ಪಿಂಪ್ರಿ – ಚಿಂಚ್ವಾಡ್ ಬಂಟರ ಸಂಘ ಪುಣೆಯಲ್ಲಿ ಮೊದಲ ಬಾರಿಗೆ ಕುಣಿತ ಭಜನೆಯನ್ನು ಆಯೋಜಿಸಿ ಒಂದು ಉತ್ತಮ ದೇವತಾ ಕಾರ್ಯಕ್ಕೆ ನಾಂದಿ ಹಾಡಿದೆ . ಭಜನೆ ಎಂದರೆ ಭಗವಂತನನ್ನು ತೃಪ್ತಿ ಪಡಿಸುವುದು .ನಾವು ದೈನಂದಿನ ಜೀವನದಲ್ಲಿ ಭಗವಂತನನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿಕೊಂಡಿದ್ದರೆ ನಮ್ಮ ಬದುಕು ಪಾವನವಾಗುತ್ತದೆ . ನಮಗೆ ಬದುಕಿನಲ್ಲಿ ಯೋಗ ಹಾಗೂ ಯೋಗ್ಯತೆಯನ್ನು ಕರುಣಿಸುವವನೂ ದೇವರೇ ಆಗಿದ್ದಾರೆ . ದೇವರ ಆಶೀರ್ವಾ ದವೊಂದಿದ್ದರೆ ಆಯುರಾರೋಗ್ಯ ಸುಖ ಸಮೃದ್ಧಿ ಸಾಧ್ಯವಾಗುತ್ತದೆ . ಕನಕದಾಸರು ಕೃಷ್ಣನನ್ನು ಭಕ್ತಿಯಿಂದ ಭಜಿಸಿ ಕೃಷ್ಣ ದೇವರನ್ನು ಪ್ರತ್ಯಕ್ಷಗೊಳಿಸಿ ಸಾಕ್ಷಾತ್ಕಾರಗೊಳಿಸಿಕೊಂಡಿದ್ದಾರೆ .ನಾವು ಯಾವುದೇ ಭಾಷೆಯಿಂದಲೂ ಭಗವಂತನ ಭಜನೆಯನ್ನು ಮಾಡಿ ದೇವರನ್ನು ಸಂತೃಪ್ತಿಗೊಳಿಸಬಹುದಾಗಿದೆ. ಹಾಡಿ ,ಕುಣಿದು ,ಕುಳಿತು ಯಾವುದೇ ರೀತಿಯಿಂದಲೂ ಭಜನೆ ಮಾಡಿದರೆ ದೇವರ ಅನುಗ್ರಹ ಖಂಡಿತಾ ಸಿಗುತ್ತದೆ .ಆದುದರಿಂದ ಭಜನೆ ಮೋಕ್ಷಕ್ಕೆ ಸುಲಭ ಸಾಧನವಾಗಿದೆ ಎಂದು ಪುಣೆಯ ಪ್ರಸಿದ್ಧ ಪುರೋಹಿತ ಹಾಗೂ ಜ್ಯೋತಿಷ್ಯರಾದ ವೇದಮೂರ್ತಿ ಹರೀಶ್ ಐತಾಳ್ ನುಡಿದರು .
ಅವರು ಡಿ . 10 ರಂದು ಶ್ರೀ ಖಂಡೋಬಾ ದೇವಸ್ಥಾನ ಆಕುರ್ಡಿ ಇಲ್ಲಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘ ಆಯೋಜಿಸಿದ ರಾಷ್ಟ್ರಮಟ್ಟದ ಕುಣಿತ ಭಜನಾ ಸ್ಪರ್ಧೆಯನ್ನು ದೀಪ ಪ್ರಜ್ವಲಿಸಿ ಚಾಲನೆ ನೀಡಿ ಆಶೀರ್ವಚನ ನೀಡುತ್ತಿದ್ದರು . ಅವರು ಮಾತನಾಡುತ್ತಾ ನಾಗದೇವರಿಗೆ ನಾಗನರ್ತನ ,ದೈವಗಳಿಗೆ ನರ್ತನಸೇವೆ ,ಭರತನಾಟ್ಯ ಮೂಲಕ ನೃತ್ಯ ಸೇವೆ ಇವುಗಳು ದೇವತಾರಾಧನೆಯ ವಿವಿಧ ಬಗೆಗಳು . ಅದೇ ರೀತಿ ಅಗ್ನಿಯಲ್ಲಿ ಪ್ರಾರ್ಥಿಸಿ ಭಕ್ತಿಯಿಂದ ನೈವೇದ್ಯವಾಗಿ ಹವಿಸ್ಸನ್ನು ಭಗವಂತನಿಗೆ ಅರ್ಪಿಸಿದರೆ ಅಲ್ಲಿ ಚೈತನ್ಯ ಉತ್ಪತ್ತಿಯಾಗಿ ನಮ್ಮ ಮನೆ, ಕುಟುಂಬ ಬೆಳಗುವುದು . ಪ್ರತಿಯೊಂದು ಜೀವಶಕ್ತಿಗೆ ಜಡಶಕ್ತಿಯ ಆವಶ್ಯಕತೆಯಿದೆ . ಭೂಮಿ ,ವಾಯು ,ನೀರು ,ಆಕಾಶ ,ಅಗ್ನಿಗಳಿಗೆ ಪ್ರತ್ಯೇಕ ದೇವತಾ ಶಕ್ತಿ ಇದೆ . ನಮಗೆ ಮಾನವ ಜನ್ಮವನ್ನು ಕರುಣಿಸಿದ್ದಕ್ಕಾಗಿ ನಾವು ದೇವರಿಗೆ ಅಭಿನಂದಿಸಬೇಕಾಗಿದೆ . ದೇವರ ಬಗ್ಗೆ ಭಯ ಭಕ್ತಿಯಿದ್ದರೆ ಮಾತ್ರ ನಾವು ಸ್ವಾಸ್ತ್ಯ ಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡಬಹುದಾಗಿದೆ . ಇಂದಿನ ಕಾಲದಲ್ಲಿ ನಮ್ಮ ಮಕ್ಕಳು ವ್ಯರ್ಥ ಕಾಲಹರಣ ಮಾಡುವುದನ್ನು ಬಿಟ್ಟು ದೇವರ ಬಗ್ಗೆ ತಿಳಿದುಕೊಂಡು ಜ್ಞಾನವೃದ್ಧಿಯ ಬಗ್ಗೆ ಚಿಂತಿಸಬೇಕಾಗಿದೆ . ನಮ್ಮನ್ನು ಕಷ್ಟಪಟ್ಟು ಬೆಳೆಸಿ ಸನ್ಮಾರ್ಗವನ್ನು ತೋರಿದ ನಮ್ಮ ತಂದೆ ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳುವ ಹೊಣೆಗಾರಿಗೆ ನಮಗಿರಬೇಕಾಗಿದೆ . ಇಂದು ಬಹಳ ಅರ್ಥಪೂರ್ಣ ಕಾರ್ಯಕ್ರಮವನ್ನು ಸಯೋಜಿಸಿದ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಅಭಿನಂದನೆಗಳು . ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯವನ್ನು ಈ ಸಂಸ್ಥೆ ಮಾಡುವಂತಾಗಲಿ ಎಂದರು.
ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಸ್ವಾಗತಿಸಿ ಮಾತನಾಡಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ನಮ್ಮೆಲ್ಲರ ಅಪೇಕ್ಷೆಯಂತೆ ಹಿರಿಯರೆಲ್ಲರ ಪ್ರೋತ್ಸಾಹದಿಂದ ಈ ಭಜನಾ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ .ಊರಿನಲ್ಲಿ ಯುವ ಜನತೆ ಅಲ್ಲಲ್ಲಿ ಕುಣಿತ ಭಜನೆಯನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದುದನ್ನು ಕಂಡು ಪುಣ್ಯನಗರಿ ಪುಣೆಯಲ್ಲಿಯೂ ಇಂತಹ ಒಂದು ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿ ಇಲ್ಲಿನ ಜನರಿಗೂ ಕುಣಿತ ಭಜನೆಯ ಬಗ್ಗೆ ತಿಳಿಯುವಂತೆ ಮಾಡುವುದೇ ನಮ್ಮ ಉದ್ದೇಶವಾಗಿದೆ . ಒಟ್ಟು 11 ತಂಡಗಳನ್ನು ಆಯ್ಕೆ ಮಾಡಿ ನಾವು ಕರೆಸಿದ್ದೇವೆ . ಇಲ್ಲಿ ಭಾಗವಹಿಸಿದ ಎಲ್ಲಾ ತಂಡಗಳು ಇದನ್ನು ಸ್ಪರ್ಧೆ ಎಂದು ಪರಿಗಣಿಸದೆ ದೇವರ ಕೆಲಸ ಎಂದು ಪರಿಗಣಿಸಿ ಸೇವೆಯನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿ ಎಂದರು .
