ಕುಂದಾಪುರ ತಾಲೂಕಿನ ಯಡಮೋಗೆ ಗ್ರಾಮದ ಕೊಳಾಲಿ ಗೋವಿಂದ ಶೆಟ್ಟಿ ಮತ್ತು ಶ್ರೀಮತಿ ಸದಿಯಮ್ಮ ಶೆಟ್ಟಿ ಇವರ ಕಿರಿಯ ಪುತ್ರನಾಗಿ ಕೃಷ್ಣ ಶೆಟ್ಟಿ ದಿನಾಂಕ 09-08-1967 ರಂದು ಜನಿಸಿದರು. ಇವರು ತಂದೆಯಂತೆ ಸಭ್ಯತೆ, ವಿನಯತೆ, ಶಿಸ್ತನ್ನು ಪಾಲಿಸಿಕೊಂಡು ಬಂದವರು. ಶೀಲಾವತಿ ಎಂಬವರೊಡನೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಇವರು ಪವಿತ್ರ ಮತ್ತು ಪ್ರಸಾದ್ ಎಂಬ ಇಬ್ಬರು ಮಕ್ಕಳನ್ನು ಪಡೆದು ಸುಖ ಜೀವನವನ್ನು ನಡೆಸುತ್ತಿದ್ದಾರೆ. ಇವರಿಗೆ ಸಿದ್ದಾಪುರ, ಕುಂದಾಪುರ, ಉಡುಪಿ, ಮಂಗಳೂರು, ಬೆಂಗಳೂರು, ಇನ್ನು ಕೆಲವು ಕಡೆ ಇವರ ಸೇವೆಗೆ ಸನ್ಮಾನ ಸಮಾರಂಭಗಳು ಇವರ ಮುಡಿಯೇರಿದೆ. ಹೊರ ರಾಜ್ಯದ ಮುಂಬೈ, ಹೈದ್ರಾಬಾದ್ನಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಜನ ಮನ್ನಣೆಗೆ ಪಾತ್ರರಾದರು.
ಇವರು ಹುಟ್ಟೂರಿನಲ್ಲಿಯೇ 5ನೇ ತರಗತಿ ಪೂರೈಸಿ ಮನೆಯ ಕಷ್ಟವನ್ನು ನೋಡಲಾರದೆ ಮನೆಯ ಜವಾಬ್ದಾರಿಯನ್ನು ಹೊರಲು ಮುಂದಾಗುತ್ತಾರೆ. ಒಂದು ಕಡೆ ಮೂಲಭೂತ ಅವಶ್ಯಕತೆಗಳ ಕೊರತೆ ಇನ್ನೊಂದೆಡೆ ಮನೆಯ ಜವಾಬ್ದಾರಿ ಇವರನ್ನು ಯಾವುದಾದರು ಒಂದು ಕೆಲಸಕ್ಕೆ ಪ್ರೇರೆಪಿಸಿತು. 5ನೇ ತರಗತಿಯಲ್ಲಿಯೇ ಮನೆಯ ಆರ್ಥಿಕತೆಯ ತೊಂದರೆಗೆ ಸಿಲುಕಿ ಯಕ್ಷಗಾನಕ್ಕೆ ಸೇರುವುದು ಪ್ರಮುಖ ಕಾರಣವಾಗಿರಬಹುದು. ಇವರು ಪಾರ್ಥೇಶ್ವರ ಯಡಿಯಾಳರ ಮನೆಯಲ್ಲಿ ಕೆಲಸ ಮಾಡುತ್ತ 5ನೇ ತರಗತಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಅವರು ಶಾಲೆಗೆ ಹೋದಾಗಲೂ ಆಟ ಆಡಲು ಬಿಟ್ಟಾಗ ಆಟವಾಡದೆ ಯಕ್ಷಗಾನ ಕುಣಿದು ಸಂತೋಷ ಪಡುತಿದ್ದರು.
ಇದನ್ನು ಗಮನಿಸಿದ ಪಾರ್ಥೇಶ್ವರ ಯಡಿಯಾಳರ ಮಗ ಶಿವರಾಮ ಯಡಿಯಾಳರು ಇವರನ್ನು ಯಕ್ಷಗಾನಕ್ಕೆ ಸೇರಿಸುವುದಕ್ಕೆ ಮುಂದಾಗುತ್ತಾರೆ. ಕಲಿಕಾ ಕೇಂದ್ರದಲ್ಲಿ ತರಬೇತಿ ಪಡೆಯದೇ 1982ರಲ್ಲಿ ನೇರವಾಗಿ ಕಮಲಶಿಲೆ ಮೇಳವನ್ನು ಸೇರುತ್ತಾರೆ. ಅಲ್ಲಿ ಶ್ರೀಯುತ ಆಲೂರು ಸುರೇಂದ್ರ ಹಾಗೂ ಶ್ರೀಯುತ ವಿಶ್ವೇಶ್ವರ ಸೋಮಯಾಜಿ ಇವರಲ್ಲಿ ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡು ಮೊದಲು ಬಾಲಗೋಪಾಲ ಮಾಡುವ ಮೂಲಕ ರಂಗ ಪ್ರವೇಶ ಮಾಡುತ್ತಾರೆ. ತದಾನಂತರ ಸ್ತ್ರೀವೇಶವನ್ನು ಮಾಡಿದ ಇವರು ಮುಂದೆ ಪುಂಡು ವೇಷದತ್ತ ಹೆಚ್ಚಿನ ಒಲವನ್ನು ತೋರಿಸುತ್ತಾರೆ. ಹೀಗೆ ಒಂದೆಡೆ ಮೇಳದಲ್ಲಿ ತೊಡಗಿದರೆ ಮಳೆಗಾಲದಲ್ಲಿ ತನ್ನನ್ನು ಮೇಳಕ್ಕೆ ಸೇರಿಸಿದ ಶಿವರಾಮ ಯಡಿಯಾಳರ ಮನೆಯಲ್ಲಿ ಕೆಲಸ ಮಾಡುತ್ತಾರೆ. ಹೀಗೆ ಇವರಿಗೆ ಯಕ್ಷಗಾನಕ್ಕೆ ಸೇರಿದ 10 ವರ್ಷದಲ್ಲಿ “ಕೊಳಾಲಿ” ಎಂದೇ ಪ್ರಸಿದ್ದಿಯಾಗಿದ್ದಾರೆ. ಹಾಗೆಯೇ ಪುಂಡು ವೇಷದಾರಿಯಾಗಿ ರೂಪುಗೊಂಡ ಇವರು ಅಭಿಮನ್ಯು, ಕುಶ -ಲವ, ಬಬ್ರುವಾಹನ, ಸುದನ್ವ, ಕೃಷ್ಣ, ವಿಷ್ಣು ಮೊದಲಾದ ಪಾತ್ರಗಳು ಇವರನ್ನು ಕೈ ಬೀಸಿ ಕರೆಯತೋಡಗಿತು.
ಸುಮಾರು 5ವರ್ಷಗಳ ಕಾಲ ಕಮಲಶಿಲೆ ಮೇಳದಲ್ಲಿ ಸೇವೆ ಸಲ್ಲಿಸಿದ ಇವರು ನಂತರ ನಾರಾಯಣ ಶೆಟ್ಟಿಯವರ ಯಜಮಾನಿಕೆಯ ಸೌಕೂರು ಮೇಳದಲ್ಲಿ 2 ವರ್ಷ ಸೇವೆ ಸಲ್ಲಿಸಿ ನಂತರ ಎಂ.ಎಂ.ಹೆಗ್ಡೆಯವರ ಮಾರಣಕಟ್ಟೆ ಮೇಳದಲ್ಲಿ 14 ವರ್ಷ ಸುದೀರ್ಘ ಕಲಾಸೇವೆ ಮಾಡಿದ್ದಾರೆ. ಮಾರಣಕಟ್ಟೆ ಮೇಳದಲ್ಲಿ ಜೋಡಾಟದಲ್ಲಿ ಜನರಿಂದ ಗುರುತಿಸಿಕೊಂಡ ಒಬ್ಬ ಪ್ರತಿಭಾನ್ವಿತ. ಮಾರಣಕಟ್ಟೆ ಮೇಳವೇ ಅವರಿಗೆ ದಾರಿ ದೀಪವಾಯ್ತು ಎಂದರೆ ಅತಿಶಯೋಕ್ತಿಯಾಗಲಾರದು. ಅಲ್ಲಿಂದ ಮಂದಾರ್ತಿ ಮೇಳದಲ್ಲಿ ಒಂದು ವರ್ಷ ತಿರುಗಾಟ ಪೂರೈಸಿ ಕಮಲಶಿಲೆ ಮೇಳದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ ನಂತರ ಪೆರ್ಡೂರು ಮೇಳದಲ್ಲಿಯೂ ಕೂಡ ಮೂರು ವರ್ಷ ತಿರುಗಾಟ ಮಾಡಿ ತನ್ನ ಪ್ರತಿಭೆಯನ್ನು ರಂಗದ ಮೂಲಕ ತೋರ್ಪಡಿಸಿದ ವ್ಯಕ್ತಿಯಾಗಿದ್ದಾರೆ. ಹಾಗೆ ನೀಲಾವರ ಮೇಳದಲ್ಲಿ 2 ವರ್ಷ ಕಾಲ ಸೇವೆ ಮಾಡಿರುತ್ತಾರೆ. ಇಷ್ಟೊಂದು ಸುದೀರ್ಘವಾಗಿ ಯಕ್ಷಗಾನ ಸೇವೆ ನಿರತರಾದ ಇವರು ಸದ್ಯ ಮಾರಣಕಟ್ಟೆ ಮೇಳದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಹಂತ ಹಂತವಾಗಿ ಬೆಳೆದು ಬಡಗು ತಿಟ್ಟಿನ ಅಗ್ರಪಂಕ್ತಿಯ ಪುರುಷ ವೇಷದಾರಿಯಾಗಿ ರೂಪುಗೊಂಡಿದ್ದಾರೆ. ತನ್ನ ಬಣ್ಣದ ಬದುಕು ಒಂದೆಡೆಯಾದರೆ ತನ್ನ ನೈಜ ಬದುಕಿನೊಂದಿಗೆ ಬದುಕುತ್ತಿದ್ದಾರೆ. ಅತೀ ಪ್ರಾಮುಖ್ಯವಾಗಿ ಇವರಿಗೆ “ಕಲ್ಕೂರ ಪ್ರಶಸ್ತಿ”, “ಗಾನ ಸೌರಭ” ಪ್ರಶಸ್ತಿಗಳು ದೊರಕಿದೆ. ಕೆಲವು ವರ್ಷಗಳ ಹಿಂದೆ ಯಕ್ಷ ವಾಮನ ಎಂಬ ಬಿರುದು ಕೂಡ ದೊರೆತಿದೆ. ರಾಜ್ಯ ಹೊರ ರಾಜ್ಯ ವಿದೇಶಗಳಲ್ಲಿಯೂ ಕೊಳಲಿ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಇವರಿಗೆ ಅಭಿಮಾನಿಗಳು ಬಹಳಷ್ಟು ಮಂದಿಗಳು ಇದ್ದರೂ ಕೂಡ ಆರ್ಥಿಕತೆಯಲ್ಲಿ ಕಡು ಬಡವರಾಗಿದ್ದಾರೆ. ಇದೆ ಕಲಾವಿದನ ಬದುಕು.