ದೈವ, ದೇವರ ಬಗ್ಗೆ ನಂಬಿಕೆ ಇದ್ದರೆ ಧರ್ಮ ಉಳಿಯುತ್ತದೆ. ಬದುಕು ಉತ್ತಮವಾಗಿ ನಡೆಯಲು ದೈವ, ದೇವರ ಬಗ್ಗೆ ನಂಬಿಕೆ ಮುಖ್ಯ ಎಂದು ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರಕ್ಕೆ 150 ವರ್ಷ ಪ್ರಯುಕ್ತ ಮಾ. 7ರ ವರೆಗೆ ನಡೆಯಲಿರುವ “ಕಂಕನಾಡಿ ಗರಡಿ 150-ನಮ್ಮೂರ ಸಂಭ್ರಮ’ ಸೋಮವಾರದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ತನ್ನ ಬದುಕಿನ ಉದ್ಧಾರದಂತೆಯೇ ಇನ್ನೊಬ್ಬರ ಬದುಕಿನ ಬಗ್ಗೆಯೂ ಕಾಳಜಿ ಹೊಂದುವುದು ಧರ್ಮ. ನಮ್ಮ ಬದುಕಿನ ನಿಯಂತ್ರಣಕ್ಕೆ ಧರ್ಮದ ಅಗತ್ಯವಿದೆ. ಧರ್ಮದ ಹಿಂದೆ ದೈವ, ದೇವರ ಬಗ್ಗೆ ನಂಬಿಕೆ ಇರಬೇಕು ಎಂದರು.
ದೀಪ ಪ್ರಜ್ವಲನೆಗೈದ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ. ಶೆಟ್ಟಿ ಮಾತನಾಡಿ, ಕಂಕನಾಡ ಗರಡಿ ಕಾರಣಿಕ, ಪ್ರಸಿದ್ಧ ಕ್ಷೇತ್ರವಾಗಿದೆ. 150 ವರ್ಷಗಳ ಸಮಾರಂಭ ವಿಜೃಂಭಣೆಯಿಂದ ನಡೆಯುತ್ತಿದೆ ಎಂದರು. ಬಹುಭಾಷಾ ಚಲನಚಿತ್ರ ನಟ ಸುಮನ್ ತಲ್ವಾರ್ ಮಾತನಾಡಿ, ದೇವರು, ದೈವದ ಶಕ್ತಿ ಇಲ್ಲದೆ ಸಾಧನೆ ಸಾಧ್ಯವಿಲ್ಲ. 45 ವರ್ಷಗಳ ಕಾಲ ಚಲನಚಿತ್ರ ಕ್ಷೇತ್ರದಲ್ಲಿ ಮುಂದುವರಿ ಯಲು ದೇವರ ಆಶೀರ್ವಾದವೇ ಮುಖ್ಯ ಕಾರಣ ಎಂದರು.
ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ ಅದ್ಯಕ್ಷ ಬಿ.ಎನ್. ಶಂಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಗಂಗಾಧರ ಅಮೀನ್, ಅಖೀಲ ಭಾರತ ಬಿಲ್ಲವರ ಯೂನಿಯನ್ ಮಂಗಳೂರು ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ, ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನ ಅಧ್ಯಕ್ಷ ಬಾಲಕೃಷ್ಣ ಗೌಡ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಮೂಲ್ಕಿ ಬಿಲ್ಲವ ಮಹಾ ಮಂಡಲ ಉಪಾಧ್ಯಕ್ಷ ಸೂರ್ಯಕಾಂತ್ ಜಯ ಸಿ. ಸುವರ್ಣ, ಉದ್ಯಮಿಗಳಾದ ಹರ್ಷ ಮೇಲಾಂಟ, ಸುಧಾಕರ ಪೂಜಾರಿ, ಗೋವಾ ಬಿಲ್ಲವರ ಎಸೋಸಿಯೇಶನ್ ಗೌರವ ಅಧ್ಯಕ್ಷ ಚಂದ್ರಹಾಸ ಅಮೀನ್, ಸೌದಿ ಅರೇಬಿಯ ಮಂಗಳೂರು ಎಸೋಸಿಯೇಶನ್ ಅಧ್ಯಕ್ಷ ಸತೀಶ್ ಕೆ. ಅಂಚನ್ ಬಜಾಲ್, ಪ್ರಮುಖರಾದ ರಾಜೇಶ್ ಪೂಜಾರಿ, ರಾಜ್ಕುಮಾರ್, ಗರಡಿ ಆಡಳಿತ ಮಂಡಳಿ ಸದಸ್ಯರು ಇದ್ದರು.
ಗರಡಿ ಕ್ಷೇತ್ರದಲ್ಲಿ ಸೋಮವಾರ ಬೆಳಗ್ಗೆ 7.40ಕ್ಕೆ ಶ್ರೀ ಬ್ರಹ್ಮ ಬೈದರ್ಕಳರಿಗೆ ಸಹಸ್ರ ಕುಂಭಾಭಿಷೇಕ ನೆರವೇರಿತು. ಮಾ. 7ರಂದು ನಾಗಬ್ರಹ್ಮ ಮಂಡಲೋತ್ಸವ, ಹಾಲಿಟ್ಟು ಸೇವೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. ಟ್ರಸ್ಟಿ ದಿನೇಶ್ ಅಂಚನ್ ಪ್ರಸ್ತಾವಿಸಿ, ಸ್ವಾಗತಿಸಿದರು.