
ಹೌದು, ಬೇಸಿಗೆ ಕಾಲ ಬಂತೆಂದರೆ ಸಾಕು ನೆತ್ತಿಯ ಮೇಲೆ ಸುಡುಬಿಸಿಲಿನ ಅನುಭವ. ಮಧ್ಯಾಹ್ನದ ಹೊತ್ತಿಗಂತೂ ಜನಸಾಮಾನ್ಯರಿಗೆ ಮನೆಯಿಂದ ಹೊರಬರಲಾರದ ಸಂಕಷ್ಟದ ಸ್ಥಿತಿ. ವರ್ಷಗಳು ಉರುಳಿದಂತೆ ಭೂಮಿಯ ಮೇಲಿನ ತಾಪ ಹೆಚ್ಚುತ್ತಿದ್ದು, ಮಳೆಯ ಪ್ರಮಾಣ ಕಡಿಮೆಯಾಗತೊಡಗುತ್ತಿರುವುದಲ್ಲದೆ ಹವಾಮಾನದಲ್ಲಿನ ಏರುಪೇರು, ಪ್ರಾಕೃತಿಕ ಅಸಮತೋಲನ ಕೂಡಾ ಇಂತಹ ಪ್ರಕ್ರಿಯೆಗಳಿಗೆ ಒಂದು ಕಾರಣವೆನ್ನಬಹುದು. ಈಗ ಮದುವೆ, ಜಾತ್ರೆ, ಹಬ್ಬ ಹರಿದಿನಗಳ ಭರಾಟೆಯೂ ತುಸು ಜೋರಾಗಿಯೇ ಇದೆ. ಹವಾಮಾನದ ವೈಪರೀತ್ಯ, ಮಳೆಯ ಕುಂಠಿತದ ಕಾರಣಕ್ಕಾಗಿ ಬಯಲು ಸೀಮೆ, ಉತ್ತರ ಕರ್ನಾಟಕ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ನೀರಿಗಾಗಿ ಆಹಾಕಾರ ಉಂಟಾಗುವುದನ್ನು ಕಾಣುತ್ತೇವೆ. ಪ್ರತಿ ಬಾರಿಯಂತೆ ಇನ್ನೊಂದು ತಿಂಗಳು ಕಳೆದರೆ ರಾಜ್ಯದ ಪ್ರಮುಖ ಹಳ್ಳ, ನದಿ, ಕೆರೆ, ಡ್ಯಾಮ್, ತೊರೆಗಳು ಬತ್ತಿ ಹೋಗಲಿವೆ. ನೀರಿನ ಪ್ರಮಾಣ ಕುಂಠಿತಗೊಂಡಾಗ ಮಾನವನ ದೈನಂದಿನ ಚಟುವಟಿಕೆಗಳು, ಪ್ರಾಣಿ ಸಂಕುಲ, ವನ್ಯ ಜೀವಿಗಳ ಮೇಲೂ ಕೂಡಾ ವ್ಯತಿರಿಕ್ತ ಪರಿಣಾಮ ಬೀರತೊಡಗುತ್ತದೆ.

ಪ್ರಸ್ತುತ ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸಿದರೂ ಅಥವಾ ಮನೆಯಿಂದ ಹೊರ ಬಂದುಬಿಟ್ಟೆವೆಂದರೆ ಬಾಯಾರಿಕೆ ತಣಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗುವುದು ವಾಡಿಕೆಯಾಗುತ್ತಿದೆ. ತಂಪು ಪಾನೀಯಗಳ ಪೈಕಿ ನಾವು ಎಲ್ಲೇ ಸಂಚರಿಸಿದರೂ ನಮ್ಮ ಕಣ್ಣಿಗೆ ಪಕ್ಕನೆ ಗೋಚರಿಸುವ ಕಬ್ಬಿನ ಹಾಲು, ಎಳನೀರು, ಕಲ್ಲಂಗಡಿ ಜ್ಯೂಸ್, ಸೋಡಾ ಶರಬತ್ತು, ಇನ್ನಿತರ ಹಣ್ಣಿನ ರಸಗಳು ಪ್ರಸ್ತುತ ಬಹು ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ನಾವು ದಿನನಿತ್ಯ ಸಂಚರಿಸುವ ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲೇ ಕಿ.ಮೀ ಗೊಂದರಂತೆ ಕಬ್ಬಿನ ಹಾಲಿನ ಯಂತ್ರಗಳನ್ನು ಕಾಣುತ್ತೇವೆ. ಇಂತಹ ಒಂದು ವೃತ್ತಿಯ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಹಲವಾರು ಕುಟುಂಬಗಳು ನಮ್ಮ ಅವಿಭಜಿತ ಜಿಲ್ಲೆಯಲ್ಲಿ ಕಾಣಬಹುದು. ನಮ್ಮ ತುಳುನಾಡಿನ ಜನರು ಮಾತ್ರವಲ್ಲದೇ ಉತ್ತರಭಾರತದ ಮಂದಿ ಕೂಡ ಇಂತಹ ಕಬ್ಬು ಜ್ಯೂಸ್ ವ್ಯಾಪಾರವನ್ನು ನಡೆಸುತ್ತಾ ಬದುಕು ಸಾಗಿಸುವುದನ್ನು ಕಾಣಬಹುದು.
ಇನ್ನು ಬೇಸಿಗೆ ಕಾಲದಲ್ಲಿ ಜನಸಾಮಾನ್ಯರ ಆಪತ್ಬಾಂದವನಂತಿರುವ ಎಳನೀರು, ಮಜ್ಜಿಗೆ, ಕಲ್ಲಂಗಡಿ ಹಣ್ಣಿನ ರಸಕ್ಕೂ ಬಹಳ ಬೇಡಿಕೆಯಿದೆ. ಊರಿನ ಎಳನೀರು ಮತ್ತು ಬಯಲು ಸೀಮೆಯ ಎಳನೀರಿನ ಪೈಕಿ ಊರಿನ ಎಳನೀರು ಬಹಳ ಅಪರೂಪಕ್ಕೆ ಎಂಬಂತೆ ಕೆಲ ಅಂಗಡಿಗಳಲ್ಲಷ್ಟೇ ಕಂಡು ಬರುತ್ತಿದ್ದು, ಪ್ರಸ್ತುತ ಬಯಲು ಸೀಮೆಯ ಎಳನೀರಿಗೆ ಕರಾವಳಿಯ ವ್ಯಾಪಾರಸ್ಥರು ಮೊರೆ ಹೋಗುತ್ತಿದ್ದಾರೆ. ಬೀದಿ ಬದಿಗಳಲ್ಲಿ ತಲೆ ಎತ್ತುತ್ತಿರುವ ಕೆಲ ತಂಪು ಪಾನೀಯ ಗಾಡಿಗಳಲ್ಲಿ ಶುದ್ದ ನೀರಿನ ಬಳಕೆಯಿಲ್ಲದಿರುವುದು, ಶುಚಿತ್ವಕ್ಕೆ ಆಧ್ಯತೆ ಇಲ್ಲದಿರುವುದು, ಕೆಲ ಉತ್ತರ ಭಾರತೀಯರ ಗಾಡಿಗಳಲ್ಲಿ ತಂಪಿಗಾಗಿ ಬಳಸುವ ಐಸ್ ಕ್ಯೂಬ್ ಗಳ ಬಗ್ಗೆಯೂ ಅಪವಾದಗಳಿವೆ. ಇನ್ನು ಮಳೆಯ ಅಭಾವದಿಂದ ಕಲ್ಲಂಗಡಿ, ಹಣ್ಣು ಹಂಪಲು, ಕಬ್ಬಿನ ಇಳುವರಿಯಲ್ಲಿ ವ್ಯತ್ಯಯವಾಗಿ ತಂಪು ಪಾನೀಯಗಳ ಬೆಲೆಯೂ ದುಬಾರಿಯಾಗುತ್ತಿವೆ.
