ಮಂಗಳೂರು ತಾಲೂಕು ಪೊಳಲಿ ಸೀಮೆಯ ಪುಟ್ಟ ಗ್ರಾಮವೊಂದರ ಕಾಂತಪ್ಪ ಎಂಬ ಹುಡುಗ ಐಟಿಐ ಮುಗಿಸಿ ಬೆಂಗಳೂರಿನ ಹೆಚ್ಎಎಲ್ಗೆ ತರಬೇತಿಗೆಂದು ಹೋದ. ಬೆಂಗಳೂರಿನಲ್ಲಿ ತನ್ನ ಸಂಬಂಧಿಕರೂ, ಕಟ್ಟರ್ ಕಾಂಗ್ರೆಸಿಗರೂ ಆಗಿದ್ದ ಜೀವರಾಜ ಆಳ್ವರ ಮನೆಯಲ್ಲಿದ್ದುಕೊಂಡು ಹೆಚ್ಎಎಲ್ಗೆ ಹೋಗತೊಡಗಿದ. ಊರಿನಿಂದ ಬಂದಿದ್ದ ಸಂಬಂಧಿಕರ ಹುಡುಗನನ್ನು ಶಿಸ್ತಿನಿಂದ ಬೆಳೆಸಬೇಕು ಎಂದುಕೊಂಡಿದ್ದ ಜೀವರಾಜ ಆಳ್ವರಿಗೆ ಕೆಲವೇ ದಿನಗಳಲ್ಲಿ ಹುಡುಗ ದಾರಿ ತಪ್ಪುತ್ತಿದ್ದಾನೆ ಎನಿಸಲಾರಂಭಿಸಿತು. ಹುಡುಗನನ್ನು ಕರೆದು ಬಯ್ದರು, ಬುದ್ಧಿ ಹೇಳಿದರು, ತಿದ್ದಲು ಇನ್ನಿಲ್ಲದ ಪ್ರಯತ್ನ ಮಾಡತೊಡಗಿದರು. ಆದರೆ ಹುಡುಗ, ಆಳ್ವರ ಮಾತನ್ನು ಕೇಳದೆ ತನ್ನದೇ ದಾರಿಯಲ್ಲಿ ನಡೆಯತೊಡಗಿದ. ತಾನು ನಡೆಯುತ್ತಿದ್ದ ದಾರಿಯಲ್ಲಿ ಆತನಿಗೆ ಯಾವುದೋ ಒಂದು ಭವಿಷ್ಯ ಕಾಣಿಸತೊಡಗಿತು.
ಜೀವರಾಜ ಆಳ್ವರಿಗೆ ಹುಡುಗ ದಾರಿ ತಪ್ಪುತ್ತಿದ್ದಾನೆ ಎನಿಸಿದ್ದು ಆತ ಆರೆಸ್ಸೆಸ್ಸಿನ ಶಾಖೆಗೆ ಹೋಗಲಾರಂಭಿಸಿದ್ದಕ್ಕೆ. ಮನೆಯ ಹುಡುಗನೇ ಶಾಖೆಗೆ ಹೋಗುವುದನ್ನು ನೋಡಿದರೆ ಜನ ಏನೆಂದುಕೊಂಡಾರು ಮತ್ತು ಇದು ತನ್ನ ರಾಜಕೀಯ ಬದುಕಿಗೆ ಹಿನ್ನಡೆಯಾಗಬಹುದೆಂಬ ಭಯ ಜೀವರಾಜ ಆಳ್ವರಿಗಿತ್ತು. ಆದರೆ ಆಳ್ವರು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದವು. ಹುಡುಗ ಮುಂಗೋಪಿ ಮತ್ತು ಹಠಮಾರಿಯಾಗಿದ್ದ. ಆಳ್ವರು ಒಡ್ಡು ಕಟ್ಟಿದಷ್ಟೂ ಹುಡುಗನ ಶಾಖೆಯ ಪ್ರೀತಿ ರಭಸದಿಂದ ಹರಿಯುತ್ತಿತ್ತು. ಹೆಚ್ಎಎಲ್ನ ಎರಡು ವರ್ಷದ ತರಬೇತಿ ಇನ್ನೇನು ಮುಗಿಯುತ್ತಾ ಬರುತ್ತಿದ್ದಾಗ ಆಳ್ವರು ಕಡೆಯದಾಗಿ ಒಂದು ಪ್ರಯತ್ನಕ್ಕೆ ಕೈಹಾಕಿದರು. ಪ್ರತಿಭಾವಂತನಾಗಿದ್ದ ಕಾಂತಪ್ಪನಿಗೆ ಸ್ವಿಜರ್ಲ್ಯಾಂಡಿನಲ್ಲಿ ದೊಡ್ಡ ಸಂಬಳದ ಉದ್ಯೋಗವನ್ನು ಹುಡುಕಿದರು. ಆತನಿಗೆ ತಿಳಿಯದಂತೆ ವಿದೇಶಕ್ಕೆ ಕಳುಹಿಸುವ ಎಲ್ಲಾ ಏರ್ಪಾಡುಗಳನ್ನು ಮಾಡಿದರು. ವಿದೇಶದ ಉದ್ಯೋಗದ ಆಸೆಯಿಂದ ಹುಡುಗ ಆರೆಸ್ಸೆಸ್ ಹುಚ್ಚನ್ನು ಬಿಡುವನೆಂದು ಆಳ್ವರು ಅಂದುಕೊಂಡಿದ್ದರು. ಆದರೆ ಹುಡುಗ ಕಾಂತಪ್ಪ ಅದರಿಂದಲೂ ವಿಚಲಿತನಾಗಲಿಲ್ಲ. ದೊಡ್ಡ ಸಂಬಳಕ್ಕೂ ಆತ ಕದಲಲ್ಲಿಲ್ಲ. ಬದಲಿಗೆ ಹೆಚ್ಎಎಲ್ನ ತರಬೇತಿಯನ್ನೂ, ಆಳ್ವರ ಹಂಗನ್ನೂ ಬಿಟ್ಟು ನೇರವಾಗಿ ಬಂಟ್ವಾಳ ತಾಲೂಕಿನ ಕೊಡ್ಮಣ್ನ ಮನೆಗೆ ಮರಳಿದ. ಇದರಿಂದ ಮತ್ತಷ್ಟು ಕೆರಳಿದ ಜೀವರಾಜ ಆಳ್ವರು, ‘ಆರೆಸ್ಸೆಸ್ಸಿನಲ್ಲಿ ಬ್ರಾಹ್ಮಣರ ತಾಳಕ್ಕೆ ಕುಣಿಯುತ್ತಲೇ ಇರು‘ ಎಂದು ಬಯ್ದರು. ಹುಡುಗ ಅದಕ್ಕೂ ಕಿವಿಗೊಡಲಿಲ್ಲ. ಕೆಲ ವರ್ಷಗಳಲ್ಲಿ ಜೀವರಾಜ ಆಳ್ವರು ದಿವಂಗತರಾದರು. ಮುಂದೆ ಕೊಡ್ಮಣ್ ಗ್ರಾಮದಲ್ಲಿ ಅದೇ ಆರೆಸ್ಸೆಸ್ಸಿನ ಕಾಂತಪ್ಪ ಶೆಟ್ಟಿ ಮಾಡಿದ ಸಾಧನೆಗಳನ್ನು ಅವರು ನೋಡಲಾಗಲಿಲ್ಲ. ಒಂದು ವೇಳೆ ಕಾಂತಪ್ಪ ಶೆಟ್ಟರ ಮುಂದಿನ ಬದುಕನ್ನು ಜೀವರಾಜ ಆಳ್ವರೇನಾದರೂ ನೋಡಿದ್ದಿದ್ದರೆ ಇದೇ ಅಲ್ಲವೇ ಗಾಂಧಿವಾದ, ತಾನು ಕಂಡಿದ್ದೂ ಇದೇ ಕನಸಲ್ಲವೇ ಎಂದು ತಲೆದೂಗುತ್ತಿದ್ದರು.
ಏಕೆಂದರೆ ಬೆಂಗಳೂರಿನಿಂದ ಮರಳಿದ ಯುವಕ ಕಾಂತಪ್ಪ ಶೆಟ್ಟರಿಗೆ ತನ್ನ ಊರು ಇರಬೇಕಾದುದು ಹೀಗಲ್ಲ ಎಂದು ಬಹುಬೇಗ ಅರಿವಾಯಿತು. ಅಂದಿನ ದಕ್ಷಿಣ ಕನ್ನಡದ ಎಲ್ಲಾ ಊರುಗಳಲ್ಲಿದ್ದ ಅಪಸವ್ಯಗಳೂ ಕೊಡ್ಮಣ್ಣಿನಲ್ಲಿದ್ದವು. ಜನರಲ್ಲಿ ಒಂದು ವಿಧದ ಅವಜ್ಞೆಯಿತ್ತು, ಶಿಕ್ಷಣದ ಬಗ್ಗೆ ಅಸಡ್ಡೆಯಿತ್ತು, ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಿತ್ತು. ನಗರದ ಬದುಕಿನತ್ತ ಆಕರ್ಷಣೆಯಿತ್ತು. ಆದರೆ ಕಾಂತಪ್ಪ ಶೆಟ್ಟರು ನಗರ ಬದುಕಿನ ಗೊಂದಲ, ಕಷ್ಮಲ, ಜಂಜಡವನ್ನು ಸ್ವತಃ ಅನುಭವಿಸಿ ಬಂದಿದ್ದರು. ಅದಾಗಲೇ ಕೊಡ್ಮಣ್ಣಿನಲ್ಲಿ ಆರೆಸ್ಸೆಸ್ಸಿನ ಶಾಖೆಯೊಂದು ನಡೆಯುತ್ತಿತ್ತು. ಕಾಂತಪ್ಪ ಶೆಟ್ಟರ ಪ್ರಬುದ್ಧತೆ ಅದೆಷ್ಟಿತ್ತೆಂದರೆ ತಾವು ಆ ಶಾಖೆಗೆ ತೆರಳದೆ ಹೊಸ ಶಾಖೆಯೊಂದನ್ನು ಆರಂಭಿಸಿದರು. ಅದರ ಮೂಲಕ ವ್ಯಕ್ತಿನಿರ್ಮಾಣದ ಒಂದೊಂದೇ ಪಾಠಗಳು ಆರಂಭವಾಗತೊಡಗಿದವು. ಕೆಲವರು ದುಶ್ಚಟ ಬಿಟ್ಟರು. ಶಾಖೆಗೆ ಬಂದವರು ಊರಾಚೆಗೂ ಆಲೋಚಿಸುವಂತಾದರು. ತರತಮವಿಲ್ಲದ ವಾತಾವರಣ ನಿರ್ಮಾಣವಾಗತೊಡಗಿತು.
ಶಾಖೆಯಿಂದ ಆರಂಭವಾದ ಕಾಂತಪ್ಪ ಶೆಟ್ಟರ ಸಾಮಾಜಿಕ ಬದುಕು ಬಿಎಂಎಸ್ ಎಂಬ ಕಾರ್ಮಿಕ ಸಂಘಟನೆಯವರೆಗೆ ವಿಸ್ತಾರವಾಯಿತು. ಸರಿಯಾಗಿ ಅದೇ ಹೊತ್ತಲ್ಲಿ ಕಮ್ಯುನಿಸ್ಟರ ಕೋಟೆಯಾಗಿದ್ದ ಮಂಗಳೂರಿನಲ್ಲಿ ಕಮ್ಯುನಿಸಮ್ಮಿನ ಇಟ್ಟಿಗೆಗಳು ಉದುರುತ್ತಿದ್ದವು. ಇನ್ನೊಂದೆಡೆ ಕಲ್ಲಡ್ಕದಲ್ಲಿ ಡಾ. ಪ್ರಭಾಕರ ಭಟ್ಟರು ಶಿಕ್ಷಣ ಮತ್ತು ಸಂಸ್ಕಾರದ ಹೋರಾಟವನ್ನು ತೀವ್ರಗೊಳಿಸಿದ್ದರು. ಅಂಥ ಹೊತ್ತಲ್ಲಿ ಬಿಎಂಎಸ್ನ ಹೊಣೆ ಹೊತ್ತ ಕಾಂತಪ್ಪ ಶೆಟ್ಟರು ಕಾರ್ಮಿಕ ವಲಯದಲ್ಲಿ ಸಂಘರ್ಷಕ್ಕೆ ಬದಲಾಗಿ ಸಹಕಾರ ತತ್ತ್ವವನ್ನು ಪಸರಿಸುವ ಕಾರ್ಯದಲ್ಲಿ ತೊಡಗಿದರು. ಅಷ್ಟರ ಹೊತ್ತಿಗೆ ಸುತ್ತಲ ಊರಿಗೆ ಕಾಂತಪ್ಪ ಶೆಟ್ಟಿ ಚಿರಪರಿಚಿತರಾಗಿದ್ದರು. ಪುದು ಮಂಡಲ ಪಂಚಾಯಿತಿಗೆ ಸ್ಪರ್ಧಿಸಬೇಕೆಂಬ ಒತ್ತಡ ಬಂದು ಆಯ್ಕೆಯೂ ಆದರು. ನಂತರ ಮೇರೆಮಜಲು ಗ್ರಾಮ ಪಂಚಾಯಿತಿಯ ಅಧ್ಯಕ್ಷರೂ ಆದರು. ಈ ಅವಧಿಯಲ್ಲಿ ಅವರು ಮಾಡಿದ ಕಾರ್ಯಗಳು ಪಂಚಾಯತ್ ರಾಜ್ ವ್ಯವಸ್ಥೆಗೇ ಕಿರೀಟವಿಟ್ಟಂತಿದ್ದವು. ಅಧ್ಯಕ್ಷರಾದ ಕಾಂತಪ್ಪ ಶೆಟ್ಟರು ಕೊಡ್ಮಣ್ಣು, ಪುದು, ಅಮ್ಮುಂಜೆ, ಕರಿಯಂಗಳ ಗ್ರಾಮಗಳ ಸ್ವರೂಪವನ್ನೇ ಬದಲಿಸಿದರು. ಆ ಎಲ್ಲಾ ಊರುಗಳಲ್ಲಿ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಯುವಕರ ದೊಡ್ಡ ಪಡೆಯೇ ಸಿದ್ಧವಾಯಿತು. ಒರಟೊರಟಾದ ಕೆಂಪು ಕಲ್ಲಿನ ಈ ಎಲ್ಲಾ ಊರುಗಳಲ್ಲಿ ಕಚ್ಚಾ ರಸ್ತೆಯನ್ನು ನಿರ್ಮಿಸಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಪ್ರಾಥಮಿಕ ಶಾಲೆ ಮತ್ತು ಒಂದು ಪ್ರೌಢಶಾಲೆ, ೯ ಅಂಗನವಾಡಿ ಕೇಂದ್ರ ಮತ್ತು ಪಶು ಚಿಕಿತ್ಸಾಲಯಗಳನ್ನು ತಂದರು. ಈ ಎಲ್ಲಾ ಕಾರ್ಯಗಳನ್ನು ಅವರು ಕೇವಲ ಗ್ರಾಮ ಪಂಚಾಯಿತಿಯ ಅನುದಾನದಿಂದ ನಿರ್ಮಿಸಿದರು!
