ಒಂದು ತರಹದ ಕಿರುನಗು ಹಾಗೂ ಆಶ್ಚರ್ಯ ಮೂಡಿದರು ಹೆದ್ದಾರಿ ತಡೆಗೋಡೆಗೆ ಬಿದಿರು ಉಪಯೋಗ ಅನ್ನುವುದನ್ನು ಕೇಳಿದಾಗ. ಆದರೂ ಇದು ಸತ್ಯ. ವಿಶ್ವದಲ್ಲೆ ಮೊದಲ ಪ್ರಯತ್ನವಿದು. ರಾಷ್ಟ್ರೀಯ ಹೆದ್ದಾರಿ ಅಕ್ಕ ಪಕ್ಕ ಪ್ರಾಣಿಗಳು ರಸ್ತೆ ಗಿಳಿಯದಂತೆ ತಡೆಯಲು ಮತ್ತು ವಾಹನಗಳು ಡಿಕ್ಕಿ ಹೊಡೆದಾಗ ದೊಡ್ಡ ಪ್ರಮಾಣದ ಅನಾಹುತ ತಪ್ಪಿಸಲು ಉಕ್ಕಿನ ತಡೆಗೋಡೆ ಹಾಕುವುದು. ಮಣ್ಣಿನ, ಇಟ್ಟಿಗೆಯ ಕಬ್ಬಿಣದ ಕಂಬ, ಕಲ್ಲುಕಂಬದ ಬಳಕೆ ಸಾಮಾನ್ಯ. ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಇದೇ ಮೊದಲ ಬಾರಿಗೆ ಗುಣಮಟ್ಟದ ಅಂದರೆ ಉಕ್ಕಿನ ಗೋಡೆ ಹೆಚ್ಚಿನ ಶಕ್ತಿ ಎಂಬುದು ಎಲ್ಲರ ಭಾವನೆ ಆದರೆ ಬಿದಿರು ತಡೆಗೋಡೆಯನ್ನು ಅದಕ್ಕಿಂತ ಶಕ್ತಿ ಶಾಲಿ ಮಾಡಲು ಬಂಬೂಸಾ ಬಲ್ಕೋವಾ ಎಂಬ ಜಾತಿಗೆ ಸೇರಿದ ಬಿದಿರನ್ನು ಬಳಸಲಾಗುತ್ತದೆ . ಈ ತಡೆ ಗೋಡೆಯನ್ನು ಇಂದೋರ್ನ ಪ್ರೀತಂ ಪುರದಲ್ಲಿರುವ ರಾಷ್ಟ್ರೀಯ ವಾಹನ ಪರೀಕ್ಷಾ ಕೇಂದ್ರದಲ್ಲಿ ಕಠಿಣ ಪರೀಕ್ಷೆಗೆ ಒಳಪಟ್ಟಿದೆ. ಮಹಾರಾಷ್ಟ್ರ ಚಂದ್ರಪುರ ಮತ್ತು ಯವತ್ಮಾಳ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಬರುವ ವಾಣಿ ಪರೋರಾ ಹೆದ್ದಾರಿಯಲ್ಲಿ 200 ಮೀಟರ ಉದ್ದದ ಬಿದಿರು ತಡೆಗೋಡೆ ಅಳವಡಿಸಲಾಗಿದೆ. ಇದು ಪರಿಸರ ಸೃಹ್ನಿಯಾಗಿರುವುದು ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ.
