“ಯೋಗ್ಯತೆ ಎನ್ನುವುದು ಹೇಳಿಕೊಳ್ಳುವುದಲ್ಲ, ತೋರಿಸಿಕೊಳ್ಳುವುದೂ ಅಲ್ಲ. ನಾವು ಆಡುವ ಒಳ್ಳೆಯ ಮಾತು ಹಾಗೂ ಮಾಡುವ ಒಳ್ಳೆಯ ಕಾರ್ಯ ಬೇರೆಯವರ ಅನುಭವಕ್ಕೆ ಬರುವಂತಹದ್ದು. ಅದೇ ನಿಜವಾದ ಯೋಗ್ಯತೆ”. ಶ್ರೀಯುತ ಜಯರಾಮ ಎಂ ಶೆಟ್ಟಿಯವರ ಜೀವನದಲ್ಲಿ ಈ ಮಾತು ನೂರಕ್ಕೆ ನೂರು ಸತ್ಯ. ಮೂಲತಃ ಕಲ್ಲಮುಂಡ್ಕೂರಿನವರಾದ ಇವರು ಓರ್ವ ಯಶಸ್ವಿ ಉದ್ಯಮಿಯಾಗಿ ರೂಪುಗೊಳ್ಳಲು ಅವರ ಶ್ರಮ, ಅನುಭವ, ಬುದ್ಧಿ ಮತ್ತೆ ಹಾಗೂ ಸಂಘಟನಾ ಚಾತುರ್ಯ ಕಾರಣವಾಗಿದೆ.
ಶ್ರೀಯುತ ಮಂಜಯ್ಯ ಶೆಟ್ಟಿ ಮತ್ತು ರುಕ್ಮಿಣಿ ಶೆಟ್ಟಿ ದಂಪತಿಗಳ ಸುಪುತ್ರರಾಗಿ 4-7-1966ರಲ್ಲಿ ಕಲ್ಲಮುಂಡ್ಕೂರು ಕೆಳಗಿನ ಮನೆಯಲ್ಲಿ ಜನಿಸಿದರು. ಪ್ರಾಥಮಿಕ ಶಾಲೆ ನಿಡ್ಡೋಡಿಯ ಸತ್ಯನಾರಾಯಣ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು. ಕಲ್ಲ ಮುಂಡ್ಕೂರಿನ ಸರ್ವೋದಯ ಪ್ರೌಢಶಾಲೆಯಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಪಡೆದರು. ಆಗ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲವೆಂದು ಮುಂಬಾಯಿಗೆ ತೆರಳಿದ ಶ್ರೀಯುತರು ಅಲ್ಲಿ ದುಡಿಮೆಯ ಒಟ್ಟಿಗೆ ಪಿ.ಯು.ಸಿ. ಯನ್ನು ಮುಗಿಸಿ 3 ವರುಷಗಳ ನಂತರ ಊರಿಗೆ ತೆರಳಿದರು. ನಂತರ ಕಿನ್ನಿಗೋಳಿಯಲ್ಲಿ 3 ವರ್ಷ ದಿನಸಿ ವ್ಯಾಪಾರ ನಡೆಸಿದರು. ಹೀಗೆ ತೀರ ಎಳೆ ವಯಸ್ಸಿನಲ್ಲಿಯೇ ವ್ಯವಹಾರ ಜ್ಞಾನವನ್ನು ಕಲಿತರು. ಈ ಹೊತ್ತಿಗೆ ಕಲ್ಲ ಮುಂಡ್ಕೂರು ಗ್ರಾಮದಲ್ಲಿ ಇವರ ತಂದೆ ಉತ್ತಮ ಕೃಷಿಕರು ಮತ್ತು ಕಟ್ಟಡ ಕಂಟ್ರಾಕ್ಟರ್ ಆಗಿರುವ ಪ್ರವೃದ್ಧಮಾನಕ್ಕೆ ಬರುತ್ತಿದ್ದರು. ತಂದೆಗೆ ಕಟ್ಟಡ ಕೆಲಸಗಳ ಮೇಲುಸ್ತುವಾರಿ ಸಹಾಯಕರಾಗಿ ನಿಂತ ಶ್ರೀಯುತ ಜಯರಾಮ ಶೆಟ್ಟಿಯವರು ನಂತರ ಮೂರು ವರ್ಷಗಳಲ್ಲಿ ಕಂಟ್ರಾಕ್ಟ್ ಕೆಲಸದ ಅಪಾರ ಜ್ಞಾನವನ್ನು ಪಡೆದರು. ನಂತರ ತಮ್ಮ ತಂದೆಯ ಬಹುದಿನಗಳ ನಿರೀಕ್ಷೆಯಂತೆ ಶ್ರೀ ದೇವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು.
