ಪುಣೆ ಬಂಟರ ಸಂಘದ ವಿಶ್ವಸ್ಥರಾಗಿ ಮುಂಬಯಿಯ ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕರಾದ ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಪ್ರವೀಣ್ ಭೋಜ ಶೆಟ್ಟಿಯವರು ಗೌರವಾದರಗಳಿಂದ ನೇಮಕಗೊಂಡಿದ್ದಾರೆ . ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಇತ್ತೀಚಿಗೆ ಸಂಘದ ಪದಾಧಿಕಾರಿಗಳೊಂದಿಗೆ ಮುಂಬಯಿಯ ಅವರ ನಿವಾಸಗಳಿಗೆ ತೆರಳಿ ಸಂಘದ ವತಿಯಿಂದ ಅವರನ್ನು ಗೌರವಿಸಿದರು . ಈ ಸಂದರ್ಭ ಪುಣೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಕೆ ಹೆಗ್ಡೆ , ಜತೆ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ನಿಟ್ಟೆ,ದಕ್ಷಿಣ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳಾದ ಸುಧಾಕರ ಸಿ ಶೆಟ್ಟಿ ,ದಾಮೋಧರ ಶೆಟ್ಟಿ ,ವಸಂತ್ ಶೆಟ್ಟಿ ಹಾಗೂ ದಿನೇಶ್ ಶೆಟ್ಟಿಯವರು ಉಪಸ್ಥಿತರಿದ್ದರು.
ಉದ್ಯಮ ಕ್ಷೇತ್ರದ ಮೇರು ಸಾಧಕ ಕನ್ಯಾನ ಸದಾಶಿವ ಶೆಟ್ಟಿ
ಮೂಲತಃ ಮಂಜೇಶ್ವರ ಕನ್ಯಾನ ಕುಳೂರಿನ ಫಕೀರ ಶೆಟ್ಟಿ ಹಾಗೂ ಶೀಲಾವತಿ ದಂಪತಿಗಳ ಸುಪುತ್ರರಾದ ಸದಾಶಿವ ಶೆಟ್ಟಿಯವರು ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಹುಟ್ಟೂರಿನಲ್ಲೇ ಮುಗಿಸಿ ಕಾಲೇಜು ಶಿಕ್ಷಣವನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಡೆದು ಬಳಿಕ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ ಎಸ್ ಸಿ ಮುಗಿಸಿದರು . ಬಳಿಕ ಉದ್ಯೋಗ ನಿಮಿತ್ತ ಮುಂಬಯಿ ಸೇರಿ ನಿರ್ಲೊನ್ ಲಿ . ಫಾರ್ಡ್ ಕೆಮಿಕಲ್ಸ್ ಇಂಡಸ್ಟ್ರೀಸ್ ಹೊಟೆಸ್ಟ್ ಫಾರ್ಮಾಸಿಟಿಕಲ್ಸ್ ಲಿ . ಹಾಗೂ ಇತರ ಕಂಪೆನಿಯಲ್ಲಿ ಸುಮಾರು ೨೦ ವರ್ಷ ಸೇವೆ ಸಲ್ಲಿಸಿ ಸ್ವಂತ ಉದ್ಯಮ ಮಾಡುವ ಕನಸು ಕಂಡರು . ತನ್ನ ಸಹೋದರ ರಘುರಾಮ ಕೆ ಶೆಟ್ಟಿಯವರೊಂದಿಗೆ ಪಾಲುದಾರಿಕೆಯಲ್ಲಿ ಹೇರಂಭಾ ಇಂಡಸ್ಟ್ರೀಸ್ ಲಿ .