‘ ಸಮಾಜಸೇವೆ ಒಂದು ದುಬಾರಿ ವ್ಯಸನ ‘ ಎಂದು ಹೇಳುವ ಹಲವರನ್ನು ನೋಡಿದ್ದೇನೆ! ನನಗೂ ಈ ಕ್ಷೇತ್ರದಲ್ಲಿ ಹಲವು ಕಹಿ ಅನುಭವಗಳು ಆಗಿವೆ. ಆದರೆ ನನ್ನೂರು ಕಾರ್ಕಳದ ಈ ಮೂವತ್ತೆರಡು ವರ್ಷದ ಯುವಕ ಅವಿನಾಶ್ ಶೆಟ್ಟಿಯವರು ಸಮಾಜಸೇವೆಯನ್ನು ಉಸಿರು ಮಾಡಿಕೊಂಡು ಓಡಾಟ ಮಾಡುವುದನ್ನು ನೋಡುವಾಗ ಯಾರಿಗಾದರೂ ಪ್ರೀತಿ, ಅಭಿಮಾನ ಮೂಡುತ್ತದೆ.
ಅವಿನಾಶ್ ತುಂಬಾ ಶ್ರೀಮಂತ ಕುಟುಂಬದಿಂದ ಬಂದವರು ಅಲ್ಲ. ಅವರು ಕಳೆದ ಕೆಲವು ವರ್ಷಗಳಿಂದ ಕಾರ್ಕಳದಲ್ಲಿ ‘ಅಮ್ಮಾ ಕನ್ಸಟ್ರಕ್ಷನ್ ‘ ಎಂಬ ಕಟ್ಟಡ ನಿರ್ಮಾಣದ ಉದ್ಯಮ ಮುನ್ನಡೆಸುತ್ತಿದ್ದಾರೆ. ಆರಂಭದಿಂದಲೂ ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಬಹಳಷ್ಟು ಅನ್ನೋದು ಅವಿನಾಶ್ ಮನಸ್ಥಿತಿ!
ಅಶಕ್ತರ ಸೇವೆಯಲ್ಲಿ ಸದಾ ಮುಂದು.
————————————–
ಅಶಕ್ತರಿಗೆ, ದುರ್ಬಲರಿಗೆ, ಬಡ ವಿದ್ಯಾರ್ಥಿಗಳಿಗೆ ಅವರದ್ದು ಪ್ರಚಾರ ಇಲ್ಲದ ಸೇವೆ. ತನ್ನ ಸಂಪಾದನೆಯ ಬಹು ದೊಡ್ಡ ಭಾಗ ಮತ್ತು ತನ್ನ ಮೇಲೆ ನಂಬಿಕೆ ಇರುವ ದಾನಿಗಳ ನೆರವು ಪಡೆದು ಅವರು ತನ್ನ ಬಳಿ ಸಹಾಯ ಕೇಳಿ ಬಂದವರಿಗೆ ನೆರವು ನೀಡುತ್ತ ಬಂದಿದ್ದಾರೆ. ದುರ್ಬಲ ರೋಗಿಗಳನ್ನು ಆಸ್ಪತೆಯವರೆಗೆ ಸಾಗಿಸಲು ಅವರ ಕಾರ್ ಆಂಬುಲೆನ್ಸ್ ಆಗುತ್ತದೆ. ಅಸಹಾಯಕ, ಅಶಕ್ತ ರೋಗಿಗಳಿಗೆ ಅವರು ಆಸ್ಪತ್ರೆಯ ಬಿಲ್ ಕಟ್ಟಲು ನೆರವಿಗೆ ನಿಲ್ಲುತ್ತಾರೆ. ಅವರ ಸ್ನೇಹಿತರ ಬಳಗದಲ್ಲಿ ಎಲ್ಲ ಜಾತಿ, ಧರ್ಮಗಳ ಯುವಕರೂ ಇದ್ದಾರೆ. ಅವರೆಲ್ಲರೂ ಅವಿನಾಶ್ ಶೆಟ್ಟರ ಹಾಗೆ ಸೇವಾಸಕ್ತಿ ಹೊಂದಿದವರು. ಯಾರಿಗೂ ಪ್ರಚಾರದ ಆಸೆ ಇಲ್ಲ!
ಸ್ಮಶಾನಕ್ಕೆ ಅಂತಿಮ ಸಂಸ್ಕಾರಕ್ಕಾಗಿ ಅನಾಥ ಹೆಣಗಳು ಬಂದರೆ ಅವಿನಾಶ್ ಅವರಿಗೆ ಮೊದಲ ಕಾಲ್ ಹೋಗುತ್ತದೆ ಮತ್ತು ಆ ಶವದ ಅಂತಿಮ ಸಂಸ್ಕಾರದ ವ್ಯವಸ್ಥೆ ಆಗುತ್ತದೆ.
ದೀಪಾವಳಿ ಪಟಾಕಿ ಮಾರಿ ವಿದ್ಯಾರ್ಥಿವೇತನ!
——————————————–
ಪ್ರತೀ ವರ್ಷ ದೀಪಾವಳಿಯ ಸಮಯ ಅವರು ಕಾರ್ಕಳದ ಗಾಂಧಿ ಮೈದಾನದಲ್ಲಿ ಪಟಾಕಿ ಸ್ಟಾಲ್ ಹಾಕುತ್ತಾರೆ. ಅವರು, ಅವರ ಹೆಂಡತಿ, ಅವರ ಮನೆಯವರೇ ದುಡಿಯುತ್ತಾರೆ. ಅಲ್ಲಿ ಉಳಿತಾಯವಾದ ಅಷ್ಟೂ ದುಡ್ಡು ಬಡ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ವಿನಿಯೋಗ ಆಗುತ್ತದೆ! ಈ ವಿಶಿಷ್ಟ ಯೋಜನೆಗೆ ‘ ಅಮ್ಮನ ನೆರವು’ ಎಂದವರು ಹೆಸರು ಇಟ್ಟಿದ್ದಾರೆ. ಈ ವರ್ಷ ಅವರು ಪಟಾಕಿ ಮಾರಿ ಬಂದ ಲಾಭ ಒಂದೂವರೆ ಲಕ್ಷದಷ್ಟು ಮೊತ್ತವನ್ನು ವಿದ್ಯಾರ್ಥಿಗಳ ಶೈಕ್ಷಣಿಕ ನಿಧಿಗೆ ನೆರವು ನೀಡಿದ್ದಾರೆ!
ಜಾತಿ, ಮತ ಮತ್ತು ಪಕ್ಷ ರಾಜಕೀಯ ಮೀರಿದ ಅವಿನಾಶ್!
——————————————————–
ಅವರು ಕಾರ್ಕಳ ಭಾರತೀಯ ಜನತಾ ಪಕ್ಷದ ಯುವ ಪದಾಧಿಕಾರಿ ಆಗಿದ್ದಾರೆ. ಆದರೆ ಅವಿನಾಶ್ ಅವರಿಗೆ ಎಲ್ಲ ಪಕ್ಷದಲ್ಲಿಯೂ ಗೆಳೆಯರು ಇದ್ದಾರೆ. ಅವರು ಕಾರ್ಕಳದ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಕೂಡ ಆಗಿದ್ದಾರೆ. ಕಳೆದ ತಿಂಗಳು ಗಾಂಧಿ ಮೈದಾನದಲ್ಲಿ ನಡೆದ ಕಾಂಗ್ರೆಸ್ ನಾಯಕ ದಿವಂಗತ ಗೋಪಾಲ್ ಭಂಡಾರಿ ಅವರ ಸಂಸ್ಮರಣ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ಮೂರು ದಿನಗಳ ಕಾಲ ಹಗಲು ರಾತ್ರಿ ದುಡಿದು ಯಶಸ್ವೀ ಮಾಡಿಕೊಟ್ಟದ್ದು ಮಾದರಿಯಾದ ನಿದರ್ಶನ. ಈ ಸಣ್ಣ ಪ್ರಾಯದಲ್ಲಿ ಅವರಿಗೆ ಜಾತಿ, ಮತ, ರಾಜಕೀಯ ಎಲ್ಲವನ್ನೂ ಮೀರಿ ನಿಲ್ಲಲು ಸಾಧ್ಯ ಆಗಿದೆ.
ಕಾರ್ಕಳ ತಾಲೂಕು ಯುವ ಬಂಟರ ಸಂಘದ ಪದಾಧಿಕಾರಿ ಆಗಿ ಅವರು ಮಾಡುತ್ತಿರುವ ಶ್ರೇಷ್ಟ ಸಮಾಜ ಸೇವೆ ಮತ್ತು ಚಟುವಟಿಕೆಗಳು ನಿಜಕ್ಕೂ ನನಗೆ ಅಭಿಮಾನ ತಂದಿವೆ.
ಕ್ರಿಕೆಟ್ ಟೂರ್ನಮೆಂಟ್ ಮಾಡಿ ಆರು ಲಕ್ಷ ರೂಪಾಯಿ ಸ್ಕಾಲರ್ ಶಿಪ್ ನೀಡಿದರು!
