ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನವೆಂಬರ್ 14ರಂದು ವಿದ್ಯಾರಣ್ಯದ ಅಂಗಳದಲ್ಲಿ ಸುಜ್ಞಾನ ಪಿ.ಯು. ಕಾಲೇಜು ಹಾಗೂ ವಿದ್ಯಾರಣ್ಯದ ವಿದ್ಯಾರ್ಥಿಗಳಿಗಾಗಿ ಅದ್ದೂರಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ, ಪಿ.ಯು.ಸಿ. ಎನ್ನುವುದು ವಿದ್ಯಾರ್ಥಿಗಳ ಜೀವನದ ಅತ್ಯಂತ ಪ್ರಮುಖ ಘಟ್ಟ. ಹಾಗಾಗಿ ಕಲಿಕೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು ಎಂದು ಕಿವಿ ಮಾತು ಹೇಳಿದರು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಒಂದು ಸುಂದರವಾದ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ವಿದ್ಯಾರ್ಥಿಗಳಲ್ಲಿ ಸಂಕಲ್ಪ ಶಕ್ತಿ ಇರಬೇಕು. ಆಗ ಮಾತ್ರ ಅವರು ಜೀವನದಲ್ಲಿ ಅಭಿವೃದ್ಧಿಯ ಕಡೆಗೆ ಸಾಗಲು ಸಾಧ್ಯ. ಈಗ ಉದ್ಯೋಗದಿಂದ ಹಿಡಿದು ಎಲ್ಲದಕ್ಕೂ ಸ್ಪರ್ಧೆಗಳು ಇವೆ. ಹಾಗಾಗಿ ವಿದ್ಯಾರ್ಥಿಗಳು ತುಂಬಾ ಶ್ರಮ ವಹಿಸಬೇಕು ಮತ್ತು ವಿದ್ಯೆಯ ಕುರಿತು ಆಲಸ್ಯ ಮಾಡಬಾರದು ಎಂದು ಅವರು ನುಡಿದರು.

ಬದುಕಿನಲ್ಲಿ ಅವಕಾಶ ಮತ್ತೆ ಸಿಗದು -ಭರತ್ ಶೆಟ್ಟಿ
ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿಯವರು ಮಾತನಾಡಿ, ಬದುಕಿನಲ್ಲಿ ಅವಕಾಶಗಳು ಮತ್ತೆ ಮತ್ತೆ ಸಿಗುವುದಿಲ್ಲ. ವಿದ್ಯಾರ್ಥಿ ಜೀವನವೆನ್ನುವುದು ಗೋಲ್ಡನ್ ಲೈಫ್. ಹಾಗಾಗಿ ಈ ಅಮೂಲ್ಯ ಸಮಯವನ್ನು ಎಂದಿಗೂ ವ್ಯರ್ಥ ಮಾಡಬಾರದು. ಕಲಿಕೆ ನಿರಂತರವಾಗಿರುತ್ತದೆ. ಜೀವನದಲ್ಲಿ ಮಹತ್ವಾಕಾಂಕ್ಷೆಯ ಕನಸು ಮತ್ತು ಸ್ಪಷ್ಟ ಗುರಿಗಳನ್ನು ಇಟ್ಟುಕೊಳ್ಳಿ. ಇದು ನಿಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಲು ಸಹಕಾರಿಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಸುಜ್ಞಾನ ಪಿ.ಯು. ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಗೂ ವಿದ್ಯಾರಣ್ಯದ ಚಿಣ್ಣರಿಗೆ ಪ್ರಶಸ್ತಿ ಫಲಕಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ವೇದಿಕೆಯ ಮೇಲೆ ವಿದ್ಯಾರಣ್ಯದ ಮುಖ್ಯೋಪಾಧ್ಯಾಯರಾದ ಪ್ರದೀಪ್ ಕೆ ಹಾಗೂ ಸುಜ್ಞಾನ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ರಂಜನ್ ಬಿ. ಶೆಟ್ಟಿ ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ವಿನಯ್ ಕುಮಾರ್ ಹಾಗೂ ದೀಕ್ಷಾ ಅನಿಲ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.








































































































