ಸಂಶೋಧಕಿ ಡಾ| ಇಂದಿರಾ ಹೆಗ್ಡೆ ಅವರು ತನ್ನ ಜಾನಪದೀಯ ಸಂಶೋಧನೆಯ ಕ್ಷೇತ್ರ ಕಾರ್ಯದ ಅನುಭವಗಳನ್ನು ದಾಖಲಿಸಿರುವ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ಬರುವವರಿಗೆ ಬಹುದೊಡ್ಡ ಮಾರ್ಗದರ್ಶಿ ಕೊಡುಗೆಯನ್ನು ನೀಡಿದ್ದಾರೆ. ತುಳುವಿನಲ್ಲಿ ಇದೊಂದು ಮಹತ್ವದ ಕೃತಿಯಾಗಲಿದೆ ಎಂದು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ| ಆಶಾಲತಾ ಸುವರ್ಣ ಅವರು ಹೇಳಿದರು. ಅವರು ತುಳು ಭವನದಲ್ಲಿ ಆಯೋಜಿಸಲಾಗಿದ್ದ ಡಾ| ಇಂದಿರಾ ಹೆಗ್ಡೆ ಅವರ ಬಾರಗೆರೆ ಬರಂಬು ತುಳುವೆರೆ ಪುಂಚ ನಾಡೊಂದು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಜಾನಪದೀಯ ಅಧ್ಯಯನ ಕ್ಷೇತ್ರ ಕಾರ್ಯಗಳ ಸಂದರ್ಭದಲ್ಲಿ ಮಹಿಳೆಯರು ಸಾಕಷ್ಟು ಎಡರು ತೊಡಕುಗಳನ್ನು ಎದುರಿಸುವ ಸಂದರ್ಭ ಉಂಟಾಗುತ್ತಿತ್ತು. ಈ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನಡೆದು ಡಾ| ಇಂದಿರಾ ಹೆಗ್ಡೆ ಅವರು ಹಲವು ಮಹತ್ವದ ಕೃತಿಗಳನ್ನು ನೀಡಿರುವುದು ಪ್ರಶಾಂಸನೀಯ ಎಂದು ಡಾ| ಆಶಾಲತಾ ಸುವರ್ಣ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಡಾ| ಸಮೀರ್ ಮಾಡ, ಹಿರಿಯ ಲೇಖಕಿ ಪ್ರೇಮಾ ಅಜ್ರಿ ಕಾರ್ಕಳ, ಚೇಳ್ಯಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಜ್ಯೋತಿ ಚೇಳ್ಯಾರು, ನಿವೃತ್ತ ಪ್ರಾಂಶುಪಾಲ ಕೃಷ್ಣಮೂರ್ತಿ ಪಿ. ಅವರು ಕೃತಿಯ ಬಗ್ಗೆ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ತುಳುವಿನಲ್ಲಿ ಹೊಸದಾಗಿ ಸಂಶೋಧನೆ ಮಾಡಲು ಹೊರಟವರಲ್ಲಿ ಕ್ಷೇತ್ರ ಕಾರ್ಯದ ಅನುಭವದ ಕೊರತೆ ಇದೆ. ತಳಸ್ಪರ್ಶಿಯಾದ ಕ್ಷೇತ್ರ ಅಧ್ಯಯನದ ಮೂಲಕ ಸಂಶೋಧನೆ ನಡೆಸುವುದಕ್ಕೆ ಇಂದಿರಾ ಹೆಗ್ಡೆಯವರು ನಿದರ್ಶನವಾಗಿದ್ದಾರೆ ಎಂದರು. ಅಕಾಡೆಮಿಯ ಸದಸ್ಯ ಸಂತೋಷ್ ಶೆಟ್ಟಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.








































































