ಸರಿಯಾಗಿ ಅದೇ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯಿಂದ ಪೇಜಾವರ ಸ್ವಾಮಿಗಳು ನೀಡುತ್ತಿದ್ದ ಗ್ರಾಮವಿಕಾಸದ ದೀಕ್ಷೆಯನ್ನೂ ಪಡೆದ ಕಾಂತಪ್ಪ ಶೆಟ್ಟರು ‘ಜಯಭಾರತ ಗ್ರಾಮವಿಕಾಸ ಟ್ರಸ್ಟ್’ ಅನ್ನು ಸ್ಥಾಪಿಸಿ ಅದರ ಮೂಲಕ ಸ್ವಾವಲಂಬಿ, ಮತಾಂತರ ಮುಕ್ತ, ಸಂಸ್ಕಾರಯುತ ಗ್ರಾಮ ನಿರ್ಮಾಣದ ಕಾರ್ಯಕ್ಕೆ ವೇಗ ನೀಡಿದರು. ಗ್ರಾಮವಿಕಾಸದಿಂದ ೯೫ ಮನೆಗಳನ್ನು ಕಟ್ಟಿಸಿದರು. ಹೇಗೆ ಗಾಂಧಿಜೀ ಹಿಂದ್ ಸ್ವರಾಜ್ನಲ್ಲಿ ಆದರ್ಶ ಗ್ರಾಮಗಳ ಕನಸು ಕಂಡಿದ್ದರೋ, ವಿನೋಬಾ, ಗುರೂಜಿಯವರ ಕನಸಿನ ಗ್ರಾಮಗಳು ಹೇಗಿದ್ದವೋ ಅಂಥದ್ದೇ ಗ್ರಾಮವನ್ನು ನಿರ್ಮಿಸಲು ತಮ್ಮ ಬದುಕನ್ನು ತಪಸ್ಸಿನಂತೆ ನಡೆಸಿದರು. ಅಂಥ ಗ್ರಾಮ ನಿರ್ಮಾಣ ಕಾರ್ಯವನ್ನು ಅವರು ಆರಂಭಿಸಿದ್ದು ಸ್ವತಃ ತನ್ನಿಂದಲೇ. ಯಾರನ್ನು ಊರು ನಿಕೃಷ್ಟ ಎಂದು ದೂರ ಮಾಡಿತ್ತೋ ಅಂಥ ದಲಿತರ ಮನೆಗೆ ಸಹಜವೆಂಬಂತೆ ಹೋದರು. ದಲಿತರನ್ನೂ ಮೇಲ್ವರ್ಗದವರು ಬಹುವಚನದಿಂದ ಮಾತಾಡಿಸಬಹುದೆಂಬುದನ್ನು ತೋರಿಸಿಕೊಟ್ಟರು. ಕಾಂತಪ್ಪ ಶೆಟ್ಟರ ಸಾಮರಸ್ಯದಲ್ಲಿ ಆಡಂಬರವಿರಲಿಲ್ಲ. ತೋರಿಕೆಯಿರಲಿಲ್ಲ. ಪ್ರಚಾರದ ಹಪಹಪಿಯೂ ಇರಲಿಲ್ಲ. ಅವರ ಸಾಮರಸ್ಯ ಹೃದಯದಿಂದ ಹೊಮ್ಮುತ್ತಿತ್ತು. ಪರಿಣಾಮ ಊರು ಶುದ್ಧವಾಯಿತು, ಒಂದಾಯಿತು, ಊರಿಗೆ ಊರೇ ಏಕತೆಯ ಪಾಕವಾಯಿತು. ಸರ್ವರಿಗೂ ಶಿಕ್ಷಣ ಮತ್ತು ಆರೋಗ್ಯ ಸಿಗಬೇಕೆಂದು ಅವರು ಕೇವಲ ಭಾಷಣ ಮಾಡಿ ಫೊಟೋ ತೆಗೆಸಿಕೊಳ್ಳಲಿಲ್ಲ. ತನ್ನೂರಿನ ಕನ್ನಡ ಶಾಲೆ ಉಳಿಸಲು ಕೈಯಿಂದ ಹಣ ಹಾಕಿ ಇಂಗ್ಲಿಷ್ ಶಿಕ್ಷಕರನ್ನು ನೇಮಿಸಿದರು. ಖಾಸಗಿ ಶಾಲೆಗಳ ಪೈಪೋಟಿಯಿಂದ ಶಾಲೆ ಉಳಿಸಲು ಸ್ವಂತ ಕಾರಿನಲ್ಲಿ ಮಕ್ಕಳನ್ನು ಶಾಲೆಗೆ ಕರೆತರುವುದು, ಬಿಡುವುದನ್ನು ಆರಂಭಿಸಿದರು. ಊರವರ ಶ್ರಮದಾನದಿಂದ ಮೈದಾನ ನಿರ್ಮಿಸಿದರು. ಇವಿಷ್ಟನ್ನು ಕರಾವಳಿಯಲ್ಲಲ್ಲದೆ ಬೇರೆ ಜಿಲ್ಲೆಗಳಲ್ಲಿ ಯಾರಾದರೂ ಮಾಡಿರುತ್ತಿದ್ದರೆ ರಾಜ್ಯೋತ್ಸವ ಪ್ರಶಸ್ತಿಯೇ ಅಂಥವರಿಗೆ ಸಲ್ಲುತ್ತಿತ್ತು! ಆದರೆ ಕಾಂತಪ್ಪ ಶೆಟ್ಟರು ಪ್ರಚಾರಕ್ಕೆ ವಿಮುಖರಾಗಿ ಇವೆಲ್ಲವನ್ನೂ ಮಾಡಿದ್ದರು. ಅಷ್ಟೇ ಅಲ್ಲ ಇಡೀ ಕೊಡ್ಮಣ್ ಗ್ರಾಮದಲ್ಲಿ ಅನಾರೋಗ್ಯ ಪೀಡಿತರನ್ನು ತನ್ನದೇ ಕುಟುಂಬ ಎಂಬಂತೆ ಆರೈಕೆ ಮಾಡುತ್ತಿದ್ದ ಮಾತೃಹೃದಯ ಕಾಂತಪ್ಪ ಶೆಟ್ಟರದ್ದು. ಇಂದಿಗೂ ಕೊಡ್ಮಣ್ ಗ್ರಾಮದಲ್ಲಿ ‘ನನ್ನಪ್ಪ ೧೦ ವರ್ಷ ಹೆಚ್ಚು ಬದುಕಿದ್ದರೆ ಅದಕ್ಕೆ ಕಾರಣ ಕಾಂತಪ್ಪ ಶೆಟ್ಟರು‘ ಎನ್ನುವವರು ಅನೇಕರು ಸಿಗುತ್ತಾರೆ!
ಶಾಖೆಯಿಂದ ಗ್ರಾಮಸರ್ಗದ ವ್ರತ ಸ್ವೀಕರಿಸಿದ ಕಾಂತಪ್ಪ ಶೆಟ್ಟರಿಗೆ ಇವಿಷ್ಟರಿಂದಲೇ ಊರು ಪರಿಪೂರ್ಣವಾಗುವುದಿಲ್ಲವೆಂಬ ಅರಿವಿತ್ತು. ೩೮ ವರ್ಷದ ಹಿಂದೆ ಕೊಡ್ಮಣ್ನಲ್ಲಿ ಶ್ರೀ ಶಾರದಾ ಪೂಜಾ ಸೇವಾ ವೇದಿಕೆಯನ್ನು ಆರಂಭಿಸಿದರು. ಅದರ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ತುಂಬಿ ಶಾರದಾ ಉತ್ಸವವನ್ನು ವೈಭವದಿಂದ ನಡೆಸಲಾರಂಭಿಸಿದರು. ಊರ ಯುವಕರನ್ನೇ ಸೇರಿಸಿ ಯಕ್ಷಗಾನ, ಪೌರಾಣಿಕ ನಾಟಕಗಳನ್ನು ಮಾಡಿಸಿದರು. ಸ್ವತಃ ತಾವೂ ಗೆಜ್ಜೆ ಕಟ್ಟಿ ಬಣ್ಣ ಹಚ್ಚಿದರು. ಇಂದು ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಡ್ಮಣ್ ಎಂಬ ಪುಟ್ಟ ಗ್ರಾಮದ ಶಾರದಾ ಉತ್ಸವ ಅತ್ಯಂತ ಖ್ಯಾತವಾದ ಉತ್ಸವ. ವರ್ಷ ಪೂರ್ತಿ ಶಾರದಾ ಪೂಜಾ ವೇದಿಕೆ ಅನ್ಯಾನ್ಯ ಕಾರ್ಯಕ್ರಮಗಳನ್ನು ನಡೆಸುತ್ತಾ ಊರಿನ ಅಧ್ಯಾತ್ಮ ಮತ್ತು ಸಂವೇದನೆಯನ್ನು ಆರದಂತೆ ಕಾಪಿಡುತ್ತಿದೆ. ಇವೆಲ್ಲದರ ಹಿಂದಿದ್ದವರು ಕೊಡ್ಮಣ್ ಕಾಂತಪ್ಪ ಶೆಟ್ಟರು.
