ಮಾನವರಿಗೆ ಮದುವೆ ಒಂದು ಸಾಮಾಜಿಕ ಸದಾಚಾರ. ಮನುಷ್ಯನಿಗೆ ನಾಗರೀಕತೆ ತಿಳಿಯದ ಆ ಕಾಲಘಟ್ಟದಲ್ಲಿ ಸ್ತ್ರೀ – ಪುರುಷರ ಮಧ್ಯೆ ಮದುವೆಯೆನ್ನುವುದೇ ಇರಲಿಲ್ಲ. ಸಾಮಾನ್ಯ ಪ್ರಾಣಿಗಳಂತೆ ಇಚ್ಛಕಾಮುಕರಾಗಿ ಇರುತ್ತಿದ್ದರು. ಮಕ್ಕಳನ್ನು ಸಾಕುವುದು, ಬೆಳೆಸುವುದು ಕೇವಲ ಹೆಂಗಸರ ಕೆಲಸವಾಗಿತ್ತು. ಹೆಣ್ಣನ್ನು ಸಂಭೋಗ ಸುಖಕ್ಕೋಸ್ಕರ ಮಾತ್ರ ಗಂಡಸು ಉಪಯೋಗಿಸುತ್ತಿದ್ದ ಕಾಲವದು. ಹೆಣ್ಣನ್ನು ಬಲಾತ್ಕಾರವಾಗಿ ಅನುಭವಿಸುತ್ತಿದ್ದರು. ಪುರುಷರು ಹೆಣ್ಣಿಗಾಗಿ ತಮ್ಮ ತಮ್ಮೊಳಗೆ ಕಾದಾಡುತ್ತಿದ್ದರು. ಪುರುಷರ ಜೊತೆ ಕಾದಾಡುವ ಶಕ್ತಿಯಿಲ್ಲದ ಹೆಣ್ಣು ಅಸಹಾಯಕಳಾಗಿ ಪುರುಷರ ಕಾಮದಾಹಕ್ಕೆ ಬಲಿಯಾಗುತ್ತಿದ್ದಳು. ಹೆಣ್ಣಿಗೆ ರಕ್ಷಣೆಯೇ ಇರುತ್ತಿರಲಿಲ್ಲ. ಇದನ್ನು ಅರಿತ ಋಷಿ ಸಮೂಹ ಒಂದು ಗಂಡಿಗೆ ಒಂದು ಹೆಣ್ಣು ಎಂಬಂತೆ ಕಟ್ಟಳೆಯನ್ನು ವಿಧಿಸಿದರು. ಅಲ್ಲಿಂದ ಹೆಣ್ಣಿಗೆ ರಕ್ಷಣೆಯ ಹಾದಿ ಸುಗಮವಾಯಿತು. ಸುಖ ಜೀವನಕ್ಕೆ ಹೆಣ್ಣು ಪಾದರ್ಪಣೆ ಮಾಡಿದಳು.
ಸ್ತ್ರೀಯರನ್ನು ಪರಪುರುಷರ ಕಾಮಲಾಲಾಸೆಯಿಂದ ಕಾಪಾಡುವುದಕ್ಕಾಗಿ ಆ ಸಮಯದಲ್ಲಿ ಪಾತಿವೃತ್ಯ ಎಂಬ ಏಕಪುರುಷ ನಿಯಮವನ್ನು ಮಾಡಿದರು. ಈ ನಿಯಮದಿಂದಾಗಿ ಸ್ತೀಯರನ್ನು ಮನೆಯಲ್ಲಿ ಬಿಟ್ಟು ಪುರುಷ ಆಹಾರ ಸಂಪಾದನೆ ಮಾಡಿಕೊಂಡು ಬಂದು ರಕ್ಷಣೆ ನೀಡುವಂತಾಯಿತು. ಮುಂದೆ ಇದಕ್ಕೆ ಋಷಿಮುನಿಗಳು ಶಾಸ್ತ್ರೀಯತೆ ಕಲ್ಪಿಸುವುದಕ್ಕಾಗಿ ವಿವಾಹವೆಂಬ ಧಾರ್ಮಿಕ ವಿಧಿಯನ್ನು ಮಾಡಿದರು. ಅದೇ ಸಮಯದಲ್ಲಿ ಪುರುಷರನ್ನು ಪರಸ್ತ್ರಿ ವ್ಯಾಮೋಹದಿಂದ ದೂರವಿಡುವ ನಿಟ್ಟಿನಲ್ಲಿ ‘ಏಕಪತ್ನಿ’ ಧರ್ಮವನ್ನು ನಿರ್ದೇಶಿಸಿದರು. ಸ್ತ್ರೀ ಪುರುಷರಿಗೆ ವಿವಾಹವೆನ್ನುವುದು ಮರ್ಯಾದೆ – ಗೌರವ- ಸಂಪ್ರದಾಯ ಹಾಗೂ ಧಾರ್ಮಿಕ ವಿಧಿ. ಇದನ್ನು ಎಲ್ಲರೂ ಗೌರವಿಸಿಬೇಕು. ಇತ್ತೀಚಿಗಿನ ನವೀನ ನಾಗರೀಕತೆಯ ಹುಚ್ಚಿನಲ್ಲಿರುವ ಕೆಲವಾರು ಯುವ ಪೀಳಿಗೆ ಮದುವೆಯಿಲ್ಲದೇನೇ ಸ್ವೇಚ್ಚಾ ಕಾಮ ಸುಖಗಳನ್ನು ಅನುಭವಿಸಿರುವುದನ್ನು ಪೇಟೆ – ಪಟ್ಟಣಗಳಲ್ಲಿ ಅಸಂಖ್ಯಾತವಾಗಿ ನಾವುಗಳು ಕಾಣುತ್ತಿದ್ದೇವೆ! ಇದು ತಪ್ಪು ! ಇದು ಅನಾಗರಿಕ! ಇದು ಅಸಂಸ್ಕೃತಿ! ಇದು ಆರಾಜಕ! ಇದು ಅಧರ್ಮ! ಇದು ನೀಚ ಪ್ರವೃತ್ತಿ!
ಬೇರೆ ಕೆಲವು ದೇಶಗಳಲ್ಲಿ ವಿವಾಹ ವಿಚ್ಛೇದನವನ್ನು ಬಹಳ ಸುಲಭವಾಗಿ ಪಡೆಯುತ್ತಾರೆ. ತಕ್ಷಣ ಇನ್ನೊಂದು ಮದುವೆಯಾಗುತ್ತಾರೆ. ನಮ್ಮ ದೇಶದಲ್ಲಿ ಇದಕ್ಕೆ ಅವಕಾಶ ಇರುವುದಿಲ್ಲ. ಭಾರತೀಯ ಸಾಂಸಾರಿಕ ಧರ್ಮದಲ್ಲಿ ಮಕ್ಕಳನ್ನು ದೊಡ್ಡ ಆಸ್ತಿಯನ್ನಾಗಿ ಪರಿಗಣಿಸಿದೆ. ಹಿಂದಿನ ಕಾಲದಲ್ಲಿ ಹೆಚ್ಚು ಮಕ್ಕಳನ್ನು ಹೆತ್ತ ಸ್ತ್ರೀಯರನ್ನು ಅಥವಾ ಮಾತೆಯರನ್ನು ದೇವತೆಗಳೆಂದು ಭಾವಿಸಿ ಗೌರವಿಸುತ್ತಿದ್ದರು. ನಮ್ಮ ಸಂಸ್ಕೃತಿಯಲ್ಲಿ ತಂದೆ – ತಾಯಂದಿರು ದೇವತಾ ಸಮಾನರು. ಮಕ್ಕಳೇ ತಂದೆ – ತಾಯಂದಿರ ದೊಡ್ಡ ಸಂಪತ್ತೆಂದು ಪರಿಗಣಿಸಲಾಗಿದೆ. ನಮ್ಮದು ಧರ್ಮ ಸಂಸ್ಕೃತಿ. ಭಾರತೀಯ ವಿವಾಹ ಧರ್ಮದಲ್ಲಿ ರಕ್ಷಣೆಯಿದೆ, ಹಿರಿಯರ ಮನ್ನಣೆಯಿದೆ, ಗುರುಹಿರಿಯರ ಆಶೀರ್ವಾದವಿದೆ. ಬಂಧು ಮಿತ್ರರ ಶುಭ ಕಾಮನೆಗಳು ಇವೆ. ಎಲ್ಲಕ್ಕಿಂತ ಮಿಗಿಲಾಗಿ ನಾವು ಹಾಗೂ ನಮ್ಮ ಹಿರಿಯರು ನಂಬಿಕೊಂಡು ಬಂದಿರತಕ್ಕಂತಹ ನಾಗಶಕ್ತಿ – ದೈವಶಕ್ತಿ – ದೈವತಾಶಕ್ತಿ – ದೇವಶಕ್ತಿ – ದೇವತಾ ಶಕ್ತಿಗಳ ಅನುಗ್ರಹ, ಶ್ರೀರಕ್ಷೆಯಿದೆಯೆಂಬ ಸಾವಿರಾರು ವರ್ಷಗಳ ನಂಬಿಕೆ ನಮ್ಮದಾಗಿದೆ. ಇದು ಸತ್ಯ.
