
ಕಲೆ, ಸಂಸ್ಕೃತಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮ ವಿಶಿಷ್ಟ ಯೋಗದಾನಗಳ ಮೂಲಕ ಗುರುತಿಸಿಕೊಂಡ ಬಂಟ್ಸ್ ಕತಾರ್ ಇತ್ತೀಚೆಗೆ ಜನವರಿ ಒಂಬತ್ತರಂದು ಬಂಟೋತ್ಸವ ಶೀರ್ಷಿಕೆಯಡಿ ಅದ್ದೂರಿಯ ಕಲೆ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯಗಳನ್ನು ಆಯೋಜಿಸುವ ಮೂಲಕ ವಿಶ್ವದ ತುಳು ಕನ್ನಡಿಗರ ಚಿತ್ತವನ್ನು ಅತ್ತ ಆಕರ್ಷಿಸಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. ಅಂದು ವಾಕ್ರಾದ ಡಿ.ಪಿ.ಎಸ್.ಮಿಸ್ ಶಾಲಾ ಸಭಾಂಗಣದಲ್ಲಿ ಜರಗಿದ ಈ ಉತ್ಸವದಲ್ಲಿ ಅಸಂಖ್ಯಾತ ಬಂಟ ಗಣ್ಯರು ಭಾಗವಹಿಸಿ ಸಂಭ್ರಮಕ್ಕೆ ಕಳೆಯೇರಿಸಿದರು. ಗಾನ ವೈಭವ, ಕಲಾವೈಭವ, ಹಾಸ್ಯ ವೈಭವ ಎಂದು ವಿಭಾಗಿಸಲ್ಪಟ್ಟ ವಿಶೇಷ ಕಾರ್ಯಕ್ರಮಗಳು ಉತ್ಸವದಲ್ಲಿ ಒಳಗೊಂಡಿದ್ದವು. ಕತಾರ್ ಬಂಟ್ಸ್ ನ ಸದಸ್ಯರು, ಮಕ್ಕಳು ಹಾಗೂ ಪರಿವಾರದ ಮಹಿಳೆಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ವಿಶೇಷ ಪ್ರತಿಭೆಗಳ ಪ್ರದರ್ಶನ ನೀಡಿದರು.


ಸಂಜೆ 4.30ಕ್ಕೆ ಸಾಂಪ್ರದಾಯಿಕ ರೀತಿಯಲ್ಲಿ ವಿಧಿವತ್ತಾಗಿ ದೀಪ ಪ್ರಜ್ವಲನೆ ಕಾರ್ಯಕ್ರಮವನ್ನು ಅಧ್ಯಕ್ಷರಾದ ನವೀನ್ ಶೆಟ್ಟಿ ಇರುವೈಲು ಸೇರಿದಂತೆ ಆಹ್ವಾನಿತ ಅತಿಥಿ ಗಣ್ಯರು ನೆರವೇರಿಸಿದರು. ಶ್ರೀಮತಿ ಅಕ್ಷಿನಿ ವಿ ಶೆಟ್ಟಿ ಅವರು ಪ್ರಾಸ್ತವಿಕ ಭಾಷಣ ಮಾಡಿ ನೆರೆದ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶೇಷ ಆಹ್ವಾನಿತ ಕಾರ್ಯಕ್ರಮ ನಿರೂಪಕ ಶ್ರೇಯಸ್ ಶೆಟ್ಟಿ ತನ್ನ ಸಾಹಿತ್ಯಿಕ ಕಾವ್ಯಮಯ ಆಸ್ಖಲಿತ ನಿರೂಪಣಾ ವೈಖರಿಯಿಂದ ಉತ್ಸವದ ಸಂಧ್ಯೆಗೆ ಹೊಸ ಮೆರುಗು ನೀಡಿದರು. ಅಧ್ಯಕ್ಷರಾದ ನವೀನ್ ಶೆಟ್ಟಿಯವರು ಇಂಥಹ ಅಭೂತಪೂರ್ವ ಕಾರ್ಯಕ್ರಮ ಸಂಯೋಜನೆಗೆ ಸಹಕರಿಸಿದ ಸರ್ವರನ್ನು ಹೆಸರಿಸಿ ಗೌರವಾರ್ಪಣೆ ಮಾಡಿದರು.
