ಮುಂಬಯಿ, ಅ.14: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಮೇಲೆ ಕಳೆದ ರಾತ್ರಿ ನಡೆಸಲಾದ ಹತ್ಯೆಯತ್ನವನ್ನು ಬಿಜೆಪಿ ಉತ್ತರ ಮುಂಬಯಿ ಕ್ಷೇತ್ರದ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ತೀವ್ರವಾಗಿ ಖಂಡಿಸಿದ್ದಾರೆ.
ಕರ್ನಾಟಕ ರಾಜ್ಯದ ಗೃಹ ಇಲಾಖೆ ಮತ್ತು ದ.ಕ ಜಿಲ್ಲಾ ಪೊಲೀಸ್ ಉನ್ನತಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವೇ ಘಟನೆಗೆ ಕಾರಣಕರ್ತನಾದ ಅಪರಿಚಿತನ ಪತ್ತೆಹಚ್ಚಿ ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಎರ್ಮಾಳ್ ಹರೀಶ್ ಶೆಟ್ಟಿ ಒತ್ತಾಯಿಸಿದ್ದಾರೆ.
ಓರ್ವ ಯುವನಾಯಕನಾಗಿದ್ದ ಜವಾಬ್ದಾರಿಯುತ ಜನಪ್ರತಿನಿಧಿಯ ಶಾಸಕರ ಕಾರನ್ನು ಅನುಮಾನಾಸ್ಪದವಾಗಿ ಹಿಂಬಾಲಿಸಿ ನಡೆಸಿದ ಹತ್ಯಾಯತ್ನವು ಸಹಿಸುವಂತಹದ್ದಲ್ಲ. ಇಂತಹ ದುಷ್ಕೃತ್ಯಕ್ಕೆ ಮುಂದಾದ ಯಾವನೇ ವ್ಯಕ್ತಿಯಾಗಲಿ, ಸಂಘಟನೆಯನ್ನಾಗಲಿ ಕ್ಷಮಿಸುವ ಮಾತೇ ಇಲ್ಲ. ಸಾಹಸಕ್ಕೆ ಮುಂದಾಗುವವರು ಎದುರು ಬಂದು ತಮ್ಮ ಎದೆಗಾರಿಕೆಯನ್ನು ಸಾರ್ವಜನಿಕವಾಗಿ ತೋರಿಸಲಿ ಎಂದೇಳುವೆ. ಒಂದೇ ಸಮಾಜದಲ್ಲಿದ್ದು ದ್ರೋಹ ಬಗೆಯುವ ಇಂತಹ ಯಾವ ದುಷ್ಕರ್ಮಿಗಳಿಗೂ ಮನ್ನಿಸುವ ಪ್ರೆಶ್ನೆಯೇ ಬಾರದು ಎಂದೂ ಎರ್ಮಾಳ್ ಹರೀಶ್ ತಿಳಿಸಿದ್ದಾರೆ.