“ತುಳುನಾಡು” ಪರಶುರಾಮ ಸೃಷ್ಟಿ ಎಂಬುದು ಲೋಕ ಪ್ರತೀತಿ. ದ್ರಾವಿಡ ಮೂಲದ ಜನರು ಹೆಚ್ಚಾಗಿ ವಾಸಿಸುತ್ತಿರುವ ತುಳುನಾಡಿನಲ್ಲಿ ಬಂಟರು ಮೂಲ ಹಾಗೂ ಪ್ರಮುಖ ಪಂಗಡದವರಾಗಿ ಕಂಡು ಬರುತ್ತಾರೆ. ಬಂಟರ ಮಾತೃಭಾಷೆ ತುಳು. ತುಳುನಾಡಿನ ಬಲಿಷ್ಟ ಕುಲ ಕುಟುಂಬದವರಾಗಿ ಬಂಟರು ಹಲವಾರು ಪೌರುಷಗಳನ್ನು ಮೆರೆದಿದ್ದಾರೆ. ಬಂಟರು ತುಳುನಾಡಿನ ರಕ್ಷಣೆಗಾಗಿ ಪರಶುರಾಮರ ಆಣತಿಯಂತೆ ನೆಲೆನಿಂತ “ನಾಗವಂಶಿ ಕ್ಷತ್ರಿಯರು” ಎಂದು ತಿಳಿದುಬರುತ್ತದೆ. ತುಳು ನಾಡಿನ ಬಂಟರು ನಾಗವಂಶಿ ಕ್ಷತ್ರಿಯರಾಗಿದ್ದು ನಾಗಬ್ರಹ್ಮ ದೇವರನ್ನು ಮೂಲ ಮತ್ತು ಕುಲ ದೇವರಾಗಿ ನಂಬುತ್ತಾರೆ. ತುಳು ನಾಡಿನಲ್ಲಿ ನಾಗರಪಂಚಮಿ ಬಹಳ ವಿಶೇಷವಾದ ಹಾಗೂ ಪರ್ವಗಳ ಸಾಲಿನಲ್ಲಿ ಬರುವ ಪ್ರಥಮ ಹಬ್ಬ. ಇದಲ್ಲದೆ ತುಳುನಾಡಿನ ಬಂಟರು ನಾಗಮಂಡಲ, ಆಶ್ಲೇಷ ಬಲಿ, ದಕ್ಕೆದ ಬಲಿ ಎಂಬಿತ್ಯಾದಿ ವಿಶೇಷ ನಾಗದೇವರ ಆರಾಧನೆಗಳನ್ನು ಮಾಡುತ್ತಾರೆ. ನಾಗರ ಪಂಚಮಿಯಂದು ಎಲ್ಲಾ ಕುಲ ಕುಟುಂಬದವರು ಮೂಲದ ನಾಗದೇವರಿಗೆ ಹಾಲೆರೆಯುತ್ತಾರೆ. ವಿಶೇಷವಾಗಿ ಬಂಟರ ಮೂಲಸ್ಥಾನಗಳಿಗೆ ಆದಿ ಎಂದು ಹೇಳುತ್ತಾರೆ. ಇದರಿಂದ ಬಂಟರ ಮೂಲಸ್ಥಾನ ತುಳುನಾಡು ಎಂಬುದಕ್ಕೆ ಪೂರ್ಣ ಸ್ಪಟೀಕರಣ ಸಿಕ್ಕಂತಾಗುತ್ತದೆ. ಹಲವಾರು ಸಹಸ್ರ ವರ್ಷಗಳ ಇತಿಹಾಸವಿರುವ ನಾಗ ಕಲ್ಲುಗಳು ಹಾಗೂ ಮರಗಳಿಂದ ಕೂಡಿದ ನಾಗಬನಗಳು ಪ್ರಕೃತಿದತ್ತವಾದ ಪುರಾವೆಗಳಾಗಿವೆ.
