ಕೆದಂಬಾಡಿ ರಾಮಯ್ಯ ಗೌಡರ ನಾಯಕತ್ವದ ತುಳುನಾಡಿನ ವೀರ ರೈತಾಪಿ ಸೇನೆಯು ಬಾವುಟ ಗುಡ್ಡೆಯಲ್ಲಿ ಬ್ರಿಟಿಷ್ ಧ್ವಜ ಕಿತ್ತೆಸೆದು ತುಳುನಾಡಿನಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ವಿಜಯ ಪತಾಕೆ ಹಾರಿಸಿದ ಸ್ಮರಣಾರ್ಥ “ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ- ಸಂಸ್ಮರಣ ದಿನ’ ಕಾರ್ಯಕ್ರಮವನ್ನು ಎ. 5ರಂದು ಬೆಳಗ್ಗೆ 10.30ಕ್ಕೆ ನಗರದ ಅಲೋಶಿಯಸ್ ಕಾಲೇಜಿನ ಲೊಯೊಲ್ಲಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ವತಿಯಿಂದ ನಡೆಯುವ ಸಮಾರಂಭದಲ್ಲಿ ಕೆದಂಬಾಡಿ ರಾಮಯ್ಯ ಗೌಡ ರಾಜ್ಯ ಶೌರ್ಯ ಪ್ರಶಸ್ತಿಗಾಗಿ ಭಾರತೀಯ ಭೂ ಸೇನೆಯ ನಿವೃತ್ತ ಯೋಧ, 2016ರಲ್ಲಿ ನಿಗೂಢವಾಗಿ ಕಣ್ಮರೆಯಾಗಿ ಇನ್ನೂ ಪತ್ತೆಯಾಗದ ವಿಮಾನದಲ್ಲಿದ್ದ ಸುಬೇದಾರ್ ಏಕನಾಥ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಎಂ.ಬಿ. ಕಿರಣ್ ಬುಡ್ಲೆಗುತ್ತು ಅವರು ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ| ನಿರ್ಮಲಾ ನಂದನಾಥ ಮಹಾಸ್ವಾಮೀಜಿ ಅನುಗ್ರಹ ಸಂದೇಶ ನೀಡುವರು. ಮಂಗಳೂರು ಶಾಖಾ ಮಠದ ಡಾ| ಧರ್ಮಪಾಲನಾಥ ಸ್ವಾಮೀಜಿ ಉಪಸ್ಥಿತರಿದ್ದು, ಒಡಿಯೂರು ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ವಿಗಾರ್ ಜನರಲ್ ಅತಿ ವಂ| ಮ್ಯಾಕ್ಸಿಮ್ ನೊರೊನ್ಹಾ, ಎಸ್ವೈಎಸ್ ದ.ಕ. ಜಿಲ್ಲಾ ಅಧ್ಯಕ್ಷ ಹಾಗೂ ಮುಸ್ಲಿಂ ಧರ್ಮಗುರು ಮೌಲಾನ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಶುಭ ನುಡಿಗಳನ್ನಾಡಲಿದ್ದಾರೆ ಎಂದು ಅವರು ಹೇಳಿದರು.
1837ರ ಎಪ್ರಿಲ್ 5ರಂದು ಬ್ರಿಟಿಷರನ್ನು ಮಂಗಳೂರಿನಿಂದ ಹೊಡೆದೋಡಿಸಿ ಬಾವುಟಗುಡ್ಡೆ ಯಲ್ಲಿ ಪ್ರಥಮ ವಿಜಯ ಪತಾಕೆಯನ್ನು ಹಾರಿಸಿದ ಸ್ಮರಣಾರ್ಥ ಮೂರು ವರ್ಷಗಳಿಂದ ಸಂಸ್ಮರಣ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜತೆಗೆ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯನ್ನು ಬಾವುಟಗುಡ್ಡದಲ್ಲಿ ಅನಾವರಣಗೊಳಿಸಲಾಗಿದೆ ಎಂದು ಹೇಳಿದರು. ಸಮಿತಿ ಉಪಾಧ್ಯಕ್ಷ ಪಿ.ಎಚ್.ಆನಂದ್ ನೆರಿಯ, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಪುತ್ತಿಲ, ಪ್ರಧಾನ ಸಂಚಾಲಕ ಭಾಸ್ಕರ್ ದೇವಸ್ಯ, ಕೋಶಾಧಿಕಾರಿ ಶಿವರಾಮ ಗೌಡ ನಿನ್ನಿಕಲ್ ಉಪಸ್ಥಿತರಿದ್ದರು.
ಏಕನಾಥ ಶೆಟ್ಟಿ ಪರಿಚಯ
ಕುತ್ತಾರಿನ ಯೋಧ ಏಕನಾಥ ಶೆಟ್ಟಿ 1985ರಲ್ಲಿ ಭಾರತೀಯ ಭೂ ಸೇನೆಗೆ ಸೇರ್ಪಡೆಗೊಂಡು ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಅಪ್ರತಿಮ ಸಾಹಸ ಮೆರೆದು ಸೇನಾ ಪದಕ ಪಡೆದವರು. 2009ರಲ್ಲಿ ಸುಬೇದಾರ್ ರ್ಯಾಂಕ್ನೊಂದಿಗೆ ಸೇವಾ ನಿವೃತ್ತಿ ಹೊಂದಿದ್ದರು. ಆದರೆ ಊರಿನಲ್ಲಿ ದೊರೆತ ಉದ್ಯೋಗ ತ್ಯಜಿಸಿ ಮತ್ತೆ ಸೇನೆಯ ರಕ್ಷಣ ವಿಭಾಗಕ್ಕೆ ಸೇರ್ಪಡೆಗೊಂಡು ಕೇರಳದ ಕಣ್ಣೂರಿನಲ್ಲಿ ತರಬೇತಿ ಮುಗಿಸಿ ವಾಯುಸೇನೆಯಲ್ಲಿ ಎನ್ಸಿಸಿ ತರಬೇತುದಾರರಾಗಿ ನೇಮಕಗೊಂಡಿದ್ದರು. 2016ರ ಜುಲೈ 22ರಂದು ಸೇನಾ ಕರ್ತವ್ಯ ನಿಮಿತ್ತ ಚೆನ್ನೈನ ತಾಂಬರಂ ವಾಯುನೆಲೆಯಿಂದ ಅಂಡಮಾನ್ ಪೋರ್ಟ್ಬ್ಲೇರ್ಗೆ ವಿಮಾನದಲ್ಲಿ ತೆರಳುತ್ತಿದ್ದಾಗ ವಿಮಾನ ನಿಗೂಢವಾಗಿ ನಾಪತ್ತೆಯಾಗಿ ಈವರೆಗೂ ಸುಳಿವು ದೊರೆತಿಲ್ಲ. ವಿಮಾನದಲ್ಲಿದ್ದ 29 ಮಂದಿ ಸೈನಿಕರಲ್ಲಿ ಏಕೈಕ ಕನ್ನಡಿಗ ಯೋಧ ಏಕನಾಥ ಶೆಟ್ಟಿ ಎಂದು ಕಿರಣ್ ಬುಡ್ಲೆಗುತ್ತು ವಿವರಿಸಿದರು.