ವೇದಿಕೆಯಲ್ಲಿ ಉಪಸ್ಥಿತರಿದ್ದ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ ಶೆಟ್ಟಿ ಮಾತನಾಡಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘವು ರಜತ ಸಂಭ್ರಮವನ್ನಾಚರಿಸುವ ಸಂಭ್ರಮದಲ್ಲಿದ್ದು ಕುಣಿತ ಭಜನೆಯ ಆಯೋಜನೆಯೊಂದಿಗೆ ಧಾರ್ಮಿಕ ಕಾರ್ಯದ ಮೂಲಕ ಚಾಲನೆ ದೊರಕಿರುವುದು ಅತೀವ ಸಂತಸ ತಂದಿದೆ . ಇಚ್ಛಾಶಕ್ತಿ ಹಾಗೂ ಕ್ರಿಯಾಶಕ್ತಿ ಇದ್ದರೆ ಯಾವುದೇ ಉತ್ತಮ ಕಾರ್ಯವನ್ನು ಮಾಡಬಹುದಾಗಿದೆ ಎಂಬುದಕ್ಕೆ ಅಧ್ಯಕ್ಷರಾದ ರಾಕೇಶ್ ಶೆಟ್ಟಿಯವರ ಕಾರ್ಯವೈಖರಿ ಉತ್ತಮ ಉದಾಹರಣೆಯಾಗಿದೆ . ಭಜನೆ ಇದ್ದಲ್ಲಿ ವಿಭಜನೆ ಎಂಬುದಿಲ್ಲ . ಒಗ್ಗಟ್ಟಿನಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಗಳನ್ನು ಸಂಘದ ಮೂಲಕ ಆಗುವತಾಗಲಿ ಎಂದರು .
ವೇದಿಕೆಯಲ್ಲಿ ಅತಿಥಿಗಳಾಗಿ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ ಶೆಟ್ಟಿ ,ರಘುರಾಮ ಪಿ ಶೆಟ್ಟಿ ,ವಿಠಲ್ ಎಲ್ ಶೆಟ್ಟಿ ,ಎರ್ಮಾಳ್ ವಿಶ್ವನಾಥ ಶೆಟ್ಟಿ ,ಕೆ .ಪದ್ಮನಾಭ ಶೆಟ್ಟಿ ,ಕಟ್ಟಿಂಗೇರಿಮನೆ ಮಹೇಶ್ ಹೆಗ್ಡೆ ,ನಿಕಟಪೂರ್ವ ಅಧ್ಯಕ್ಷರಾದ ವಿಜಯ್ ಶೆಟ್ಟಿ ಬೋರ್ಕಟ್ಟೆ ,ಮಾಜಿ ಉಪಾಧ್ಯಕ್ಷರಾದ ರಮೇಶ್ ಡಿ ಶೆಟ್ಟಿ ,ಪಿಂಪ್ರಿ -ಚಿಂಚ್ವಾಡ್ ಮಹಾನಗರಪಾಲಿಕೆಯ ಮಾಜಿ ನಗರಸೇವಕರಾದ ಉಲ್ಲಾಸ್ ಶೆಟ್ಟಿ ಹಾಗೂ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು . ಸಂಘದ ಸಂಘದ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ ,ಉಪಾಧ್ಯಕ್ಷ ಜಗದೀಶ್ ಶೆಟ್ಟಿ ,ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಬೆಳ್ಳಂಪಳ್ಳಿ ,ಕೋಶಾಧಿಕಾರಿ ಸುಧಾಕರ ಶೆಟ್ಟಿ ಪೆಲತ್ತೂರು ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ವಿಜಯ್ ಶೆಟ್ಟಿ ,ಭಜನಾ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ,ಯುವ ವಿಭಾಗದ ಕಾರ್ಯಾಧ್ಯಕ್ಷ ಆಕಾಶ್ ಶೆಟ್ಟಿ ಉಪಸ್ಥಿತರಿದ್ದರು . ಅತಿಥಿ ಗಣ್ಯರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು . ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಸ್ವಾಗತಿಸಿದರು . ಅರ್ಪಿತಾ ಶೆಟ್ಟಿ ಹಾಗೂ ಸುಧಾಕರ ಶೆಟ್ಟಿ ಪೆಲತ್ತೂರು ಕಾರ್ಯಕ್ರಮ ನಿರೂಪಿಸಿದರು .ಅವಿನಾಶ್ ಶೆಟ್ಟಿ ಮಂದಾಡಿಗುತ್ತು ವಂದಿಸಿದರು . ನಂತರ ಕುಣಿತ ಭಜನಾ ಸ್ಪರ್ಧೆಗೆ ಚಾಲನೆ ನೀಡಲಾಯಿತು .
