ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಶ್ರೀ ಆರ್. ಉಪೇಂದ್ರ ಶೆಟ್ಟಿ ಅವರ ಕನಸಿನ ಕೂಸು. ಶಿಕ್ಷಣ ಕ್ಷೇತ್ರದಲ್ಲಿ ಅವರ ಸೇವೆಯ ಸಂಪೂರ್ಣ ಚಿತ್ರಣವನ್ನು ನೀಡುವ ಸಂಸ್ಥೆಯಲ್ಲಿ 7000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಪದವಿ ಪೂರ್ವ, ಪದವಿ ಶಿಕ್ಷಣವನ್ನು ಇಲ್ಲಿ ಮುಗಿಸುವ ವಿದ್ಯಾರ್ಥಿಗಳು ಐ.ಎಸ್, ಐ.ಪಿ.ಎಸ್, ಕೆ.ಎಸ್, ಕೆ.ಪಿ.ಎಸ್.ಸಿ, ಯು.ಪಿ.ಎಸ್.ಸಿ, ಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪದವಿ ಪೂರ್ವ ಹಂತದಿಂದಲೇ ತರಬೇತಿಯನ್ನು ಪಡೆಯುವ ಅನುಕೂಲತೆಗಳು ಇಲ್ಲಿವೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ರೂಪಿಸುವ, ಅವರ ಸೃಜನ ಸಾಮರ್ಥ್ಯವನ್ನು ಗುರುತಿಸುವ ವ್ಯಕ್ತಿತ್ವವನ್ನು ರೂಪಿಸುವ ಹಿನ್ನೆಲೆಯಲ್ಲಿ ನಿರಂತರ ತರಬೇತಿಗಳು ನಡೆಯುತ್ತಿರುತ್ತವೆ.
ಇಲ್ಲಿನ ಪಠ್ಯಕ್ರಮಗಳು ಕೂಡ ಇವುಗಳಿಗೆ ಪೂರಕವಾಗಿ ಇರುವಂತದ್ದು ಗಮನಿಸಬೇಕಾದ ಅಂಶ. UCC ಯು IAS/IPS /IFS ಗಾಗಿ ತರಗತಿಯ ತರಬೇತಿ ಮತ್ತು ಮಾರ್ಗದರ್ಶನವನ್ನು ಪದವಿಯ ನಂತರದಲ್ಲಿ ನೀಡುತ್ತದೆ. USA ಒಂದು ಇಂಟಿಗ್ರೇಟೆಡ್ ಕೋರ್ಸ್ ಆಗಿದ್ದು ಇದು ಪದವಿ ಮತ್ತು ಸಿವಿಲ್ ಸೇವೆಗಳ ವಿಶಿಷ್ಟ ಮಿಶ್ರಣವಾಗಿದೆ. ಈ ಹಂತದಲ್ಲಿ ವಿದ್ಯಾರ್ಥಿಗಳು BA, B.COM, BA, LLB (5 ವರ್ಷದ ಕೋರ್ಸ್ ) ಮುಗಿಸುವುದರ ಜೊತೆಗೆ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯಗಳಿಗೆ ಹೊಳಪು ನೀಡಿ ವ್ಯಕ್ತಿತ್ವವನ್ನು ವಿಕಸನಗೊಳಿಸಿ ಸಿವಿಲ್ ಸರ್ವಿಸ್ ಪರೀಕ್ಷೆಗಳಲ್ಲಿ ಮೊದಲ 10 ಸ್ಥಾನಗಳನ್ನು ಪಡೆಯುವ ಅರ್ಹತೆ ಗಳಿಸುತ್ತಾರೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ರಚನಾತ್ಮಕ ಕಾರ್ಯಕ್ರಮಗಳನ್ನು ಹಾಕಿ ಕೊಡುವುದು ಇಲ್ಲಿಯ ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ. ದಕ್ಷಿಣ ಭಾರತದಲ್ಲಿ ಮೊದಲನೆಯದಾಗಿರುವ ಈ ಶಿಕ್ಷಣ ಸಂಸ್ಥೆಯು ಕರ್ನಾಟಕದ ವಿವಿಧ ಮೂಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಅವರ ಗುರಿಯನ್ನು ತಲುಪುವುದಕ್ಕೆ ಮಾರ್ಗದರ್ಶನ ನೀಡುತ್ತದೆ. ನಾಯಕತ್ವ, ಮಾನವ ಹಕ್ಕುಗಳು, ಸಮಸ್ಯೆಗಳ ನಿರ್ವಹಣೆ ಪರಿಸರ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಆನ್ಲೈನ್ ಕೋರ್ಸುಗಳನ್ನು ಈ ಸಂಸ್ಥೆಯು ಆಯೋಜಿಸುತ್ತಿದ್ದು ಇದರ ಪ್ರಯೋಜನವನ್ನು ಎಲ್ಲಾ ವಯೋಮಾನದ ನಾಗರಿಕರು ಪಡೆಯುವ ಅನುಕೂಲವಿದೆ. ಇಲ್ಲಿನ ಶಿಕ್ಷಣ ಕ್ರಮವು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆಗಳನ್ನು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಮಾಡಿಕೊಡುವುದು ಮಾತ್ರವಲ್ಲದೆ ರಾಷ್ಟ್ರದ ನಾಗರೀಕರಿಗೆ ಇರಬೇಕಾದ ನೈತಿಕ ಜವಾಬ್ದಾರಿಗಳನ್ನು ಪರಿಚಯಿಸುತ್ತದೆ. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯನ್ನು ಮಾನದಂಡವಾಗಿರಿಸಿಕೊಂಡ ಸಂಸ್ಥೆಯ ಧ್ಯೇಯವು ದೇಶದ ನೀತಿ ನಿರ್ಮಾಣಕ್ಕೆ ಕೊಡುಗೆ ನೀಡಬಲ್ಲ ವಿಮರ್ಶಾತ್ಮಕ ಮನಸ್ಸು ಮತ್ತು ಬದಲಾವಣೆಯೊಂದಿಗೆ ಸ್ಪರ್ಧಿಸಬಲ್ಲ ಪೀಳಿಗೆಯನ್ನು ಸಿದ್ಧಗೊಳಿಸುವುದಾಗಿದೆ.
ಸಂಸ್ಥೆಯ ಪ್ರಮುಖ ಶಕ್ತಿಗಳೆಂದರೆ ಇಲ್ಲಿನ ಸಮರ್ಥ ಅಧ್ಯಾಪಕರು ಮತ್ತು ಅತ್ಯಾಧುನಿಕ ಮೂಲಸೌಕರ್ಯಗಳು. ಇಲ್ಲಿನ ಅಧ್ಯಾಪಕರ ಗರಡಿಯಲ್ಲಿ ಪಳಗಿದ ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಆರೋಗ್ಯಕರ ಜೀವನಕ್ಕೆ ಅವಶ್ಯಕವಾದ ನಿರಂತರ ಜೀವನೋತ್ಸವವನ್ನು ಉಳಿಸಿಕೊಳ್ಳುವ ಅಭಿಲಾಷೆ ಉಳ್ಳವರಾಗಿರುತ್ತಾರೆ. ಸಂಸ್ಥೆಯ ದೊಡ್ಡ ಶಕ್ತಿ ಎಂದರೆ ಇಲ್ಲಿನ ಗ್ರಂಥಾಲಯ. ಉನ್ನತ ಶಿಕ್ಷಣದ ಸಂಶೋಧನೆಯಲ್ಲಿ ಸ್ವಂತಿಕೆ ಕೇಳಿಸುತ್ತಿರುವ ಈ ಹೊತ್ತು ವಿದ್ಯಾರ್ಥಿಗಳು ಜಗತ್ತಿನ ಸವಾಲುಗಳನ್ನು ಎದುರಿಸಿ ಗುರಿಯತ್ತ ಸಾಗಲು ಪೂರಕವಾದ ನಿರಂತರ ಮೌಲ್ಯಮಾಪನವನ್ನು ಸಂಸ್ಥೆಯ ಆಡಳಿತ ತಂಡ ಮತ್ತು ಅನುಭವಿ ಅಧ್ಯಾಪಕರು ಮಾಡುತ್ತಿರುತ್ತಾರೆ. ಗ್ರಂಥಾಲಯವು ಈ ಹಿನ್ನೆಲೆಯಲ್ಲಿ ಪೂರಕ ಸವಲತ್ತುಗಳನ್ನು ಒದಗಿಸಿ ಕೊಡುತ್ತದೆ.
“ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಲು ತೀವ್ರವಾದ ಆಸಕ್ತಿಗಳನ್ನು ಹುಟ್ಟು ಹಾಕಬೇಕು” ಎನ್ನುವ ಆರ್. ಉಪೇಂದ್ರ ಶೆಟ್ಟಿಯವರು ಪ್ರತಿ ವಿದ್ಯಾರ್ಥಿಯಲ್ಲಿರುವ ಸೃಜನ ಸಾಮರ್ಥ್ಯವನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಅಧ್ಯಾಪಕರ ಜವಾಬ್ದಾರಿ ಎಂದು ಬಯಸುತ್ತಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಗ್ರಂಥಾಲಯಗಳಲ್ಲಿ ಸುಲಭ ಲಭ್ಯವಾಗುವ ಪುಸ್ತಕಗಳು ವಚನಾಲಯ ವ್ಯವಸ್ಥೆ ಗಮನಾರ್ಹವಾಗಿವೆ.
ಆರೋಗ್ಯಕರ ಪರಿಸರ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯ. ಯೂನಿವರ್ಸಲ್ ಇನ್ಸ್ಟಿಟ್ಯೂಟ್ ನ ವಿಶೇಷತೆ ಏನೆಂದರೆ ಇಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಎನ್.ಸಿ.ಸಿ, ಅತ್ಯುತ್ತಮ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ವಸತಿ ನಿಲಯಗಳು, ಇಲ್ಲಿನ ಕ್ಯಾಂಪಸ್ ನಲ್ಲಿ ಎಲ್ಲಾ ವಿದ್ಯಾರ್ಥಿಗಳ ದೈಹಿಕ ಮತ್ತು ಆ ಮಾನಸಿಕ ಯೋಗ ಕ್ಷೇಮವನ್ನು ಉತ್ತೇಜಿಸಲು ಸಾಕಷ್ಟು ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಕ್ರೀಡೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಸಂಯಮ, ಸಮಯಪ್ರಜ್ಞೆ, ಶಿಸ್ತು ಕಲಿಸುತ್ತದೆ. ತಂಡದೊಂದಿಗೆ ವ್ಯವಹರಿಸುವುದರಿಂದ ನಾಯಕತ್ವ ಗುಣವನ್ನು ವಿದ್ಯಾರ್ಥಿಗಳು ರೂಪಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳಲ್ಲಿ ಲಿಂಗ ಸಮಾನತೆಯನ್ನು ಮೈಗೂಡಿಸಿಕೊಳ್ಳುವ ಅವಶ್ಯಕತೆಯನ್ನು ಮನಗಾಣಿಸುವುದು ಇಲ್ಲಿನ ಎಲ್ಲಾ ಚಟುವಟಿಕೆಗಳಲ್ಲಿ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಇಲ್ಲಿ ತಮ್ಮ ಆಸಕ್ತಿಗೆ ಅನುಗುಣವಾಗಿ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಬಾಸ್ಕೆಟ್ ಬಾಲ್ , ಚೆಸ್, ವಾಲಿಬಾಲ್ ಇತ್ಯಾದಿ ಆಟ ಗಳನ್ನು ಆಡುತ್ತಾರೆ. ಇಲ್ಲಿ ಅವರು ಬದುಕಿನ ಸಾಮರಸ್ಯದ ಮೌಲ್ಯಗಳನ್ನು ಕಲಿಯುತ್ತಾರೆ. ಇಲ್ಲಿನ ಸಾಂಸ್ಕೃತಿಕ ಕೇಂದ್ರವು ದೇಶದ ಉದ್ದಗಲದಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಅವರ ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸುವ ಮತ್ತು ತಮ್ಮಂತೆ ಇತರರ ಸಾಂಸ್ಕೃತಿಕ ವೈವಿಧ್ಯತೆಯತೆಯನ್ನು ತಿಳಿಯುವ, ಗೌರವಿಸುವ ಮುಖ್ಯ ವೇದಿಕೆಯಾಗಿ ಅವರ ವೈಚಾರಿಕ ಪ್ರಜ್ಞೆಯನ್ನು ವಿಸ್ತರಿಸುವ ವೇದಿಕೆಯಾಗಿದೆ ಮಾತ್ರವಲ್ಲದೆ ವಿದ್ಯಾರ್ಥಿಗಳ ಏಕತಾನತೆಯನ್ನು ಕಳೆಯುವ ಮನರಂಜಿಸುವ ವೇದಿಕೆಯಾಗಿಯೂ ಗಮನ ಸೆಳೆಯುತ್ತದೆ.
ಯೂನಿವರ್ಸಲ್ ಇನ್ಸ್ಟಿಟ್ಯೂಶನ್ ನ ಮುಖ್ಯ ಆಕರ್ಷಣೆ ಎಂದರೆ ಇಲ್ಲಿನ ವಸತಿ ನಿಲಯ. ದೇಶದ ರಾಜ್ಯದ ವಿವಿಧ ಮೂಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ವಸತಿ ವ್ಯವಸ್ಥೆಯನ್ನು ಮಾಡಿಕೊಡುವ ಇಲ್ಲಿ ವಿದ್ಯಾರ್ಥಿಗಳು ಭಿನ್ನಾಭಿಪ್ರಾಯಗಳನ್ನು ಮರೆತು ಪರಸ್ಪರ ಕೂಡಿ ಬಾಳುವ ವಿಶಾಲ ಕುಟುಂಬದ ಸಮಷ್ಟಿ ಭಾವದಂತಹ ಮಹತ್ತರ ವಿಚಾರಗಳನ್ನು ಕಲಿಯುತ್ತಾರೆ. ಶುದ್ಧ ಕುಡಿಯವ ನೀರು, ಸ್ನಾನಕ್ಕೆ ಬಿಸಿ ನೀರು ನಿರಂತರ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿದೆಯೇ ಎನ್ನುವ ಮೇಲ್ವಿಚಾರಣೆಯನ್ನು ಹಾಸ್ಟೆಲ್ ನ ಸಿಬ್ಬಂದಿಗಳು, ಆಡಳಿತ ವರ್ಗ ನಿರಂತರ ಮಾಡುತ್ತಿರುತ್ತದೆ. ವಿದ್ಯಾರ್ಥಿಗಳು ಊಟದ ಸಮಯದಲ್ಲಿ ಪರಸ್ಪರರ ಜೊತೆ ಮುಕ್ತವಾಗಿ ಬೆರೆಯಲು ಮೆಸ್ ಸೂಕ್ತ ಸ್ಥಳವಾಗಿದೆ. ಪೌಷ್ಟಿಕಾಂಶ ಮತ್ತು ಸಮತೋಲಿತ ಆಹಾರಗಳನ್ನು ಇಲ್ಲಿನ ಮೆಸ್ ವಿದ್ಯಾರ್ಥಿಗಳಿಗೆ ಒದಗಿಸಿಕೊಡುತ್ತದೆ. ವಿದ್ಯಾರ್ಥಿಗಳಿಗೆ ಆಹಾರವನ್ನು ಒದಗಿಸುವ ಮೊದಲು ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು ಯೂನಿವರ್ಸಲ್ ಇನ್ಸ್ಟಿಟ್ಯೂಟ್ ಸಿಬ್ಬಂದಿಗಳೇ ಸ್ವತಃ ಬಂದು ಆಹಾರದ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳುತ್ತಾರೆ. ಪ್ರತಿದಿನದ ಊಟ ಉಪಹಾರದಲ್ಲಿ ವೈವಿಧ್ಯತೆ ಇದ್ದು ವಿದ್ಯಾರ್ಥಿಗಳಿಗೆ ಅವರ ಊಟದ ಆಸಕ್ತಿಗೆ ಅನುಗುಣವಾಗಿ ಹಾಲು, ಮೊಸರು, ಚಹಾ, ಕಾಫಿಗಳನ್ನು ಒದಗಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಇಡೀ ಕೋರ್ಸಿನ ಅವಧಿಯ ಉದ್ದಕ್ಕೂ ಇದು ತಮ್ಮ ಮನೆ ಎನ್ನುವ ಪ್ರೀತಿ ಬೆಳೆಸಿಕೊಳ್ಳುವ ಹಿನ್ನೆಲೆಯಲ್ಲಿ ವಸತಿ ನಿಲಯದ ಆಡಳಿತ ವರ್ಗ ಮತ್ತು ಸಿಬ್ಬಂದಿಗಳ ತಾಳ್ಮೆ, ಶ್ರದ್ಧೆಯನ್ನು ಗೌರವಿಸಬೇಕಾಗುತ್ತದೆ. ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳಿಸುವಲ್ಲಿ ಎನ್ಸಿಸಿ ಪಾತ್ರ ಮುಖ್ಯ ಎನ್ನುವುದು ಅರಿತ ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ತಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಎನ್.ಸಿ.ಸಿ ಯನ್ನು ಪೂರಕ ಪಠ್ಯವಾಗಿ ನಿಗದಿಪಡಿಸಿದ್ದಾರೆ. ಬೆಂಗಳೂರಿನ 2 ಕರ್ನಾಟಕ ಬೆಟಾಲಿಯನ್ ನೊಂದಿಗೆ ಸಂಯೋಜಿತವಾಗಿರುವ ಎನ್ಸಿಸಿ
ಶಿಕ್ಷಣ ಸಂಸ್ಥೆಯಲ್ಲಿ ವ್ಯಾಪಕ ಸೇನೆಯ ಚಟುವಟಿಕೆಗಳಾದ ಮೆರವಣಿಗೆ ಶಿಬಿರ ರಾಷ್ಟ್ರೀಯ ನಿರ್ಮಾಣದ ಸಾಮಾನ್ಯ ಗುರಿಗೆ ಕಾರಣವಾಗಿರುವ ವಿವಿಧ ಸಾಹಸ ಚಟುವಟಿಕೆ ಗಳಲ್ಲಿ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತದೆ. ಇಲ್ಲಿ ವಿದ್ಯಾರ್ಥಿಗಳು ಶಿಸ್ತನ್ನು ಮೈಗೂಡಿಸಿಕೊಂಡು ಸಮಾಜ ಸೇವೆಗೆ ಸಿದ್ದರಾಗುತ್ತಾರೆ. ವಿದ್ಯಾರ್ಥಿಗಳಿಗೆ ಮಿಲಿಟರಿ ತರಬೇತಿ ನೀಡುವುದು