ಘಮಘಮ ಪರಿಮಳ ಬೀರುವ ಗುಲ್ವಾಡಿ ಸಣ್ಣಕ್ಕಿಯ ಅನ್ನವನ್ನು ಯಾರೆಲ್ಲಾ ಉಂಡಿದ್ದೀರಿ? ಊಟ ಮಾಡಿದವರಿಗಷ್ಟೇ ಗೊತ್ತು ಅದರ ರುಚಿ ಹಾಗೂ ಸುವಾಸನೆ. ಕರಾವಳಿಯ ನೆಲದಲ್ಲಿ ಅತ್ಯಂತ ವಿಶಿಷ್ಟವಾಗಿ ಬೆಳೆಯುತ್ತಿದ್ದ ಸುವಾಸನೆಯೇ ಪ್ರಧಾನವಾದ ಗುಲ್ವಾಡಿ ಸಣ್ಣಕ್ಕಿ ಭತ್ತದ ಬೇಸಾಯ ಈಗ ಇತಿಹಾಸದ ಪುಟ ಸೇರಿದೆ. ಕಲೆ, ಸಾಹಿತ್ಯ, ಕೃಷಿ ಸಂಸ್ಕೃತಿಯ ತವರೂರೆಂದೇ ಖ್ಯಾತಿ ಪಡೆದ ಗುಲ್ವಾಡಿ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದೆ. ಕರ್ನಾಟಕಕ್ಕೆ ಪ್ರಸಿದ್ಧಿ ತಂದುಕೊಟ್ಟ ಮೊಟ್ಟಮೊದಲ ಪ್ರತಿಷ್ಠಿತ ಸಾಮಾಜಿಕ ಕಾದಂಬರಿ “ಇಂದಿರಾ ಬಾಯಿ”ಯ ಕಾದಂಬರಿಕರ್ತ ಗುಲ್ವಾಡಿ ವೆಂಕಟರಾಯರು, ತರಂಗ ಸಂಪಾದಕ ಹಾಗೂ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿಯವರ ಕೌಟುಂಬಿಕ ನೆಲೆಯೂ ಆಗಿದೆ.
ಈ ಗುಲ್ವಾಡಿಯ ದಾಸರಬೆಟ್ಟು ಎಂಬ ಪ್ರದೇಶದ ಮಣ್ಣಿನಲ್ಲಿ ಮಾತ್ರ ಹಿಂದೆ ಅತ್ಯಂತ ಪರಿಮಳ ಭರಿತ ಈ ಸಣ್ಣಕ್ಕಿಯ ಭತ್ತ ಸೊಗಸಾಗಿ ಬೆಳೆಯುತ್ತಿತ್ತು. ಅವರ ಗದ್ದೆಬಯಲಿಗೆ ತಾಗಿಕೊಂಡಂತೆಯೇ ಇದ್ದಂಥ ನಮ್ಮ ಕರ್ಕಿ ಬೈಲಿನಲ್ಲೂ ಕೂಡಾ ನಮ್ಮ ತಂದೆ ಬಿ. ರಾಮಣ್ಣ ಹೆಗ್ಡೆಯವರು ಸುಮಾರು ವರ್ಷಗಳ ಕಾಲ ಗುಲ್ವಾಡಿ ಸಣ್ಣಕ್ಕಿ ಬೆಳೆಯುತ್ತಿದ್ದರು. ಹಿಂದೆಲ್ಲಾ ಸಾಧಾರಣ 500 ಎಕರೆಗೂ ಹೆಚ್ಚು ಕೃಷಿ ಭೂಮಿಯಲ್ಲಿ ಈ ಸಣ್ಣಕ್ಕಿಯನ್ನು ಬೆಳೆಸುತ್ತಿದ್ದರಂತೆ. ಆ ನಂತ್ರ ಹೆಚ್ಚಿನ ಇಳುವರಿ ಕೊಡುವ ಭತ್ತದ ಬೆಳೆಗಳ ಅವಿಷ್ಕಾರವಾಗಿ, ಕಡಿಮೆ ಇಳುವರಿ ಕೊಡುವ ಸಣ್ಣಕ್ಕಿಯನ್ನು ಬೆಳೆಯುವ ಹುಮ್ಮಸ್ಸು ಬೆಳೆಗಾರರಲ್ಲೂ ಕ್ಷೀಣಿಸುತ್ತಾ ಹೋಯ್ತು.
