
ಹಿಂದೂಗಳು ಜಾತಿಯ ಹೆಸರಿನಲ್ಲಿ ವಿಂಗಡನೆ ಆಗದೇ ಹಿಂದೂಗಳೆಂದು ಒಟ್ಟಾಗಬೇಕಾಗಿದೆ. ಹಿಂದೂ ಮಕ್ಕಳಿಗೆ ಧಾರ್ಮಿಕ, ಸಂಸ್ಕಾರಯುತ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಉದ್ಯಮಿ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು. ಅವರು ಬಜಗೋಳಿಯ ಶ್ರೀ ಗಣಪತಿ ಸಭಾಭವನದಲ್ಲಿ ಹಿಂದೂ ಜನ ಜಾಗೃತಿ ಸಮಿತಿ ವತಿಯಿಂದ ನಡೆದ “ಹಿಂದೂ ರಾಷ್ಟ್ರ ಜಾಗೃತಿ ಸಂವಾದ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯುವ ಪೀಳಿಗೆಯಲ್ಲಿ ರಾಷ್ಟ್ರೀಯತೆ ಮತ್ತು ಧಾರ್ಮಿಕತೆಯನ್ನು ಹೆಚ್ಚಿಸುವುದು ಅವಶ್ಯವಾಗಿದೆ. ಈ ದಿಸೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ಲಾಘನೀಯ ಪ್ರಯತ್ನ ಎಂದರು.


ಸನಾತನ ಸಂಸ್ಥೆಯ ಸೌ. ಅಶ್ವಿನಿ ನಾಯಕ್ ಮಾತನಾಡಿ, “ಯತೋ ಧರ್ಮಸ್ತತೋ ಜಯ” ಎಲ್ಲಿ ಧರ್ಮವಿರುತ್ತದೆಯೋ ಅಲ್ಲಿ ಜಯವಿರುತ್ತದೆ. ಕೇವಲ ಜನ್ಮತಃ ಹಿಂದೂ ಎಂದು ಕರೆಸಿಕೊಳ್ಳುವುದರಲ್ಲಿ ಸಾರ್ಥಕತೆಯಿಲ್ಲ. ನಮ್ಮ ಕರ್ಮ ಮತ್ತು ಆಚರಣೆಗಳಲ್ಲಿ ಹಿಂದುತ್ವ ಪ್ರತಿಫಲಿಸಬೇಕು ಎಂದರು. ಇಂದು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದಾಗಿ ನಾವು ನಮ್ಮ ಭವ್ಯ ಪರಂಪರೆಯನ್ನೇ ಮರೆಯುತ್ತಿದ್ದೇವೆ ನಮ್ಮ ಪ್ರತಿಯೊಂದು ಹಬ್ಬ ಸಂಪ್ರದಾಯ ಮತ್ತು ಉತ್ಸವಗಳ ಹಿಂದೆ ವೈಜ್ಞಾನಿಕ ಧರ್ಮಶಾಸ್ತ್ರ ಅಡಗಿದೆ. ಈ ಶಾಸ್ತ್ರಗಳನ್ನು ಅರಿತು ಶ್ರದ್ಧೆಯಿಂದ ಆಚರಿಸುದಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಮತ್ತು ಬೆಳಗಲು ಸಾಧ್ಯವೆಂದರು.
ಲವ್ ಜಿಹಾದ್, ಮತಾಂತರ, ದ್ವೇಷ ಭಾಷಣ ಕಾಯ್ದೆ, ಹಿಂದೂಗಳ ಬಂಧನ ಜನಸಂಖ್ಯಾ ಸ್ಪೋಟ ಮತ್ತು ವಕ್ಫ್ ಕಾಯ್ದೆಯಂತಹ ಗಂಭೀರ ಸವಾಲುಗಳನ್ನು ಎದುರಿಸಲು ಭಾರತವನ್ನು ಸಂವಿಧಾನ ಬದ್ಧ ಹಿಂದೂ ರಾಷ್ಟ್ರವನ್ನಾಗಿ ಘೋಷಿಸುವುದು ಇಂದಿನ ಅನಿವಾರ್ಯತೆವಾಗಿದೆ. ಅಯೋಧ್ಯೆಯ ರಾಮ ಮಂದಿರದಂತೆ ಹಿಂದೂ ರಾಷ್ಟ್ರದ ಉದಯವೂ ಕೂಡ ನಿಶ್ಚಿತವಾಗಿದೆ ಎಂದು ಹಿಂದೂ ಜನ ಜಾಗೃತಿ ಸಮಿತಿಯ ದಕ್ಷಿಣ ಕರ್ನಾಟಕದ ಸಮನ್ವಯಕರಾದ ಚಂದ್ರ ಮೊಗೇರ ಹೇಳಿದರು. ಹಿಂದೂಗಳು ಜಾತಿ ಪಂಥ ಮರೆತು ಸಂಘಟಿತರಾಗಬೇಕು. ಕೇವಲ ಭಾಷಣಕ್ಕೆ ಸೀಮಿತವಾಗದೇ ಪ್ರತಿದಿನ ಒಂದು ಗಂಟೆ ಧರ್ಮ ಕಾರ್ಯಕ್ಕಾಗಿ ಮೀಸಲಿಡಬೇಕು. ಛತ್ರಪತಿ ಶಿವಾಜಿ ಮಹಾರಾಜರ ‘ಹಿಂದವಿ ಸ್ವರಾಜ್ಯ’ದ ಸಂಕಲ್ಪ ದೊಂದಿಗೆ ಹಿಂದೂ ರಾಷ್ಟ್ರದ ನಿರ್ಮಾಣ ಯಜ್ಞದಲ್ಲಿ ಕೈಜೋಡಿಸಬೇಕೆಂದು ಎಂದವರು ಕರೆ ನೀಡಿದರು.
ಚೇತನಾ ಪ್ರಭು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹಿಂದೂ ಜನಜಾಗೃತಿ ಸಮಿತಿಯ ವಿಶ್ವನಾಥ್ ನಾಯಕ್ ಕಾರ್ಯಕ್ರಮದ ಉದ್ದೇಶ ತಿಳಿಸಿದರು.


























































































































