ಸಚಿವ ವಿ. ಸುನಿಲ್ ಕುಮಾರ್ ಅವರನ್ನು ಭೇಟಿಯಾಗಿ ಕುಂದಾಪುರ ಭಾಷಾ ಅಕಾಡೆಮಿ ರಚನೆಯ ಅಗತ್ಯವನ್ನು ಹೇಳಿ ಅಕಾಡೆಮಿ ಸ್ಥಾಪನೆಗೆ ಯತ್ನಿಸುವುದಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಅವರು ಮಾಧ್ಯಮದ ಜತೆ ಮಾತನಾಡಿ, ಮಂಗಳೂರು ವಿ.ವಿ.ಯಲ್ಲಿ ಅಧ್ಯಯನ ಪೀಠ ರಚನೆಗೆ ಆದೇಶ ಆಗಿದೆ. ಅಲ್ಲಿ ಶೈಕ್ಷಣಿಕ, ಸಂಶೋಧನೆ ಮೊದಲಾದ ಅಧ್ಯಯನಾತ್ಮಕ ಚಟುವಟಿಕೆಗಳು ನಡೆಯಲಿವೆ. ಇದು ಕುಂದಾಪುರ ಭಾಷೆಯ ಕುರಿತು ಮುಂದಿನ ಪೀಳಿಗೆಗೆ ಮಾಹಿತಿಯನ್ನು ಒದಗಿಸಿಕೊಡಲಿದೆ. ಇದರ ಜತೆಗೆ ಅಕಾಡೆಮಿ ರಚನೆಯಾದರೆ ಸಂಶೋಧನೆ, ಪ್ರಕಟನೆ ಜತೆಗೆ ಕಲೆ, ಸಂಸ್ಕೃತಿಯ ಪ್ರಸಾರಕ್ಕೂ ಕೊಡುಗೆ ನೀಡಿದಂತಾಗುತ್ತದೆ. ಸಚಿವರ ಕ್ಷೇತ್ರದಲ್ಲೇ ಹೆಬ್ರಿಯಲ್ಲಿ ಕುಂದಾಪುರ ಕನ್ನಡ ಮಾತನಾಡುವವರು ಇದ್ದಾರೆ. ಬ್ರಹ್ಮಾವರದಿಂದ ಬೈಂದೂರಿನವರೆಗೆ ಕುಂದಾಪುರ ಭಾಷೆ ಮಾತನಾಡುವವರು ಇದ್ದಾರೆ. ಆದ್ದರಿಂದ ಅಕಾಡೆಮಿ ರಚನೆಯಿಂದ ಈ ಭಾಗದ ಭಾಷೆಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಚುನಾವಣೆ ಘೋಷಣೆಗೆ ಮುನ್ನವೇ ಅಕಾಡೆಮಿ ರಚನೆ ನಿರ್ಧಾರ ಘೋಷಿಸಲು ಮನವಿ ಮಾಡುವುದಾಗಿ ಹೇಳಿದ ಅವರು, ಹಲವು ಪ್ರಥಮಗಳಿಗೆ ಹೆಸರಾದ ಕುಂದಾಪುರಕ್ಕೆ ಪ್ರತ್ಯೇಕ ಭಾಷಾ ಅಕಾಡೆಮಿ ಈ ಭಾಗದ ಅಗತ್ಯವೂ ಹೌದು. ಇದರಿಂದ ಭಾಷೆಗೆ ಯಾವುದೇ ವಿಧವಾದ ನಷ್ಟವಿಲ್ಲ . ಏಕಾಏಕಿ ನಿರಾಕರಿಸುವ ಬದಲು ಪರಿಶೀಲಿಸಬೇಕಿತ್ತು. ಅವರಿಗೆ ಅಗತ್ಯವುಳ್ಳ ಮಾಹಿತಿಯನ್ನು ನೀಡಿ ಅಕಾಡೆಮಿ ರಚನೆಗೆ ಯತ್ನಿಸುತ್ತೇನೆ. ಅಗತ್ಯಬಿದ್ದರೆ ಮುಖ್ಯಮಂತ್ರಿಗಳನ್ನೂ ಭೇಟಿಯಾಗುತ್ತೇನೆ ಎಂದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಉಪಸ್ಥಿತರಿದ್ದರು.