ಸಾಂಪ್ರದಾಯಿಕವಾದ ನಾಟಿ ಹಾಗೂ ಸಾವಯವ ಪದ್ಧತಿಯಲ್ಲಿಯೇ ಈ ತಳಿಯನ್ನು ಬೆಳೆಸಬೇಕು. ರಾಸಾಯನಿಕ ಗೊಬ್ಬರಗಳ ಬಳಕೆ ವರ್ಜ್ಯ. ಬೇರೆ ಬೆಳ್ತಿಗೆ ಅಕ್ಕಿಯಂತೆ, ಶರೀರದ ಉಷ್ಣತೆಯನ್ನು ಹೆಚ್ಚಿಸದೇ, ಕುಚ್ಚಲಕ್ಕಿಯಂತೆಯೇ ಸಣ್ಣಕ್ಕಿಯೂ ದೇಹಕ್ಕೆ ತಂಪು ನೀಡುತ್ತದೆ. ಆದ್ರೇ ಬಹಳ ಮೃದುವಾದ ಅಕ್ಕಿಯಾದ ಕಾರಣ ಈ ಭತ್ತಕ್ಕೆ ಬಿಸಿಲೂ ಹೆಚ್ಚಾಗಬಾರದು, ಆಗ ಮಿಲ್ಲಿನಲ್ಲಿ ಅಕ್ಕಿಯೂ ಸಹಾ ಪುಡಿಯಾಗುತ್ತದೆ. ಕೊಯ್ದ ಬೆಳೆಗೆ ಮಳೆಯೂ ಬೀಳಬಾರದು. ಆಗ ಶುಭ್ರ ಶ್ವೇತ ವರ್ಣದ ಮುತ್ತಿನಂತಿರುವ ಸಣ್ಣಕ್ಕಿಯ ಬಣ್ಣವೂ ಹಳದಿಗಟ್ಟುತ್ತದೆ. ಬೆಳೆಗಾರರಿಗೂ ಘಮಘಮಿಸುವ ಸಣ್ಣಕ್ಕಿಯನ್ನು ಹಂತಹಂತವಾಗಿ, ಜಾಗ್ರತೆ ವಹಿಸಿ, ಸಂಸ್ಕರಿಸಲು ತುಂಬಾನೇ ತಾಳ್ಮೆ ಹಾಗೂ ವ್ಯವಧಾನವಿರಬೇಕು. ಅಕ್ಕಿ ಮಾಡಿದ ಬಳಿಕವೂ ಮೊದ್ಲು ಸಣ್ಣ ನುಚ್ಚನ್ನು ಜಾಲಿಸಬೇಕು. ಆ ನಂತ್ರ ಕಡಿಯಕ್ಕಿ ಮತ್ತು ಇಡೀ ಅಕ್ಕಿಯನ್ನು ಬೇರ್ಪಡಿಸುವ ವಿಧಾನವೂ ಬಹಳಷ್ಟು ಶ್ರಮವಹಿಸುವ ಪ್ರಕ್ರಿಯೆಯಾಗಿದೆ. ಇಡೀ ಅಕ್ಕಿಯನ್ನೂ ಹುಳು, ಹುಪ್ಪಟೆ ಆಗದಂತೆ ಒಣಹುಲ್ಲಿನಲ್ಲಿ ಮಡೆ (ಹಗ್ಗ) ಹೊಯ್ದು ನುರಿತವರಿಂದ ಮುಡಿ ಕಟ್ಟಿಸಿ, ಗಾಳಿಯಾಡದಂತೆ ಮುಚ್ಚಿಗೆ ಕೋಣೆಯಲ್ಲೇ ದಾಸ್ತಾನು ಮಾಡಿಡಬೇಕು. ಹದವರಿತು ಬೆಳೆದು ಸಂಸ್ಕರಿಸಿದರಷ್ಟೇ ಗುಲ್ವಾಡಿ ಸಣ್ಣಕ್ಕಿಯಿಂದ ಲಾಭ !!
