಕೆ ಸಾಕ್ಷಿ. ತನ್ನ ಶ್ರೀಮಂತ ಸಾಂಸ್ಕೃತಿಕ ಕುರುಹುಗಳನ್ನು ಅಲ್ಪ ಸ್ವಲ್ಪ ಉಳಿಸಿಕೊಂಡು ಭಗ್ನ ಸ್ಥಿತಿಯಲ್ಲಿದ್ದ ಹಂಪಿಯನ್ನು ಇನ್ನೂ ಹಾಳಾಗದಂತೆ ಎಚ್ಚರವಹಿಸಬೇಕು
ಗತ ವೈಭವವೀಗ ಹಾಳು ಕೊಂಪೆಯಾಗಿದೆ ನಿಜ, ಎಲ್ಲೆಲ್ಲೂ ದೂಳು, ಮಣ್ಣು, ಕಲ್ಲುರಾಶಿ, ನಾನಂತೂ ಹಂಪಿಯ ಮೂಲೆ ಮೂಲೆ ತಿರುಗುತ್ತಾ ಇರುವಾಗ ನಮ್ಮೊಂದಿಗಿದ್ದ ಗೈಡ್ ಹಲವು ಸಲ ನನಗೆ ಬೀಳ ಬೇಡಿ ಅಲ್ಲಿ ಕಲ್ಲಿದೆ, ಇಲ್ಲಿ ಮಣ್ಣಿದೆಎನ್ನುತ್ತಿದ್ದರು. ಆಗ ನಾನವರಿಗೆ ಇಲ್ಲಿ ಕಲ್ಲು ಮಣ್ಣಿನ ನಡುವೆ ಹಂಪಿ ಇದೆ ಎಂದು ನಗುತ್ತಿದ್ದೆ. ಹಾಗೇ ನಮ್ಮೊಂದಿಗೆ ಸುತ್ತುತ್ತಿದ್ದ ನಮ್ಮ ಗ್ರೂಪಿನ ಕೆಲವರು ಲೇಖಕರು ಸಾಹಿತಿಗಳು ಇದ್ದ ಪ್ರವಾಸಿ ಗ್ರೂಪ್ ಗೆ ಹೋಗಬಾರದು ಈ ಸಾಹಿತಿಗಳು ಒಂದು ತರ ಅಲೆಮಾರಿ ಜನಾಂಗದ ಹತ್ತಿರ ಸಂಬಂದಿಗಳು ಎಂದು ತಮಾಷೆ ಮಾಡುತ್ತಿದ್ದರು. ಪ್ರವಾಸಿಗರು ಕೇವಲ ಪ್ರವಾಸ ಅಂತ ಯೋಚಿಸಿ ಹಂಪಿ ಸುತ್ತುವುದಕ್ಕಿಂತ ಪಾಳುಬಿದ್ದ ದೇವಾಲಯ, ವಿವಿಧ ಅಂಗಗಳು ಮುರಿದು, ತಲೆ ಕಡಿದ ಮೂರ್ತಿಗಳ ಬಗ್ಗೆ ಚಿಂತಿಸಬೇಕಾಗಿದೆ. ಅಲ್ಲಿನ ಕಲಾವೈಭವವನ್ನು ಅರಿತು ಗ್ರಹಿಸಿದರೆ ನೋಡಿದಷ್ಟು ಮುಗಿಯದ ಶಿಲ್ಪಾಕಲಾ ವೈಶಿಷ್ಟ್ಯಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ತಾಣ.
ಹಂಪಿಯ ಸುತ್ತಾಟದಲ್ಲಿ ನಾನಂತು ನಮ್ಮೊಂದಿಗೆ ಇದ್ದ ಪ್ರವಾಸಿಗರೊಂದಿಗೆ ಬೈಸಿಕೊಂಡಿದ್ದೆ. ಅವರೆಲ್ಲ ರೂಮ್ಗೆ ಹೋಗಿ ಆರಾಮ ಮಾಡುವ ನಿರೀಕ್ಷೆಯಲ್ಲಿದ್ದರು. ನಾನು ಗೈಡನ್ನು ಪುಸಲಾಯಿಸಿ 2 ಗಂಟೆ ಹೆಚ್ಚು ಸುತ್ತಾಡಿಸಿದ್ದೆ. ಕೆಲವರು ಕಣ್ಣಲ್ಲಿ ಮತ್ತೆ ಕೆಲವರು ಬಾಯಿಯಲ್ಲಿ ಕೋಪ ಪ್ರದರ್ಶಿಸಿದ್ದರು ಅದೆಲ್ಲಾ ಹಂಪಿಯ ಸೊಬಗಿನೆದುರು ಶೂನ್ಯ. ಹಂಪಿಯನ್ನು ಸುತ್ತುತ್ತಾ ಅಡ್ಡಾದಿಡ್ಡಿ ಅಲೆಯುತ್ತಾ ನೋಡಬೇಕು. ಆದರೆ ಇಲ್ಲಿನ ರಣಬಿಸಿಲು ಅಬ್ಬಾ, ಮಳೆ, ಚಳಿ ಎಲ್ಲದರೊಂದಿಗೆ ಪ್ರವಾಸಿಗರಿಗೆ ತನ್ನ ಒಡಲನ್ನು ತೆರೆದುಕೊಂಡಿದೆ ಹಂಪಿ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ.