ವಿದ್ಯಾಗಿರಿ (ಮೂಡುಬಿದಿರೆ): ಸಂಗೀತ ಲೋಕದ ದಿಗ್ಗಜರಾದ ವಯೋಲಿನ್ ವಾದಕ ಮೈಸೂರು ಮಂಜುನಾಥ, ಕೊಳಲು ವಾದಕ ಗೋಡ್ಖಿಂಡಿ ಹಾಗೂ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರಿಗೆ ಭಾನುವಾರ ‘ಆಳ್ವಾಸ್ವಿರಾಸತ್-2023’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದ ವಿಶಾಲ ವೈಭವದ ವೇದಿಕೆಯಲ್ಲಿ ಆಸೀನರಾದ ಮೂವರು ಸಾಧಕರಿಗೆ ಅವರದ್ದೇ ರಾಗ ಸಂಯೋಜನೆಯ ವಯೋಲಿನ್, ಬಾನ್ಸುರಿ ಹಾಗೂ ಸಂಗೀತದ(ಜೈ ಹೋ) ಮೂಲಕ ಅಭಿಮಾನದ ಪ್ರೀತಿಯನ್ನು ಧಾರೆ ಎರೆಯಲಾಯಿತು.
ಶಾಲು, ಹೂಹಾರ, ಸ್ಮರಣಿಕೆ, ಪ್ರಶಸ್ತಿ ಪತ್ರದ ಜೊತೆಗೆ 1 ಲಕ್ಷ ರೂಪಾಯಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಪನ್ನೀರು, ತಿಲಕ, ಪುಷ್ಪಾರ್ಚನೆ ಹಾಗೂ ಆರತಿ ಮೂಲಕ ಗೌರವಿಸಲಾಯಿತು. ಆಳ್ವಾಸ್ ಸಾಂಸ್ಕೃತಿಕ ತಂಡವು ಸ್ವರ ಗಾನದ ಆರತಿ ಗಾನಸುಧೆ ಹರಿಸಿತು. ಪ್ರಶಸ್ತಿಗೆ ಪ್ರತಿಕ್ರಿಯಿಸಿ ವಿನಮ್ರತೆಯಿಂದ ಮಾತನಾಡಿದ ಮೈಸೂರು ಮಂಜುನಾಥ, ನನ್ನ ಲೋಕದ ಸಮಸ್ತ ಸಂಭ್ರಮ ಮೂಡುಬಿದಿರೆಗೆ ಆಳ್ವರು ತಂದಿದ್ದಾರೆ ಎಂದು ದೇವೇಂದ್ರ ನಾಚುವ ಹಾಗೆ ವಿರಾಸತ್ ಭಾಸವಾಗುತ್ತಿದೆ. ಅವರು ಕೇವಲ ವೈಭವ ಸೃಷ್ಟಿಸಿಲ್ಲ. ಅದನ್ನು ಜನರಿಗೆ ಸಮರ್ಪಿಸಿ ಶ್ರೇಷ್ಠರಾಗಿದ್ದಾರೆ.
ಮೂಡುಬಿದಿರೆ ಎಂಬ ಸಾಮಾನ್ಯ ಊರನ್ನು ವಿಶ್ವ ಭೂಪಟಕ್ಕೆ ಸೇರಿಸಿದ್ದಾರೆ ಎಂದು ಬಣ್ಣಿಸಿದರು. ಕಲೆಗೆ ಗೌರವ ಹಾಗೂ ವೈಭವವನ್ನು ತಿಳಿಯಲು ಜಗತ್ತಿಗೆ ಇಂದು ಮೂಡುಬಿದಿರೆ ಮಾಪಕವಾಗಿದೆ. ಇಲ್ಲಿ ಪಾಲ್ಗೊಳ್ಳಲು ಬಯಸಿದ ಕಲಾವಿದರ ಸಂಖ್ಯೆ ಬಹು ದೊಡ್ಡದಿದೆ. ಇಲ್ಲಿ ಇಲ್ಲದಿರುವುದು ಏನು? ಎಂದು ಭಾವುಕರಾದರು. ಕಲೆಯ ಮೂಲ ಉದ್ದೇಶವೇ ಸೌಂದರ್ಯ ಅರಿತು ಆಸ್ವಾದಿಸುವುದು. ಅದನ್ನು ಆಳ್ವರು ಮಾಡುತ್ತಿದ್ದು, ಇಲ್ಲಿ ನೂರಾರು ಕಲಾವಿದರು ಹುಟ್ಟಿಕೊಳ್ಳುತ್ತಾರೆ ಎಂದರು.