ಭಾರತೀಯ ಅರಣ್ಯ ಕಾಯ್ದೆ ತಿದ್ದುಪಡಿ ಆದೇಶಕ್ಕೆ ಅಂಕಿತ ಹಾಕಿರುವ ಸುಗ್ರೀವಾಜ್ಞೆಯ ಪ್ರಕಾರ ಅರಣ್ಯ ಕಾಯ್ದೆಯ ಎರಡನೇ ಸೆಕ್ಷನ್ ಏಳನೇ ವಿಧಿಯಡಿ ಬಿದಿರಿನ ಶಬ್ದವನ್ನು ಕೈಬಿಡಲಾಗಿದೆ. ಅರಣ್ಯೇತರ ವಲಯಗಳಲ್ಲಿ ಬೆಳೆಯುವ ಬಿದಿರುಗಳನ್ನು ಮರಗಳ ವ್ಯಾಖ್ಯಾನದಿಂದ ತೆಗೆದುಹಾಕಿ ಅವುಗಳನ್ನು ಕಡಿದು ಸಾಗಿಸುವುದಕ್ಕೆ ಅನುಕೂಲ ಮಾಡಿಕೊಡಲಾಗಿದೆ. ರೈತರು ತಾನೇ ಬೆಳೆದ ಬಿದಿರನ್ನು ಕಡಿಯಲು ಅನುಮತಿ ಹಾಗೂ ಸಾಗಾಟಕ್ಕೆ ಪರವಾನಗಿ ಈ ಮೊದಲು ಪಡೆದುಕೊಳ್ಳಬೇಕಿತ್ತು. ಇಂತಹ ಕ್ರಮದಿಂದ ಬಿದಿರಿನ ಕೃಷಿಗೆ ಉತ್ತೇಜನ ದೊರೆಯುವುದಲ್ಲದೆ ಬಿದಿರು ಬೆಳೆಗಾರರ ಆದಾಯ ದ್ವಿಗುಣಗೊಳಿಸುವುದಕ್ಕೂ ಅನುಕೂಲವಾಗಿದೆ.ಬಿದಿರನ್ನು ಇನ್ನು ಮುಖ್ಯ ಬೆಳೆಯನ್ನಾಗಿ ಅಥವಾ ಉಪಬೆಳೆಯನ್ನಾಗಿ ಬೆಳೆಯಬಹುದು. ಅದರಲ್ಲೂ ನಮ್ಮ ದೇಶದಲ್ಲಿ ಇನ್ನು ಮುಂದೆ ಮರಗಳ ವ್ಯಾಪ್ತಿಯಲ್ಲಿ ಬಿದಿರು ಇರುವುದಿಲ್ಲ. ಬಿದಿರನ್ನು ಕಡಿದು ಮಾರುವುದಕ್ಕೆ ಯಾವುದೇ ಅನುಮತಿ ಬೇಕಿಲ್ಲ ಎಂಬ ಕಾನೂನಿನಿಂದ ಗ್ರಾಮೀಣ ಪ್ರದೇಶದ ಜನರು ನಿರಾಳವಾಗಿದ್ದಾರೆ. ಮುಂದಿನ ದಿನಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಬಿದಿರು ಬೆಳೆಯುವ ಸಾಧ್ಯತೆ ಇದೆ. ವಿಫುಲ ಸಸ್ಯಸಿರಿಯ ನಾಡಿನಲ್ಲಿ ಸಸ್ಯಗಳ ಪರಿಚಯ ಮಾನವನ ಚರಿತ್ರೆಯಷ್ಟೇ ಪುರಾತನವಾದುದು. ಆದರೆ ಇಂದು ಬಳಕೆಯಲ್ಲಿದ್ದ ಅನೇಕ ಸಸ್ಯಗಳ ಬಗೆಗಿನ ದಾಖಲೆಗಳು ದುರ್ಲಭವಾಗಿದೆ.ಹಾಗೆ ಆಗದಿರಲು ಬಿದಿರು ಬೆಳೆಸಿ ಅವುಗಳನ್ನು ಸಂರಕ್ಷಿಸುವ ಅಗತ್ಯವಿದೆ. ಬಿದಿರು ಬೆಳೆಯ ಅಭಿವೃದ್ಧಿಗೆ ಸರಕಾರ, ಅರಣ್ಯ ಇಲಾಖೆ, ಸಸ್ಯಶಾಸ್ತ್ರ ವಿಭಾಗ ಜಾಗೃತರಾಗಿ ಬಿದಿರಿನ ಬೆಳೆ ಬೆಳೆಯಲು ಬೇಕಾದ ಸಲಹೆ ಸೂಚನೆಗಳನ್ನು ಜನಸಾಮಾನ್ಯರಿಗೆ ಸಸ್ಯ ಶಾಸ್ತ್ರಜ್ಞರು ನೀಡುತ್ತಾ ಬಂದಲ್ಲಿ ಬಿದಿರಿನ ಬೆಳೆಯಲ್ಲಿ ಅಭಿವೃದ್ಧಿಯಾಗಬಹುದು. ಬಿದಿರು ಉದ್ಯಮ ಇಂದು ಜಾಗತಿಕ ಮಟ್ಟದಲ್ಲಿ ಉತ್ತಮ ವಹಿವಾಟು ನಡೆಸುತ್ತಿದ್ದು, ಬಿದಿರಿನ ಬಳಕೆ ಈಗ ನಮ್ಮ ದೇಶದಲ್ಲಿ ಹೆಚ್ಚುತ್ತಿದ್ದು, ಪ್ರಪಂಚದಲ್ಲಿ 560 ಪ್ರಭೇದಗಳ ಬಿದಿರು ಸಸ್ಯಗಳಿವೆ ಎಂದು ಅಂದಾಜಿಸಲಾಗಿದೆ. ಹಾಗೆ ಭಾರತದಲ್ಲಿ 140 ಜಾತಿಯ ಬಿದಿರುಗಳಿವೆ ಎನ್ನಲಾಗುತ್ತಿದೆ. ಬಿದಿರು ಕೃಷಿ ಕೈಗಾರಿಕೋದ್ಯಮದವರೆಗೂ ವ್ಯಾಪಿಸಿದೆ. ರಾಜಮಹಾರಾಜರ ಕಾಲದ ಭಾರತೀಯ ಸಂಸ್ಕ್ರತಿಯಲ್ಲಿ ಆಳವಾಗಿ ಬೇರೂರಿರುವ ಬಿದಿರು ಇಂದಿನ ಫ್ಯಾಶನ್ ಯುಗದಲ್ಲೂ ತನ್ನ ಅಸ್ತಿತ್ವವನ್ನು ಭದ್ರಗೊಳಿಸಿದೆ.
1980ರ ಅರಣ್ಯ ಸಂರಕ್ಷಣೆ ಕಾಯ್ದೆಯಡಿ ಬಿದಿರುಗಳನ್ನು ಅರಣ್ಯ ಪ್ರದೇಶದಲ್ಲಿ ಬೆಳೆಸುವುದನ್ನು ಮುಂದುವರಿಸುವುದಕ್ಕೂ ಅವಕಾಶ ನೀಡಲಾಗಿದೆ. ಈ ಸುಗ್ರೀವಾಜ್ಞೆಗೆ ಮೊದಲು ಬಿದಿರು ಭಾರತೀಯ ಅರಣ್ಯ ಕಾಯ್ದೆಯಡಿ ಮರಗಳ ವ್ಯಾಪ್ತಿಗೆ ಸೇರಿಸಲಾಗಿತ್ತು. ಹೀಗಾಗಿ ಅರಣ್ಯೇತರ ಭೂಮಿಯಲ್ಲಿ ರೈತರು ಬಿದಿರುಗಳನ್ನು ಬೆಳೆಸುವುದಕ್ಕೆ ಕಾನೂನಿನ ತೊಡಕು ಇತ್ತು. ಅರಣ್ಯೇತರ ಪ್ರದೇಶದಲ್ಲಿ ಬಿದಿರುಗಳನ್ನು ವಿಫಲವಾಗಿ ಬೆಳೆಸಲಾಗುತ್ತಿತ್ತು ಬಿದಿರು ಸಂಬಂಧಿ ಚಟುವಟಿಕೆಗಳಿಂದಲೇ ಅನೇಕರ ಜೀವನ ಸಾಗುತ್ತಿದೆ. ಭಾರತದ ಕೆಲವು ರಾಜ್ಯಗಳಲ್ಲಿ ಬಿದಿರನ್ನು ಅರಣ್ಯ ಲಘು ಉತ್ಪನ್ನ ಎಂದು ಘೋಷಿಸಿವೆ. ಇದರಿಂದ ಆಯಾ ರಾಜ್ಯಗಳ ಒಳಗೆ ಬಿದಿರನ್ನು ಸಾಗಿಸಲು ಹೆಚ್ಚು ಅಡೆತಡೆ ಇರಲಿಲ್ಲ. ಆದರೆ ಅಂತಾರಾಜ್ಯ ಸಾಗಾಟಕ್ಕೆ ಹಲವು ಇಲಾಖೆಗಳಿಂದ ಪರವಾನಗಿ ಪಡೆದುಕೊಳ್ಳ ಬೇಕಿದೆ. ಹೀಗಾಗಿ ಬಿದಿರು ಕೃಷಿ ಭಾರತದಲ್ಲಿ ಪೂರ್ಣಪ್ರಮಾಣದಲ್ಲಿ ವಾಣಿಜ್ಯ ಸ್ವರೂಪ ಪಡೆದಿಲ್ಲ ಎಂಬ ಕಾರಣಕ್ಕಾಗಿ ಬಿದಿರನ್ನು ಕಡಿಯಲು ಮತ್ತು ಸಾಗಾಟ ಮಾಡಲು ಈ ತಿದ್ದುಪಡಿ ಕಾಯ್ದೆಯ ಅನುವು ಮಾಡಿಕೊಡಲಾಗಿದೆ.
