ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಸಿಎನ್ ಜಿ ಉತ್ಪಾದನೆ ಘಟಕವನ್ನು ತನ್ನ ಒಡ್ಡೂರು ಫಾರ್ಮ್ಸ್ ನಲ್ಲಿ ಆರಂಭಿಸಿದ್ದು, ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ. ಈ ಕುರಿತು ಒಡ್ಡೂರು ಫಾರ್ಮ್ಸ್ ನಲ್ಲಿ ಗುರುವಾರ ಸುದ್ಧಿಗಾರರೊಂದಿಗೆ ಮಾತನಾಡಿ ಶಾಸಕ ರಾಜೇಶ್ ನಾಯ್ಕ್, ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಈ ಘಟಕ ಅನುಷ್ಠಾನಗೊಂಡಿದ್ದು, ಶೀಘ್ರ ಕೇಂದ್ರ ಸಚಿವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಶಾಸಕ ರಾಜೇಶ್ ನಾಯ್ಕ್ ಮಾರ್ಗದರ್ಶನದಲ್ಲಿ ಅವರ ಪುತ್ರ ಉನ್ನತ್ ಆರ್. ನಾಯ್ಕ್ ಘಟಕದ ಉಸ್ತುವಾರಿ ನೋಡಿಕೊಳ್ಳಲಿದ್ದು ರೀಟ್ಯಾಪ್ ಸೊಲ್ಯೂಷನ್ ಸಂಸ್ಥೆ ಇದರ ಪೂರ್ತಿ ನಿರ್ವಹಣೆ ಮಾಡಲಿದೆ. ಸುಮಾರು 60 ಸೆಂಟ್ಸ್ ಜಮೀನಿನಲ್ಲಿ ಘಟಕ ಸುಸಜ್ಜಿತ ಹಾಗೂ ವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಈಗಾಗಲೇ ಪ್ರಾಯೋಗಿಕವಾಗಿ ಸಾವಯವ ಗೊಬ್ಬರ ಮತ್ತು ಅನಿಲ ಉತ್ಪಾದನೆ ಆರಂಭಗೊಂಡಿದೆ. ಸದ್ಯಕ್ಕೆ ನಗರ ಮತ್ತು ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳ ಹಸಿ ತ್ಯಾಜವನ್ನು ಬಳಸಿಕೊಂಡು ಸಾವಯವ ಗೊಬ್ಬರ ಮತ್ತು ಅನಿಲ ಉತ್ಪಾದನೆ ಮಾಡಲಾಗುತ್ತಿದ್ದು, ಇದರ ಮಾರಾಟಕ್ಕಾಗಿ ಪೆಸೊ (ಪೆಟ್ರೋಲಿಯಂ ಮತ್ತು ಸ್ಪೋಟಕ ರಕ್ಷಣಾ ಸಂಸ್ಥೆ ) ಪರವಾನಗಿಗಾಗಿ ಕಾಯಲಾಗುತ್ತಿದೆ. ಸುಮಾರು 8.50 ಲಕ್ಷ ಲೀ. ಮಿಥೇನ್ ಗ್ಯಾಸ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದ್ದಿದ್ದು, ದಿನವೊಂದಕ್ಕೆ 500 ರಿಂದ 600 ಕೆ. ಜಿ. ಅನಿಲ ಉತ್ಪಾದನೆಯಾಗುತ್ತದೆ. ಅದೇ ರೀತಿ 10 ಟನ್ ಹಸಿ ಕಸದಿಂದ ಅಷ್ಟೇ ಪ್ರಮಾಣದ ಉತ್ಕೃಷ್ಟವಾದ ಗೊಬ್ಬರವು ಲಭ್ಯವಾಗುತ್ತದೆ. ಅನಿಲವನ್ನು ಅಡುಗೆ, ವಾಹನ, ಇನ್ನಿತರ ವಾಣಿಜ್ಯ ಉದ್ದೇಶಕ್ಕೆ ಬಳಸಬಹುದಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಗುರುವಾರ ಘಟಕಕ್ಕೆ ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.
ಘಟಕಕ್ಕೆ ಸುಮಾರು 1 ಲಕ್ಷ ಲೀಟರ್ ನೀರಿನ ಅವಶ್ಯಕತೆ ಇದ್ದು, ಇದನ್ನು ಕೂಡ ಎರಡು ಕಿ. ಮೀ. ದೂರದಲ್ಲಿರುವ ಕೋಳಿ ಅಂಗಡಿಗಳ ಸಹಿತ ಪಕ್ಕದ ಫ್ಯಾಕ್ಟರಿಯೊಂದರ ತ್ಯಾಜ್ಯ ನೀರನ್ನೇ ಬಳಸಲಾಗುತ್ತದೆ, ಪೈಪ್ ಲೈನ್ ಮೂಲಕವೇ ಘಟಕಕ್ಕೆ ಪೂರೈಕೆಯಾಗುತ್ತದೆ. ಬಳಿಕ ಸಂಸ್ಕರಿಸಿದ ಈ ನೀರನ್ನು ತೋಟಕ್ಕೆ ಬಳಸಲಾಗುತ್ತದೆ. ಇದರಿಂದಾಗಿ ಪರಿಸರ ಪೂರ್ತಿ ಹಚ್ಚ ಹಸಿರಾಗಿಯೇ ಉಳಿಯುತ್ತದೆ ಎಂದರು.
