ಬಂಟರ ಸಮುದಾಯದ ಪ್ರತೀ ವ್ಯಕ್ತಿಯಲ್ಲಿ ಕಾಣಬಹುದಾದ ವಿಶೇಷ ಗುಣಗಳೆಂದರೆ ಸ್ವಪರಿಶ್ರಮದಲ್ಲಿ ವಿಶ್ವಾಸ ಮತ್ತು ಅನನ್ಯ ಆತ್ಮಗೌರವ. ಅವರ ಈ ವಿಶೇಷಗಳು ಇಂದು ಅವರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ತಾವು ಸುಶಿಕ್ಷಿತರಾದರೂ ಬೆವರಿಳಿಸಿ ದುಡಿಯುವುದಕ್ಕೆ ಹಿಂಜರಿಯಲಾರರು. ಕಾರಣ ಅವರು ಪರಿಶ್ರಮಕ್ಕೆ ಪರ್ಯಾಯ ಇಲ್ಲವೆಂಬ ಮೂಲಮಂತ್ರದ ಅರ್ಥ ಬಲ್ಲರು. ಬೆಳ್ಳಾರೆ ತಂಬಿನಮಕ್ಕಿ ಮೂಲದ ರಾಕೇಶ್ ಶೆಟ್ಟಿ ಅವರು ಇಂದು ಪುಣೆ ನಗರದ ಓರ್ವ ಯಶಸ್ವಿ ಯುವ ಉದ್ಯಮಿ ಜೊತೆಗೆ ಪ್ರಭಾವಿ ಜನನಾಯಕನಾಗಿ ಗುರುತಿಸಲ್ಪಡುತ್ತಿದ್ದಾರೆ. ಭಾಗೀರಥಿ ರೈ ಅಮ್ಮು ರೈ ದಂಪತಿಯ ಕಿರಿಯ ಪುತ್ರ ರಾಕೇಶ್ ಪದವೀಧರ ಯುವಕ. ಭವಿಷ್ಯದ ಬಗ್ಗೆ ಭವ್ಯ ಕಲ್ಪನೆಗಳನ್ನು ಹೊಂದಿದ ಕನಸುಗಾರ. ಉದ್ಯಮಶೀಲನಾಗಿ ಕಸುವು ತೋರಿಸಿದ ಸಮರ್ಥ. ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಎಂಬ ಖ್ಯಾತಿಯ ಪುಣೆ ನಗರಕ್ಕಾಗಮಿಸಿದ ರಾಕೇಶ್ ಶೆಟ್ಟರು ಹತ್ತಾರು ಕ್ಷೇತ್ರಗಳಲ್ಲಿ ದುಡಿದು ಸ್ವಯಂ ಉದ್ಯೋಗ ಸೃಷ್ಟಿಸಿಕೊಂಡು ತನ್ನ ಅದೃಷ್ಟ ಪರೀಕ್ಷೆ ಮಾಡಿಕೊಂಡು ನಂತರದ ದಿನಗಳಲ್ಲಿ ಹೊಟೇಲ್ ಉದ್ಯಮ ಪ್ರಾರಂಭಿಸಿದರು. ತನ್ನ ಕಠಿಣ ಪರಿಶ್ರಮ, ಅಚಲ ವಿಶ್ವಾಸ, ಅದಮ್ಯ ಉತ್ಸಾಹಗಳ ಪರಿಣಾಮ ಈ ಕ್ಷೇತ್ರದಲ್ಲಿ ಯಶಸ್ಸನ್ನು ತನ್ನದಾಗಿಸಿಕೊಂಡರು.
ಇಂದು ರಾಕೇಶ್ ಅವರು ಪುಣೆ ನಗರದ ಸಾಯಿ ಆಂಗನ್ ಹೊಟೇಲ್ಸ್ ಪ್ರೈ.ಲಿ. ಮತ್ತು ಮಾವೆಲ್ ರೋಯಲ್ ಗ್ರಾಂಡ್ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾಗಿರುವ ಜೊತೆಗೆ ತವರು ನೆಲದ ಪ್ರಮುಖ ನಗರದಲ್ಲಿ ಹೋಟೆಲ್ ಉದ್ಯಮ ಆರಂಭಿಸಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಹುಟ್ಟೂರು ಬೆಳ್ಳಾರೆಯಲ್ಲಿ ಶ್ರೀದೇವಿ ಹೈಟ್ಸ್ ಹೆಸರಿನ ವಾಣಿಜ್ಯ ಸಮುಚ್ಚಯವನ್ನು ಹೊಂದಿದ್ದಾರೆ. 1991ರಲ್ಲಿ ತನ್ನ ವಿದ್ಯಾರ್ಥಿ ಜೀವನ ಕಾಲದಲ್ಲಿ ಓರ್ವ ಸಮರ್ಥ ವಾಲಿಬಾಲ್ ಆಟಗಾರನಾಗಿ ವಿಶ್ವವಿದ್ಯಾಲಯ ಮಟ್ಟದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅದೇ ರೀತಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಇದರ ತಾಲೂಕು ಮಟ್ಟದ ನಾಯಕನಾಗಿ ಕ್ರಿಯಾಶೀಲ ಸಂಘಟಕನಾಗಿ ಹೆಸರು ಸಂಪಾದಿಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿ ನಾಯಕನಾಗಿ ಮಿಂಚುತ್ತಿದ್ದ ರಾಕೇಶ್ ಮುಂದೆ ಸಾಮಾಜಿಕ ರಾಜಕೀಯವಾಗಿಯೂ ಓರ್ವ ಸಮರ್ಥ ನಾಯಕನಾಗಿ ಹೊರಹೊಮ್ಮಿದರು.