ಬಿದಿರು ಮಣ್ಣಿನಿಂದ ಮೊಟ್ಟೆಯ ಚಿಪ್ಪಿನಂತೆ ಮೊಳಕೆಯೊಡೆದು ಮೇಲ್ಬಂದ ಪುಟ್ಟ ಸಸಿಗಳು ಒಂದೇ ವರ್ಷದಲ್ಲಿ 100 ಅಡಿ ಎತ್ತರ ಬೆಳೆಯಬಲ್ಲವು. ಬಿದಿರು ಹೂಬಿಡುವುದು ಸರಾಸರಿ 32 ವರ್ಷಗಳ ನಂತರ. 60 ರಿಂದ 120 ವರ್ಷ ಕಾಲ ಬಾಳುವ ಬಿದಿರು ಕೂಡ ಇದೆ. ಬಿದಿರನಲ್ಲಿ ಮುಳ್ಳು ಇರುವ, ಮುಳ್ಳು ಇರದ ಎರಡು ಬಗೆಯ ಪ್ರಕಾರದ ಹಾಗೂ ಗಂಟು ಇರುವ ಬಿದಿರುಗಳು ಇವೆ. ಕೆಲ ಬಿದಿರು ಹೂಬಿಟ್ಟು ಭತ್ತದ ತೆನೆ ಬಂದ ನಂತರ ಒಣಗಿ ಸಾಯುವ ಜಾತಿಯ ಬಿದಿರು ಇದೆ. ದಿನ ಒಂದಕ್ಕೆ 5 ರಿಂದ 7 ಅಂಗುಲ ಬೆಳೆಯುವ ಸಾಮಥ್ಯದೊಂದಿಗೆ ಭೂಕುಸಿತ, ಭೂಕಂಪನ, ಭೂಮಿ ಸವೆತವನ್ನು ತಡೆಗಟ್ಟುವ ಗುಣ ಬಿದಿರಿನ ಬೇರುಗಳಿಗಿವೆ. ಪರಿಸರ ಸಂರಕ್ಷಣೆಯಲ್ಲಿ ಬಿದಿರಿನ ಪಾತ್ರದ ಮಹತ್ವ ಅರಿತು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಮುಂದಿನ ಆರು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಬಿದಿರು ಬೆಳೆಸಲು ಸರಕಾರ ನಿರ್ಧರಿಸಿದ್ದು ಕೆಲವೆಡೆ ಮಣ್ಣಿನ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಬಿಳಿಗಿರಿ ರಂಗನಬೆಟ್ಟು, ಬಂಡಿಪುರ, ನಾಗರಹೊಳೆ, ಕುದುರೆಮುಖ ಮುಂತಾದ ರಾಷ್ಟ್ರೀಯ ಉದ್ಯಾನ ಹಾಗೂ ವನ್ಯಜೀವಿಧಾಮಗಳಲ್ಲಿ ವಿಪರೀತವಾಗಿ ಬೆಳೆದ ಲಂಟಾನ, ಪಾರ್ಥೇನಿಯಂ, ನಂತಹ ಕಳೆ ಕೀಳುವ ವ್ಯರ್ಥ ಕಸರತ್ತು ಕೈಬಿಟ್ಟು ಬಿದಿರು ನಾಟಿ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ವ್ಯಾಪಕ ಪ್ರಮಾಣದಲ್ಲಿ ಬಿದಿರು ಬೆಳೆದಂತೆ ಕಳೆಸಸ್ಯಗಳು ತಾನಾಗಿಯೇ ನಾಶವಾಗಲಿದೆ. ಈ ಕುರಿತು ವೈಜ್ಞಾನಿಕ ಪರಿಶೀಲನೆಗಳು ನಡೆದು ಬಿದಿರು ಬೀಜಗಳನ್ನು ಬಿತ್ತಲಾಗಿದೆ.
