ಧರ್ಮಸ್ಥಳದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಕಳವಳ ಮೂಡಿಸುತ್ತಿದೆ. ಧರ್ಮಸ್ಥಳ ಎನ್ನುವುದು ಕೇವಲ ಒಂದು ಊರಲ್ಲ, ಅದು ನಮ್ಮ ನಂಬಿಕೆ, ಅದು ನಮ್ಮ ಭಕ್ತಿಯ ಕ್ಷೇತ್ರ. ಪರಂಪರೆ, ಅಲ್ಲಿಗೆ ನಡೆದುಕೊಳ್ಳುವುದು ನಮ್ಮ ಪೂರ್ವ ಹಿರೀಕರಿಂದ ಬಂದ ಪರಂಪರೆ. “ಎಸ್ಐಟಿ ತನಿಖೆ” ನೆಪದಲ್ಲಿ ಶ್ರದ್ಧಾ ಕೇಂದ್ರದ ಮೂಲ ಸ್ಥಾನದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಗೊಂದಲ ಸೃಷ್ಟಿಸುವ ದುಷ್ಕೃತ್ಯ ಖಂಡನೀಯ. ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ನಡೆಯುತ್ತಿದೆ. ಸರ್ಕಾರವಾಗಲಿ, ಸಚಿವರಾಗಲಿ, ಎಸ್ಐಟಿ ಮುಖ್ಯಸ್ಥರಾಗಲಿ ಬುರುಡೆ ಪ್ರಕರಣದ ಕುರಿತು ಇದುವರೆಗೂ ಅಧಿಕೃತ ಮಾಹಿತಿ ಸಾರ್ವಜನಿಕವಾಗಿ ಹಂಚಿಕೊಂಡಿಲ್ಲ.

ಹೀಗಿರುವಾಗ ಕೆಲವೊಂದು ಮಾಧ್ಯಮಗಳು, ಯೂಟ್ಯೂಬರ್ಗಳು “ಹೆಣದ ರಾಶಿ, ಮೂಳೆಯ ರಾಶಿ, 10 ಹೆಣ, ನೂರಾರು ಶವ, ಧರ್ಮಸ್ಥಳ ಗಢಗಢ, 13 ನೇ ಗುಂಡಿಯಲ್ಲಿ ಹತ್ತಾರು ಶವ, ಧರ್ಮಸ್ಥಳ ಕರ್ಮಸ್ಥಳ, ದೇವಸ್ಥಾನಕ್ಕೆ ಬರಬೇಡಿ ಕೊಲೆಯಾಗುತ್ತೀರಿ, ಅತ್ಯಾಚಾರವಾಗುತ್ತೀರಿ, ಹೆಂಗಸಿನ ಶವ ಪತ್ತೆ, ಬಾಲಕಿಯ ಶವ ಪತ್ತೆ” ಎಂದೆಲ್ಲಾ ನಿರಂತರವಾಗಿ ಸುಳ್ಳು ಮಾಹಿತಿ ಪಸರಿಸುವ ಮೂಲಕ ನಮ್ಮ ಧಾರ್ಮಿಕ ನಂಬಿಕೆಯನ್ನು ಕೆಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಸರ್ಕಾರ ಇದನ್ನು ನಿಯಂತ್ರಿಸದ ಕಾರಣ ದೇವಸ್ಥಾನದ ಭಕ್ತರು ಆಕ್ರೋಶಗೊಂಡಿದ್ದಾರೆ. ನಿರಂತರವಾಗಿ ಸುಳ್ಳು ಸುದ್ದಿ ಹಬ್ಬಿಸಿ ಭಕ್ತರಲ್ಲಿ ಭಯ, ಅಪನಂಬಿಕೆ ಹುಟ್ಟಿಸುವವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು. ಈಗ ಧರ್ಮಸ್ಥಳದ ಭಕ್ತರು, ಸ್ಥಳೀಯರು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ನಿಂತಿದ್ದಾರೆ, ಇದೇ ರೀತಿಯ ಪರಿಸ್ಥಿತಿ ಮುಂದುವರೆದಲ್ಲಿ ಹಿಂದೂ ಸಮಾಜವೇ ಇದರ ವಿರುದ್ಧ ನಿಲ್ಲಲಿದೆ. ಇದು ಸರ್ಕಾರಕ್ಕೆ ಅಪಾಯದ ಕರೆಗಂಟೆ ಎಂದು ಭಾವಿಸಿ, ಎಸ್ಐಟಿ ತನಿಖೆಯನ್ನು ಶೀಘ್ರ ಮತ್ತು ನಿಷ್ಪಕ್ಷಪಾತವಾಗಿ ನಡೆಸಿ ಯಾವುದೇ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಈ ಮೂಲಕ ಆಗ್ರಹಿಸುತ್ತೇನೆ.
ಬರಹ : ಗುರುರಾಜ್ ಶೆಟ್ಟಿ ಗಂಟಿಹೊಳೆ