ಕೆಲವರು ಹೆಣ್ಣನ್ನು ಅಡುಗೆ ಮನೆಗೆ ಸೀಮಿತ ಮಾಡಬಾರದು, ಹೆಣ್ಣೆಂದರೆ ಮಕ್ಕಳನ್ನು ತಯಾರಿಸುವ ಯಂತ್ರವಲ್ಲ ಎಂದು ಹೇಳುತ್ತಾರೆ. ನಿಜ! ಗಂಡಸು ಎಂದರೆ ಶ್ರಮವಹಿಸಿ ಎಲ್ಲರನ್ನೂ ಸಾಕುವ ಆಳೇ? ಈ ಪ್ರಶ್ನೆ ಮೂಡುತ್ತದೆ.
ಸಂಸಾರವೆಂದರೆ ಮೇಲು ಕೀಳು ಎಂಬ ಭಾವನೆಗಳೇ ಬರಬಾರದು. ಸಹಕಾರ ಮನೋಭಾವ ಇರಬೇಕೇ ಹೊರತು ಸ್ವರ್ದಾ ಮನೋಭಾವ ಇರಬಾರದು. ಇದನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕಾಗಿದೆ. ಹೆಣ್ಣು+ಗಂಡು ಒಬ್ಬೊರಿಗೊಬ್ಬರು ಹೊಂದಿಕೊಂಡು ಹೋದಾಗ ಮಾತ್ರ ಸಂಸಾರ ಸುಖ ಸಂತೋಷದಿಂದ ಕೂಡಿರಲು ಸಾಧ್ಯವಾಗುತ್ತದೆ. ವಿವಾಹವು ಮಹೋನ್ನತವಾದ ಅನುಭಂಧಗಳ ಬೆಳವಣಿಗೆಗೆ, ವಿಶ್ವಾಸಾರ್ಹವಾದ ಬಂಧನಕ್ಕೆ, ಕುಟುಂಬ ಸಮೈಕ್ಯತಾ ಭಾವನೆಗೆ, ಜಾತಿಯ ಪುರೋಭಿವೃದ್ಧಿಗೆ, ಅರೋಗ್ಯವಂತವಾದ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ. ಇದನ್ನೆಲ್ಲ ಯೋಚಿಸಿಯೇ ನಮ್ಮ ಪೂರ್ವಜರು ಪ್ರಾಚೀನ ಕಾಲದಿಂದಲೂ ವಿವಾಹ ವ್ಯವಸ್ಥೆಯನ್ನು ಆರಂಭ ಮಾಡಿದರು. ಸದಾಲೋಚನೆ, ದೂರದೃಷ್ಟಿಗಳೇ ವಿವಾಹಕ್ಕೆ ನಾಂದಿಯಾಗಿದೆ. ಈ ವ್ಯವಸ್ಥೆ ಇಲ್ಲದಿರುತ್ತಿದ್ದರೆ ಈಗಿರುವ ನಾಗರೀಕತೆಯನ್ನು ನಾವು ಕಾಣುತ್ತಿರಲಿಲ್ಲವೇನೋ? ಪಶು ಪಕ್ಷಿಗಳಂತೆಯೇ ಇರಬೇಕಾಗಿತ್ತೇನೋ?
ವಿವಾಹವೆಂದರೆ, ಸ್ತ್ರೀ ಪುರುಷರಿಬ್ಬರಲ್ಲಿ ನಡೆಯುವ ಸಂಸ್ಕಾರ, ಕಾಡಲ್ಲೇ ಹುಟ್ಟಿದ ಮಾವಿನಕಾಯಿಗೆ ಸಮುದ್ರದಲ್ಲಿ ಹುಟ್ಟಿದ ಉಪ್ಪಿನ ಜೊತೆಯಾಗುವ ವೈವಿಧ್ಯಮಯ ಬೆಸುಗೆ! ಎಲ್ಲೋ ಹುಟ್ಟಿದ ಮಾಮರವು ಎಲ್ಲೋ ಹುಟ್ಟಿದ ಕೋಗಿಲೆಗೆ ಆಶ್ರಯದ ಅನುಮೋದನೆ ನೀಡುವ ಸುಮಧುರ ಬಾಂಧವ್ಯವೇ ವಿವಾಹವೆನ್ನಬಹುದು. ಯಾವುದೇ ಒಂದು ಸಂಪ್ರದಾಯ – ಸಂಸ್ಕೃತಿಗಳು ಸಮಾಜದ ಒಳಿತಿಗೆ ಹೊರತು ಅವನತಿಗೆ ಅಲ್ಲವೆಂಬುದನ್ನು ನಾವು ತಿಳಿದುಕೊಂಡು ಬದುಕುವುದು ಮುಖ್ಯ. ಹಿರಿಯರು ನಡೆದುಕೊಂಡು ಬಂದ ಹಾದಿ, ಹೇಳಿಕೊಟ್ಟ ಪಾಠ. ನಾವು ಅವರಿಂದ ತಿಳಿದುಕೊಂಡ ವಿಚಾರಗಳು – ಇವೆಲ್ಲವನ್ನೂ ನಮ್ಮ ಜೀವನದಲ್ಲಿ ಕಾಲಕಾಲಕ್ಕೆ ತಕ್ಕಂತೆ ಅಳವಡಿಸಿಕೊಂಡು ಬಂದಾಗ ಅದು ಮುಂದಿನ ಪೀಳಿಗೆಗೂ ಒಂದು ಸಂದೇಶವಾಗಿ ರವಾಣೆಯಾಗುತ್ತದೆ.
ಸಮಾಜಕ್ಕೆ ಅದರಿಂದ ಒಳಿತಾದರೆ ಮಾತ್ರ ಅದನ್ನು ಸ್ವೀಕರಿಸುತ್ತಾರೆ. ನಮ್ಮ ಅನುಭವವೇ ನಮಗೆ ಪ್ರಮುಖ ಆಧಾರವಾಗಿ ಮುಂದೆ ನಿಂತಾಗ ಅದರ ಆನಂದವೇ ಪರಮಾನಂದ! ಅದೇ ಸತ್ಯ. ಹಿಂದಿನ ಕಾಲದಲ್ಲಿ ಹೆಣ್ಣು-ಗಂಡು ಮದುವೆಗೆ ಮುಂಚಿತವಾಗಿ ಸರಿಯಾಗಿ ಮುಖ ಮುಖ ನೋಡಿಕೊಳ್ಳುವುದು ಮದುವೆ ಮಂಟಪದಲ್ಲೋ ಅಥವಾ ಮೊದಲ ರಾತ್ರಿ ದಿನವೋ ಆಗಿರಬಹುದು. ಕಾರಣ ಹಿರಿಯರು ತೀರ್ಮಾನಿಸಿದಂತೆ ನಡೆಯಿತಿತ್ತು. ಹಿರಿಯರ ಮಾತಿಗೆ ಮನ್ನಣೆಯಿತ್ತು. ಹಿರಿಯರ ಮಾತೇ ಅಂತಿಮ. ಹಿರಿಯರ ಮಾತುಗಳಿಗೆ ಗೌರವಾದರಗಳಿದ್ದವು. ಇತ್ತೀಚಿನ ಜನಮಾನಸದಲ್ಲಿ ಹುಡುಗಿ ಮತ್ತು ಹುಡುಗನೇ ಆಯ್ಕೆ ಮಾಡುವಲ್ಲಿಗೆ ಬಂದು ಮುಟ್ಟಿದ್ದೇವೆ. ಹಿರಿಯರ ಅನುಭವದ ಮಾತಿಗೆ, ಅವರ ತೀರ್ಮಾನಕ್ಕೆ ತಲೆ ಬಾಗುವಂತಹ ಮಕ್ಕಳು ಕಡಿಮೆಯಾಗುತ್ತಾ ಇದ್ದಾರೆ ಅಂದರೆ ತಪ್ಪಾಗಲಾರದೇನೋ?! ವಿದ್ಯಾವಂತರೆನಿಸಿಕೊಂಡ ಯುವಪೀಳಿಗೆ ಮದುವೆ ವಿಚಾರದಲ್ಲಿ ತಂದೆ-ತಾಯಿ ಹಾಗೂ ಹಿರಿಯರ ಅನುಭವದ ಮಾತಿಗೆ ತಲೆಬಾಗುವುದು ಸೂಕ್ತ ಎಂಬ ವಿಚಾರ ಸತ್ಯವೂ, ಸಮಂಜಸವೂ ಹೌದು.
ಮದುವೆಯಾದ ಕ್ಷಣದಿಂದಲೇ ಗಂಡು ಮತ್ತು ಹೆಣ್ಣಿನ ಜೀವನದಲ್ಲಿ ಒಂದು ಬದಲಾವಣೆಯ ಹಂತ ಆರಂಭವಾಗುತ್ತದೆ. ಮದುವೆಯಾದ ಹೆಣ್ಣು ಒಂದು ರೀತಿಯ ತಪಸ್ವಿಯಂತೆ ಎಲ್ಲರಿಗೂ ತಾಯಿಯಾಗಬೇಕು, ಶಾಂತಿ , ಸಹನೆಯ ಗಣಿಯಾಗಬೇಕು! ಗೃಹಿಣಿ ಧರ್ಮದಲ್ಲಿರುವ ಮಹಿಳೆಯನ್ನು ಪರಪುರುಷರು ನೋಡಿದಾಗ ಇವಳು ಮತ್ತೊಬ್ಬರ ಅರ್ಧಾಂಗಿ ಎಂದು ತಿಳಿಯುವುದಕ್ಕಾಗಿ “ಮುತ್ತೈದೆ ಭಾಗ್ಯ”ವನ್ನು ನಮ್ಮ ಹಿರಿಯರು ಕರುಣಿಸಿದ್ದಾರೆ. ಇದು ಒಂದು ಸಂಪ್ರದಾಯವಾಗಿ ಹಿಂದಿನ ಕಾಲದಿಂದಲೇ ಅನುಸರಿಸಿಕೊಂಡು ಬಂದಿರತಕ್ಕಂತಹ ವಿಚಾರ. ಇಂತಹ ಮಹಿಳೆಯರನ್ನು ಅನ್ಯ ಪುರುಷರು ಕಾಮದೃಷಿಯಿಂದ ನೋಡುವುದಾಗಲೀ, ಛೇಡಿಸುವುದಾಗಲೀ ಮಾಡುವುದಿಲ್ಲ. ಬದಲಾಗಿ ಗೌರವದಿಂದ ವರ್ತಿಸುತ್ತಾರೆ. ಇದಕ್ಕೆ ವಿರುದ್ಧವಾಗಿ ಯಾರೇ ನಡೆದರೂ ಅದು ಧರ್ಮ ಸಮ್ಮತವಲ್ಲ ಎಂಬುದು ನಿತ್ಯ ಸತ್ಯ. ಗಂಡನೆಂಬವನು ಹೆಂಡತಿಯನ್ನು ಆದರದಿಂದ, ಪ್ರೀತಿಯಿಂದ, ಸುಮನಸ್ಸಿನಿಂದ ನೋಡುತ್ತಿರಬೇಕು, ಗೆದ್ದು ಸೋಲುತ್ತಿರಬೇಕು, ಹಾಗಿಲ್ಲದಿದ್ದರೆ ಸುಪುತ್ರರನ್ನು, ಸುಖ ಸಂಸಾರವನ್ನು, ಸುಖ ಸಂತೋಷಗಳನ್ನು ಪಡೆಯಲಾರ. ಇಲ್ಲಿ ಅನ್ಯೋನ್ಯತೆ ಬಹಳ ಮುಖ್ಯವಾದ ಅಂಶವಾಗಿರುತ್ತದೆ. ಇಬ್ಬರಲ್ಲೂ ಒಬ್ಬರಿಗೊಬ್ಬರು ಹೊಂದಿಕೊಂಡು ಬಾಳುವ ಮನೋಭಾವ ಇರಬೇಕು. ಸಂಸಾರವೆಂದರೆ – ಸಾಮರಸ್ಯ
