ಜನ್ಮ ಭೂಮಿಯನ್ನು ತೊರೆದು ಕರ್ಮ ಭೂಮಿಯಲ್ಲೇ ನಮ್ಮ ಅಸ್ಥಿತ್ವವನ್ನು ಕಂಡುಕೊಂಡ ನಾವು ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ ಆಚರಣೆಗಳನ್ನು ಮರೆಯದೇ ನಮ್ಮ ಬಂಟರ ಸಂಘದಲ್ಲಿ ಮಾಡುತ್ತಾ ಬಂದಿದ್ದೇವೆ. ಅದೇ ಪ್ರಕಾರ ನಮ್ಮ ಬಂಟ ಕಲಾವಿದರ ಕೂಡುವಿಕೆಯ ಶ್ರೀ ಮಹಾವಿಷ್ಣು ಕೃಪಾಪೋಷಿತ ಬಂಟ ಯಕ್ಷಕಲಾ ವೇದಿಕೆಯ ವಾರ್ಷಿಕೋತ್ಸವ ಹಾಗೂ ಬಂಟ ದಿನಾಚರಣೆಯನ್ನು ಕೂಡ ಇದೇ ಸಂದರ್ಭ ಮಾಡುತ್ತಿರುವುದು ಕೂಡ ಅರ್ಥಪೂರ್ಣವಾಗಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಧ್ಯಕ್ಷ ಮೋಹನ್ ರೈ ಅವರ ಮುಂದಾಳತ್ವದಲ್ಲಿ ಇಲ್ಲಿ ಉತ್ತಮ ಕಾರ್ಯಕ್ರಮ ನಡೆಯುತ್ತಿದೆ ಎನ್ನಲು ಸಂತೋಷವಾಗುತ್ತಿದೆ. ಇಲ್ಲಿ ಹಿರಿಯ ಕಲಾವಿದ ದಾಮೋದರ ಶೆಟ್ಟಿ ಇರುವೈಲು ಅವರಿಗೆ ಕಣಂಜಾರು ಆನಂದ ಶೆಟ್ಟಿ ಸ್ಮಾರಕ ಪ್ರಶಸ್ತಿ ಹಾಗೂ ಕಪೋಲ್ ವಿದ್ಯಾನಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನ ಡಾ. ರೇಷ್ಮಾ ಅಶೋಕ್ ಹೆಗ್ಡೆ ಅವರಿಗೆ ಪ್ರೇಮ ನಾರಾಯಣ ರೈ ಪ್ರಶಸ್ತಿಯನ್ನು ನೀಡಿರುವುದು ಅರ್ಥಪೂರ್ಣವಾಗಿದೆ. ಇಲ್ಲಿ ಮುಂಡ್ಕೂರು ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನವನ್ನು ಸಾಂಸ್ಕೃತಿಕ ಸಮಿತಿಯವರು ಆಯೋಜಿಸಿದ್ದಾರೆ. ಕಿಕ್ಕಿರಿದ ಸಭಾಗೃಹವನ್ನು ನೋಡುವಾಗ ನಮ್ಮವರ ಶ್ರಮ ಸಾರ್ಥಕ ಎಂದು ಸಂತೋಷವಾಗುತ್ತದೆ ಎಂದು ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ ಅವರು ನುಡಿದರು. ಅವರು ಎ.14 ರಂದು ಬಂಟರ ಸಂಘದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗ್ರಹದಲ್ಲಿ ನಡೆದ ಬಿಸು ಪರ್ಬ ಆಚರಣೆ ಮತ್ತು ಮಹಾವಿಷ್ಣು ಬಂಟ ಯಕ್ಷ ಕಲಾ ವೇದಿಕೆಯ ವಾರ್ಷಿಕೋತ್ಸವ ಹಾಗೂ ಬಂಟ ದಿನಾಚರಣೆ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಮಾತನಾಡಿ, ಹಿಂದೆ ನಾವು ಊರಿನಲ್ಲಿರುವಾಗ ನಮ್ಮ ಆಚರಣೆಗಳನ್ನು ನಡೆಸುತ್ತಿದ್ದೆವು. ನಾವು