ಎಂಬ ಸಂಸ್ಥೆಯನ್ನು ಆರಂಭಿಸಿಸಿದರು . ಇವರ ಸಂಸ್ಥೆಯಲ್ಲಿ ಕೃಷಿ ಸಂಬಂಧಿಸಿದ ರಾಸಾಯನಿಕಗಳು ,ಗೊಬ್ಬರಗಳು ಹಾಗೂ ಔಷಧಗಳನ್ನು ಉತ್ಪಾದನೆ ಮಾಡಲಾಗುತ್ತಿದೆ . ಸಂಸ್ಥೆಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿ ಉತ್ಪನ್ನಗಳ ಫಲವಾಗಿ ಉತ್ತಮ ಇಳುವರಿ ,ರೋಗಮುಕ್ತ ಫಸಲು ಬರಲಾರಂಭಿಸಿತು . ಸಂಸ್ಥೆಯ ಉತ್ಪನ್ನಗಳಿಗೆ ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಬೇಡಿಕೆ ಹೆಚ್ಚಾಗಿ ಚೀನಾ ಸಹಿತ ಸುಮಾರು 60 ದೇಶಗಳಿಗೆ ಹೇರಂಭಾ ಕಂಪೆನಿಯ ಉತ್ಪನ್ನಗಳು ರಫ್ತು ಆಗುತ್ತಿದ್ದು ಸರಿಸುಮಾರು 1200 ಕೋಟಿ ವ್ಯವಹಾರ ನಡೆಸುತ್ತಿದ್ದು ಸುಮಾರು 1000 ಜನರಿಗೆ ಉದ್ಯೋಗಾವಕಾಶ ನೀಡಿದೆ . ಸದಾಶಿವ ಶೆಟ್ಟಿಯವರು ಸಂಸ್ಥೆಯ ಕಾರ್ಯಾಧ್ಯಕ್ಷರಾಗಿದ್ದು ಸಹೋದರ ರಘುರಾಮ ಶೆಟ್ಟಿಯವರು ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದಾರೆ . ಸದಾಶಿವ ಶೆಟ್ಟಿಯವರ ಪತ್ನಿ ಸುಜಾತಾ ಶೆಟ್ಟಿಯವರು ಕೂಡಾ ಸಂಸ್ಥೆಯ ನಿರ್ದೇಶಕಿಯಾಗಿದ್ದಾರೆ . ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಸದಾಶಿವ ಶೆಟ್ಟಿಯವರು ಬಂಟ ಸಮಾಜದ ಬಗ್ಗೆ ಅಪಾರವಾದ ಅಭಿಮಾನ ಹೊಂದಿದ್ದಾರೆ . ಮುಂಬಯಿ ಬಂಟರ ಸಂಘ ,ಹುಟ್ಟೂರಿನ ಸಮೀಪದ ಉಪ್ಪಳ ಕೊಂಡ ವೂರು ನಿತ್ಯಾನಂದ ಯೋಗಾಶ್ರಮ ಸೇರಿದಂತೆ ಹಲವಾರು ದೈವ ,ದೇವಸ್ಥಾನಗಳ ವಿಶ್ವಸ್ಥರಾಗಿದ್ದಾರೆ . ಸರಳ ,ಸಜ್ಜನರಾಗಿ ಯಾವುದೇ ಅಹಂ ಬೆಳೆಸಿಕೊಳ್ಳದೆ ನಿಸ್ವಾರ್ಥ ಭಾವದಿಂದ ಕಷ್ಟದಲ್ಲಿರುವ ಜನರಿಗೆ ಮಾನವೀಯ ಸೇವೆಯನ್ನು ನೀಡುವ ಓರ್ವ ಮಹಾದಾನಿಯಾಗಿದ್ದಾರೆ . ಪುಣೆ ಬಂಟರ ಸಂಘದ ಕಲ್ಪವೃಕ್ಷ ಸಮಾಜಕಲ್ಯಾಣ ಯೋಜನೆಗೆ ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿ ಸಂಘದ ಅಧ್ಯಕ್ಷರ ಕಾರ್ಯವನ್ನು ಶ್ಲಾಘಿಸಿದ್ದಾರೆ .