ಕರ್ನಾಟಕದಲ್ಲಿ ಉತ್ತರಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ಬೆಳಗಾವಿ, ಚಿಕ್ಕಮಗಳೂರುಗಳಲ್ಲಿ ಬಿದಿರು ಹೇರಳವಾಗಿ ಬೆಳೆಯುತ್ತದೆ. ಭಾರತದಲ್ಲಿ ಒಟ್ಟಾರೆ ವಾರ್ಷಿಕ ವಹಿವಾಟು ಸುಮಾರು 66 ಸಾವಿರ ಕೋಟಿ ರೂ ಎಂದು ಅಂದಾಜಿಸಲಾಗಿದೆ. ಕುಶಲ ಕರ್ಮಿಗಳಿಗೆ ಬೇಕಾಗುವಷ್ಟು ಬಿದಿರು ಪೂರೈಕೆ ಆಗುತ್ತಿಲ್ಲ ಅಂದರೆ ಬಿದಿರಿನ ಬೆಳೆಯ ಅಭಿವೃದ್ಧಿ ಏನೇನು ಸಾಲದು. ನಮ್ಮ ದೇಶದಲ್ಲಿ ಬಿದಿರು ಬೀಜ ತಯಾರಿಕೆ ಕೇಂದ್ರ ಹಾಗೂ ನರ್ಸರಿಗಳು ಕಡಿಮೆ ಇದ್ದು ರೈತರಿಗೆ ಬಿದಿರಿನ ಬೆಳೆ ಕುರಿತು ಮಾಹಿತಿ, ಸಲಹೆ ಸೂಚನೆಗಳ ಕೊರತೆ ಇರುವ ಕಾರಣ ಬಿದಿರಿನ ಉತ್ಪಾದನೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ಭಾರತ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಅತಿಹೆಚ್ಚು ಬಿದಿರು ಈಶಾನ್ಯ ರಾಜ್ಯ ಹಾಗೂ ಮಧ್ಯಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ವಿಶ್ವದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಭಾರತದಲ್ಲಿ ಬಿದಿರು ಸಂಪನ್ಮೂಲವಿದೆ. ಹೊಸ ನಿಯಮಪ್ರಕಾರ ಖಾಸಗಿ ಪ್ರದೇಶದಲ್ಲಿ ಬೆಳೆದ ಬಿದಿರನ್ನು ಕಡಿಯಲು, ಬಳಸಲು ಅರಣ್ಯ ಇಲಾಖೆ ಅನುಮತಿ ಪಡೆಯಬೇಕಿಲ್ಲ. ಆದರೆ ಸರಕಾರಿ ಸ್ಥಳದಲ್ಲಿನ ಬಿದಿರಿಗೆ ಮೊದಲಿನ ಎಲ್ಲ ನಿರ್ಬಂಧ ಮುಂದುವರಿಯಲಿದೆ.
ಸಸ್ಯಶಾಸ್ತ್ರಜ್ಞರು ಬಿದಿರಿನ ಉದ್ಯಮಕ್ಕೆ ಹೆಚ್ಚಿನ ಮಾಹಿತಿ ನೀಡಿದರೆ ನವತರುಣರು ಈ ಉದ್ಯಮಕ್ಕೆ ಮನಸ್ಸು ಮಾಡಿದರೆ ಉಜ್ವಲ ಭವಿಷ್ಯದ ಉದ್ದಿಮೆ ಬಿದಿರು ಎನ್ನಬಹುದು. ಆಧುನಿಕ ಪ್ರಪಂಚ ಎಷ್ಟೇ ಮುಂದುವರಿದರು ಆದಿಕಾಲದಿಂದಲೂ ಉಳಿದುಕೊಂಡು ಬಂದ ಬಿದಿರಿನ ಬಳಕೆ ಇನ್ನೂ ಜೀವಂತವಾಗಿದೆ. ಬಿದಿರಿನ ಉತ್ಪನ್ನಗಳ ತಯಾರಿಕೆ ನಂಬಿಕೊಂಡು ಬದುಕುತ್ತಿರುವ ನೂರಾರು ಕುಟುಂಬಗಳಿರುವಂತೆ ಈಗ ಹೆದ್ದಾರಿ ತಡೆಗೋಡೆ ಅಳವಡಿಸಲು ಅಗತ್ಯವಾದ ಬಿದಿರು.
ಲತಾ ಸಂತೋಷ ಶೆಟ್ಟಿ ಮುದ್ದುಮನೆ