ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಗ್ರಂಥಪಾಲಕರ ಸಂಘ ಮತ್ತು ಆಳ್ವಾಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಅಂಗವಾಗಿ ‘ಗ್ರಂಥಾಲಯ ಸೇವೆಗಳ ನಾವಿನ್ಯತೆ ಹಾಗೂ ಪರಿಣಾಮಕಾರಿ ಬಳಕೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ’ ಎಂಬ ವಿಷಯದ ಕುರಿತು ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರ ಶನಿವಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಜರುಗಿತು. ಮಂಗಳೂರು ವಿವಿ ಕಾಲೇಜಿನ ಡಾ. ಮಾಧವ ಎಂಕೆ ಮಾತನಾಡಿ, ಗ್ರಂಥಾಲಯ ವಿಭಾಗದಲ್ಲಿ ಕೆಲಸ ಮಾಡುವವರು ಸರಸ್ವತಿಯ ದಾಸೋಹಿಗಳು. ಅವರ ಸೇವೆ ಅಕ್ಷರಶಃ ಮಾನವ ಸಮಾಜದ ಬೆಳಕಿನ ದೀಪ. ಜ್ಞಾನ ಹಂಚುವ ಕಾರ್ಯದಲ್ಲಿ ತೊಡಗಿರುವ ಅವರು ನಿಜಕ್ಕೂ ಪುಣ್ಯವಂತರು ಎಂದರು. ಈ ಜಗತ್ತಿನಲ್ಲಿ ಭಗವಂತನು ಮಾನವನಿಗೆ ನೀಡಿರುವ ಅತ್ಯಂತ ಅಮೂಲ್ಯವಾದ ವರವೇ ಸಮಯ. ಧನ, ಪದವಿ, ಸ್ಥಾನಮಾನದಲ್ಲಿ ವ್ಯತ್ಯಾಸಗಳಿರಬಹುದು. ಆದರೆ ಸಮಯ ಮಾತ್ರ ಎಲ್ಲರಿಗೂ ಸಮಾನವಾಗಿ ಹಂಚಲ್ಪಟ್ಟಿದೆ. ಈ ಸಮಯವನ್ನು ಹೇಗೆ ಬಳಸುತ್ತೇವೆ ಎಂಬುದರ ಮೇಲೆಯೇ ಜೀವನದ ಸಾಧನೆ ನಿರ್ಧಾರವಾಗುತ್ತದೆ ಎಂದರು. ಕಲಿಕೆಯ ದೇಗುಲವಾದ ಗ್ರಂಥಾಲಯದಲ್ಲಿ ಸಮಯ ಕಳೆಯುವವರು ನಿಜವಾದ ಸಾಧಕರು. ಓದುವ ಹವ್ಯಾಸ ಇರುವವರು ಎಂದಿಗೂ ಅಧೀರರಾಗುವುದಿಲ್ಲ. ಓದಿನಿಂದ ಮಾನಸಿಕ ಆರೋಗ್ಯ, ಏಕಾಗ್ರತೆ, ಒತ್ತಡಮುಕ್ತ ಜೀವನ ಸಾಧ್ಯವಾಗುವುದರ ಜೊತೆಗೆ ಜ್ಞಾನದ ಹಸಿವು, ಭಾವನಾತ್ಮಕ ಧೈರ್ಯ, ಸ್ಥೈರ್ಯ, ಕಲ್ಪನಾಶಕ್ತಿ ಮತ್ತು ಭಾಷಾಸಂಪತ್ತು ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳನ್ನು ಗ್ರಂಥಾಲಯದತ್ತ ಸೆಳೆಯುವ ಸೃಜನಶೀಲ ಕಾರ್ಯಕ್ರಮಗಳನ್ನು ರೂಪಿಸುವುದು ಕಾಲದ ಅವಶ್ಯಕತೆ” ಎಂದು ಸಲಹೆ ನೀಡಿದರು.

ಬದುಕನ್ನು ಹೇಗೆ ನೋಡುತ್ತೇವೆ ಎಂಬುದರ ಮೇಲೆ ಬದುಕು ನಿರ್ಮಾಣವಾಗುತ್ತದೆ. ಜೋಗದ ಜಲಪಾತವನ್ನು ನೋಡಿ ಕೆಲವರು ಕೇವಲ ಪ್ರಕೃತಿಯ ಸೌಂದರ್ಯವನ್ನು ಆನಂದಿಸುತ್ತಾರೆ. ಆದರೆ ಅದೇ ದೃಶ್ಯವನ್ನು ಸರ್ ಎಂ. ವಿಶ್ವೇಶ್ವರಯ್ಯ ಕಂಡಾಗ, ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ರೂಪಿಸುವ ಪ್ರೇರಣೆ ದೊರಕಿತು. ಅದೇ ಜೋಗದ ಜಲಪಾತವನ್ನು ಕವಿ ನಿಸಾರ್ ಅಹಮದ್ ನೋಡಿದಾಗ, ಪ್ರಕೃತಿಯ ಸೊಬಗಿನೊಂದಿಗೆ ಮಾನವ ಜೀವನವನ್ನು ಜೋಡಿಸಿ ‘ನಿತ್ಯೋತ್ಸವ’ ಎಂಬ ಅದ್ಭುತ ಕವಿತೆಯನ್ನು ರಚಿಸಿದರು. ಮತ್ತೊಬ್ಬ ಸಿನಿಮಾ ನಟ ಗಣೇಶ್ ಅದೇ ಜಲಪಾತವನ್ನು ನೋಡಿ ಹರ್ಷೋದ್ಗಾರಗೊಂಡು “ಕುಣಿದು ಕುಣಿದು ಬಾರೆ” ಎಂಬ ಹಾಡಿಗೆ ನೃತ್ಯ ಮಾಡಿದರು ಎಂದರು. ಆಳ್ವಾಸ್ ಕಾಲೇಜಿನ ಪ್ರಾಚರ್ಯ ಕುರಿಯನ್ ಮಾತನಾಡಿ, ಜಗತ್ತಿನ ಎಲ್ಲಾ ಸಾಧನೆಯ ಹಿಂದೆ ಗ್ರಂಥಾಲಯದ ಪಾತ್ರವಿದೆ. ವಿದ್ಯಾರ್ಥಿಗಳು ಕುವೆಂಪು, ಬೇಂದ್ರೆ, ಮಾಸ್ತಿಯನ್ನು ಓದಿಕೊಂಡು ಜ್ಞಾನದ ವರ್ಜನೆಗೆ ಶ್ರಮಿಸಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಸಾಧನಗಳ ಬಳಕೆ ಹೆಚ್ಚುತ್ತಿರುವುದರಿಂದ ವಿದ್ಯಾರ್ಥಿಗಳ ಗಮನ ಗ್ರಂಥಾಲಯದಿಂದ ದೂರವಾಗುತ್ತಿದೆ. ಇಂಟರ್ನೆಟ್, ಮೊಬೈಲ್, ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಸಮಯವನ್ನು ಆಕ್ರಮಿಸಿವೆ. ಈ ಹಿನ್ನೆಲೆ, ವಿದ್ಯಾರ್ಥಿಗಳನ್ನು ಪುನಃ ಗ್ರಂಥಾಲಯದತ್ತ ಸೆಳೆಯುವ ನವೀನ ಕಾರ್ಯಯೋಜನೆಗಳನ್ನು ರೂಪಿಸುವುದು ಕಾಲದ ಅವಶ್ಯಕತೆ. ಈ ನೆಲೆಯಲ್ಲಿ ಈ ಕಾರ್ಯಗಾರ ಹೊಸ ಸಾಧ್ಯತೆಗಳ ಕುರಿತು ಯೋಚಿಸಲಿ ಎಂದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಹಾಗೂ ಕೊಡುಗು ಜಿಲ್ಲೆಗಳ ಗ್ರಂಥಾಪಾಲಕರ ಸಂಘದ ನ್ಯೂಸ್ ಬುಲೆಟಿನ್ನ್ನು ಬಿಡುಗಡೆಗೊಳಿಸಲಾಯಿತು. ಸಂಘದ ನಿವೃತ್ತ ಗ್ರಂಥಪಾಲಕರಾದ ಬೇಸಂಟ್ ಕಾಲೇಜಿನ ಪ್ರೋ ವಾಸಪ್ಪ ಗೌಡ, ಮಾಹೆಯ ಲೀಲಾವತಿಯವರನ್ನು ಸನ್ಮಾನಿಸಲಾಯಿತು. ಅಧ್ಯಾಪಕ ಭೂಷಣಾ ಪ್ರಶಸ್ತಿ ವಿಜೇತರಾದ ಯಶೋಧಾ ಹಾಗೂ ವಿಜಯಲತಾ, ಶಿಕ್ಷಣಾ ಇಲಾಖೆಯಿಂದ ರಾಜ್ಯ ಮಟ್ಟದ ಅತ್ಯುತ್ತಮ ಗ್ರಂಥಪಾಲಕಿ ಪ್ರಶಸ್ತಿ ವಿಜೇತೆ ರಂಜಿತಾ ಸಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದ ಅದಿತಿ, ಈ ವರ್ಷ ಪಿಎಚ್ಡಿ ಪದವಿ ಪಡೆದ ಡಾ. ಪ್ರೇಮಾ, ಡಾ. ಲೋಕೇಶ್ ಹಾಗೂ ಡಾ. ಲೋಕನಾಥ್ ರವರನ್ನು ಸನ್ಮಾನಿಸಲಾಯಿತು. ಆಳ್ವಾಸ್ ಕಾಲೇಜಿನ ಗ್ರಂಥಾಲಯ ವಿಭಾಗ ಅಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದರಿಗೆ ಬಹುಮಾನ ವಿತರಿಸಲಾಯಿತು. ಮೈಸೂರು ವಿವಿಯ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ. ಆದಿತ್ಯ ಕುಮಾರಿ ಎಚ್, ಆಳ್ವಾಸ್ ಕಾಲೇಜಿನ ಮುಖ್ಯ ಗ್ರಂಥಪಾಲಕಿ ಶ್ಯಾಮಲತಾ ಇದ್ದರು. ಕಾರ್ಯಗಾರದಲ್ಲಿ ಸಂಘದ 85ಕ್ಕೂ ಅಧಿಕ ಸದಸ್ಯರು ಪಾಲ್ಗೊಂಡರು. ದಕ್ಷಿಣ ಕನ್ನಡ ಹಾಗೂ ಕೊಡುಗು ಜಿಲ್ಲೆಗಳ ಗ್ರಂಥಪಾಲಕರ ಸಂಘದ ಅಧ್ಯಕ್ಷೆ ಡಾ. ರೇಖಾ ಡಿ ಪೈ ಸ್ವಾಗತಿಸಿ, ಕಾರ್ಯದರ್ಶಿ ಡಾ. ವನಜಾ ಬಿ ವಂದಿಸಿ, ಸದಸ್ಯೆ ಡಾ. ಸುಜಾತಾ ಕಾರ್ಯಕ್ರಮ ನಿರೂಪಿಸಿದರು.