ನಾವು ಪುರಾಣವನ್ನು ಗಣನೆಗೆ ತೆಗೆದುಕೊಂಡರೆ, ವಿಷ್ಟುವಿನ ಆರನೆಯ ಅವತಾರವಾದ ಪರಶುರಾಮ ದೇವರು ೨೧ ಬಾರಿ ಲೋಕಪ್ರದಕ್ಷಿಣೆಗೈದು, ದುಷ್ಟ ನಿಗ್ರಹಗೊಳಿಸಿದ ನಂತರ ತಾನು ಗೆದ್ದ ರಾಜ್ಯಗಳನ್ನು ಬ್ರಾಹ್ಮಣರಿಗೆ ದಾನವಾಗಿ ಕೊಟ್ಟು, ಭರತ ಖಂಡದ ಕೊನೆಗೆ ಬಂದು ವರುಣ ದೇವನನ್ನು ತನಗೆ ತಪಸ್ಸಿಗೆ ತಪೋಭೂಮಿಯನ್ನು ಒದಗಿಸಿಕೊಡುವಂತೆ ಕೇಳುತ್ತಾರೆ. ಪರಶುರಾಮರ ನಿವೇದನೆಗೆ ವರುಣದೇವ ಸ್ಪಂದಿಸದೆ ಹೋದಾಗ ಕುಪಿತರಾದ ಪರಶುರಾಮರು ಕೋಪದಿಂದ ತನ್ನ ಕೈಯಲ್ಲಿದ್ದ ಪರಶುವನ್ನು ಎತ್ತಿ ಸಮುದ್ರವನ್ನೇ ಇಂಗಿಸುವುದಾಗಿ ಹೊರಟಾಗ, ಭಯಕೊಂಡ ವರುಣದೇವ ಪ್ರತ್ಯಕ್ಷವಾಗಿ ಪರಶುರಾಮರಲ್ಲಿ ಕ್ಷಮೆಯಾಚಿಸುತ್ತಾನೆ.
ಪರಶುರಾಮರು ಕೋಪದಿಂದ ಎತ್ತಿದ ಕೊಡಲಿಯನ್ನು ಶಾಂತಚಿತ್ತರಾಗಿ ಅನಂತ ದೂರದವರೆಗೆ ಸಮುದ್ರಾಭಿಮುಖವಾಗಿ ಎಸೆಯುವಂತೆ ಕೇಳಿಕೊಳ್ಳುತ್ತಾನೆ ವರುಣದೇವ. ಕೊಡಲಿ ಆವರಿಸಿದ ಸಮುದ್ರದಿಂದ ತಾನು ಹಿಂದೆ ಸರಿದು ಪರಶುರಾಮರಿಗೆ ಪವಿತ್ರವೂ, ಫಲಭರಿತವೂ ಆದ ತಪೋಭೂಮಿಯನ್ನು ಒದಗಿಸಿಕೊಡುವುದಾಗಿ ಭರವಸೆಯನ್ನು ಕೊಡುತ್ತಾನೆ. ಇದರಂತೆ ಪರಶುರಾಮರ ಸೃಷ್ಟಿಯ ತಪೋಭೂಮಿ ತುಳುನಾಡು ಎಂದೇ ಪ್ರಸಿದ್ದವಾಯಿತು. ಸೃಷ್ಟಿಗೊಂಡ ಭುವಿಯನ್ನು ಪವಿತ್ರಗೊಳಿಸಿ ಅದರ ಸಮರ್ಥ ರಕ್ಷಣೆಗೆ ಸ್ವತ: ಪರಶುರಾಮರೇ ನಾಗವಂಶೀಯರಾದ ಕ್ಷತಿಯರನ್ನು ಅಂದರೆ ಬಂಟರನ್ನು ನೇಮಿಸಿದರು, ನಂತರ ತನ್ನಲ್ಲಿದ್ದ ಎಲ್ಲಾ ಸಮರಕಲೆಗಳನ್ನು ಬಂಟರಿಗೆ ದಾರೆಯೆರೆದರು. ಇದನ್ನು ಮುಂದೆ ನಾನಯರ ಗರಡಿ ಹಾಗೂ ಇನ್ನಿತರ ಗರಡಿಗಳಲ್ಲಿ ಬಂಟರು ಅಭ್ಯಾಸಿಸಿಕೊಂಡರು.