ಸಾಮಾಜಿಕ ಕ್ಷೇತ್ರದ ಶ್ರೇಷ್ಠ ವ್ಯಕ್ತಿತ್ವ ಪ್ರವೀಣ್ ಭೋಜ ಶೆಟ್ಟಿ
ಪ್ರವೀಣ್ ಭೋಜ ಶೆಟ್ಟಿಯವರು ಎಲ್ಲೂರು ಮಲ್ಲಬೆಟ್ಟು ಪರಾಡಿ ಭೋಜ ಶೆಟ್ಟಿ ಹಾಗೂ ಶಿರ್ಲಾಲು ಗಾಂಧಿ ಬೆಟ್ಟು ಅಂಡಾರಿನ ನಳಿನಿ ಭೋಜ ಶೆಟ್ಟಿ ದಂಪತಿಗಳ ಸುಪುತ್ರನಾಗಿದ್ದು ತನ್ನ ಪ್ರಾಥಮಿಕ ಶಿಕ್ಷಣವನ್ನು ತನ್ನ ತಂದೆಯವರು ಸೇವೆ ಸಲ್ಲಿಸಿದ ಎಲ್ಲೂರಿನ ಇರಂದಾಡಿ ಶಾಲೆಯಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು ಅದಮಾರು ಪದವಿ ಪೂರ್ವ ಕಾಲೇಜಿನಲ್ಲಿ ಹಾಗೂ ಬಿಕಾಂ ಪದವಿಯನ್ನು ಮೂಲ್ಕಿ ವಿಜಯಾ ಕಾಲೇಜಿನಿಂದ ಪಡೆದರು . 1981 ರಲ್ಲಿ ತನ್ನ ಚಿಕ್ಕಪ್ಪ ಸೀತಾರಾಮ ಕೆ ಶೆಟ್ಟಿಯವರ ಸಹಕಾರದಿಂದ ಮುಂಬಯಿಗೆ ಬಂದು ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ ಆದ ವೈ ಆರ್ ಶೆಟ್ಟಿ & ಕಂಪೆನಿಯಲ್ಲಿ ತರಬೇತಿ ಆರಂಭಿಸಿ ನಂತರ 1990 ರಲ್ಲಿ ಪ್ರವೀಣ್ ಬಿ ಶೆಟ್ಟಿ & ಕಂ “ತೆರಿಗೆ ಸಲಹಾಗಾರ ತನ್ನ ಸ್ವಂತ ಸಂಸ್ಥೆಯನ್ನು ಆರಂಭಿಸಿ ಪರೇಲ್ ಹಾಗೂ ವಿಲೇಪಾರ್ಲೆ ಗಳಲ್ಲಿ ಶಾಖೆಗಳನ್ನು ಹೊಂದಿದ್ದು ಸುಮಾರು `1200 ಕ್ಕಿಂತಲೂ ಅಧಿಕ ಸಂತೃಪ್ತ ಗ್ರಾಹಕರಿಗೆ ತೆರಿಗೆ ಸಲಹಾಗಾರರಾಗಿ ಪ್ರಾಮಾಣಿಕವಾಗಿ ಸೇವೆ ನೀಡಿ ಗ್ರಾಹಕರ ವಿಶ್ವಾಸವನ್ನು ಗಳಿಸಿದ್ದಾರೆ . ತನ್ನ ವೃತ್ತಿ ಇತರ ವ್ಯವಹಾರಗಳಿಗೂ ಚಾಲನೆ ನೀಡಿದ ಅವರು ನಿಸರ್ಗ ಹಾಸ್ಪಿಟಾಲಿಟಿ (ಪಿ)ಲಿಮಿಟೆಡ್ ಮಂಗಳೂರು ,ಗೋದಾವರಿ ಇನ್ ಹೋಟೆಲ್ಸ್ ಪ್ರೈವೇಟ್ ಲಿ . ದಹಿಸರ್ ,ಶ್ರೇಯಸ್ ಫಾಸ್ಟ್ ಫುಡ್ ಪ್ರೈವೇಟ್ ಲಿ . ಸಾಯಿ ಸಂಕಲ್ಪ್ ಟ್ರೇಡ್ಸ್ ಪ್ರೈವೇಟ್ ಲಿ . ಪರೇಲ್ ಸಂಸ್ಥೆಗಳಲ್ಲೂ ಪಾಲುದಾರರಾಗಿದ್ದಾರೆ .