ನಮ್ಮ ಕರ್ಕಿ ಮನೆಯಲ್ಲೂ ಬಚ್ಚ ಮತ್ತು ಕಾಳು ಎಂಬ ದಂಪತಿಗಳು ತುಂಬಾ ವರ್ಷಗಳ ಕಾಲ ಬಹಳ ಅಚ್ಚುಕಟ್ಟಾಗಿ ಸಣ್ಣಕ್ಕಿಯ ಮುಡಿ ಕಟ್ಟುತ್ತಿದ್ದರು. ಶೆಟ್ಟಿ ಲಂಚ್ ಹೋಮ್ ಹೋಟೇಲ್ನವರು ಹಾಗೂ ಕುಂದಾಪುರದ ಪ್ರತಿಷ್ಠಿತ ಉದ್ಯಮಿ ಪ್ರಭಾಕರ್ ತೋಳಾರ್ ಮನೆಯವರು ವರ್ಷಾವಧಿ ಊಟಕ್ಕಾಗುವಷ್ಟು ಸಣ್ಣಕ್ಕಿಯನ್ನು ನಮ್ಮ ತಂದೆಯವರ ಬಳಿಯೇ ಖರೀದಿಸುತ್ತಿದ್ದಂಥ ಕಾಲ.
ಸಣ್ಣಕ್ಕಿಯ ಅನ್ನ ಮಲ್ಲಿಗೆಯಂತೆ ಉದುರುದುರಾಗಲು ಪಾತ್ರೆಯ ತುಂಬಾ ನೀರಿಟ್ಟು ಬಸಿದೇ ಮಾಡಬೇಕು. ನಮ್ಮ ಮನೆಗಂತೂ ಆಗ ಯಾರೇ ನೆಂಟರಿಷ್ಟರು ಬರಲಿ ಸಣ್ಣಕ್ಕಿಯ ಅನ್ನ, ನಾಟಿ ಕೋಳಿ ಸುಕ್ಕದ ಜೊತೆಗೆ ಮನೆಯಲ್ಲೇ ಕಾಯಿಸಿದ ತುಪ್ಪ ಹಾಗೂ ಗಟ್ಟಿ ಮೊಸರು ಇಷ್ಟಿದ್ರೇ ಸಾಕು ಮೃಷ್ಟಾನ್ನ ಭೋಜನ !! ಯಥೇಚ್ಛವಾಗಿ ಹಸುವಿನ ತುಪ್ಪ, ಈರುಳ್ಳಿ, ಗೇರುಬೀಜ, ಒಣ ದ್ರಾಕ್ಷಿ, ಬಳಸಿ ಬೇಯಿಸಿದ ಸಣ್ಣಕ್ಕಿ ಅನ್ನದ ಮೇಲೆ ತೋಟದ ಹಸಿ ದಾಲ್ಚೀನೀ ಎಲೆ ತಂದು ಮುಚ್ಚಿಟ್ಟು ನಮ್ಮಮ್ಮ ಮಾಡುವ ವಿಶೇಷ ಖಾದ್ಯ ತುಪ್ಪದನ್ನ !! ಸಣ್ಣಕ್ಕಿಯ ನುಚ್ಚಿನಲ್ಲೂ ಉಪ್ಪಿಟ್ಟು , ಕಡಿ ಅಕ್ಕಿಯಲ್ಲಿ ತಯಾರಿಸುವ ಇಡ್ಲಿ, ದೋಸೆ , ಮಣ್ಣಿ ,ಪಾಯಸ, ಹುಗ್ಗಿ , ಶಾವಿಗೆ,ಮುಂತಾದ ವೈವಿಧ್ಯಮಯ ತಿಂಡಿಗಳು ತುಂಬಾನೇ ರುಚಿಕರವಾಗಿದ್ದು, ಮನೆ ತುಂಬಾ ಸುವಾಸನೆ ಬೀರುತ್ತಿತ್ತು . ಉಳಿದ ಸಣ್ಣಕ್ಕಿ ಅನ್ನಕ್ಕೂ ಉಪ್ಪು, ತುಪ್ಪ ಹಾಕಿ ಕಟ್ಟಿದ ಉಂಡೆಯೂ ಆಗಿನ ಪುಟ್ಟ ಮಕ್ಕಳಿಗೆ ಸಂಜೆಯ ಸ್ವಾದಿಷ್ಟಕರ ತಿಂಡಿಯಾಗಿತ್ತು. ಮನೆಯಲ್ಲೇ ನಡೆಯುವ ಮದುವೆ, ಸೀಮಂತ, ಗೃಹಪ್ರವೇಶದಂಥ ವಿಶೇಷ ಸಮಾರಂಭ, ಹಾಗೂ ದೇವರ ಸಮಾರಾಧನೆಯಲ್ಲೂ.. ಸಣ್ಣಕ್ಕಿಯನ್ನದ್ದೇ ಮೇಲುಗೈ !! ಮನೆಗೆ ಬಂದ ಅತಿಥಿಗಳು ವಾಪಸ್ಸು ಹೊರಡುವಾಗ ಕೈ ಚೀಲದಲ್ಲಿ ಸಣ್ಣಕ್ಕಿಯನ್ನು ಕೊಟ್ಟೇ ಕಳುಹಿಸುವುದು ನನ್ನ ತಂದೆ ತಾಯಿಗೂ ರೂಢಿಯಾಗಿತ್ತು ನನ್ನ ತಂದೆಯವರ ನಿಧನದ ನಂತರ ನಮ್ಮೂರ ಬೈಲ್ನಲ್ಲಿ ಸೌಗಂಧದ ಸಣ್ಣಕ್ಕಿ ಬೆಳೆಯುವ ಪರಂಪರೆಯು ಸಂಪೂರ್ಣವಾಗಿ ಸ್ಥಗಿತಗೊಂಡಾಯ್ತು.