ಹೆಸರಾಂತ ಸಮಾಜಸೇವಕ ವಿಶು ಶೆಟ್ಟಿ ಅಂಬಲ್ಪಾಡಿ ಅವರಿಗೆ ‘ಸೇವಾಸಂಪದ’ ಬಿರುದು ನೀಡಿ ಸನ್ಮಾನಿಸಲಾಯಿತು. ಪಂಜುರ್ಲಿ ಗ್ರೂಪ್ ಆಫ್ ಹೊಟೆಲ್ ನ ಸಿಎಂಡಿ ಶ್ರೀ ರಾಜೇಂದ್ರ ವಿ ಶೆಟ್ಟಿ ಅವರನ್ನು ವಿಶೇಷ ಬಿರುದು ಬಾವಲಿ ಪ್ರದಾನ ಮೂಲಕ ಅದ್ದೂರಿಯಾಗಿ ಸನ್ಮಾನಿಸಲಾಯಿತು. ‘ಬಂಟ ಸಾಧಕ’ ಎಂಬ ಸಹಜ ಶ್ಲಾಘನೆಯ ಗೌರವ ಅಂದಿನ ಸಂಜೆ ರಾಜೇಂದ್ರ ಶೆಟ್ಟಿ ಅವರಿಗೆ ದಕ್ಕಿತು. ಬಂಟ್ಸ್ ಕತಾರ್ ನ ಸ್ಥಾಪಕ ಅಧ್ಯಕ್ಷ ಹಾಗೂ ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷ ರವಿ ಶೆಟ್ಟಿ ಮೂಡಂಬೈಲು ಅವರನ್ನು ಕೂಡಾ ಈ ಸಂಧರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಂಬೆಸ್ಸಿ ಆಫ್ ಇಂಡಿಯಾದ ದೋಹಾ ಕತಾರ್ ನ ಪ್ರಥಮ ಕಾರ್ಯದರ್ಶಿ ಶ್ರೀ ಹರೀಶ್ ಪಾಂಡೆ ಅವರು ಸಭಿಕರನ್ನು ಉದ್ಧೇಷಿಸಿ ಮಾತಾಡುತ್ತಾ, ಬಂಟರು ಹೋದಲ್ಲೆಲ್ಲಾ ತಮ್ಮ ಕಾರ್ಯವೈಖರಿ, ಚಾಕಚಕ್ಯತೆ, ಪ್ರತಿಭಾ ಸಾಮರ್ಥ್ಯ, ಸಂಘಟನಾ ಚತುರತೆಗಳಿಂದ ಅಚ್ಚರಿ ಹುಟ್ಟಿಸುವ ಸಾಧನೆ ಮಾಡಿದ್ದಾರೆ. ಇಂಥಹ ಉತ್ಸವಗಳು ಪರಸ್ಪರ ಸ್ನೇಹ ಸೌಹಾರ್ದ ಬೆಳೆಸುವಲ್ಲಿ ಸಹಕಾರಿ ಆಗಿದೆ. ಅಷ್ಟೇ ಅಲ್ಲದೆ ತಮ್ಮ ಸದಸ್ಯ ಬಾಂಧವರ ಬಗೆ ಬಗೆಯ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಆಗುತ್ತದೆ ಎಂದು ಸಾಂದರ್ಭಿಕವಾಗಿ ಮಾತಾಡಿ ಕಾರ್ಯಕ್ರಮ ಸಂಯೋಜನೆ ಕುರಿತಂತೆ ಮುಕ್ತ ಕಂಠದಿಂದ ಶ್ಲಾಘಿಸಿ, ವಾರ್ಷಿಕ ಸ್ಮರಣ ಸಂಚಿಕೆ ‘ಗರಿ’ಯನ್ನು ಬಿಡುಗಡೆಗೊಳಿಸಿದರು. ಹರೀಶ್ ಪಾಂಡೆ ಅವರನ್ನು ಸಂಸ್ಥೆಯ ಪದಾಧಿಕಾರಿಗಳು ವಿಶೇಷವಾಗಿ ಸಂಮಾನಿಸಿದರು.
ಆಗಮಿಸಿದ್ದ ಗಣ್ಯ ಅತಿಥಿಗಳು ಸಮಯೋಚಿತವಾಗಿ ಮಾತಾಡಿದರು. ಸಲಹಾ ಸಮಿತಿಯ ಅಧ್ಯಕ್ಷರಾದ ಡಾ. ಪದ್ಮಶ್ರೀ ಶೆಟ್ಟಿ, ಸಲಹಾ ಸಮಿತಿಯ ಸದಸ್ಯರಾದ ನವನೀತ್ ಶೆಟ್ಟಿ, ದೀಪಕ್ ಶೆಟ್ಟಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ವೈವಿಧ್ಯಗಳು ಸೇರಿದ ಸಭಿಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಪತ್ರಿಕಾ ಪ್ರತಿನಿಧಿಗಳು, ಮಾಧ್ಯಮ ಮುಖ್ಯರನ್ನು, ಸ್ವಯಂ ಸೇವಕರನ್ನು, ದಾನಿಗಳನ್ನು, ಕಲಾವಿದರನ್ನು, ನಿರೂಪಕರನ್ನು ಸೇರಿದಂತೆ ಕಾರ್ಯಕ್ರಮ ಯಶಸ್ವಿಯಾಗಿ ಜರಗುವಲ್ಲಿ ಸಹಕರಿಸಿದ ಎಲ್ಲರನ್ನೂ ಪುಷ್ಪಗೌರವ ನೀಡಿ ಅಭಿನಂದಿಸಿ ವಂದನಾರ್ಪಣೆಗೈಯ್ಯಲಾಯಿತು. ಸಂಸ್ಥೆಯ ಪದಾಧಿಕಾರಿಗಳು ಉತ್ಸಾಹದಿಂದ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಿದರು. ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

























































































