ಕಾಂತಪ್ಪ ಶೆಟ್ಟರ ಇಂಥ ನೂರಾರು ಗ್ರಾಮ ವಿಕಾಸ ಕಾರ್ಯಗಳ ಕಾರಣ ಇಂದು ಕೊಡ್ಮಣ್ ದ.ಕ. ಜಿಲ್ಲೆಯಲ್ಲೇ ಅತ್ಯಂತ ಹೆಸರಾಂತ ಗ್ರಾಮ. ಆದರ್ಶ ಗ್ರಾಮವೊಂದನ್ನು ಕುಂಚದಲ್ಲಿ ಹಿಡಿದಿಟ್ಟರೆ ಹೇಗೆ ಕಾಣುತ್ತದೋ ಕೊಡ್ಮಣ್ ಹಾಗೆ ಕಾಣುತ್ತದೆ. ಅದರ ಹಿಂದಿನ ಏಕೈಕ ಕಲೆಗಾರ ಕಾಂತಪ್ಪ ಶೆಟ್ಟರು. ವಾರದ ಹಿಂದೆ ಕಾಂತಪ್ಪ ಶೆಟ್ಟರು ನಿಧನರಾದರು. ಬದುಕಿದ್ದಾಗ ಅವರು ಇಡೀ ಊರನ್ನು ಹೇಗೆ ಆವರಿಸಿಕೊಂಡಿದ್ದರು ಮತ್ತು ಅವರ ಕಾಂತಿ ಊರ ಹೊರಗೂ ಹೇಗೆ ಹರಡಿತ್ತೆಂಬುದನ್ನು ಅವರ ಮರಣ ತೋರಿಸುತ್ತಿತ್ತು. ವ್ಯಕ್ತಿಯೊಬ್ಬನ ಸಾತ್ತ್ವಿಕ ಬದುಕು ಆತನನ್ನು ಯೋಗ್ಯ ಕೆಲಸಕ್ಕೆ ಹಚ್ಚುತ್ತದೆ. ಅಂಥ ಕೆಲಸ ಸಾರ್ಥಕ್ಯವನ್ನೂ ಪಡೆಯುತ್ತದೆ. ಆತನ ಕಾಲಾನಂತರ ಆತನ ಹೆಸರು ಬಹುಕಾಲ ಲೋಕದಲ್ಲಿ ಬಾಳುತ್ತದೆ. ಕೃತಕತೆ ಇಲ್ಲದ, ಪುಣ್ಯಕೋಟಿಯಂತಹ ಸ್ವಭಾವದ, ಅಪ್ರತಿಮ ಸಂಘನಿಷ್ಠೆಯ ಸಂಘಚಾಲಕ ಕಾಂತಪ್ಪ ಶೆಟ್ಟರು ಹಾಗೆ ಬದುಕಿದರು. ಅವರ ಬದುಕು ಹಲವು ವಿಷಯಗಳಲ್ಲಿ ಸಮಾಜಕ್ಕೆ ಒಂದು ಪಠ್ಯ. ನಾಗರಿಕತೆಯೊಂದು ಹುಟ್ಟಲು ನಾನಾ ಕಾರಣ ಎಂದು ಸಿದ್ಧಾಂತಗಳೇನೋ ಹೇಳುತ್ತವೆ. ಆದರೆ ಕಾಂತಪ್ಪ ಶೆಟ್ಟರಂಥವರಿಂದಲೇ ನಾಗರಿಕತೆ ಹುಟ್ಟುತ್ತದೆ ಎನ್ನುವಷ್ಟು ಅವರ ಬದುಕು ಆದರ್ಶಮಯ. ಏಕೆಂದರೆ ಗ್ರಾಮವಿಕಾಸವೇ ರಾಷ್ಟ್ರವಿಕಾಸದ ಮೆಟ್ಟಿಲು ಮತ್ತು ತೊಟ್ಟಿಲು.
ಸಂತೋಷ್ ತಮ್ಮಯ್ಯ