ಪ್ರತಿಯೊಂದು ಆಚರಣೆಗಳ ಮಹತ್ವವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿದಾಗ ಆಚರಣೆಗಳು ನಶಿಸದೆ ಮುಂದಿನ ಪೀಳಿಗೆಯವರೂ ಅದನ್ನು ಮುನ್ನಡೆಸಿಕೊಂಡು ಬರುತ್ತಾರೆ. ದೇಶ-ವಿದೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿ ಸಾಂಸ್ಕೃತಿಕ ರಂಗದಲ್ಲಿ ಹೆಸರು ಪಡೆದ ಮೋಹನ್ ರೈ ಅವರು ನಮ್ಮ ಬಂಟರ ಸಂಘದಲ್ಲಿ ಅನವರತ ಸೇವೆ ಮಾಡಿದ್ದಾರೆ. ಇಂದು ಇಲ್ಲಿ ದಾಮೋದರ ಶೆಟ್ಟಿ ಇರುವೈಲು ಮತ್ತು ಡಾ. ರೇಷ್ಮಾ ಅಶೋಕ್ ಹೆಗ್ಡೆ ಅವರಿಗೆ ಅರ್ಥ ಪೂರ್ಣ ಸನ್ಮಾನ ನಡೆದಿದೆ. ನಮ್ಮ ನಾಡಿನ ಅಮೂಲ್ಯ ಕಲೆ ಯಕ್ಷಗಾನವನ್ನು ಉಳಿಸಿ ಬೆಳೆಸುವ ಕಾರ್ಯ ಪ್ರಶಂಸನೀಯ. ಬಿಸುಪರ್ಬದ ಶುಭಾಶಯಗಳು ಎಂದರು.
ಇದೇ ಸಂದರ್ಭ ಕಣಂಜಾರು ಆನಂದ ಶೆಟ್ಟಿ ಪ್ರಶಸ್ತಿಯನ್ನು ಸ್ವೀಕರಿಸಿದ ದಾಮೋದರ ಶೆಟ್ಟಿ ಇರುವೈಲು ಅವರು ಮಾತನಾಡಿ, ಯಾರಿಗೆ ಸಂಗೀತ ಮತ್ತು ಕಲೆಯ ಮೇಲೆ ಅಭಿಮಾನ, ಅಭಿರುಚಿ ಇರುತ್ತದೆಯೋ ಅವರಿಗೆ ಮಾನ್ಯತೆ ಪ್ರಾಪ್ತಿಯಗುತ್ತದೆ. ಪ್ರಶಸ್ತಿಯನ್ನು ಸ್ವೀಕರಿಸಿ ಸಂತೋಷವಾಗಿದೆ. ಈ ಸನ್ಮಾನವನ್ನು ನನ್ನ ಆರಾಧ್ಯ ದೇವರು ಇರುವೈಲು ಶ್ರೀ ದುರ್ಗಾಪರಮೇಶ್ವರಿ ಹಾಗೂ ನನ್ನ ತಂದೆ – ತಾಯಿಗೆ ಅರ್ಪಿಸುವೆನು ಎಂದರು.
ಡಾ. ರೇಷ್ಮಾ ಅಶೋಕ್ ಹೆಗ್ಡೆಯವರು ಪ್ರೇಮಾ ನಾರಾಯಣ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿ, ನನ್ನನು ಈ ಪ್ರಶಸ್ತಿಗೆ ಆಯ್ಕೆಗೊಳಿಸಿದ ಜ್ಯೋತಿ ಶೆಟ್ಟಿಯವರಿಗೆ ಕೃತಜ್ಞತೆ ಸಲ್ಲಿಸುವೆನು. ವಿದ್ಯಾರ್ಥಿಗಳಿಗೆ ಜೀವನ ಮಾಡಲು ವಿದ್ಯಾಲಯಗಳು ಪ್ರೇರಣಾದಾಯಕವಾಗಿರುತ್ತದೆ. ತಂದೆ ತಾಯಿ ನಮಗೆ ಮೊದಲ ಗುರುವಾದರೆ, ವಿಧ್ಯೆ ನೀಡುವ ವಿದ್ಯಾ ದೇಗುಲ ನಮಗೆ ಎರಡನೇಯ ಗುರು. ವಿದ್ಯಾ ದೇಗುಲದಲ್ಲಿ ಸೇವೆಗೈಯುತ್ತಾ ಅನೇಕ ಪ್ರಶಸ್ತಿಗಳು ಲಭಿಸಿದೆಯಾದರೂ ಈ ಪ್ರಶಸ್ತಿ ನನಗೆ ಖುಷಿ ನೀಡಿದೆ. ಸಂಸ್ಥೆಗೆ ನನ್ನಿಂದಾದ ಸಹಾಯ ನೀಡಲು ಬದ್ದಳಾಗಿದ್ದೇನೆ. ಎಲ್ಲರಿಗೂ ಬಿಸುಪರ್ಬದ ಶುಭಾಶಯಗಳು ಎಂದರು.
ಸನ್ಮಾನಿತರ ಪರಿಚಯವನ್ನು ಅಶೋಕ್ ಪಕ್ಕಳ ಮತ್ತು ಸುಜಾತಾ ಗುಣಪಾಲ್ ಶೆಟ್ಟಿ ಓದಿದರು.
ಗೌ. ಅತಿಥಿ, ಕೊಹಿನೂರ್ ಪ್ರಿಂಟರ್ಸ್ ನ ಸಿಎಂಡಿ ಸುಧಾಕರ್ ಶೆಟ್ಟಿ ಮುಂಡ್ಕೂರು ಅವರು ಮಾತನಾಡಿ ಬಿಸುಪರ್ಬದ ಈ ಕಾರ್ಯಕ್ರಮಕ್ಕೆ ಬರಬೇಕೆಂದು ರತ್ನಾಕರ ಶೆಟ್ಟಿ ಮುಂಡ್ಕೂರು ಅವರು ನನ್ನನ್ನು ಆಹ್ವಾನಿಸಿದ್ದರು. ಬೇವು ಮತ್ತು ಬೆಲ್ಲದ ಸಿಹಿ – ಕಹಿಯೊಂದಿಗೆ ಎಲ್ಲರ ಜೀವನದ ಅಂಧಕಾರವೂ ತೊಲಗಿ ಜೀವನ ಸುಖಮಯವಾಗಲಿ, ಬಿಸು ಪರ್ಬದ ಶುಭಾಶಯಗಳು ಎಂದರು.
ಇನ್ನೊರ್ವ ಗೌ. ಅತಿಥಿ ಜವಾಬ್ ನ ಅಧ್ಯಕ್ಷ ರಮೇಶ್ ಶೆಟ್ಟಿಯವರು ಮಾತನಾಡಿ, ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ ಆಚರಣೆಗಳನ್ನು ಬಿಂಬಿಸುವ ಕಾರ್ಯಕ್ರಮಗಳು ತವರೂರಿನಲ್ಲಿ ಕಡಿಮೆ ನಡೆಯುತ್ತಿದ್ದು. ಹೊರನಾಡಿನ ಮಹಾನಗರದಲ್ಲಿ ಹೆಚ್ಚಿನ ಮಟ್ಟದಲ್ಲಿ ನಡೆಯಿತ್ತಿದೆ. ಮುಂದಿನ ಪೀಳಿಗೆಗೆ ನಮ್ಮ ಆಚರಣೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ಕಳೆದ 17 ವರ್ಷಗಳಿಂದ ನಾವು ಕಣಂಜಾರು ಆನಂದ ಶೆಟ್ಟಿ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದೇವೆ. ಈ ಪ್ರಶಸ್ತಿಯನ್ನು ನೀಡುವಲ್ಲಿ ನಮಗೆ ಹಿರಿಯ ಯಕ್ಷಗಾನ ಕಲಾವಿದ ಕೆ. ಕೆ. ಶೆಟ್ಟಿ ಮತ್ತು ಹಿರಿಯ ಸಾಹಿತಿ ಡಾ. ಸುನೀತಾ ಶೆಟ್ಟಿಯವರನ್ನು ಸ್ಮರಿಸಲೇ ಬೇಕು. ಮುಂದೆಯೂ ಈ ಪ್ರಶಸ್ತಿಯನ್ನು ನಿರಂತರವಾಗಿ ನೀಡುವೆವು ಎಂದು ಕಣಂಜಾರು ಆನಂದ ಶೆಟ್ಟಿಯವರ ಸಂಬಂಧಿಕರಾದ ರಂಜನಿ ಸುಧಾಕರ ಹೆಗ್ಡೆಯವರು ಹೇಳಿದರು.