ಗುಜರಾತ್ ಮಾಡೆಲ್ : ಬಂಟ್ವಾಳ ಪುರಸಭೆಯ ತ್ಯಾಜ ವಿಲೇವಾರಿ ಸಮಸ್ಯೆ ಇದೀಗ ಬಯೋ ಸಿಎನ್ ಜಿ ಘಟಕವನ್ನು ಕಾರ್ಯರೂಪಕ್ಕೆ ತರುವಂತಾಗಿದೆ. ಪುರಸಭೆಯ ಹಸಿಕಸವನ್ನು ಇಲ್ಲಿ ಬಳಸಲಾಗುತ್ತದೆ. ತರಕಾರಿ ಸಹಿತ ಪೂರ್ತಿ ಹಸಿಕಸವನ್ನು ಮಾತ್ರ ಇಲ್ಲಿ ಬಳಸಲಾಗುತ್ತಿದೆ. ರೀಟ್ಯಾಪ್ ಸೋಲುಷನ್ ಸಂಸ್ಥೆಯ 6 ಮಂದಿ ಸಿಬ್ಬಂದಿ ಕಾಯಂ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಮೂರು ಮಂದಿ ನಮ್ಮ ನೌಕರರು ಹಸಿ ಮತ್ತು ಒಣಕಸ ಪ್ರತ್ಯೇಕಿಸುವಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದರು. ಗ್ರಾ. ಪಂ. ಗಳು ಆಸಕ್ತಿ ವಹಿಸಬೇಕು : ಪ್ರತಿ ಗ್ರಾ. ಪಂ. ಅಥವಾ ಅಕ್ಕಪಕ್ಕದ ಮೂರ್ನಾಲ್ಕು ಗ್ರಾ. ಪಂ. ಒಟ್ಟು ಸೇರಿಕೊಂಡು ಹಾಗೆಯೇ ನಗರಪಾಲಿಕೆ, ಪುರಸಭೆಗಳು ಇಂತಹ ಘಟಕವನ್ನು ಸ್ಥಾಪಿಸಲು ಆಸಕ್ತಿ ವಹಿಸಿದರೆ ತ್ಯಾಜ ವಿಲೇವಾರಿಯ ಬಹುದೊಡ್ಡ ಸಮಸ್ಯೆ ಬಗೆಹರಿಯಲಿದೆಯಲ್ಲದೆ ಆದಾಯವು ಬರಲಿದೆ ಎಂದು ಅವರು ಸಲಹೆ ನೀಡಿದರು.
ಕೃಷಿಕರಿಗೆ ಸಾವಯವ ಗೊಬ್ಬರದ ಅವಶ್ಯಕತೆ ಇದ್ದಲ್ಲಿ ಆ ರೈತನ ತೋಟದ ಮಣ್ಣನ್ನು ಇಲ್ಲಿಯೇ ಪರೀಕ್ಷಿಸಿ ಆ ಮಣ್ಣಿಗೆ ಅನುಗುಣವಾದ ಸತ್ವದ ಗೊಬ್ಬರವನ್ನು ತಯಾರಿಸಿ ನೀಡುವ ಚಿಂತನೆಯೂ ಇದೆ. ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದ್ದಾರೆ. ಈ ಸಂದರ್ಭ ರೀಟ್ಯಾಪ್ ಸೋಲುಷನ್ ಸಂಸ್ಥೆಯ ಮಂಜುನಾಥ್ ಪೂರಕ ಮಾಹಿತಿ ನೀಡಿದರು. ಘಟಕದ ಮುಖ್ಯಸ್ಥ ಉನ್ನತ್ ಆರ್. ನಾಯ್ಕ್, ಪ್ರಮುಖರಾದ ದೇವದಾಸ್ ಶೆಟ್ಟಿ ಬಂಟ್ವಾಳ, ಸುದರ್ಶನ್ ಬಜ, ಪುರುಷೋತ್ತಮಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ, ನಂದರಾಮ ರೈ, ಚರಣ್ ಜುಮಾದಿ ಗುಡ್ಡೆ ಮೊದಲಾದವರಿದ್ದರು.