1991-92 ರಲ್ಲಿ ಮುಂಬಯಿ ಬಂಟರ ಸಂಘದ ಆಂತರಿಕ ಲೆಕ್ಕ ಪರಿಶೋಧಕರಾಗಿ ನಂತರ ಸಂಘದ ಹೈಯರ್ ಎಜುಕೇಷನ್ ಸಮಿತಿಯ ಕಾರ್ಯದರ್ಶಿಯಾಗಿ ,,ಎಸ್ ಎಂ ಶೆಟ್ಟಿ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಲ್ಲದೆ ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಕೋಶಾಧಿಕಾರಿ ಹಾಗೂ ಪ್ರಸ್ತುತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ . 2008 -2012 ರಲ್ಲಿ ಎಲ್ಲೂರು ಶ್ರೀ ವಿಶ್ವನಾಥ ದೇವಸ್ಥಾನದ ಬ್ರಹ್ಮಕಲಶ ಜೀರ್ಣೋದ್ಧಾರದ ಮುಂಬಯಿ ಸಮಿತಿ ಕಾರ್ಯದರ್ಶಿಯಾಗಿ 2012 ರಿಂದ 2015 ರ ವರೆಗೆ ಅಲ್ಲಿನ ವಿಶ್ವಸ್ಥರಾಗಿ ಸೇವೆ ಸಲ್ಲಿಸಿದ್ದಲ್ಲದೆ ದಾನಿಗಳಿಂದ ಅತೀ ಹೆಚ್ಚು ದೇಣಿಗೆ ಸಂಗ್ರಹಿಸಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಿಂದ ಸಮ್ಮಾನಿತಗೊಂಡಿದ್ದಾರೆ . ಪತ್ನಿ ನೈನಿತಾ ಶೆಟ್ಟಿ ,ಪುತ್ರಿ ಅಭೀಕ್ಷಾ ಸಿದ್ಧಾಂತ್ ಶೆಟ್ಟಿಯವರೊಂದಿಗೆ ಸಂತೃಪ್ತ ಅವರದ್ದಾಗಿದ್ದು ಸಮಾಜಸೇವೆಯಲ್ಲಿ ಮುಂಚೂಣಿಯಾಗಿ ಗುರುತಿಸಿಕೊಂಡ ಇವರು ಪುಣೆ ಬಂಟರ ಸಂಘದ ಸೇವಾಕಾರ್ಯಗಳನ್ನು ಗಮನಿಸಿ ದೊಡ್ಡ ಮೊತ್ತದ ದೇಣಿಗೆಯೊಂದಿಗೆ ಇದೀಗ ವಿಶ್ವಸ್ಥರಾಗಿ ಸೇವೆ ಸಲ್ಲಿಸಲಿದ್ದಾರೆ . ಕೇವಲ ತನ್ನ ಸ್ವಾರ್ಥಕ್ಕಾಗಿ ಬದುಕದೆ ತಾನು ಬಂದ ಸಮಾಜಕ್ಕೂ ಋಣ ಸಂದಾಯ ಮಾಡುವುದು ತನ್ನ ಕರ್ತವ್ಯವೆಂದು ಭಾವಿಸಿ ಸಮಾಜಹಿತದಲ್ಲಿ ಧನ್ಯತೆಯನ್ನು ಕಾಣುತ್ತಿದ್ದೇನೆ ಎಂದು ಅಭಿಮತ ವ್ಯಕ್ತಪಡಿಸಿದರು .