ಆಳ್ವರು ಸಾಂಸ್ಕೃತಿಕ ರಾಯಭಾರಿ ಹಾಗೂ ವಿರಾಸತ್ ಪ್ರಶಸ್ತಿಯು ರಾಷ್ಟ್ರೀಯ ಪ್ರಶಸ್ತಿ ಗೂ ಮಿಗಿಲು ಎಂದು ವಿನಮ್ರತೆ ವ್ಯಕ್ತ ಪಡಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಆಳ್ವರ ನೇತೃತ್ವದಲ್ಲಿ ಮೂಡುಬಿದಿರೆಯಲ್ಲಿ ಸ್ವರ್ಗ ಲೋಕ ಸೃಷ್ಟಿಯಾಗಿದೆ. ಮನಸ್ಸು ಅರಳಿಸುವ ಭಾರತೀಯ ಸಂಸ್ಕೃತಿಯನ್ನು ಗೌರವಿಸುವ ಆಳ್ವರ ಪರಿಶ್ರಮದ ಫಲ ಇದು. ಆಳ್ವಾಸ್ ವಿರಾಸತ್ ಪ್ರಶಸ್ತಿ ಪದ್ಮಶ್ರೀ ಗೂ ಮಿಗಿಲು ಎಂದು ಬಣ್ಣಿಸಿದರು. ಅತಿಥಿಗಳನ್ನು ಬರಮಾಡಿಕೊಂಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ವಿರಾಸತ್ ಕೇವಲ ಮನೋರಂಜನಾ ಕಾರ್ಯಕ್ರಮ ಅಲ್ಲ, ದೇಶದ ಕಲೆಯನ್ನು ಗೌರವಿಸುವ ಹಬ್ಬ. ನಾಡಿನಲ್ಲಿ ಕಲೆ ಗೌರವಿಸುವ ಸಂಘಟಕ ಹಾಗೂ ಸೌಂದರ್ಯ ಪ್ರಜ್ಞೆ ಇರುವ ಪ್ರೇಕ್ಷಕ ವರ್ಗ ಬೇಕು. ಭ್ರಷ್ಟತೆ ಎಲ್ಲಿಯೂ ಸೋಂಕ ಬಾರದು ಎಂದರು.
ಕೃಷಿಕ, ಯೋಧ, ಕಲಾವಿದರನ್ನು ಗೌರವಿಸುವ ಆಳ್ವಾಸ್, ವಿದ್ಯಾರ್ಥಿಗಳ ಅಧ್ಯನಕ್ಕಾಗಿ 7 ಮೇಳಗಳನ್ನು ಈ ಬಾರಿ ಸಂಘಟಿಸಿದೆ ಎಂದರು. ನಮ್ಮ ಮನೆಯ ಶ್ರೇಷ್ಠ ಕಲಾವಿದರನ್ನು ಗೌರವಿಸುತ್ತಿದ್ದೇವೆ ಎಂದು ಧನ್ಯತೆ ವ್ಯಕ್ತಪಡಿಸಿದರು.ಮೂಡುಬಿದಿರೆ ಜೈನಮಠದ ಸ್ವಸ್ತಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಸಂಸದ ನಾರಾ ಸಿಂಗ್, ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವ ಅಭಯಚಂದ್ರ ಜೈನ್, ಶಾರದಾ ವಿದ್ಯಾಲಯದ ಎಂ.ಬಿ.ಪುರಾಣಿಕ್, ಉದ್ಯಮಿ ಶ್ರೀಪತಿ ಭಟ್ ಇದ್ದರು.