ಇದೇ ಸಂದರ್ಭ ಬಂಟರ ವಾಣಿಯ ಅನಾಥ ಆಶ್ರಮ ಪರಿಕಲ್ಪನೆ ಸರಿಯೋ ತಪ್ಪೋ ಎಂಬ ಲೇಖನಗಳನ್ನು ಬರೆದವರನ್ನು ಗೌರವಿಸಲಾಯಿತು.
ಬಂಟರ ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಧ್ಯಕ್ಷ ಮೋಹನ್ ರೈ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಆನಂದ ಶೆಟ್ಟಿಯವರ ಮುಂದಾಳತ್ವದಲ್ಲಿ ಆರಂಭಗೊಂಡಿದ್ದ ಬಂಟಯಕ್ಷ ಕಲಾ ವೇದಿಕೆ ಇದೀಗ ಪ್ರಬುದ್ಧವಾಗಿದೆ. ಈಗ ನಮ್ಮ ಯಕ್ಷ ಕಲಾ ವೇದಿಕೆಯಲ್ಲಿ ವೇಷ ಭೂಷಣ ಹಾಗೂ ಎಲ್ಲಾ ಸಾಮಗ್ರಿಗಳು ನಮ್ಮಲ್ಲೇ ಸಿದ್ಧವಿದೆ. ನಮಗೆ ಯಕ್ಷಗಾನ ಕಾರ್ಯಕ್ರಮವನ್ನು ಮಾಡಲು ಯಾವುದೇ ತೊಂದರೆಯಿಲ್ಲ ಎನ್ನುತ್ತಾ ಕಾರ್ಯಕ್ರಮಕ್ಕೆ ಆಗಮಿಸಿದ ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳೊಂದಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಚಂದ್ರಹಾಸ್ ಕೆ. ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಸುಧಾಕರ ಶೆಟ್ಟಿ ಮುಂಡ್ಕೂರು, ರಮೇಶ್ ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಡಾ. ಆರ್. ಕೆ. ಶೆಟ್ಟಿ, ಸಿಎ ಹರೀಶ್ ಶೆಟ್ಟಿ, ದಿವಾಕರ್ ಶೆಟ್ಟಿ ಇಂದ್ರಾಳಿ, ಮುಂಡಪ್ಪ ಎಸ್. ಪಯ್ಕಡೆ, ಉಮಾಕೃಷ್ಣ ಶೆಟ್ಟಿ, ದಾಮೋದರ ಶೆಟ್ಟಿ ಇರುವೈಲು, ಡಾ. ರೇಷ್ಮಾ ಅಶೋಕ್ ಹೆಗ್ಡೆ, ಮೋಹನ್ ರೈ, ಆದರ್ಶ್ ಶೆಟ್ಟಿ ಹಾಲಾಡಿ ಮೊದಲಾದವರು ಉಪಸ್ಥಿತರಿದ್ದರು.
ಆರಂಭದಲ್ಲಿ ಬಿಸು ಪರ್ಬದ ಬಗ್ಗೆ ನವೀನ್ ಶೆಟ್ಟಿ ಇನ್ನಾ ಬಾಳಿಕೆ ಮಾತನಾಡಿದರು. ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಜಯ ಶೆಟ್ಟಿ ಪ್ರಾರ್ಥನೆ ಹಾಡಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಬಂಟರವಾಣಿಯ ಗೌ. ಸಂಪಾದಕ ಅಶೋಕ ಪಕ್ಕಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಿಕ್ಕಿರಿದ ಸಭಾಗೃಹದಲ್ಲಿ ಸೀತಾನದಿ ಗಣಪಯ್ಯ ಶೆಟ್ಟಿ ವಿರಚಿತ ಶ್ರೀ ಮುಂಡ್ಕೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಸಾದಾರಗೊಂಡು ಸಭಿಕರ ಪ್ರಶಂಸೆಗೆ ಪಾತ್ರವಾಯಿತು. ಕೊನೆಯಲ್ಲಿ ಪ್ರೀತಿ ಭೋಜನ ನಡೆಯಿತು.