ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿಯವರು ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ-2022 ಪುರಸ್ಕೃತರು. ಇವರು ಕೇಂದ್ರ ಸರಕಾರದ ರಕ್ಷಾ ಮಂತ್ರಿ ಪ್ರಶಸ್ತಿ ಪುರಸ್ಕೃತ ತಂಡದ ಸದಸ್ಯರು. ಪುಣೆ ಕಂಟೋನ್ಮೆಂಟ್ ಬೋರ್ಡ್ ಆಸ್ಪತ್ರೆ ತಂಡದ ಸದಸ್ಯರು ಕೂಡಾ ಹೌದು. ಇವರ ಮಗ ಡಾ. ವೀರೆನ್ ಶೆಟ್ಟಿಯವರು ಹೋಮಿಯೋಪತಿಯಲ್ಲಿ ಮಕ್ಕಳ ವೈದ್ಯಕೀಯ ವಿಭಾಗದಲ್ಲಿ ಎಂ.ಡಿ. ಪದವೀಧರರು. ಖ್ಯಾತ ಸಮಾಜಸೇವಕರು, ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಡಾ. ಸುಧಾಕರ ಶೆಟ್ಟಿಯವರಿಗೆ ಹುಟ್ಟೂರು ಎಂದರೆ ಪಂಚಪ್ರಾಣ. ಅದಕ್ಕಾಗಿ ಮೂಡಬಿದ್ರೆ ಮತ್ತು ಕಟೀಲ್ನಲ್ಲಿ ಬೇಬಿ ಫ್ರೆಂಡ್ ಸಂಚಾರಿ ಮಕ್ಕಳ ಕ್ಲಿನಿಕ್ ಅನ್ನು ಆರಂಭಿಸುವ ಯೋಜನೆ ಹೊಂದಿದ್ದಾರೆ.
ಇದು ತುಳುನಾಡಿನ ನಾಗರಿಕರಿಗೆ ಸಂತಸದ ಸುದ್ಧಿ. “ನಗು ಮುಖದ ಮಗುವೇ ನಮ್ಮ ಅಂತಿಮ ಗುರಿ” ಎಂಬ ಧ್ಯೇಯ ವಾಕ್ಯದೊಂದಿಗೆ ಮಕ್ಕಳ ಆರೋಗ್ಯ ಭಾಗ್ಯಕ್ಕಾಗಿ ಡಾ. ಸುಧಾಕರ ಶೆಟ್ಟಿಯವರು ಬೇಬಿ ಫ್ರೆಂಡ್ ಸಂಚಾರಿ ಮಕ್ಕಳ ಕ್ಲಿನಿಕ್ ನ್ನು ಆರಂಭಿಸಲಿದ್ದಾರೆ. ಬೇಬಿ ಫ್ರೆಂಡ್ ಎಂದರೆ ಪುಣೆಯಲ್ಲಿ ಅವರು ಹೊಂದಿರುವ ಖ್ಯಾತ ಮಕ್ಕಳ ಆಸ್ಪತ್ರೆ.ಅದೇ ಹೆಸರಲ್ಲಿ ಅವರಿಲ್ಲಿ ಸಂಚಾರಿ ಮಕ್ಕಳ ಕ್ಲಿನಿಕ್ನ್ನು ಆರಂಭಿಸಲಿದ್ದಾರೆ. ಡಾ. ಸುಧಾಕರ ಶೆಟ್ಟಿಯವರು ಹೇಳುವಂತೆ – “ನಾವು ಮೂಡಬಿದ್ರಿ ಮತ್ತು ಮಂಗಳೂರಿನಲ್ಲಿ ಬೇಬಿ ಫ್ರೆಂಡ್ ಕ್ಲಿನಿಕ್’ ಶಾಖೆಯನ್ನು ಪ್ರಾರಂಭಿಸಲಿದ್ದೇವೆ. ಅದಕ್ಕೆ ಹೊಂದಿಕೊಂಡಂತೆ. ಕಟೀಲು ಸುತ್ತಮುತ್ತ, ಕಟೀಲು ಹಾಗೂ ಮೂಡಬಿದ್ರಿ ಗ್ರಾಮಾಂತರ ಪ್ರದೇಶದ ವಿವಿಧ ಗ್ರಾಮಗಳಲ್ಲಿ ಮಕ್ಕಳ ಸಂಚಾರಿ ಚಿಕಿತ್ಸಾಲಯವನ್ನು ಆರಂಭಿಸುತ್ತಿದ್ದೇವೆ.