ದಾಂಪತ್ಯವೆಂದರೆ- ಹೊಂದಿಕೊಳ್ಳುವಿಕೆ
ಗೃಹಸ್ಥ ಜೀವನವೆಂದರೆ – ಮಧುರ ಒಪ್ಪಂದ
ಬಾಳ ಬಂಧನವೆಂದರೆ – ಬಾಹು ಬಂಧನವಲ್ಲ
ದಾಂಪತ್ಯವೆಂದರೆ – ಕಾಮ ಸುಖಗಳೇ ಅಲ್ಲ
ನವದಂಪತಿಗಳೇ, ಬದುಕೆಂದರೆ ವರ್ಣರಂಜಿತ ಚಲನಚಿತ್ರವಲ್ಲ, ಅತಿ ಆಸೆಗಳ ಗೂಡಲ್ಲ, ಹೂವಿನ ಹಾಸಿಗೆಯಂತೂ ಅಲ್ಲವೇ ಅಲ್ಲ, ಅದನ್ನು ತಲುಪಲೋಸುಗ ನಿಮ್ಮ ಜಂಟಿ ಕ್ರಿಯೆಗಳು ಮುಂದುವರಿಯಲಿ.
ಕಷ್ಟ – ಸುಖ, ನೋವು- ನಲಿವು, ದುಃಖ-ದುಮ್ಮಾನ, ಆನಂದ – ಬೇಸರ ಹಾಗೂ ಸಮಸ್ಯೆಗಳ ಸರಮಾಲೆಗಳನ್ನು ಸಮನಾಗಿ ಹಂಚಿಕೊಂಡು ಮುಂದಕ್ಕೆ ಸಾಗುತ್ತಿರಬೇಕು.
ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಿಕೊಳ್ಳಿ. ಏನೇ ಬರಲಿ, ಒಟ್ಟಾಗಿ ಒಂದೇ ಮನಸ್ಸಿನಿಂದ ಇರಿ. ನಿಮ್ಮ ದಾಂಪತ್ಯದ ಒಳಗುಟ್ಟನ್ನು ಯಾರಿಗೂ ಹೊರಗೆಡಹದಿರಿ. ಒಬ್ಬರಿಗೊಬ್ಬರು ಆಧಾರವಾಗಿರಿ.
ಧೈರ್ಯ ತುಂಬಿರಿ, ಸತ್ಯ – ನ್ಯಾಯ – ಧರ್ಮದ ಗುರಿಯೆಡೆಗೆ ಮುನ್ನುಗ್ಗಿ. ಜಯ ಖಂಡಿತ ನಿಮ್ಮದಾಗುತ್ತದೆ. ನೀವು ನಿಮ್ಮ ಗುರಿಯನ್ನು ಮುಟ್ಟುವಿರಿ.
“ವಿವಾಹವೆಂದರೆ – ಒಂದು ಪವಿತ್ರ ಒಪ್ಪಂದ,
ವಿವಾಹವೆಂದರೆ – ಒಂದು ಧಾರ್ಮಿಕ ಅಂಗೀಕಾರ,
ವಿವಾಹವೆಂದರೆ – ಒಂದು ಸಂಕಲ್ಪದ ಬೆಸುಗೆ,
ವಿವಾಹವೆಂದರೆ – ಒಂದು ಸಾಮಾಜಿಕ ಸದಾಚಾರ,ಅದು ಚಿರಾಯುವಾಗಲಿ”.