ಪಿಂಪ್ರಿ ಚಿಂಚ್ವಾಡ್ ತುಳು ಸಂಘದ ದಶಮಾನೋತ್ಸವದ ಇಂದಿನ ಕಾರ್ಯಕ್ರಮ ನನ್ನ ಜೀವಮಾನದಲ್ಲಿ ಕಂಡ ಅತ್ಯಂತ ಸರ್ವಶ್ರೇಷ್ಠ ಕಾರ್ಯಕ್ರಮವಾಗಿದೆ. ಹೊರನಾಡಿನಲ್ಲಿದ್ದರೂ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಕಾರ್ಯಕ್ರಮವನ್ನು ಅಚ್ಚುಕಟ್ಟಾ ಗಿಸಿದ ರೀತಿ, ಪ್ರತಿಯೊಬ್ಬರನ್ನೂ ಗೌರವಿಸುವ ಸಂಪ್ರದಾಯ ಅನನ್ಯವಾಗಿದ್ದು ಇದನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಈ ಸಂಘ ದೇಶದಾದ್ಯಂತ ಇರುವ ಅನ್ಯ ಸಂಘಗಳಿಗೆ ಮಾದರಿಯಾಗಿದೆ ಎಂದು ಕರ್ನಾಟಕ ಸರಕಾರದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಭಿಪ್ರಾಯಪಟ್ಟರು.
ಅವರು ಡಿ .4 ರಂದು ಚಿಂಚ್ವಾಡ್ ನ ರಾಮಕೃಷ್ಣ ಮೋರೆ ಸಭಾಗೃಹದಲ್ಲಿ ನಡೆದ ಪಿಂಪ್ರಿ ಚಿಂಚ್ವಾಡ್ ತುಳು ಸಂಘದ ದಶಮಾನೋತ್ಸವ ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ನಾವೆಲ್ಲ ತುಳುವರೆಂಬ ಹೆಮ್ಮೆ ನಮಗಿದೆ. ನಮ್ಮ ಅವಳಿ ಜಿಲ್ಲೆಗಳು ಹತ್ತು ಹಲವು ವೈಶಿಷ್ಟ್ಯವನ್ನು ಹೊಂದಿದ ಜಿಲ್ಲೆಗಳಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿದೆ. ದೇಶಕ್ಕೆ ೪ ರಾಷ್ಟ್ರೀಕೃತ ಬ್ಯಾಂಕ್ ಗಳನ್ನೂ ನೀಡಿದ ಹೆಗ್ಗಳಿಕೆ ನಮ್ಮ ಜಿಲ್ಲೆಗಳಿಗಿದೆ. ದೇಶದಲ್ಲಿಯೇ ಅಭಿವೃದ್ಧಿ ಹೊಂದಿದ ಜಿಲ್ಲೆಗಳಲ್ಲಿ ಮೊದಲ ಸ್ಥಾನ ನಮ್ಮ ಜಿಲ್ಲೆಗಳಿಗಿದೆ. ನಾವೆಲ್ಲ ತುಳುವರಾಗಿರುವುದರಿಂದಲೇ ಇಂತಹ ಅಭಿವೃದ್ಧಿ ಸಾಧ್ಯವಾಗಿದೆ. ತುಳುವರು ಎಲ್ಲೇ ನೆಲೆಸಿದರೂ ಯಶಸ್ವಿಯಾಗುತ್ತಾರೆ. ಯಾಕೆಂದರೆ ತಾಯಿ ಬೇರನ್ನು ಮರೆಯದೆ ಗಟ್ಟಿಗೊಳಿಸುವ ಕಾರ್ಯ ನಮ್ಮ ತುಳುವರಿಂದ ಆಗುತ್ತಿರುವುದು ಇದಕ್ಕೆಕಾರಣವಾಗಿದೆ. ಇಂತಹ ಉತ್ತಮ ಕಾರ್ಯ ಪಿಂಪ್ರಿ ಚಿಂಚ್ವಾಡ್ ತುಳು ಸಂಘ ಮಾಡುತ್ತಿರುವುದು ಅಭಿನಂದನೀಯವಾಗಿದೆ. ಈ ಸಂಘ ಸಾಧನೆಯ ಹಾದಿಯಲ್ಲಿ ಮುಂದುವರಿದು ರಜತ ಸಂಭ್ರಮವನ್ನು ಕಾಣುವಂತಾಗಲಿ. ಆ ಕ್ಷಣದಲ್ಲಿ ನಾವೆಲ್ಲ ಸಂಭ್ರಮದಿಂದ ಭಾಗವಹಿಸುವ ಅವಕಾಶ ನಮಗೆ ಒದಗಿ ಬರಲಿ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪತ್ರಕರ್ತ ಹಾಗೂ ಖ್ಯಾತ ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ ಬಹಳ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗಿಯಾದ ಸಂತಸ ನನ್ನಲ್ಲಿದೆ. ಯಾಂತ್ರೀಕೃತ ಜೀವನ ಶೈಲಿಯಲ್ಲಿ ಬದುಕುವ ಈ ಕಾಲದಲ್ಲಿಯೂ ಇಲ್ಲಿರುವ ತುಳುವರೆಲ್ಲರನ್ನೂ ಒಗ್ಗೂಡಿಸಿಕೊಂಡು ನಮ್ಮ ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ ಪೋಷಿಸುವ ಕಾರ್ಯ ತುಳು ಸಂಘದಿಂದ ಆಗುತ್ತಿರುವುದು ನಿಜಕ್ಕೂ ಅಭಿನಂದನೀಯವಾಗಿದ್ದು ತುಳುನಾಡಿಗೆ ದೊಡ್ಡ ಭವಿಷ್ಯವಿದೆ ಎಂಬುದಾಗಿ ಹೆಮ್ಮೆಯಿಂದ ಹೇಳಬಹುದಾಗಿದೆ. ತುಳುನಾಡಿನ ಚರಿತ್ರೆಯಂತೆಯೇ ಈ ಪುಣ್ಯ ಮಣ್ಣಿನ ಚರಿತ್ರೆಯೂ ರಾಷ್ಟ್ರೀಯ ಪರಿವರ್ತನೆಗೆ ಕಾರಣವಾಗಿದ್ದು ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜ್, ಬಾಲಗಂಗಾಧರ ತಿಲಕ್, ವಿ . ದಾ . ಸಾವರ್ಕರ್, ಚಾಪೇಕರ್ ಬಂಧುಗಳ ಕೊಡುಗೆಯನ್ನು ಮರೆಯುವಂತಿಲ್ಲ. ನಮ್ಮದು ಮಾತೃ ಪ್ರಧಾನವಾದ ಸಂಸ್ಕೃತಿಯಾಗಿದ್ದು ಸ್ತ್ರೀಯರನ್ನು ಪೂಜ್ಯಭಾವದಿಂದ ಕಾಣುತ್ತೇವೆ. ಪ್ರಕೃತಿ ಆರಾಧನೆಯಲ್ಲಿ ನಂಬಿಕೆಯುಳ್ಳ ನಾವು ಪಂಚೋಪಚಾರ ಪೂಜೆಯ ಮೂಲಕ ಉಪಕಾರ ಸ್ಮರಣೆಯನ್ನು ಮಾಡುತ್ತಾ ಮುಖ್ಯವಾಗಿ ಕೃಷಿ ಬದುಕಿನಲ್ಲಿ ದೇವರನ್ನು (ಬೆರ್ಮೆರ್ ) ಕಾಣುವವರು ನಾವು. ನಮ್ಮ ಹಿರಿಯರ ನಂಬಿಕೆ, ಆಚರಣೆಗಳು ಅರ್ಥಪೂರ್ಣವಾಗಿತ್ತು. ಆದರೆ ಇಂದು ನಾವು ಆಡಂಬರದ ಆಚರಣೆಗಳಿಗೆ ಮಾರುಹೋಗುತ್ತಿದ್ದು ದೈವದ ಮೇಲಿನ ನಂಬಿಕೆ ಕಡಿಮೆಯಾಗುತ್ತಿರುವುದು ದುರದೃಷ್ಟವಾಗಿದೆ. ಒಂದು ರೀತಿಯ ಗೊಂದಲ, ಜಿಜ್ಞಾಸೆಗಳಲ್ಲಿ ನಾವಿದ್ದು ನಮ್ಮ ನಂಬಿಕೆಯ ದೈವಾರಾಧನೆ ಅಧೋಗತಿಗೆ ಸಾಗುತ್ತಿದೆ. ದೈವದ ಮೇಲೆ ಅದಮ್ಯವಾದ ಭಕ್ತಿ, ನಂಬಿಕೆ ಇದ್ದರೆ ಮಾತ್ರ ದೈವದ ಸಾಕ್ಷಾತ್ಕಾರವೂ ನಮಗಾಗುತ್ತದೆ. ತುಳುನಾಡಿನ ಅಸ್ಮಿತತೆಯನ್ನು ಉಳಿಸುವ ಕಾರ್ಯ ಈ ಸಂಘದಿಂದ ನಿರಂತರ ನಡೆಯುತ್ತಿರಲಿ ಎಂದರು.