ಆಯಾಯ ಪ್ರದೇಶದಲ್ಲಿ ಎಲ್ಲಾ ಗ್ರಾಮಗಳನ್ನು ಸೇರಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ನಿಮ್ಮ ತವರು ಗ್ರಾಮದಲ್ಲಿ ಪಂಚಾಯತಿ ವ್ಯಾಪ್ತಿಯಲ್ಲಿ ‘ಮಕ್ಕಳ ಮೊಬೈಲ್ ಕ್ಲಿನಿಕ್’ನ್ನು ನಿಲ್ಲಿಸಲು ನೀವು ಆಸಕ್ತಿ ಹೊಂದಿದ್ದರೆ ಮತ್ತು ಸ್ಥಳಾವಕಾಶ ನೀಡಿ ಸಹಕರಿಸಲು ಸಿದ್ಧರಿದ್ದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ. ಒಟ್ಟಾಗಿ, ತುಳುನಾಡಿನಾದ್ಯಂತ ಆರೋಗ್ಯ ಕಾಪಾಡುವ ನಿರ್ದಿಷ್ಟ ಗುರಿಯನ್ನಿಟ್ಟು ಕೊಂಡು ನಾವು ಕೆಲಸ ಮಾಡಲು ಸಿದ್ಧರಿದ್ದೇವೆ.” ಎಂದು ಹೇಳಿದ್ದಾರೆ.
ಡಾ. ಸುಧಾಕರ ಶೆಟ್ಟಿಯವರ ವಿಳಾಸ: ಡಾ. ಸುಧಾಕರ ಶೆಟ್ಟಿ, ಮಕ್ಕಳ ತಜ್ಞರು, ಬೇಬಿ ಫ್ರೆಂಡ್ ಕ್ಲಿನಿಕ್, ಪೊಲೀಸ್ ಆಸ್ಪತ್ರೆ, ಪುಣೆ, ಪುಣೆ ಕಂಟೋನ್ಮೆಂಟ್ ಆಸ್ಪತ್ರೆ, ರೆಡ್ಕ್ರಾಸ್ ಸೊಸೈಟಿ, ಪ್ರೊಫೆಸರ್, ಭಾರತಿ ವಿಶ್ವವಿದ್ಯಾಲಯ ಪುಣೆ, ಸಂಪರ್ಕಿಸಿ : 9657616322.
ಬೇಬಿ ಫ್ರೆಂಡ್ ಸಂಚಾರಿ ಮಕ್ಕಳ ಕ್ಲಿನಿಕ್ ನ ನುರಿತ ವೈದ್ಯರು ಹಳ್ಳಿ ಹಳ್ಳಿಗೆ ಹೋಗಿ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಉಪಚಾರ ಮಾಡಲಿದ್ದಾರೆ.ಅದರ ನಂತರ ವೈದ್ಯರನ್ನು ಮಕ್ಕಳ ಹೆತ್ತವರು ಮರು ಭೇಟಿ (Follow up)ಮಾಡಲು ಮೂಡಬಿದ್ರೆಯ ಖ್ಯಾತ ವೈದ್ಯ,ಸಮಾಜಸೇವಕ, ಸಂಘಟಕ ಡಾ. ಮೋಹನ್ ಆಳ್ವ ಅವರ ಆಳ್ವಾಸ್ ಹೆಲ್ತ್ ಸೆಂಟರ್ನಲ್ಲಿ ಬೇಬಿ ಫ್ರೆಂಡ್ ಸಂಚಾರಿ ಮಕ್ಕಳ ವೈದ್ಯಕೀಯ ತಂಡಕ್ಕೆ ಹೊರರೋಗಿ ವಿಭಾಗದ ಪ್ರತ್ಯೇಕ ವ್ಯವಸ್ಥೆ ಮಾಡಿದ್ದಾರೆಂದು ಡಾ. ಸುಧಾಕರ ಶೆಟ್ಟಿಯವರು ತಿಳಿಸಿದ್ದಾರೆ.