ತನ್ನ ಉದ್ಯಮದ ಜೊತೆಗೆ ಸಾರ್ವಜನಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಜನಪ್ರಿಯತೆ ಪಡೆದುದಲ್ಲದೇ, ಇಂದ್ರಪ್ರಭ ಮಿತ್ರಮಂಡಳಿ ಎಂಬ ಸಂಸ್ಥೆಯನ್ನು ಹದಿನೇಳು ವರ್ಷಗಳ ಪೂರ್ವ ಹುಟ್ಟು ಹಾಕಿ ನಗರದ ಸಾರ್ವಜನಿಕ ಗಣೇಶೋತ್ಸವ ಸಂದರ್ಭ ಸತತವಾಗಿ ವೈವಿಧ್ಯಮಯ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ಸಂಯೋಜಿಸಿ ಪ್ರಸಿದ್ಧಿ ಪಡೆದರು. ಇವರ ಸಂಘಟನೆಯ ಗಣೇಶೋತ್ಸವ ಮಹಾರಾಷ್ಟ್ರದ ಪ್ರಮುಖ ಗಣೇಶೋತ್ಸವ ಸಂಘಟನೆಗಳ ಪಟ್ಟಿಯಲ್ಲಿ ಹೆಸರು ದಾಖಲಿಸಿ ಕೊಂಡಿದೆ. ದಶಕ ಪರ್ಯಂತರ ಇದರ ಅಧ್ಯಕ್ಷ ಸ್ಥಾನದಲ್ಲಿ ಅದೆಷ್ಟೋ ಸಾಂಸ್ಕೃತಿಕ ಧಾರ್ಮಿಕ ಸಮಾಜಪರ ಚಟುವಟಿಕೆಗಳನ್ನು ಸಂಘಟಿಸಿ ಕೀರ್ತಿ ಪಡೆದ ಇವರು ಪ್ರಸ್ತುತ ಗೌರವಾಧ್ಯಕ್ಷರಾಗಿರುತ್ತಾರೆ. ಇವರು ಪಿಂಪ್ರಿ ಚಿಂಚ್ವಾಡ್ ಹೊಟೆಲ್ ಎಸೋಸಿಯೇಶನ್ ಇದರ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ, ಹೋಟೆಲಿಗರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ತಮ್ಮ ಆಪತ್ಬಾಂಧವ ಎಂಬಂತೆ ಕರೆಸಿಕೊಂಡಿದ್ದಾರೆ. 1995 ರಲ್ಲಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಸಮಿತಿ ಸದಸ್ಯರಾಗಿ ಸೇರಿಕೊಂಡ ರಾಕೇಶ್ ಶೆಟ್ಟಿಯವರು ನಂತರದ ವರ್ಷಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸುತ್ತಲೇ ತನ್ನ ಕಾರ್ಯದಕ್ಷತೆಯ ಮೂಲಕ ಇಂದು ಅದರ ಅಧ್ಯಕ್ಷ ಪದವಿಗೇರಿ ಸಂಘದ ಕೀರ್ತಿಯನ್ನು ಮಹಾರಾಷ್ಟ್ರದ ಉದ್ದಗಲ ಪಸರಿಸಿದ್ದಾರೆ. 2014ರಲ್ಲಿ ಸಂಘದ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸಂಘಕ್ಕೆ ಮಿನಿ ಸಭಾಗೃಹ ನಿರ್ಮಾಣ ಕಾರ್ಯದ ಮಹತ್ತರ ಕಾರ್ಯ ಕೈಗೊಳ್ಳುವ ಜೊತೆಗೆ ಅದರ ಆಕರ್ಷಕ ವಿನ್ಯಾಸದಿಂದ ಮನಸೆಳೆವಂತೆ ಕೆಲಸ ಪೂರೈಸಿದ ಕಾರ್ಯಶೀಲ. ಇವರೊಬ್ಬ ಕಲಾಪೋಷಕನಾಗಿ, ಸಂಘಟಕ ಸಂಯೋಜಕನಾಗಿ ಎಲ್ಲಾ ವಿಧದ ಕಲಾಪ್ರಕಾರಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ನಗರದ ಹವ್ಯಾಸಿ ಕಲಾ ಸಂಘಟನೆಗಳಿಗೆ ಪ್ರಮುಖ ಸಲಹೆಗಾರರಾಗಿದ್ದಾರೆ.