ಎನ್ಸಿಸಿ ಯ ಪ್ರಾಥಮಿಕ ಗುರಿಯಾದರೂ ಇಲ್ಲಿ ವಿದ್ಯಾರ್ಥಿಗಳು ನಿಸ್ವಾರ್ಥ ಸೇವೆ ಪ್ರಾಮಾಣಿಕತೆ ಬದ್ಧತೆ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ನಾಯಕತ್ವ ಬೆಳೆಸಲು ಅನುಕೂಲವಾಗುತ್ತದೆ. ಜೊತೆಗೆ ಎನ್ಸಿಸಿ ಪ್ರಮಾಣ ಪತ್ರವೂ ಸೈನ್ಯ ಮತ್ತು ಸಿ ಆರ್ ಪಿ ಎಫ್ ಮತ್ತು ಬಿ ಎಸ್ ಎಫ್ ನಂತಹ ಅರೆ ಸೇನಾ ಪಡೆಗಳಿಗೆ ಅಧಿಕಾರಿಗಳಾಗಿ ವಿದ್ಯಾರ್ಥಿಯ ಪ್ರೊಫೈಲ್ ಗೆ ಮೌಲ್ಯವನ್ನು ಸೇರಿಸುತ್ತದೆ. ನಾಗರಿಕ ಸೇವೆಯಂತಹ ಪರೀಕ್ಷೆಗಳನ್ನು ಪಾಸು ಮಾಡುವುದು ಕಬ್ಬಿಣದ ಕಡಲೆಯಲ್ಲ. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಸೂಕ್ತ ಪರಿಸರ ಅದಕ್ಕೆ ತಕ್ಕಂತಹ ಪೂರಕ ವ್ಯವಸ್ಥೆಗಳು ಇದ್ದಾಗ ಸಾಧ್ಯ ಎಂಬಂತೆ ಸಂಸ್ಥೆ ಕಟ್ಟಿದ ಕೀರ್ತಿ ಉಪೇಂದ್ರ ಶೆಟ್ಟರದು.
“ಕೆರೆಯ ನೀರನು ಕೆರೆಗೆ ಚೆಲ್ಲಿ” ಎನ್ನುವ ಮಾದರಿಯ ಶ್ರೀ ಆರ್.ಉಪೇಂದ್ರ ಶೆಟ್ಟಿ ಅವರ ಜೀವನಶೈಲಿ ತಾನಿರುವ ಸಮಾಜಕ್ಕೆ ತನ್ನಿಂದ ಸಾಧ್ಯವಾಗುವ ಅತ್ಯುತ್ತಮ ಸೇವೆಯನ್ನು ನೀಡಬೇಕು ಎನ್ನುವ ಉದ್ದೇಶದಿಂದ ಶ್ರೀಯುತ ಉಪೇಂದ್ರ ಶೆಟ್ಟಿ ಯವರು ಹುಟ್ಟು ಹಾಕಿದ ಸಂಸ್ಥೆ ಈ ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್, ಬೆಂಗಳೂರು ಇದರ ಅಂಗ ಸಂಸ್ಥೆ ಯುನಿವರ್ಸಲ್ ಚಾರಿಟೇಬಲ್ ಸೆಂಟರ್ (UCC) ಇದರ ಸ್ಥಾಪಕ ಟ್ರಸ್ಟಿ ಆರ್. ಉಪೇಂದ್ರ ಶೆಟ್ಟಿ. ಇವರು ಸಮಾಜದ ಅಭಿವೃದ್ಧಿಗೆ ನೀಡಿರುವ ಸೇವೆಗೆ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿದೆ. ಆದರೆ ಇವರ ಸಮತೂಕದ ವ್ಯಕ್ತಿತ್ವ ಸಾಮಾಜಿಕ ನ್ಯಾಯದ ಬಗ್ಗೆ ಇವರಿಗೆ ಇರುವ ಕಾಳಜಿ ಇಂದು ಇವರನ್ನು ಈ ಎತ್ತರಕ್ಕೆ ಏರಿಸಿದೆ. ಆರ್. ಉಪೇಂದ್ರ ಶೆಟ್ಟಿಯವರಂತಹ ಅಪರೂಪದ ವ್ಯಕ್ತಿತ್ವಗಳು ನೂರು ಸಾವಿರ ಆಗಲಿ.