ಗುಲ್ವಾಡಿಯ ದಾಸರ ಬೆಟ್ಟಿನಲ್ಲಿ ನನ್ನ ಅಜ್ಜಯ್ಯ ಡಿ. ವೆಂಕಪ್ಪ ಶೆಟ್ಟಿಯವರ ಕುಟುಂಬಸ್ಥರೂ ತುಂಬಾ ವರ್ಷಗಳ ಕಾಲ ಈ ಪ್ರಭೇದವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಲ್ಪ ಪ್ರಮಾಣದಲ್ಲಾದ್ರೂ” ಗುಲ್ವಾಡಿ ಸಣ್ಣಕ್ಕಿ” ಬೆಳೆಯುತ್ತಿದ್ದರು. ಪ್ರಸ್ತುತ ಬೇಸಾಯದ ಕೆಲಸಕ್ಕೂ ಆಳುಗಳ ತೀವ್ರತರದ ಸಮಸ್ಯೆ ಹಾಗೂ ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಗುಲ್ವಾಡಿ ಬಯಲಲ್ಲೂ ಪರಿಮಳ ಸೂಸುವ ಸಣ್ಣಕ್ಕಿ ಬೆಳೆಯುವುದು ಬಹಳಷ್ಟು ದುಸ್ತರವಾಗಿದೆ. ಹಿಂದೆ ಬೇರೆ, ಬೇರೆ ಜಿಲ್ಲೆಯವರು ಬಂದು ಇದರ ಘಮಕ್ಕೆ ಮರುಳಾಗಿ, ಈ ವಿಶಿಷ್ಟವಾದ ತಳಿಯನ್ನು ತೆಗೆದ್ಕೊಂಡು ಹೋಗಿ ತಮ್ಮೂರಿನ ಗದ್ದೆಗಳಲ್ಲಿ ಬೆಳೆಸಿದ್ರೂ.. ಕೂಡಾ ಇಲ್ಲಿ ಬೀರಿದಂತಹ ಸುಗಂಧದ ಸುಳಿವೇ ಅಲ್ಲಿರಲಿಲ್ಲ. ನೂರಾರು ಎಕರೆ ಸಣ್ಣಕ್ಕಿ ಬೆಳೆಯುತ್ತಿದ್ದಂಥ ಕೃಷಿ ಭೂಮಿಯಲ್ಲೀಗ ಇತರೇ ತಳಿಗಳಾದ, ಎಮ್ ಓ 4, ಜಯಾ, ಉಮಾ, ಜ್ಯೋತಿ ಇತ್ಯಾದಿಗಳು. ಇತ್ತೀಚಿಗಂತೂ…ಅತಿ ಹೆಚ್ಚಿನ ಇಳುವರಿ ನೀಡುವ ಸಹ್ಯಾದ್ರಿ ಕೆಂಪು ಮುಖ್ತಿ ಪಂಚಮುಖಿ, ಭದ್ರಾ , ಮುಂತಾದವುಗಳೇ, ಹೆಮ್ಮೆಯಿಂದ ಕರಾವಳಿಯ ಗದ್ದೆ ಬಯಲಲ್ಲಿ ತಲೆಎತ್ತಿ ನಿಂತಿವೆ.
ವೃಂದಾ .ವಿ. ಶೆಟ್ಟಿ (ನಿರೀಕ್ಷಾ)