ಸಮರಕಲೆ ಕಲಿತ ಬಂಟರು ತಾವು ಪರಶುರಾಮರಿಂದ ಕಲಿತ ವಿದ್ಯೆಯಿಂದ ತಪೋಭೂಮಿಯಾದ ತುಳುನಾಡನ್ನು ಕರ್ಮ ಭೂಮಿಯಾಗಿಸಿ, ಹಚ್ಚ ಹಸಿರಿನ ನಾಡಾಗಿಸಿ, ಪುಣ್ಯ ಭೂಮಿಯೊಂದನ್ನು ಸಮರ್ಥವಾಗಿ ಕಾಪಾಡಿಕೊಂಡು ಬಂದರು. ಶತಮಾನಗಳೇ ಕಳೆದರೂ ಬಂಟರ ಮೂಲದಲ್ಲಾಗಲಿ ಆಚಾರ ವಿಚಾರದಲ್ಲಾಗಲೀ ಯಾವುದೇ ವ್ಯತ್ಯಾಸಗಳಾಗಲಿಲ್ಲ. ಪರಶುರಾಮರಿಂದ ವರಪ್ರಸಾದವಾಗಿ ಬಂದ ಸಮರಕಲೆಗಳನ್ನು ಹಲವಾರು ಗರಡಿಗಳಲ್ಲಿ ಕಲಿಸುತ್ತಿದ್ದರು. ಇದಕ್ಕೆ ಸಾಕ್ಷಿ ಪಾಂಗಳದ ನಾನಯರ ಗರಡಿ.
ಕಾಲಕ್ರಮೇಣ ಒಳಜಗಳ, ಪರಕೀಯರ ದಾಳಿ, ಬ್ರಿಟಿಷರ ಆಡಳಿತಕ್ಕೆ ಒಳಪಟ್ಟ ತುಳುನಾಡಲ್ಲಿ ಪರಂಗಿಗಳ ಆದೇಶದಂತೆ ಕ್ರಾಂತಿಕಾರಿ ಹಾಗೂ ಸ್ವಾತಂತ್ಯ ಪ್ರಚೋದನಕಾರಿ ಸಮರಕಲೆಯನ್ನು ಯಾರೂ ಕಲಿಯಬಾರದಾಗಿ ಆದೇಶವು ಹೊರಬಿತ್ತು. ಇದರಿಂದ ಸಮರಕಲೆ ಸಂಪೂರ್ಣವಾಗಿ ತುಳುನಾಡಿನಿಂದ ಮಾಯವಾಯಿತು ಎಂದರೆ ತಪ್ಪಾಗಲಾರದು. ಬಂಟರ ಇತಿಹಾಸ ಸರಿಯಾಗಿ ತಿಳಿಯದ ಕೆಲವರು ಬಂಟರಿಗೆ “ಗುರು”ಗಳು ಇಲ್ಲ ಎಂಬುದಾಗಿ ಹೇಳುತ್ತಾರೆ. ಬಂಟರ ಹಾಗೂ ಬಂಟರ ಇತಿಹಾಸದ ಬಗ್ಗೆ ತಿಳಿಯದೆ ಮಾತನಾಡುವುದು ತಪ್ಪು. ಬಂಟರ ಕುಲಗುರುಗಳು “ಪರಶುರಾಮ” ದೇವರು. ಅವರ ಸಮರಕಲೆಯನ್ನೇ ಕಲಿತು ತುಳುನಾಡಿನಲ್ಲಿ ಬಂಟರೆನಿಸಿಕೊಂಡವರು ಈ “ನಾಗವಂಶಿ ಕ್ಷತ್ರಿಯರು”.
ಬಂಟರು ವಿಶೇಷ ದೈವಭಕ್ತರಾಗಿದ್ದರು. ನಾಗಾರಾದನೆಗೆ ಪ್ರಥಮ ಮನ್ನಣೆ. ಇತ್ತೀಚಿನ ದಿನಗಳಲ್ಲಿ ಕೂಡ ಮಕ್ಕಳಾಗದ, ಯಾವುದೇ ಚರ್ಮ ಸಂಬಂಧಿ ಕಾಯಿಲೆ, ವ್ಯವಸಾಯದ ನಷ್ಟ ಎಲ್ಲದಕ್ಕೂ ನಾಗದೋಷವೇ ಕಾರಣವೆಂದು ನಂಬುತ್ತಾರೆ. ಕೆಲವೊಂದು ಲೇಖನಗಳು ಬಂಟರು ಇತರ ರಾಜ್ಯಗಳಿಂದ ಯಾ ದೇಶಗಳಿಂದ ತುಳುನಾಡಿಗೆ ವಲಸೆ ಬಂದು ಇಲ್ಲಿ ನೆಲೆನಿಂತವರು ಎಂದೆಲ್ಲಾ ಬರೆಯುತ್ತಾರೆ. ಆದರೆ ಇದು ಶುದ್ದ ಸುಳ್ಳು. ಗಮನಾರ್ಹ ವಿಷಯವೇನೆಂದರೆ ಎಲ್ಲಿಂದಲೋ ಬಂದವರಿಗೆ ಮೂಲಸ್ಥಾನ ಎಲ್ಲೋ ಇರಬೇಕಾಗಿತ್ತು. ಉದಾಹರಣೆಗೆ ಕಾಶಿಯಿಂದ ಬಂದವರಾದರೆ ಬಂಟರ ಮೂಲಸ್ಥಾನ ಕಾಶಿಯೇ ಆಗಿರಬೇಕಿತ್ತು. ಆದರೆ ಬಂಟರ ಮೂಲ ತುಳುನಾಡಲ್ಲೇ ಇರುವುದು, ತುಳುನಾಡಿನಲ್ಲಿ ಮೂಲವನ್ನು ಕಂಡು ಕೊಂಡಿರುವುದರಿಂದ ಬಂಟರು ತುಳುನಾಡಿನವರೇ ಎಂದು ತಿಳಿದುಬರುತ್ತದೆ. ಪ್ರಕೃತಿಯ ಮಡಿಲಲ್ಲಿ ದೇವರ ಸಾನಿದ್ಯ ಕಾಣುವ ತುಳುವ ಬಂಟರು ದೇವಾರಾಧನೆಗೆ ಮುಂದಾದರು. ತುಳುನಾಡಿನ ಉದ್ದಗಲಕ್ಕೂ ದೇವಸ್ಥಾನಗಳನ್ನು ನಿರ್ಮಿಸಿದರು. ಆದರೆ ತುಳುನಾಡಿನಲ್ಲಿ ಬಂಟರ ಎಲ್ಲಾ ಆಗುಹೋಗುಗಳಿಗೆ, ಹಬ್ಬ ಹರಿದಿನಗಳಿಗೆ, ಮದುವೆ, ಮುಂಜಿ, ಜನನ, ಮರಣ ಸಂಪ್ರದಾಯ ಆಚರಣೆಗಳಲ್ಲಿ ಬ್ರಾಹ್ಮಣರಂತೆ ಕೆಲಸ ನಿರ್ವಹಿಸುವವರು ಮಡ್ಡೆಲರು(ಮಡಿವಾಳರು). ಆದರೆ ದೇವರ ಪೂಜಾ ಕೆಲಸಕ್ಕೆ ಬೇಕಾದ ವೇದ, ಮಂತ್ರ, ಶಾಸ್ತ್ರ, ಮಡಿವಾಳರಿಗೆ ತಿಳಿದಿರಲಿಲ್ಲ. ಅದ್ದರಿಂದ ಪೂಜಾಕೆಲಸಕ್ಕೆ ಶಾಸ್ತ್ರ ಕಲಿತ ಬ್ರಾಹ್ಮಣರಿಂದ ಕ್ರಮಬದ್ದವಾಗಿ ಮಡಿಯಿಂದ ನಡೆಸುವುದಕ್ಕಾಗಿ ಉತ್ತರಭಾರತದಿಂದ ಬ್ರಾಹ್ಮಣರನ್ನು ಕರೆಸುತ್ತಾರೆ. ಇದು ಸ್ವಾಭಾವಿಕವೂ ಹೌದು.
ಬಂಟರು ನಾಗವಂಶಿ ಕ್ಷತ್ರಿಯರು. ಮೃಗಬೇಟೆ ಮಾಡುವ ಮಾಂಸಾಹಾರಿಗಳು. ಸಮರಕಲೆ ಕಲಿತ ಆಡಳಿತ ವರ್ಗದವರು. ಇಂತಹ ರಾಜಸ ಗುಣದ ಬಂಟರು ದೇವರ ಕೆಲಸವನ್ನು ಮಾಡಲು ನುರಿತ ಪಂಡಿತ ಬ್ರಾಹ್ಮಣರ ಅಗತ್ಯವಿದೆ ಎಂದು ಮನಗಂಡು ಅದರಂತೆ ಉತ್ತರದಿಂದ ಬ್ರಾಹ್ಮಣರನ್ನು ತುಳುನಾಡಿಗೆ ಕರೆತರುತ್ತಾರೆ. ದಕ್ಷಿಣ ಭಾರತದಲ್ಲಿ ದೀರ್ಘಕಾಲ ಉಳಿಯುವುದಕ್ಕೆ ಬ್ರಾಹ್ಮಣರು ಒಪ್ಪದ ಕಾರಣ ಬಂಟರು ತುಳುನಾಡಿನಲ್ಲಿ ವಿಶೇಷವಾದ ದಾನ ಧರ್ಮಗಳಿಂದ ಕೂಡಿದ ಸಮಾರಂಭವನ್ನು ಆಯೋಜಿಸುತ್ತಾರೆ. ಅದಕ್ಕೆ ಉತ್ತರ ಭಾರತದ ವಿಪ್ರರನ್ನು ಕರೆಸುತ್ತಾರೆ. ಹಾಗೆ ಬಂದ ಬ್ರಾಹ್ಮಣರನ್ನು ಬಲವಂತವಾಗಿ ನಾನಾ ರೀತಿಯ ಮರಗಳಿಗೆ ಸಿಕ್ಕ ಸಿಕ್ಕಲ್ಲಿ ಕಟ್ಟಿಹಾಕಿ ಬಂಟಕುಲದಿಂದ ವಧುವನ್ನು ಬ್ರಾಹ್ಮಣರಿಗೆ ಮದುವೆಮಾಡಿಸಿ, ಇರಲು ಭೂಮಿಯನ್ನು ಉಂಬಳಿಯಾಗಿ ಕೊಟ್ಟು ತುಳುನಾಡಿನಲ್ಲೇ ಶಾಶ್ವತವಾಗಿ ಉಳಿಯುವಂತೆ ಮಾಡುತ್ತಾರೆ. ಅದರಂತೆ ಅವರನ್ನು ಕಟ್ಟಿಹಾಕಿದ ಮರವೇ ಅವರ ಪರಿಚಯವಾಗುತ್ತದೆ. ಉದಾ: ಪೆಜತ್ತಾಯ, ಪೆಲತ್ತಾಯ, ತಾರೆತ್ತಾಯ, ಕುಕ್ಕುತ್ತಾಯ, ಬೈಪಡಿತ್ತಾಯ ಎಂದೆಲ್ಲಾ ಕುಲವಾಚಕಗಳಿಂದ ಗುರುತಿಸಿಕೊಳ್ಳುತ್ತಾರೆ. ಇಂದಿಗೂ ತುಳುನಾಡಿನಲ್ಲಿ ಬಂಟರಿಗೂ ಬ್ರಾಹ್ಮಣರಿಗೂ ತುಂಬಾ ಅನೋನ್ಯವಾದ ಸಂಬಂಧವಿದೆ.
ತುಳುನಾಡಿನ “ಮೊಗವೀರರು” ಹಾಗೂ “ಬಂಟರು” ಅಕ್ಕ ತಂಗಿಯರ ಮಕ್ಕಳೆಂದು ಜಾನಪದ ಕತೆಗಳಿವೆ. ಅಕ್ಕನ ಮಕ್ಕಳು “ಮೊಗವೀರರು” ಹಾಗೂ ತಂಗಿಯ ಮಕ್ಕಳು “ಬಂಟರು”. ಒಂದು ದಿನ ಆಸ್ತಿಯ ಹಂಚಿಕೆಯ ವಿಚಾರದಲ್ಲಿ ಇಬ್ಬರೂ ಅಕ್ಕತಂಗಿಯರನ್ನು ಕರೆದು ನಿಮಗೆ ಬದು(ಒಡಿ) ಇರುವ ಗದ್ದೆ ಬೇಕಾ..? ಅಥವಾ ಬದು(ಒಡಿ) ಇಲ್ಲದ ಗದ್ದೆ ಬೇಕಾ..? ಎಂದು ಕೇಳಿದಾಗ, ಅಕ್ಕ ವಿಶಾಲವಾದ ಬದು ಇಲ್ಲದ ಗದ್ದೆ ಬೇಕಾಗಿ ಕೇಳಿಕೊಳ್ಳುತ್ತಾಳೆ. ಅವಳ ಇಚ್ಚೆಯಂತೆ ಬದು ಇಲ್ಲದ ವಿಸ್ತಾರವಾದ ಗದ್ದೆ ಅಂದರೆ ಕಡಲನ್ನು ಅಕ್ಕನಿಗೂ, ವ್ಯವಸಾಯದ ಗದ್ದೆಯನ್ನು ತಂಗಿಗೂ ಕೊಡುತ್ತಾರೆ. ನಾಡಿನ ಆಡುಭಾಷೆಯಲ್ಲೂ ಇದು ಪ್ರಚಳಿತವಾದ ನಿತ್ಯ ಸತ್ಯವಾಗಿ ಹೋಗಿದೆ. ಕಡಲ ರಾಯಭಾರ ಮಾಡಿ, ಅಲ್ಲಿ ಮೀನುಗಾರಿಕೆ ಮಾಡುವ ಮೊಗವೀರ ಜನಾಂಗವನ್ನು ಕಡಲಾಯ ಎಂದೂ, ಭೂಮಿಯ ಮೇಲಿನ ಸಮಸ್ತ ಉಸ್ತುವಾರಿಯನ್ನು ಅಂದರೆ ಆಡಳಿತದ ಹಾಗೂ ಹೋಗು, ಗುತ್ತು