ಇನ್ನು ಇವಷ್ಟೇ ಅಲ್ಲದೆ ಸೋಡಾ ಶರಬತ್ತು, ನಿಂಬೆಹಣ್ಣು ಜ್ಯೂಸ್ ಬಿಸಿಲಿನ ಧಗೆಗೆ ಬಸವಳಿದ ಜನಸಾಮಾನ್ಯರ ದೇಹವನ್ನು ತಂಪಾಗಿಸುತ್ತಿದೆ. ಬೇಸಿಗೆಯನ್ನು ಅವಲಂಬಿಸಿ ವ್ಯಾಪಾರ ನಡೆಸುತ್ತಿರುವ ತಂಪು ಪಾನೀಯ, ಜ್ಯೂಸ್ ವ್ಯಾಪಾರಿಗಳಿಗೆ ತುಸು ಆದಾಯವೂ ದೊರಕುತ್ತಿದೆ. ಇದು ಕರಾವಳಿ ಮಾತ್ರವಲ್ಲದೆ ಉತ್ತರ ಕರ್ನಾಟಕ ಬಯಲು ಸೀಮೆಯ ಕೊಪ್ಪಳ, ಬಳ್ಳಾರಿ, ರಾಯಚೂರು, ಗುಲ್ಬರ್ಗ, ಬಿಜಾಪುರ, ಚಿತ್ರದುರ್ಗದಂತಹ ಹಲವಾರು ಜಿಲ್ಲೆಗಳಲ್ಲಿ ಕೂಡಾ ಇದು ಹೊರತಾಗಿಲ್ಲ. ಸುಡು ಬಿಸಿಲು ಇರಬಹುದು ಅಥವಾ ವಾತಾವರಣದ ಬಿಸಿ ಎಂಬುವುದು ಪ್ರಕೃತಿಯ ಮೇಲೆ ಮಾನವ ನಿರ್ಮಿತ ಅನಾಚಾರವೆಂದೇ ಪರಿಗಣಿಸಬಹುದು. ಪ್ರಕೃತಿ ನಮಗೆ ಎಲ್ಲವನ್ನೂ ನೀಡಿರುವ ಸಂದರ್ಭದಲ್ಲಿ ಅದರ ಸದ್ಬಳಕೆಯ ಬದಲು ಸ್ವಾರ್ಥಕ್ಕಾಗಿ, ದಾಹಕ್ಕಾಗಿ ಮನುಷ್ಯನ ಸವಾರಿಯ ಪರಾಕಾಷ್ಠೆಗೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಗಂಡಾತರಗಳು ಭೂಮಿಗೆ ಎದುರಾದರೂ ಅಚ್ಚರಿಪಡಬೇಕಿಲ್ಲ. ಪ್ರಕೃತಿ ಎಂಬುವುದು ಮನುಷ್ಯನ ದೈನಂದಿನ ಬದುಕಿನ ಬಹುಮುಖ್ಯ ಅಂಗ. ಪ್ರಕೃತಿಯನ್ನು ತಾಯಿಯ ರೂಪದಲ್ಲಿ, ದೇವರ ರೂಪದಲ್ಲಿ ಕಾಣುವ ಪರಂಪರೆಯನ್ನು ಹೊಂದಿರುವ ನಾವು, ಪ್ರಕೃತಿಗೆ ಅಪಚಾರ ಎಸಗುವ, ಪ್ರಕೃತಿಯ ಮೇಲಿನ ದೌರ್ಜನ್ಯಗಳನ್ನು ಮುಂದುವರಿಸುತ್ತಾ ಸಾಗುತ್ತಿರುವ ಕಾರಣಕ್ಕೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾದ, ಪ್ರತಿಕೂಲ ಪರಿಣಾಮವನ್ನು ಅನುಭವಿಸಬೇಕಾದ ದಿನಗಳು ಕೂಡಾ ದೂರವಿಲ್ಲ.
ಬರಹ : ಆದರ್ಶ್ ಶೆಟ್ಟಿ ಉಪ್ಪಿನಂಗಡಿ


























































































































