ಮಂಗಳೂರು: ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ವತಿಯಿಂದ ನಡೆಯುವ  ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದ ೩೬ನೆಯ ಕೃತಿ ಬಿಡುಗಡೆಯಾಯಿತು. ಕನ್ನಡ ಸಹಾಯಕ ಪ್ರಾಧ್ಯಾಪಕ, ಲೇಖಕ ಡಾ. ಎನ್. ಪ್ರವೀಣ್ಚಂದ್ರ ಇವರ ಲೇಖನ ಸಂಕಲನ ಸ್ಪೂರ್ತಿಯ ಚಿಲುಮೆಗಳು ಕೃತಿ ಬಿಡುಗಡೆ ಕಾರ್ಯ ಕ್ರಮವು ಮಂಗಳೂರು ಪತ್ರಿಕಾ ಭವನದಲ್ಲಿ ಅಕ್ಟೋಬರ್ ೧೭ರಂದು ಸೋಮವಾರ ಬೆಳಿಗ್ಗೆ ೧೦.೩೦ಕ್ಕೆ ನೆರವೇರಿತು.
ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಹಾಗೂ ಸೂರಜ್ ಎಜುಕೇಶನ್ ಟ್ರಸ್ಟ್ ಮುಡಿಪು ಇದರ ಅಧ್ಯಕ್ಷರಾದ ಡಾ. ಮಂಜುನಾಥ್ ಎಸ್. ರೇವಣಕರ್ರವರು ಕೃತಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಳ್ವಾಸ್ ಕಾಲೇಜ್ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಯೋಗೀಶ್ ಕೈರೋಡಿ ಕೃತಿ ಪರಿಚಯ ಮಾಡುತ್ತಾ ಇಂದಿನ ಆಧುನಿಕ ಸಂದರ್ಭದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಚಿತ್ರಿಸುವ ಈ ರೀತಿಯ ಕೃತಿಗಳ ಅಗತ್ಯ ಹೆಚ್ಚು ಇದೆ. ಎಲೆಮರೆಯ ಕಾಯಿಗಳ ಹಾಗೆ ಕೆಲಸ ಮಾಡಿ ಅಪೂರ್ವ ಸಾಧನೆಗೈದ ಮಹನೀಯರುಗಳ ದಾರಿ ನಮಗೆ ಆದರ್ಶವಾಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ವಹಿಸಿದ್ದರು. ಲೇಖಕ, ಉಪನ್ಯಾಸಕ ಡಾ. ಪ್ರವೀಣ್ಚಂದ್ರ ಅವರು ಕೃತಿಯ ಮಹತ್ವ ಮತ್ತು ಅಪೂರ್ವ ಸಾಧಕರ ಸಂಕಷ್ಟ, ಸಾಧನೆಯ ಎತ್ತರ, ಅದರ ಹಿಂದಿನ ಶ್ರಮವನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ಈ ಕೃತಿಯನ್ನು ಪ್ರತಿಯೊಬ್ಬರೂ ಓದುವ ಮೂಲಕ ಸ್ಫೂರ್ತಿ ಪಡೆಯಬಹುದಾಗಿದೆ ಎಂದರು. ಕವಯತ್ರಿ ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿದರು.

		




































































