ಶ್ರೀ ಜಯರಾಮ ಎಂ. ಶೆಟ್ಟಿಯವರು ವ್ಯವಹಾರದಲ್ಲಿ ಅಭಿವೃದ್ಧಿಯಾಗುತ್ತಿದ್ದಂತೆ 1995 ರಲ್ಲಿ ಶ್ರೀಮತಿ ಚೇತನಾರವರನ್ನು ವಿವಾಹವಾದರು. ಈ ದಂಪತಿಗಳಿಗೆ ಆಕರ್ಷ್, ಮಾನ್ವಿತಾ ಎಂಬಿಬ್ಬರು ಮುದ್ದಿನ ಮಕ್ಕಳು ಜನಿಸಿದರು. ಸ್ವರ್ಗಕ್ಕೆ ಕಿಚ್ಚುಹಚ್ಚು ಎನ್ನುವಂತಿದ್ದ ಇವರ ದಾಂಪತ್ಯ ಜೊತೆ ಜೊತೆಗೆ ವ್ಯವಹಾರದಲ್ಲೂ ಅಭಿವೃದ್ಧಿಯಾಗುತ್ತಿದ್ದ ಈ ಹಂತದಲ್ಲಿ ಜಯರಾಮ ಎಂ ಶೆಟ್ಟಿಯವರು ತಮ್ಮಂದಿರು ಬದುಕಿನಲ್ಲಿ ನೆಲೆಯಾಗುವುದಕ್ಕೆ ಸ್ವಂತ ಉದ್ಯಮ ಮಾಡಲು ಹುರಿದುಂಬಿಸಿದರು.
ಈ ಹೊತ್ತಿಗೆ ತಂದೆಯ ಉದ್ಯಮ ಪೂರ್ಣ ಪ್ರಮಾಣದಲ್ಲಿ ಮುಂದುವರಿಸಿಕೊಂಡು ಹೋಗುವುದರ ಸಲುವಾಗಿ ಮಗ ಆಕರ್ಷ ಶೆಟ್ಟಿ ಇಂಜಿನಿಯರಿಂಗ್ ಪದವಿಗಾಗಿ ಆರ್ಕಿಟೆಕ್ಟ್ ಕಲಿಯಲು ಸೇರಿಕೊಂಡು ಪ್ರಸ್ತುತ ಪದವಿ ಮುಗಿಸಿ ತಂದೆಯ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಪ್ರಾದೇಶಿಕ ಕಲೆಯಾದ ಯಕ್ಷಗಾನದಲ್ಲಿ ವಿಶೇಷ ಆಸಕ್ತಿ, ಇರುವ ಮಗನ ಆಸಕ್ತಿ ಪ್ರೇರಕವಾಗಿ ನಿಂತ ಶ್ರೀಯುತ ಜಯರಾಮ ಎಂ ಶೆಟ್ಟಿಯವರು ಯಕ್ಷಗಾನದಲ್ಲಿ ಆಸಕ್ತಿ ಇತರ ವಿದ್ಯಾರ್ಥಿಗಳಿಗೂ ಯಕ್ಷಗಾನ ಕಲಿಯಲು ಅನುಕೂಲವಾಗುವಂತೆ ನಾಟ್ಯ ಗುರು ಸಬ್ಬಣ್ಣ ಕೋಡಿ ರಾಮ ಭಟ್, ಮುಂಬಾಡಿ ಸುಬ್ರಹ್ಮಣ್ಯ ಭಟ್ರನ್ನು ಕರೆಸಿಕೊಂಡು ಕಲಾಭಿರುಚಿಯುಳ್ಳ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಲು ವ್ಯವಸ್ಥೆ ಮಾಡಿರುವುದು ಅವರ ಕಲಾಭಿರುಚಿಗೆ ಸಾಕ್ಷಿಯಾಗಿದೆ. ಓರ್ವ ಯಶಸ್ವಿ ಉದ್ಯಮಿಯಾಗಿ ಪಡೆದ ಖ್ಯಾತಿಗೆ ಪೂರಕವೆನ್ನುವಂತೆ ಸಾಂಸ್ಕøತಿಕ ರಂಗದಲ್ಲಿ ಕಲಾಪೋಷಕರಾಗಿಯೂ ಗುರುತಿಸಿ ಕೊಂಡಿದ್ದಾರೆ ಮೂಡಬಿದ್ರೆ ಆಸುಪಾಸಿನ ವಿದ್ಯಾರ್ಥಿಗಳಿಗೆ ಸಹಕಾರ ನೀಡುವುದರ ಜೊತೆ ಕ್ರೀಡೆ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ದೇಣಿಗೆ ನೀಡುವ ಮೂಲಕ ತಮ್ಮ ಸಮಾಜಮುಖಿ ಚಿಂತನೆಗೆ ಶ್ರೀಯುತರು ಹೆಸರಾಗಿದ್ದಾರೆ.
ಶ್ರೀ ದೇವಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಸಂಸ್ಥೆಯನ್ನು ಯಶಸ್ವಿ ಕಟ್ಟಡ ನಿರ್ಮಾಣ ಸಂಸ್ಥೆಯಾಗಿ ಮುನ್ನಡೆಸಲು ಅನುಕೂಲವಾಗುವಂತೆ ಶ್ರೀ ಜಯರಾಮ ಎಂ. ಶೆಟ್ಟಿಯವರು ಪತ್ನಿ ಶ್ರೀಮತಿ ಚೇತನ ಮತ್ತು ಶ್ರೀ ಆಕರ್ಷ ಶೆಟ್ಟಿಯವರನ್ನು ಸಂಸ್ಥೆಯ ಪಾಲುದಾರರಾಗಿ ಸೇರಿಸಿಕೊಂಡಿದ್ದಾರೆ. ಇದರ ಮುಂದುವರಿದ ಭಾಗವಾಗಿ ಮೂಡಬಿದಿರೆ ಮಂಗಳೂರು ಹೆದ್ದಾರಿಯ ವಿದ್ಯಾಗಿರಿ ಪಕ್ಕದಲ್ಲಿ ‘ಸಾಯಿ ಮಂಜಯ್ಯ ಹೈಟ್ಸ್ ಕಟ್ಟಡ ಸಮುಚ್ಚಯವನ್ನು ನಿರ್ಮಿಸಿದ್ದಾರೆ. 12 ಮಹಡಿಗಳ ಈ ಸಮುಚ್ಚಯವು ಪ್ರಸ್ತುತ ಮೂಡಬಿದ್ರೆಯಲ್ಲಿ ಅತ್ಯಂತ ಎತ್ತರದ ಕಟ್ಟಡವು ಇದಾಗಿದ್ದು ವಾಣಿಜ್ಯ ಮತ್ತು ವಸತಿ ಸಮುಚ್ಚಯವಾಗಿದ್ದು ಮೂಡಬಿದ್ರೆ ನಾಗರಿಕರ ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸುತ್ತಿದೆ.
ಮಂಗಳೂರಿನ ಖ್ಯಾತ ‘ಸಿಟಿ ಸೆಂಟರ್’ ಮಾದರಿಯಲ್ಲಿ ಮೂಡಬಿದ್ರೆಯಲ್ಲಿ ‘ಸಿಟಿ ಮಹಲ್’ ನಿರ್ಮಿಸಿ ಮೂಡಬಿದ್ರೆ ಆಸುಪಾಸಿನ ನಾಗರಿಕರ ಬಹುದಿನದ ಕನಸು ಪೂರೈಸುವುದು ಇವರ ಮುಂದಿನ ಯೋಜನೆ. ಇದು ಯಶಸ್ವಿಯಾಗಿ ಮೂಡಬಿದ್ರೆಯ ಜನರ ಸೇವೆಗೆ ಶೀಘ್ರದಲ್ಲಿ ಲಭ್ಯವಾಗಲಿ ಎಂಬುದು ನಮ್ಮ ಆಶಯ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿಯ ಭಕ್ತರಾದ ಶ್ರೀ ಜಯರಾಮ ಎಂ ಶೆಟ್ಟಿ ಯವರು ಕಾಯಕವೇ ಕೈಲಾಸ ಎಂದು ನಂಬಿದವರು. ಮೂಲತಃ ಕೃಷಿ ಕುಟುಂಬದವರಾದ ಶ್ರೀಯುತರು ಕೈ ಕೆಸರಾದರೆ ಬಾಯಿ ಮೊಸರು ಎಂಬ ವಚನಕ್ಕೆ ಬದ್ದರಾಗಿದ್ದುಕೊಂಡು ಸತತ ಪರಿಶ್ರಮದಿಂದ ಜೀವನದಲ್ಲಿ ಉತ್ತರೋತ್ತರ ಅಭಿವೃದ್ಧಿ ಕಂಡವರು. ಕಳೆದ 40 ವರ್ಷಗಳಿಂದ ಇವರ ತೀರ್ಥರೂಪರು, ನಂತರ ಇವರು ಶ್ರೀ ಕ್ಷೇತ್ರ ಕಟೀಲು ಮೇಳದ ಯಕ್ಷಗಾನ ಬಯಲಾಟವನ್ನು ಆಡಿಸುತ್ತಾ ಬಂದವರು. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿಯ ಕೃಪೆ ಕಟಾಕ್ಷಕ್ಕೆ ಪಾತ್ರರಾದ ಇವರು ಉತ್ತಮ ಕಲಾಪೋಷಕರು, ದಾನಿಗಳು, ಸಾಮಾಜಿಕ ಅಭಿವೃದ್ಧಿಯಲ್ಲಿ ಕಾಳಜಿಯುಳ್ಳವರೂ ಆಗಿದ್ದಾರೆ. ಶ್ರೀ ಜಯರಾಮ ಎಂ. ಶೆಟ್ಟಿಯವರ ಕುಟುಂಬ ಉತ್ತರೋತ್ತರ ಅಭವೃದ್ಧಿಯಾಗಲಿ ಎಂಬ ಆಶಯ ನಮ್ಮದು.