ಬರ್ಕೆ, ಬೂಡುಗಳ ರಾಯಭಾರ, ವ್ಯವಸಾಯದ ಗುರ್ಕಾರ್ಮೆಯನ್ನು ಮಾಡುವ ಬಂಟರನ್ನು ಒಕ್ಕೆಲಾಯ ಎಂದೂ, ಸಮಾಜದ ಆರೋಗ್ಯಕರ ಬೆಳವಣಿಗೆಗೆ ಸುಸೂತ್ರವಾಗಿ ನಿರ್ಮಹಣೆ ಮಾಡಲು ಅಂದರೆ ದೈವ ಕಾರ್ಯಗಳ ಮಡಿ, ಪೂಜೆ, ಮಡಿವಂತಿಕೆಯ ರಾಯಭಾರವನ್ನು ವಹಿಸಿಕೊಂಡವರು ಮಡಿಯಾಲರು ಎಂದೂ ಕರೆಸಿಕೊಂಡರು. ಅದು ಇಂದಿಗೂ ನಮಗೆ ಆಡುಭಾಷೆಯಲ್ಲಿ ಕಾಣಸಿಗುತ್ತದೆ. ಆದರೆ ಇತ್ತೀಚೆಗೆ “ಮಡಿಯಾಲ” ಎಂಬ ಪದವನ್ನು “ಮಡಲಾಯ” ಅಂದರೆ ಬಿಲ್ಲವರು ಎಂದು ತಪ್ಪಾಗಿ ಅರ್ಥವಿಸಿಕೊಂಡಿದ್ದಾರೆ. ಬಿಲ್ಲವರು ತುಳುನಾಡಿಗೆ ಬಂದಿದ್ದು ಸುಮಾರು ೭೦೦ ವರ್ಷಗಳ ಹಿಂದೆ. ಅವರಿಗೆ ಇತಿಹಾಸ ಇರುವುದು ಕೇರಳದಲ್ಲಿ, ಕೇರಳದಲ್ಲಿ ಬಿಲ್ಲವ ಸಮಾಜವ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಕೇರಳದಲ್ಲಿ ಬಿಲ್ಲವ ಸಮಾಜಕ್ಕೆ ಆದಂತಹ ಜಾತಿನಿಂದನೆಗೆ ಕ್ರಾಂತಿಕಾರಿ ಹೋರಾಟ ನಡೆಸಿದವರು ನಾರಾಯಣ ಗುರುಗಳು. ಇದು ನಮಗೆ ನಾರಾಯಣಗುರು ಚರಿತ್ರೆಯಿಂದಲೂ ತಿಳಿದುಬರುತ್ತದೆ.
ತುಳುನಾಡಿನ ವರ್ಣ ವ್ಯವಸ್ಥೆಯಲ್ಲಿ ಸಕಲ ಕುಲಧರ್ಮಗಳಿಗೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಇಲ್ಲಿ ಬಂಟ ಸಮುದಾಯದವರು ಆಳುವ ಕುಲ ಕುಟುಂಬದವರಾಗಿದ್ದು ಧಾರ್ಮಿಕ, ಹಾಗೂ ಸಾಮಾಜಿಕ ಆಚರಣೆಗಳಲ್ಲಿ ಪ್ರಮುಖರಾಗಿ ಕಂಡುಬಂದರೂ, ತುಳುನಾಡಿನಲ್ಲಿ ಯಾವುದೇ ಕುಲಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದು ಕೊಳ್ಳಲ್ಲಿಲ್ಲ. ಉದಾ: ಮೂಲದಲ್ಲಿ ಪೂಜಾ ಕಾರ್ಯಕ್ಕೆ ಮಡಿಯಾಲರು, ತದನಂತರ ಉತ್ತರ ಭಾರತದಿಂದ ಬಂದ ಬ್ರಾಹ್ಮಣರು ದೈವ ದೇವರ ಪೂಜಾ ಕಾರ್ಯಗಳನ್ನು ಮಾಡಿಕೊಂಡು ಬಂದರು. ಮಡಿಯಾಲರು ಮಡಿವಂತಿಕೆಗೆ, ದೈವ ದೇವರ ಕೆಲಸಕ್ಕೂ, ಮೂಲ್ಯರು