ಗ್ರಾಹಕರ ವಿಶ್ವಾಸ ಗಳಿಸಲು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪಾರದರ್ಶಕ ಆಡಳಿತ ಅತಿ ಮುಖ್ಯ. ಸಾಲ ಪಡೆದ ಗ್ರಾಹಕರೂ ಸಹ ಸಕಾಲಕ್ಕೆ ಸಾಲ ಮರುಪಾವತಿ ಮಾಡಿದರೆ ಬ್ಯಾಂಕ್ ಪ್ರಗತಿ ಹೊಂದುವುದಲ್ಲದೇ ಇನ್ನೂ ಹೆಚ್ಚಿನ ಗ್ರಾಹಕರಿಗೆ ಸಾಲ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ದಾವಣಗೆರೆಯ ಡಾ. ಶಾಮ ಸುಂದರ ಶೆಟ್ಟಿ ಬಂಟರ ಭವನದಲ್ಲಿ ಆಯೋಜಿಸಿದ್ದ ಕರಾವಳಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ರಜತ ಮಹೋತ್ಸವ ಹಾಗೂ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರಿ ಸಂಘ ಅಥವಾ ಬ್ಯಾಂಕ್ 25 ವರ್ಷಗಳ ಸುದೀರ್ಘ ಕಾಲ ನಡೆದುಕೊಂಡು ಬಂದಿರುವುದು ಸಾಮಾನ್ಯದ ಮಾತಲ್ಲ. ಇನ್ನೂ ಅಧಿಕ ಲಾಭ ಗಳಿಕೆಯತ್ತ ಹೆಜ್ಜೆಯನ್ನಿಡಲಿ ಎಂದು ಅವರು ಶುಭ ಹಾರೈಸಿದರು. ಬ್ಯಾಂಕು, ಸಹಕಾರ ಸಂಘಗಳಿಗೆ ಸಾಲಗಾರರೇ ನಿಜವಾದ ಬಂಡವಾಳ. ಉನ್ನತ ಶಿಕ್ಷಣ ವ್ಯಾಸಂಗ ಮಾಡಲಿಚ್ಚಿಸುವ, ಸ್ವಯಂ ಉದ್ಯೋಗ ಮಾಡಲು ಆಸಕ್ತಿ ಹೊಂದಿರುವ ಮಹಿಳೆಯರಿಗೆ ಸಾಲ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಪ್ರಯತ್ನಿಸಬೇಕು. ಪ್ರತಿಯೊಬ್ಬರಿಗೂ ಆರ್ಥಿಕ ಸಾಕ್ಷರತೆ ಬಗ್ಗೆ ಅರಿವು ಮೂಡಿಸಬೇಕೆಂದು ಸಲಹೆ ನೀಡಿದರು.
ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೇವಾ ಕ್ಷೇತ್ರದಲ್ಲಿರುವ ಯಾವುದೇ ವ್ಯಕ್ತಿ ಪ್ರತಿಫಲ ಬಯಸಬಾರದು. ತನ್ನ ಕ್ಷೇತ್ರದ ಮೂಲಕ ಖ್ಯಾತಿಗೊಳಿಸಲು ಸಾಧ್ಯವಿದೆ. ಜನರೇ ಅವರ ಸೇವೆಯನ್ನು ಗುರುತಿಸಿ ಅವಕಾಶ ಕಲ್ಪಿಸಿ ಕೊಡುವಂತಾಗಬೇಕೆಂದರು. ವಿದ್ಯಾರ್ಥಿಗಳು ಕೇವಲ ಮೆಡಿಕಲ್, ಇಂಜಿನಿಯರಿಂಗ್ ಕ್ಷೇತ್ರಕ್ಕೆ ಹೋಗದೆ ನಾಗರಿಕ ಸೇವಾ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಲೆಕ್ಕಪರಿಶೋಧಕರೂ ಆದ ಕರಾವಳಿ ಸಹಕಾರಿಯ ಅಧ್ಯಕ್ಷ ಉಮೇಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತಕ ವರ್ಷದಲ್ಲಿ 71.22 ಲಕ್ಷ ನಿವ್ವಳ ಲಾಭಗಳಿಸಿದ್ದು, ಶೇ.15ರಷ್ಟು ಲಾಭಾಂಶ (ಡಿವಿಡೆಂಟ್) ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. 2023-24ನೇ ಸಾಲಿನ ಅಂತ್ಯಕ್ಕೆ 22, 42,10,366.6 ಠೇವಣಿ ಬಾಬ್ತು ಇದ್ದು, 2024-25 ನೇ ಸಾಲಿನ ಅಂತ್ಯಕ್ಕೆ 21,93,13,679.28ರಷ್ಟು ಇದ್ದು, ಶೇ 2.23 ರಷ್ಟು ಕಡಿಮೆಯಾಗಿದೆ. ಸಾಲ ನೀಡುವಿಕೆಯಲ್ಲಿ 13.35 ರಷ್ಟು ಹೆಚ್ಚಾಗಿರುತ್ತದೆ. ಮುಂಬರುವ ವರ್ಷಗಳಲ್ಲಿ ಸಾಲ ವಿತರಣೆ ಹೆಚ್ಚಿಸಲು ಸರ್ವ ಪ್ರಯತ್ನ ಮಾಡಲಾಗುವುದು. ಎಲ್ಲಾ ವಿವಿಧ ಸಾಲ ವಿತರಣೆಗೆ ಯೋಜನೆ ರೂಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಕಾರ ಭಾರತಿ, ಕರ್ನಾಟಕ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಜಿಲ್ಲಾ ನಿರ್ದೇಶಕ ಎಂ.ಆರ್. ಪ್ರಭುದೇವ್, ರಾಜ್ಯ ಆಡಳಿತ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಶರಣ ಗೌಡ ಜಿ. ಪಾಟೀಲ್, ದಾವಣಗೆರೆ ಚಿತ್ರದುರ್ಗಾ ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಡಾ. ಎಸ್ ಸುರೇಂದ್ರ ಶೆಟ್ಟಿ, ದೂಡಾ ಅಧ್ಯಕ್ಷ ಹಾಗೂ ಬ್ಯಾಂಕಿನ ನಿರ್ದೇಶಕರಾದ ದಿನೇಶ್ ಕೆ ಶೆಟ್ಟಿ, ಉಪಾಧ್ಯಕ್ಷ ಎಸ್ ಸೀತಾರಾಮ್ ಶೆಟ್ಟಿ, ಮಹೇಶ್ ಆರ್ ಶೆಟ್ಟಿ, ನಿರ್ದೇಶಕರಾದ ಸುಭೋದ್ ಎಸ್ ಶೆಟ್ಟಿ, ಜಯಲಕ್ಷ್ಮಿ ಎಸ್ ಶೆಟ್ಟಿ, ವಿಮಲಾ ಎಸ್ ಶೆಟ್ಟಿ, ಲತಿಕಾ ದಿನೇಶ್ ಶೆಟ್ಟಿ, ಡಾ ಅಜಿತ್ ಕುಮಾರ್ ಹೆಗ್ಡೆ, ಮತ್ತಿತರು ಉಪಸ್ಥಿತರಿದ್ದರು. ಸುಭಾಷ್ ಪ್ರಾರ್ಥಿಸಿದರು. ಬ್ಯಾಂಕ್ ನಿರ್ದೇಶಕ ಕೆ ಮೋಹನ್ ದಾಸ್ ಶೆಟ್ಟಿ ಸ್ವಾಗತಿಸಿದರು. ಶ್ರೀಕಾಂತ್ ಭಟ್ ನಿರೂಪಿಸಿದರು.