ಕೆಲವು ವರ್ಷಗಳ ಹಿಂದೆ ಕರಾವಳಿಯ ವಿವಿಧೆಡೆ ತೆಂಗಿನ ಮರಗಳಿಗೆ ಬಾಧಿಸಿದ್ದ ಕಪ್ಪು ತಲೆ ಕ್ಯಾಟರ್ಪಿಲ್ಲರ್ ಹುಳಗಳ ಕಾಟ ಮತ್ತೆ ಹಲವೆಡೆ ಕಾಣಿಸಿಕೊಂಡಿದೆ. 2005ರಲ್ಲಿ ಪಡುಬಿದ್ರಿ, ಮೂಲ್ಕಿ ಭಾಗ, 2016-17ರಲ್ಲಿ ಮುಡಿಪು, ಕಲ್ಲಾಪು, ತಲಪಾಡಿ ಹಾಗೂ ಕೇರಳದ ಗಡಿ ಪ್ರದೇಶದಲ್ಲಿ ಈ ರೋಗ ಹರಡಿತ್ತು. ಬಳಿಕ ಅಲ್ಲಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿದೆ. ಈ ಬಾರಿ ಮಂಗಳೂರು ನಗರದಲ್ಲಿ ವ್ಯಾಪಕವಾಗಿದ್ದು, ಮರಗಳ ಗರಿ 2 ತಿಂಗಳುಗಳಿಂದ ಒಣಗುತ್ತಿರು ವುದನ್ನು ಕಂಡು ಜನ ಗಾಬರಿಗೊಂಡಿದ್ದಾರೆ. ನಗರದ ಅಶೋಕನಗರ, ಮಲರಾಯ ರೋಡ್, ಚಿಲಿಂಬಿಯ ಕೆಲವೆಡೆ ಇಡೀ ತೆಂಗಿನ ಮರಗಳೇ ಒಣಗಿ ಹೋಗಿವೆೆ. ಜಿಲ್ಲೆಯ ಇತರೆಡೆಗಳಲ್ಲಿ ವ್ಯಾಪಕವಾಗಿ ಹರಡಿಲ್ಲವಾದರೂ ಕೆಲವೊಂದು ಕಡೆ ಸಣ್ಣ ಪ್ರಮಾಣದಲ್ಲಿ ಇದು ಕಂಡು ಬರುತ್ತಿದೆ.
ಗರಿಗಳ ಅಡಿಭಾಗದಲ್ಲಿ ಹುಳಗಳು ಸೇರಿಕೊಂಡು ದೊಡ್ಡ ಸಂಖ್ಯೆಯಲ್ಲಿ ವೃದ್ಧಿಸುತ್ತಾ ಗರಿಗಳನ್ನಿಡೀ ತಿಂದು ನಾಶ ಮಾಡುತ್ತವೆ. ಗರಿಗಳಲ್ಲಿ ಹರಿತ್ತು ಇಲ್ಲದೆ ಒಣಗಿಹೋಗುತ್ತವೆ. ಇಡೀ ಮರವೇ ಸಾಯುವಂತೆ ಕಾಣುತ್ತದೆ.
ಸ್ಥಳೀಯರು ಇದನ್ನು ನುಸಿರೋಗ ಇರಬಹುದು ಎಂದು ಅಂದಾಜಿಸಿದ್ದರು. ಆದರೆ ಈ ಬಗ್ಗೆ “ಉದಯವಾಣಿ’ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿದಾಗ ಇದು “ಬ್ಲ್ಯಾಕ್ಹೆಡೆಡ್ ಕ್ಯಾಟರ್ಪಿಲ್ಲರ್’ ಹುಳಗಳ ತೊಂದರೆ ಎನ್ನುವುದು ಸ್ಪಷ್ಟಗೊಂಡಿದೆ.
ಈ ಹುಳಗಳ ಬಾಧೆ ಬೇಸಗೆಯಲ್ಲಿ ಗರಿಷ್ಠವಾಗಿದ್ದು, ಮಳೆ ಆರಂಭವಾದಾಗ ಕಡಿಮೆ ಯಾಗುತ್ತದೆ. ಹಾಗಾಗಿ ಕೃಷಿಕರೂ ಇದನ್ನು ತಿಳಿಸುವುದಿಲ್ಲ ಎನ್ನುವುದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಹೇಳಿಕೆ.
ಜೈವಿಕ ನಿಯಂತ್ರಣ ವಿಧಾನ
ಈ ಹಿಂದೆ ಮುಡಿಪು, ಕಲ್ಲಾಪು ಭಾಗದಲ್ಲಿ ಈ ರೋಗ ವ್ಯಾಪಕವಾದಾಗ ಸಿಪಿಸಿಆರ್ಐ ವಿಜ್ಞಾನಿಗಳು ರೋಗ ನಿಯಂತ್ರಣಕ್ಕೆ ಜೈವಿಕ ವಿಧಾನ ಕಂಡುಕೊಂಡಿದ್ದು, ಬಹುತೇಕ ಯಶಸ್ವಿಯಾಗಿದೆ. ಗೊನಿಯೋಜಸ್ ನೆಫೆಂಟಿಡಿಸ್ ಎನ್ನುವ ಚಿಟ್ಟೆ ಮಾದರಿಯ ಕೀಟಗಳನ್ನು ಬ್ಲ್ಯಾಕ್ಹೆಡೆಡ್ ಕ್ಯಾಟರ್ಪಿಲ್ಲರ್ ಬಾಧೆ ಇರುವ ತೋಟಗಳಿಗೆ ಬಿಡಲಾಗುತ್ತದೆ. ಈ ಕೀಟಗಳು ಕ್ಯಾಟರ್ಪಿಲ್ಲರ್ ಲಾರ್ವಾಗಳ ಮೇಲೆ ಮೊಟ್ಟೆ ಇಡುತ್ತವೆ. ಮರಿಯಾದ ಬಳಿಕ ಅವು ಗಳೇ ಕ್ಯಾಟರ್ಪಿಲ್ಲರ್ಗಳನ್ನು ತಿನ್ನುತ್ತವೆ. ಈ ಮೂಲಕ ರೋಗ ನಿಯಂತ್ರಣವಾಗುತ್ತದೆ.
ಈ ವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದರೂ ಅಲ್ಲಲ್ಲಿಂದ ರೋಗದ ಬಗ್ಗೆ ಇಲಾಖೆಗೆ ದೂರುಗಳು ಬರುತ್ತಲೇ ಇವೆ. ಎಲ್ಲೆಲ್ಲಿ ಕಾಣಿಸಿಕೊಳ್ಳುತ್ತದೋ ಅಲ್ಲೆಲ್ಲ ರೋಗ ನಿಯಂತ್ರಕ ಕೀಟಗಳನ್ನು ಬಿಡಲಾಗುತ್ತಿದೆ. ಈ ಕೀಟಗಳನ್ನು ಬಂಟ್ವಾಳ ತಾಲೂಕು ತುಂಬೆಯಲ್ಲಿ ಉತ್ಪಾದಿಸಲಾಗುತ್ತದೆ.
ಇಳುವರಿ ನಷ್ಟ
ವಿಜ್ಞಾನಿಗಳ ಪ್ರಕಾರ ಇಡೀ ಮರ ಒಣಗಿ ಹೋಗಿ ಸಾಯುವಂತೆ ಕಂಡರೂಮರಗಳು ಮತ್ತೆ ಜೀವ ಪಡೆಯುವ ಸಾಮರ್ಥ್ಯ ಹೊಂದಿವೆ. ಬೇಸಗೆಯಲ್ಲಿ ಕೀಟಗಳು ಬಹಳ ಬೇಗ ಸಂತಾನಾಭಿವೃದ್ಧಿ ಮಾಡಿಕೊಂಡು ಹರಡುತ್ತವೆ. ಮಳೆ ಜೋರಾಗಿ ಬರಲಾರಂಭಿಸಿ ದಾಗ ನಿಯಂತ್ರಣಕ್ಕೆ ಬರುತ್ತದೆ.
ಆದರೆ ಸಮಸ್ಯೆ ಎಂದರೆ ಇಡೀ ಮರದ ಗರಿಗಳೆಲ್ಲವೂ ಬಿದ್ದು ಹೋಗಿ ಹೊಸದು ಬರುವುದಕ್ಕೆ ವರ್ಷಗಳೇ ಬೇಕಾಗಬಹುದು. ಗರಿಗಳಿಲ್ಲದ ಕಾರಣ ಹೂಬಿಡುವುದಿಲ್ಲ, ಬಿಟ್ಟರೂ ಕಾಯಿ ನಿಲ್ಲುವುದಿಲ್ಲ. ಸಾಕಷ್ಟು ಪೋಷಕಾಂಶವನ್ನು ಮರಕ್ಕೆ ನೀಡಬೇಕಾಗುತ್ತದೆ.