ಅಡಿಗೆಗೂ, ಕುಂಬಾರರಾಗಿಯೂ, ಪರವರು ಭೂತಕೋಲಗಳಿಗೂ, ಬೈದರೂ ವೈದ್ಯರಾಗಿ ರೋಗ ರುಜಿನಗಳಿಗೆ ಆಯುರ್ವೇದ ಪಂಡಿತರಾಗಿ ತಮ್ಮದೇ ಆದ ಗೌರವಗಳನ್ನು ಹೊಂದ್ದಿದ್ದರು. ಸಮಾಜದ ವರ್ಣ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಬೆಳೆಸಿಕೊಂಡು ಬಂದವರು ಬಂಟರು. ನಮ್ಮ ತುಳುನಾಡಿನ ಅತ್ಯಂತ ಪ್ರಭಾವಿ ಧಾರ್ಮಿಕ ಆಚರಣೆ ಭೂತಕೋಲ. ಇಲ್ಲಿ ಯಾವುದೇ ತುಳುನಾಡಿನ ಕುಲಗಳ ನಿರ್ಲಕ್ಷ್ಯವಾಗಲಿಲ್ಲ. ಕೆಲವು ವರ್ಷಗಳ ಹಿಂದೆ “ಗುರುತು” ಎಂಬ ಪ್ರಾದೇಶಿಕ ಪತ್ರಿಕೆಯ ಸಂಪಾದಕೀಯದಲ್ಲಿ ಬಂಟರ ಬಗ್ಗೆ ಕೆಲವು ಅವಮಾನಕರ ಅಂಶಗಳನ್ನು ಬರೆದಿದ್ದರು. ಇದು ಯಾವುದೇ ಮಾಹಿತಿಯಿಲ್ಲದೆ. ಹಿನ್ನಲೆಯ ಸ್ಪಷ್ಟ ತಿಳಿವಳಿಕೆ, ವಿವೇಚನೆಯಿಲ್ಲದೆ ಬರೆದ ಲೇಖನ.
ತುಳುನಾಡಿನ ಬಂಟರಲ್ಲಿ ಸುಮಾರು ೧೦೭ ಮನೆತನದ ಹೆಸರುಗಳಿಗೆ. ಅದರಲ್ಲಿ ಒಂದು ಬಲ್ಲಾಳ. ಆದರೆ ತುಳುನಾಡಿನಲ್ಲಿ ಕೆಲವೊಂದು ಬಲ್ಲಾಳ ಮನೆತನದವರು ಜನಿವಾರವನ್ನು ಹಾಕಿಕೊಂಡಿರುತ್ತಾರೆ. ಜನಿವಾರವನ್ನು ಧರಿಸಿದ ಬಲ್ಲಾಳರನ್ನು “ಬಂಟೆ ಸೊರ್ಕುದು ಬಲ್ಲಾಳೆ” ಎಂದು
ಕರೆಯುತ್ತಾರೆ. ಅದಕ್ಕೂ ಒಂದು ಕಾರಣವಿದೆ. ಹಿಂದೆ ಮೇಲು ಸೀಮೆಯ ರಾಯ “ಜೈನ” ಧರ್ಮವನ್ನು ಸ್ವೀಕರಿಸಿದ ನಂತರ ತನ್ನ ಸಾಮಂತ ಅರಸರಾದ ತುಳುನಾಡಿನ ತುಂಡರಸರಾದ ಬಂಟರನ್ನು “ಜೈನ” ಧರ್ಮವನ್ನು ಸ್ವೀಕರಿಸಬೇಕೆಂದು ಹೇಳುತ್ತಾನೆ. ಇದಕ್ಕೆ ಬಂಟರಸರು ಒಪ್ಪುವುದಿಲ್ಲ. ಅದಕ್ಕೆ ಮೇಲು ಸೀಮೆಯ ರಾಯ ಬಂಟರಸರಲ್ಲಿ “ಒಂದೋ ನೀವು ಜೈನ ಅನುಯಾಯಿಗಳಾಗಬೇಕು ಇಲ್ಲದೇ ಹೋದಲ್ಲಿ ನಿಮ್ಮ ಪಟ್ಟದ ಮಣೆ (ರಾಜ್ಯವನ್ನು) ಬಿಟ್ಟುಕೊಡಬೇಕು” ಎಂದು ಹೇಳುತ್ತಾನೆ. ಇದನ್ನು ಕೇಳಿದ ಬಂಟರು ಒಂದು ಉಪಾಯವನ್ನು ಮಾಡುತ್ತಾರೆ. ಯಾರು
