ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಅಧ್ಯಕ್ಷರಾಗಿರುವ ಡಾ. ದೀಪಕ್ ರೈ ಅವರು 2000 ನೇ ಇಸವಿಯಲ್ಲಿ ಲಿಬಿಯ ದೇಶಕ್ಕೆ ತೆರಳಿ ಅಲ್ಲಿ ಸರಕಾರಿ ಆಸ್ಪತ್ರೆಯಲ್ಲಿ 2007 ರವರೆಗೆ ವೈದ್ಯರಾಗಿ ಸೇವೆ ಸಲ್ಲಿಸಿದರು. ವಿದೇಶದಲ್ಲಿ ವೈದ್ಯರಿಗೆ ಉತ್ತಮ ಅವಕಾಶಗಳಿದ್ದಾಗಲೂ ಸ್ವದೇಶಕ್ಕೆ ಮರಳಿ ಸರಕಾರಿ ವೈದ್ಯಾಧಿಕಾರಿಯಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕು. ಆರೋಗ್ಯ ಕ್ಷೇತ್ರದಲ್ಲಿ ವಿಶೇಷ ಬದಲಾವಣೆ ತರಬೇಕು ಎನ್ನುವ ಅಭಿಲಾಷೆಯಿಂದ ಪುತ್ತೂರಿನ ತಾಲೂಕು ಆಸ್ಪತ್ರೆಗೆ ಗುತ್ತಿಗೆ ಆಧಾರದ ಮೇಲೆ ಸೇವೆಗೆ ನಿಯೋಜನೆಗೊಂಡರು. ಕಳೆದ 17 ವರ್ಷಗಳಿಂದ ಸರಕಾರಿ ಸೇವೆಯನ್ನು ಮಾಡುತ್ತಿರುವ ದೀಪಕ್ ರೈಯವರು ಕೋವಿಡ್ ಸಂದರ್ಭದಲ್ಲಿ ಪುತ್ತೂರು ತಾಲೂಕಿಗೆ ನೀಡಿದ ಸೇವೆ ಅತ್ಯಂತ ವಿಶೇಷವಾದದ್ದು.
ಪುತ್ತೂರು ಕಡಬ ತಾಲೂಕುಗಳಲ್ಲಿ ಕೋವಿಡ್ ಸಾಂಕ್ರಮಿಕ ರೋಗದ ಹಾವಳಿಯನ್ನು ತಡೆಯುವ ತಂಡದ ಸಾರಥ್ಯವನ್ನು ವಹಿಸಿಕೊಂಡು ಜನಮನ್ನಣೆಗೆ ಪಾತ್ರರಾದರು. ವೈದ್ಯಕೀಯ ಕ್ಷೇತ್ರದಲ್ಲಿ 35 ವರ್ಷಗಳ ಅನುಭವ ಹೊಂದಿರುವ ಡಾಕ್ಟರ್ ದೀಪಕ್ ರೈಯವರು 2021ರ ಜೂನ್ 11ರಂದು ಪುತ್ತೂರು ತಾಲೂಕಿನ ಆರೋಗ್ಯ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ಬೆಂಗಳೂರಿನ ಹೆಬ್ಬಾಳದ ಪಶು ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿದ್ದ ಪುತ್ತೂರು ಕೆದಂಬಾಡಿಯ ಮುಂಡಾಳದ ತಿಮ್ಮಪ್ಪ ರೈ ಮತ್ತು ಅರಿಯಡ್ಕದ ಜಯಂತಿ. ಟಿ .ರೈ ಯವರ ಐದು ಮಕ್ಕಳಲ್ಲಿ ಕೊನೆಯವರಾದ ಡಾ. ದೀಪಕ್ ರೈರವರು ಬೆಂಗಳೂರಿನಲ್ಲಿ 01- 11 -1967ರಲ್ಲಿ ಜನಿಸಿದರು. ಬೆಂಗಳೂರಿನಲ್ಲಿ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಿಕ್ಷಣವನ್ನು ಮುಗಿಸಿದ ಇವರು ಬೆಂಗಳೂರು ವೈದ್ಯಕೀಯ ವಿಶ್ವವಿದ್ಯಾನಿಲಯದಿಂದ ಎಂಬಿಬಿಎಸ್ ಪದವಿಯನ್ನು 1990ರಲ್ಲಿ ಪಡೆದರು. 1998 ರಲ್ಲಿರಷ್ಯಾದ ರುಸ್ತೋವು ವಿಶ್ವವಿದ್ಯಾನಿಲಯದಿಂದ ಎಂ. ಎಸ್ ಪದವಿಯನ್ನು ಯುರೋಲಜಿ (ಮೂತ್ರ ಶಾಸ್ತ್ರ )ಯಲ್ಲಿ ಪಡೆದರು. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಬಳಿಕ 1999ರಲ್ಲಿ ಮಂಗಳೂರಿನ ಇಎಸ್ಐ ಆಸ್ಪತ್ರೆಗೆ ಸೇರಿ ಅಲ್ಲಿ ಒಂದು ವರುಷ ಸೇವೆ ಸಲ್ಲಿಸಿದರು. ನಂತರ ವಿದೇಶಕ್ಕೆ ತೆರಳಿ 2007ರವರೆಗೆ ಅಲ್ಲಿ ಸರಕಾರಿ ವೈದ್ಯರಾಗಿ ಸೇವೆ ಸಲ್ಲಿಸಿ ನಂತರ ಗುತ್ತಿಗೆ ಆಧಾರದಲ್ಲಿ ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ಬಳಿಕ 2012ರಿಂದ ಕಾಣಿಯೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ, 2016ರಿಂದ 2021ರವರೆಗೆ ಪಾಲ್ತಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಖ್ಯಾತ ಯುರಾಲಜಿಸ್ಟ್ ಆಗಿರುವ ಡಾ. ದೀಪಕ್ ರೈ ಅವರು ಪುರುಷರಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವುದರಲ್ಲಿ ವಿಶೇಷ ಪರಿಣಿತ ವೈದ್ಯರಾಗಿದ್ದಾರೆ. ಆಗ ಕರೆಂಟ್ ಆಪರೇಷನ್ (ಶಸ್ತ್ರಾಸ್ತ್ರಗಳಿಲ್ಲದೆ ಮಾಡುವ ಸರ್ಜರಿ ) ಮಾಡುವುದರಲ್ಲಿ ಜಿಲ್ಲೆಯಲ್ಲಿ ವಿಶೇಷ ಪರಿಣಿತಿ ಪಡೆದ ಒಬ್ಬರೇ ಡಾಕ್ಟರ್ ಎಂಬ ಕಾರಣಕ್ಕೆ ಇವರಿಗೆ 2016ರಲ್ಲಿ ವಿಶೇಷ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ದೀಪಕ್ ರೈಯವರು ವೈದ್ಯಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಮಾಜಿಕ ಕ್ರೀಡಾ ಚಟುವಟಿಕೆಗಳಲ್ಲಿ ಶ್ರದ್ಧೆಯುಳ್ಳವರಾಗಿದ್ದು ಪುತ್ತೂರು ಮರೀಲ್ ನಲ್ಲಿರುವ ದಿ ಪುತ್ತೂರು ಕ್ಲಬ್ ನ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. 2012ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕ್ಲಬ್ ಜನತೆಯ ಆರೋಗ್ಯ, ಕ್ರೀಡೆ, ಸಾಮಾಜಿಕ ಕಳಕಳಿಯಿಂದ ಸೇವೆ ನೀಡುತ್ತಿದೆ. 