ಸಂಘದ ಸನ್ಮಾನ ಸ್ವೀಕರಿಸಿದ ಸಮಾಜಸೇವಕ ರವಿ ಕಟಪಾಡಿ ಮಾತನಾಡಿ ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ವಂದನೆಗಳು, ಹಣಕ್ಕಾಗಿ ಯಾವತ್ತೂ ಚಿಂತಿಸಿಲ್ಲ, ಕಷ್ಟದಲ್ಲಿರುವವರ, ಮಕ್ಕಳ ಸೇವೆಯಲ್ಲಿ ತೃಪ್ತಿಯನ್ನು ಕಾಣುತ್ತೇನೆ. ಊರಿನ ಜನರ ಸಹಕಾರ, ಮಾಧ್ಯಮಗಳ ಪ್ರೋತ್ಸಾಹ, ನನ್ನ ಮಿತ್ರವರ್ಗದ ಸಹಕಾರದಿಂದಾಗಿ ನಾನು ನೊಂದ ಮಕ್ಕಳಿಗೆ ಸಾಂತ್ವನ ನೀಡಲು ಸಾಧ್ಯವಾಯಿತು. ನನ್ನ ತಂದೆ ತಾಯಿ ನನಗೆ ಉತ್ತಮ ಸಂಸ್ಕಾರವನ್ನು ನೀಡಿದ್ದಾರೆ. ನಾವು ನಮ್ಮ ತಂದೆ ತಾಯಂದಿರನ್ನು ಚೆನ್ನಾಗಿ ನೋಡಿಕೊಂಡರೆ ದೇವರ ಆಶೀರ್ವಾದ ಖಂಡಿತಾ ನಮ್ಮ ಮೇಲಿರುತ್ತದೆ. ಆದುದರಿಂದ ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸುವುದು ಅತೀ ಅಗತ್ಯವಾಗಿದೆ. ಎಲ್ಲಿಯವರೆಗೆ ಸಾಧ್ಯವಾಗುತ್ತೋ ಅಲ್ಲಿಯವರೆಗೆ ಬಡ ಮಕ್ಕಳಿಗೆ, ಅನಾರೋಗ್ಯಪೀಡಿತರಿಗೆ ನೆರವು ನೀಡುವ ನನ್ನ ಕಾಯಕ ಮಾಡಬಯಸುತ್ತೇನೆ . ನನ್ನ ಜೀವನದಲ್ಲಿ ನಾನು ದುಡಿದು ನೆಮ್ಮದಿಯಿಂದ ಬದುಕುತ್ತಿದ್ದೇನೆ ಇದಕ್ಕಿಂತ ಇನ್ನೇನೂ ನನಗೆ ಆಸೆಯಿಲ್ಲ. ಜನರ ಸೇವೆಯಲ್ಲಿ ತೃಪ್ತಿಯನ್ನು ಕಾಣುತ್ತಿದ್ದೇನೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಪುಣೆಯ ಮಕ್ಕಳ ತಜ್ಞ ಡಾ . ಸುಧಾಕರ ಶೆಟ್ಟಿಯವರು ಸಂಘದ ಗೌರವವನ್ನು ಸ್ವೀಕರಿಸಿ ಮಾತನಾಡಿ ಜೀವನದಲ್ಲಿ ನಾನೇನಾದರೂ ಸಾಧನೆ ಮಾಡಿದ್ದರೆ ಅದು ನನ್ನ ಕರ್ತವ್ಯವೆಂದು ಪರಿಗಣಿಸಿದ್ದೇನೆ. ಇಂದು ನನ್ನ ಸೇವೆಯನ್ನು ಪರಿಗಣಿಸಿ ಗೌರವಿಸಿದ್ದಕ್ಕಾಗಿ ಕೃತಜ್ಞತೆಗಳು ಎಂದರು.
ಸಂಘದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್ ಅಧ್ಯಕ್ಷ ಸ್ಥಾನದಿಂದ ಮಾತನಾಡಿ ಇಂದಿನ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದ ಸಂಘದ ಪದಾಧಿಕಾರಿಗಳಿಗೆ, ಮಾಜಿ ಅಧ್ಯಕ್ಷರಿಗೆ, ಯುವ ವಿಭಾಗದ ಸದಸ್ಯರಿಗೆ, ಮುಖ್ಯವಾಗಿ ನೆರವು ನೀಡಿದ ದಾನಿಗಳಿಗೆ, ಸಹಕಾರ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ ಚಿರಋಣಿಯಾಗಿದ್ದೇನೆ. ಸಂಘವೊಂದನ್ನು ಸ್ಥಾಪಿಸುವುದು ಸುಲಭ, ಆದರೆ ಹೊಣೆಗಾರಿಕೆಯನ್ನರಿತು ಮುನ್ನಡೆಸುವುದು ಅಷ್ಟು ಸುಲಭವಲ್ಲ. ನಮ್ಮ ಸಂಘದ ಮೂಲಕ ತುಳುವರನ್ನು ಒಗ್ಗೊಡಿಸುವ, ಎಲ್ಲರನ್ನೂ ಸಂಪರ್ಕಿಸುವ ಕಾರ್ಯವನ್ನು ಮಾಡುವುದರೊಂದಿಗೆ ನಮ್ಮ ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ ಪೋಷಿಸುವ ಕಾರ್ಯವನ್ನೂ ಪ್ರಾಮಾಣಿಕತೆಯಿಂದ ಮಾಡುತ್ತಿದ್ದೇವೆ. ಸಮಾಜಕ್ಕೆ ನಮ್ಮ ಒಬ್ಬರಿಗೊಬ್ಬರ ಪರಿಚಯ ಆಗಬೇಕಿದ್ದರೆ ಸಂಘ ಮುಖ್ಯ. ಆದುದರಿಂದ ಪ್ರತಿಯೊಬ್ಬರೂ ಸಂಘದೊಂದಿಗೆ ಕೈಜೋಡಿಸಿ ಸಂಘವನ್ನು ಬಲಪಡಿಸುವಲ್ಲಿ ಸಹಕಾರ ನೀಡಬೇಕು. ಇಂದು ತಮ್ಮ ಅಮೂಲ್ಯ ಸಮಯವನ್ನು ನೀಡಿ ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ಶೋಭೆ ನೀಡಿದ ಅತಿಥಿಗಣ್ಯರಿಗೆ ವಿಶೇಷವಾದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಕಟ್ಟಿಂಗೇರಿ ಮನೆ ಮಹೇಶ್ ಹೆಗ್ಡೆ, ನಿಕಟಪೂರ್ವ ಅಧ್ಯಕ್ಷರಾದ ಶ್ಯಾಮ್ ಸುವರ್ಣ, ಉಪಾಧ್ಯಕ್ಷರಾದ ದಿನೇಶ್ ಶೆಟ್ಟಿ ಉಜಿರೆ, ಶೇಖರ್ ಪೂಜಾರಿ ಚಿತ್ರಾಪು, ಪ್ರಧಾನ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಕುರ್ಕಾಲ್, ಕೋಶಾಧಿಕಾರಿ ಗಣೇಶ್ ಅಂಚನ್, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಪೆರ್ಡೂರು, ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ನಿತಿನ್ ಶೆಟ್ಟಿ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಮಿಥುನ್ ಶೆಟ್ಟಿ ಉಪಸ್ಥಿತರಿದ್ದರು. ಅತಿಥಿಗಳನ್ನು ಶಾಲು ಹೊದೆಸಿ, ವೀಳ್ಯದೆಲೆ, ಹಿಂಗಾರ, ಪುಷ್ಪಗುಚ್ಛ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರನ್ನು ಗೌರವಿಸಲಾಯಿತು. ರಾಜೇಶ್ ಶೆಟ್ಟಿ ಕುರ್ಕಾಲ್, ಸಂತೋಷ್ ಕಡಂಬ, ನಿತಿನ್ ಶೆಟ್ಟಿ ನಿಟ್ಟೆ, ಶ್ಯಾಮ್ ಸುವರ್ಣ ಅತಿಥಿಗಳನ್ನು ಪರಿಚಯಿಸಿದರು. ದಿನೇಶ್ ಶೆಟ್ಟಿ ಉಜಿರೆ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಖಾಸಗಿ ಟಿವಿ ವಾಹಿನಿಯ ನಿರೂಪಕ ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು. ಸಭಾ ಕಾರ್ಯಕ್ರಮವನ್ನು ನೂತನ್ ಸುವರ್ಣ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ದಂಗವಾಗಿ ಸಮಿತಿ ಸದಸ್ಯರಿಂದ ನೃತ್ಯ ವೈವಿಧ್ಯಗಳು, ಕಿರು ನಾಟಕ ಪ್ರದರ್ಶನ ಹಾಗೂ ಮನೋರಂಜನೆಯಂಗವಾಗಿ ಶಿಮಂತೂರು ಚಂದ್ರಹಾಸ ಸುವರ್ಣ ನಿರ್ದೇಶನದಲ್ಲಿ ತುಳು ನಾಟಕ “ಆಲಡೆದ ಅಪ್ಪೆನ ಓಲಗ”ಬಂಪ್ರದರ್ಶನಗೊಂಡಿತು. ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.