ಪಟ್ಟವನ್ನೇರಿ ರಾಜ್ಯ ಆಳುವಿಕೆ ನಡೆಸುತ್ತಾರೆ ಅವರು ಜೈನರಂತೆ ಅಭಿನಯಿಸುತ್ತಾರೆ. ಮುಂದೆ ಈ ಧಾರ್ಮಿಕ ಆಚರಣೆ ಅವರ ಹೆಂಡತಿ ಮಕ್ಕಳಿಗೆ ಪ್ರಿಯವೆನಿಸಿ ಶಾಸ್ವತವಾಗಿ “ಬಂಟಜೈನ”ರಾಗುತ್ತಾರೆ. ಮತ್ತೆ ಕೆಲ ಬಲ್ಲಾಳ ಮನೆತನದವರು ಜೈನರಂತೆ ಅಭಿನಯಿಸಿ ಜನಿವಾರವನ್ನು ಹಾಕಿಕೊಂಡು ಮಾಂಸಾಹಾರಿಗಳಾಗಿ ದೈವದೇವರನ್ನು ನಂಬಿ ಬಂಟರ ಧಾರ್ಮಿಕ ಅನುಕರಣೆಯನ್ನೇ ಮಾಡುತ್ತಿರುತ್ತಾರೆ. ಈ ಜನಿವಾರ ಧರಿಸಿದ ಬಲ್ಲಾಳರನ್ನು “ಬಂಟೆ ಸೊರ್ಕುದು ಬಲ್ಲಾಳೆ” ಎಂದು ಕರೆಯುತ್ತಾರೆ. ಇಂದಿಗೂ ಬಂಟ ಸಮುದಾಯದಲ್ಲಿ ತಮ್ಮ ಪೂರ್ವಜರಿಗೆ ಮಾಡುವ ಕಟ್ಟು ಕ್ರಮದಲ್ಲಿ ಒಂದು ಎಲೆಯನ್ನೂ ಜೈನರಿಗೆ ಶುದ್ದ ಸಸ್ಯಾಹಾರದಲ್ಲಿ ಇಡುವುದು ಇಂದೂ ವಾಡಿಕೆಯಲ್ಲಿದೆ. ಇದರಿಂದ ನಮಗೆ ಜೈನಬಂಟರ ಒಂದು ಕುರುಹು ದೊರೆಯುತ್ತದೆ.
ತುಳುನಾಡಿನ ಎಲ್ಲಾ ಕ್ಷೇತ್ರಗಳಲ್ಲಿ ಬಂಟರದ್ದು ಎತ್ತಿದ ಕೈ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಎಲ್ಲಾ ನಾಯಕತ್ವದ ಹೊಣೆಯನ್ನು ಹೊರುವ ಎದೆಗಾರಿಕೆ ಬಂಟರಿಗೆ ಆದಿಯಿಂದಲೇ ರಕ್ತಗತವಾಗಿ ಬಂದಿದ್ದು ಎಂದರೆ ತಪ್ಪಾಗಲಾರದು. ದೇವಸ್ಥಾಗಳ ಮೋಕ್ತೇಸರರಾಗಿ, ದೈವಸ್ಥಾನದ ಗಡು ಹಿಡಿದವರಾಗಿ ದೈವದೇವರ ಹಾಗೂ ಧಾರ್ಮಿಕ ಕಾರ್ಯಗಳನ್ನು ಸದಾ ಯಾವುದೇ ಅಡೆತಡೆ ಇಲ್ಲದೆ ನಡೆಸಿಕೊಂಡು ಹೋಗುವ ಸಾಮರ್ಥ್ಯ, ಕಾರ್ಯಕ್ಷಮತೆ ಬಂಟರಲ್ಲಿದೆ. ದಾನ ಧರ್ಮಗಳಲ್ಲಿ ಎತ್ತಿದ ಕೈ. ಕೃಷಿ, ವೈದಕೀಯ, ರಾಜಕೀಯ, ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ, ಶಿಕ್ಷಣ ಎಲ್ಲಾ ಸ್ತರಗಳಲ್ಲಿ ಬಂಟರು ಹೀಗಲೂ ಸರ್ವಪ್ರಥಮ ಸಾಲಿನಲ್ಲಿದ್ದಾರೆ.
ಪ್ರದೀಪ್ ಕುಮಾರ್ ಶೆಟ್ಟಿ
ಕೋಡು, ಶಿರ್ವ.(Muscat)