‘ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ವಾರವಿಡೀ ಯಕ್ಷಗಾನ ತಾಳಮದ್ದಳೆಗಳನ್ನು ನಡೆಸುವ ಮೂಲಕ ಯಕ್ಷಾಂಗಣ ಸಂಸ್ಥೆ ನಿಜಾರ್ಥದಲ್ಲಿ ಕನ್ನಡದ ನುಡಿ ಹಬ್ಬವನ್ನು ಆಚರಿಸುತ್ತಿದೆ. ಸುಲಲಿತವಾದ ಕನ್ನಡ ಭಾಷೆಯನ್ನು ಯಕ್ಷಗಾನದಂತೆ ಸಶಕ್ತವಾಗಿ ಬಳಸಿಕೊಳ್ಳುವ ಕಲಾ ಮಾಧ್ಯಮ ಬೇರೊಂದಿಲ್ಲ’ ಎಂದು ಅಹ್ಮದ್ ನಗರದ ಉದ್ಯಮಿ ಹಾಗೂ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ ಶೆಟ್ಟಿ ಅಹ್ಮದ್ ನಗರ ಹೇಳಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದಲ್ಲಿ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು 2025 ನವೆಂಬರ್ 23ರಿಂದ 29ರ ವರೆಗೆ ನಗರದ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಆಯೋಜಿರುವ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2025’ ಹದಿಮೂರನೇ ವರ್ಷದ ನುಡಿ ಹಬ್ಬ, ತ್ರಯೋದಶ ಸರಣಿಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಜಿಲ್ಲೆಯ ವಿವಿಧ ಯಕ್ಷಗಾನ ಸಂಘಗಳ ಸಂಯೋಜನೆಯಲ್ಲಿ ಜರಗುವ ಏಳು ಕನ್ನಡ ಪ್ರಸಂಗಗಳ ಜೊತೆಗೆ ಭಾಷಾ ಬಾಂಧವ್ಯದ ದೃಷ್ಟಿಯಿಂದ ಒಂದು ದಿನ ತುಳು ಭಾಷೆಯ ತಾಳಮದ್ದಳೆಯನ್ನು ಹೆಚ್ಚುವರಿಯಾಗಿ ನಡೆಸಲಾಗುವುದು. ನವೆಂಬರ್ 23ರಂದು ಮಧ್ಯಾಹ್ನ 2 ಗಂಟೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಏರ್ಪಡಿಸಿರುವ ‘ಅಮ್ಮಣ್ಣಾಯೆರ್ನ ನೆಂಪು’ ಭಾಗವತ ದಿನೇಶ್ ಅಮ್ಮಣ್ಣಾಯರ ಸಂಸ್ಮರಣಾ ಗೋಷ್ಠಿಯಲ್ಲಿ ‘ಮಿತ್ತಲೋಕೊದ ಪೆತ್ತ’ ಎಂಬ ತುಳು ತಾಳ ಮದ್ದಳೆಯನ್ನು ಜೋಡಿಸಿಕೊಳ್ಳಲಾಗಿದೆ’ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಹೇಶ್ ಮೋಟಾರ್ಸ್ ಮಾಲಕ ಎ.ಕೆ. ಜಯರಾಮ ಶೇಖ ಶುಭ ಹಾರೈಸಿದರು. ಯಕ್ಷಾಂಗಣದ ಉಪಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ಸ್ವಾಗತಿಸಿದರು. ಸಂಚಾಲಕ ಕೆ. ರವೀಂದ್ರ ರೈ ಕಲ್ಲಿಮಾರು ವಂದಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ವಿಭಾಗದ ಸಂಚಾಲಕಿ ನಿವೇದಿತಾ ಎನ್ ಶೆಟ್ಟಿ ಬೆಳ್ಳಿಪ್ಪಾಡಿ ಮತ್ತು ಕಾರ್ಯದರ್ಶಿ ಸುಮಾ ಪ್ರಸಾದ್ ಉಪಸ್ಥಿತರಿದ್ದರು.








































































