——————————————————
ಅವರದ್ದೇ ಮಾಲಕತ್ವದ ‘ಅಂಬಾ ಭವಾನಿ ಕ್ರಿಕೆಟರ್ಸ್’ ಎಂಬ ಕ್ರಿಕೆಟ್ ಸಂಸ್ಥೆಯ ಬ್ಯಾನರಿನಲ್ಲಿ ಈ ವಾರಾಂತ್ಯದಲ್ಲಿ ಕಾರ್ಕಳದ ಕೇಂದ್ರವಾದ ಗಾಂಧಿ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ಅವರು ಏರ್ಪಡಿಸಿದ್ದರು. ಅದರ ಉದ್ಘಾಟನೆಯ ಸಮಾರಂಭದಲ್ಲಿ ‘ ಅಮ್ಮನ ನೆರವು’ ಯೋಜನೆಯ ಮೂಲಕ ಒಟ್ಟು ಅರುವತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತಲಾ 10,000ರೂ. ನೆರವು ಅವರು ಹಸ್ತಾಂತರ ಮಾಡಿ ಖುಷಿ ಪಟ್ಟರು! ಅಂದರೆ ಆರು ಲಕ್ಷದ ಬಹು ದೊಡ್ಡ ಕೊಡುಗೆ!
ಅದರಲ್ಲಿ ದಾನಿಗಳ ಡೊನೇಶನ್ ಇತ್ತು ಮತ್ತು ಅವರದ್ದೇ ದುಡಿಮೆಯ ಬಹುದೊಡ್ಡ ಭಾಗ ಇತ್ತು! ನೆರವು ಹಸ್ತಾಂತರ ಮಾಡಿದ ಕರ್ನಾಟಕ ಸರಕಾರದ ಸಚಿವರಾದ ವಿ ಸುನೀಲ್ ಕುಮಾರ್ ಹೇಳಿದ್ದು – ಅವಿನಾಶ್ ನಿಜಕ್ಕೂ ಕಾರ್ಕಳದ ಆಸ್ತಿಯಾಗಿ ಬೆಳೆಯುತ್ತಿದ್ದಾರೆ. ಅವರಿಗೆ ಅಭಿನಂದನೆಗಳು.
ವೇದಿಕೆಯಲ್ಲಿದ್ದ ಎಲ್ಲ ಗಣ್ಯರ ಅಭಿಮತವೂ ಅದೇ ಆಗಿತ್ತು!
ಮತ್ತೂ ವಿಶೇಷ ಅಂದರೆ ಅಷ್ಟೂ ವಿದ್ಯಾರ್ಥಿ ವೇತನಗಳನ್ನು ಪಡೆದ ಯಾವ ವಿದ್ಯಾರ್ಥಿಯ ಅಂಕಪಟ್ಟಿ, ಆಧಾರ್ ಕಾರ್ಡ್ ಆದಾಯ ಪ್ರಮಾಣ ಪತ್ರ ಅಥವಾ ಜಾತಿ ಪ್ರಮಾಣ ಪತ್ರ ಕೂಡ ನೋಡದೆ ಕೇವಲ ಕಾಲೇಜುಗಳ ಮುಖ್ಯಸ್ಥರ ಶಿಫಾರಸ್ಸು ನೋಡಿ ಈ ಆಯ್ಕೆಗಳು ಆಗಿವೆ ಅನ್ನುವುದು!
ಹೀಗೆ ಮಾಡಿದರೆ ದುರುಪಯೋಗ ಆಗುವುದಿಲ್ಲವೇ ಎಂದು ಕೇಳಿದಾಗ ಅವಿನಾಶ್ ಹೇಳಿದ್ದು – ಅದು ಅಮ್ಮನ ನೆರವು ಸರ್! ಅಮ್ಮ ಕೊಟ್ಟ ದುಡ್ಡು ಯಾರೂ ಮಿಸ್ ಯೂಸ್ ಮಾಡಲು ಸಾಧ್ಯವೇ ಇಲ್ಲ!
ಅವಿನಾಶ್ ಅವರ ಮಾತುಗಳಲ್ಲಿ ಸತ್ಯವೇ ಇತ್ತು ಮತ್ತು ಸ್ಕಾಲರ್ ಶಿಪ್ ಪಡೆದ ವಿದ್ಯಾರ್ಥಿಗಳ ಕಣ್ಣಲ್ಲಿ ಕೃತಜ್ಞತೆಯ ಭಾವ ಇತ್ತು!
ಒಂದು ಕ್ಷಣ ಬಿಡುವು ಮಾಡಿಕೊಂಡು ಕಾರ್ಕಳದ ಕೊಹಿನೂರ್ ವಜ್ರಕ್ಕೆ ಒಂದು ಅಭಿನಂದನೆ ಹೇಳಿ ಆಯ್ತಾ