ನಗರದ ಸಂಘಟನೆಗಳ, ಉದ್ಯಮಗಳ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸೂಚಿಸುವ ಹಾಗೂ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ದುಡಿಯುವ ಹೃದಯವಂತ. ಶ್ರೀಯುತರ ಧಾರ್ಮಿಕ ಸಂಘಟನೆಯ ಕಾರ್ಯವೈಖರಿ ಕುರಿತಂತೆ ಮಹಾರಾಷ್ಟ್ರದ ಸಕಾಲ್ ಪತ್ರಿಕೆ ಸಹಿತ ಅನೇಕ ಮಾಧ್ಯಮಗಳು ಮುಕ್ತ ಕಂಠದಿಂದ ಪ್ರಶಂಸಿಸಿವೆ. ನಗರದ ಪ್ರಮುಖ ಸಾಂಸ್ಕೃತಿಕ, ಧಾರ್ಮಿಕ ಸಂಘಟನೆಗಳು ರಾಕೇಶ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿವೆ. ನಗರದ ಹೆಚ್ಚಿನ ಹೆಸರಾಂತ ಕ್ರಿಯಾಶೀಲ ಸಂಘಟನೆಗಳು ರಾಕೇಶ್ ಅವರ ಆರ್ಥಿಕ ದೇಣಿಗೆಗಳಿಂದ ಉಪಕೃತವಾಗಿವೆ. ಇವರ ಉದಾರ ಗುಣ, ಉದಾತ್ತ ಭಾವ, ಸ್ನೇಹ ಶೀಲತೆ, ನಿರಾಡಂಬರತೆ, ಕ್ರಿಯಾ ಶೀಲತೆ ಕುರಿತಂತೆ ನಗರದ ಜನರು ಗುಣಗಾನ ಮಾಡುವುದನ್ನು ನಾವು ಕೇಳಬಹುದಾಗಿದೆ. ಇನ್ನೂ ಯುವಕರಾಗಿದ್ದು ಉತ್ಸಾಹದ ಚಿಲುಮೆಯಂತಿರುವ ಶೆಟ್ಟರು ಪಿಂಪ್ರಿ ಚಿಂಚ್ವಾಡ ಬಂಟರ ಸಂಘದ ಕಾರ್ಯಚಟುವಟಿಕೆಗಳ ವಿಶೇಷತೆಯನ್ನು ತನ್ನ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಮೂಲಕ ಬಂಟ ಸಮುದಾಯದ ಅನ್ಯ ಸಂಘಟನೆಗಳಿಗೆ ಪರಿಚಯಿಸಿದ್ದಾರೆ.
ವೈವಾಹಿಕ ಜೀವನದಲ್ಲಿ ಪೆಲತ್ತೂರು ಶಾರದಾ ನಿವಾಸದ ಸುನೀತಾ ಶೆಟ್ಟಿ ಎಂಬವರನ್ನು ಪಾಣಿ ಗ್ರಹಣ ಮಾಡಿಕೊಂಡು ಪುತ್ರಿ ಶ್ರೀಖ ಹಾಗೂ ಪುತ್ರ ಕವಿನ್ ಜೊತೆ ಸಂತೃಪ್ತ ಜೀವನ ನಡೆಸುತ್ತಾ ಸತತ ಸಮಾಜಪರ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ರಾಕೇಶ್ ಓರ್ವ ಉದಯೋನ್ಮುಖ ರಾಜಕೀಯ ನಾಯಕರೂ ಹೌದು. ಮೌಲ್ಯಾಧಾರಿತ ರಾಜಕಾರಣವನ್ನು ಸದಾ ಬೆಂಬಲಿಸುತ್ತಾ ಬರುವ ಶೆಟ್ಟರಿಗೆ ರಾಜಕೀಯವಾಗಿಯೂ ಉಜ್ವಲ ಭವಿಷ್ಯ ಇದೆ. ಒಬ್ಬ ವಿನಯಶೀಲ ಸಾಚಾ ನಡವಳಿಕೆಯ ಯುವ ಸಂಘಟಕ ರಾಕೇಶ್ ಬಂಟ ಸಮುದಾಯದ ಹೆಮ್ಮೆ. ಭವಿಷ್ಯದ ನಾಯಕ. ಇವರ ಕನಸುಗಳು ಸಾಕಾರಗೊಳ್ಳಲಿ. ಸಂಸಾರ, ಸಾರ್ವಜನಿಕ ಜೀವನ ಉತ್ಕರ್ಷ ಕಾಣಲಿ. ಸಮಾಜೋತ್ಥಾನ ಕಳಕಳಿ ಮುಂದುವರಿಯಲಿ. ಜಗದಂಬಿಕೆ ಹರಸಲಿ ಎಂಬ ಸದಾಶಯ ಸಮಸ್ತ ಸಮಾಜ ಬಾಂಧವರದ್ದು ಜೊತೆಗೆ ವಿಶ್ವ ಬಂಟರ ಮುಖವಾಣಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ವತಿಯಿಂದ ಶುಭ ಹಾರೈಕೆಗಳು.
ಲೋಕಾ ಸಮಸ್ತ ಸುಖಿನೋ ಭವಂತು. ಜೈ ಶ್ರೀರಾಮ್ ಜೈ ಹಿಂದ್.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು