ಕನ್ನಡದಲ್ಲಿ ವಾದ, ಪ್ರತಿವಾದ ಹಾಗೂ ತೀರ್ಪುಗಳ ಮೇಲೆ ಅಭಿಪ್ರಾಯ ಮಂಡಿಸಿದ ಸರಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್)ರಿಗೆ ನೀಡಲಾಗುವ “ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿಗೆ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ಭಾಜನರಾಗಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನ್ಯಾಯಾಧೀಶರು, ಸರಕಾರಿ ಅಭಿಯೋಜಕರು ಹಾಗೂ ವಕೀಲರಿಗೆ ನೀಡುವ “ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ಪ್ರದಾನ ಕೋವಿಡ್ ಕಾರಣಕ್ಕಾಗಿ 2 ವರ್ಷದಿಂದ ನಡೆದಿರಲಿಲ್ಲ. ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಪ್ರಕಾಶ್ಚಂದ್ರ ಅವರು 2019-20ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದು ಆ ವೇಳೆ ಕುಂದಾಪುರದಲ್ಲಿರುವ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕರಾಗಿದ್ದರು.2019-20ನೇ ಹಾಗೂ 2020-21ನೇ ಸಾಲಿನ ಪ್ರಶಸ್ತಿ ಪ್ರದಾನ ರವಿವಾರ ಬೆಂಗಳೂರು ವಿಧಾನಸೌಧದಲ್ಲಿ ಜರಗಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಿ. ನರೇಂದರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು.

















































































