2016 ರಿಂದ ಬಲೇ ಬಲಿಪುಗ ಎನ್ನುವ ಮಿನಿ ಮ್ಯಾರಥಾನ್ ಆಯೋಜಿಸಿಕೊಂಡು ಬರುತ್ತಿದ್ದು ಕ್ರೀಡಾ ಸ್ಪರ್ಧೆಗಳು, ಬಡ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚ ಭರಿಸುವುದು, ವಿದ್ಯಾರ್ಥಿಗಳಿಗೆ ಪುಸ್ತಕ, ಸ್ಕೂಲ್ ಯೂನಿಫಾರ್ಮ್ ನೀಡುವುದು ಇತ್ಯಾದಿ ಹತ್ತು ಹಲವು ಸಾಮಾಜಿಕ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಸಿರಿ ಬಾಗಿಲಿನಲ್ಲಿ ನೂರು ಶೇಕಡ ವ್ಯಾಕ್ಸಿನೇಷನ್ ಮಾಡಿದ ಮಾಹಿತಿ ತಿಳಿದು ಅಂತರಾಷ್ಟ್ರೀಯ ಚಾನೆಲ್ CNN18 ಇವರ ನೇರ ಸಂದರ್ಶನ ಮಾಡಿದ್ದರು. ಕೋವಿಡ್ ಸಂದರ್ಭದಲ್ಲಿ ಇವರು ನೀಡಿದ ವಿಶೇಷ ಸೇವೆಯನ್ನು ಗಮನಿಸಿ ರೋಟರಿ, ಶಿಕ್ಷಣ ಇಲಾಖೆ ಹೀಗೆ ಹತ್ತು ಹಲವು ಸಂಘ ಸಂಸ್ಥೆಗಳು ಇವರನ್ನು ಅತ್ಯುತ್ತಮ ಆರೋಗ್ಯ ಅಧಿಕಾರಿ ಎಂದು ಗೌರವಿಸಿವೆ.
ಸದ್ಯ ಪುತ್ತೂರಿನ ತೆಂಕಿಲ ಬೈಪಾಸ್ ಬಳಿ ಪತ್ನಿ ವಜ್ರ ರೈ, ಪುತ್ರರಾದ ಶೌನಕ್ ರೈ, ವರ್ಧನ್ ರೈ ಜೊತೆಗೆ ಸಂತೃಪ್ತ ಜೀವನ ನಡೆಸುತ್ತಿರುವ ಡಾಕ್ಟರ್ ದೀಪಕ್ ರೈ ಅವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರ ಗಳು ಸಂದಿವೆ. ಅವು ಈ ಕೆಳಗಿನಂತಿವೆ. :
ಪುತ್ತೂರು ತಾಲೂಕಿನ 2021 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ಸಂದಿದೆ. ಬೆಳಂದೂರು ಗ್ರಾಮ ಪಂಚಾಯಿತಿ ಇವರನ್ನು ಉತ್ತಮ ವೈದ್ಯಾಧಿಕಾರಿ ಎಂದು ಗುರುತಿಸಿ ಗೌರವಿಸಿದೆ. ಐ ಎಂ ಎ ಪುತ್ತೂರು ಮತ್ತು ಬಂಟರ ಸಂಘ ಪುತ್ತೂರು ಇವರ ಸೇವೆಯಲ್ಲಿನ ದಕ್ಷತೆ ಕಂಡು ಗೌರವಿಸಿದೆ. ಸುದ್ದಿ ಸಂಸ್ಥೆಯು ಆಯೋಜಿಸಿದ್ದ ಜನ ಮೆಚ್ಚಿದ ಅಧಿಕಾರಿ ಸಿಬ್ಬಂದಿ ಆನ್ಲೈನ್ ವೋಟಿಂಗ್ನಲ್ಲಿ ಜನ ಮೆಚ್ಚಿದ ಅಧಿಕಾರಿಯಾಗಿ ಜನರಿಂದ ಆರಿಸಲ್ಪಟ್ಟಿರುವುದು ಇವರ ನಿಸ್ವಾರ್ಥ ಸೇವೆಗೆ ಸಂದ ಗೌರವ ಎಂದೇ ತಿಳಿಯಬೇಕಾಗಿದೆ.
ಸೇವೆಯಲ್ಲಿ ಸಾರ್ಥಕ ಕಂಡಿರುವ ಡಾ.ದೀಪಕ್ ರೈ ಅವರ ಬದುಕು ಸಮೃದ್ಧವಾಗಲಿ ಎಂಬ ಹಾರೈಕೆ ನಮ್ಮದು.