ಹೊಸ ಜೀವ ಹೊಸ ಭಾವ ಹೊಸ ವೇಗ ತೋರುತಿದೆ, ಅಳುವ ಕಡಲೊಳು ಬಂತು ನಗೆ ಹಾಯಿಯ ದೋಣಿ ಮನುಜರೆದೆ ಬನದಲ್ಲಿ ಭಾವ ಕುಸುಮವು ಅರಳಿ ಓಡಲುರಿಯ ತಣಿಸಲು ತವಕದಲಿ ಸಾಗಿಹರು. ಇದು ಎಂ. ವೀರಪ್ಪ ಮೊಯ್ಲಿಯವರ ಶ್ರೀ ರಾಮಾಯಣ ಮಹಾನ್ವೇಷಣಂನಲ್ಲಿ ಬರುವ ಸಾಲುಗಳು. ಈ ಕವನದ ಸಾಲುಗಳಂತೆ ಅಯೋಧ್ಯೆಯ ರಾಮ ಮಂದಿರದಲ್ಲಿ 500 ವರ್ಷಗಳ ನಂತರ ಜ. 22 ರಂದು ಪುನರಪಿ ರಾಮಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ದೇಶದ ಎಲ್ಲೆಡೆ ಉತ್ಸವದ ಉತ್ಸಾಹ, ಸಾಮುದಾಯಿಕತೆ ಮತ್ತು ಅನನ್ಯತೆಯ ನೆಲೆಯಲ್ಲಿ ರೂಪು ತಾಳುವ ಸಾಂಸ್ಕೃತಿಕ ವೈಭವವನ್ನು ಆಚರಿಸುತ್ತಾ ಶುಭ ಯಾತ್ರೆಯೊಂದಿಗೆ ರಾಮ ಭಕ್ತಿಯನ್ನು ಪ್ರದರ್ಶಿಸುತ್ತಿರುವ ಸಂದರ್ಭದಲ್ಲಿ ಘಾಟ್ಕೋಪರ್ ಪೂರ್ವ ಪಂತನಗರದ ಕನ್ನಡ ವೆಲ್ಫೇರ್ ಸೊಸೈಟಿಯು ಕೂಡಾ ಅಧ್ಯಕ್ಷರಾದ ನವೀನ್ ಶೆಟ್ಟಿ ಇನ್ನ ಬಾಳಿಕೆಯವರ ನೇತೃತ್ವದಲ್ಲಿ ಜ. 20 ರಂದು ರಾಮಲಲ್ಲಾನ ಶೋಭಾ ಯಾತ್ರೆಯನ್ನು ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯದಂತೆ ಪುಷ್ಪಾಲಂಕೃತವಾದ ರಜತ ರಥದಲ್ಲಿ ಎಳೆಯ ಮಕ್ಕಳಿಂದ ರಾಮ, ಲಕ್ಷ್ಮಣ, ಸೀತೆಯವರ ವೇಷ ಭೂಷಣದೊಂದಿಗೆ ಸುಮಾರು 50 ಮಕ್ಕಳ ಲೇಜಿಮ್ ನೃತ್ಯ, ಚೆಂಡೆವಾದನ, ವಾದ್ಯಗಳ ನಿನಾದ, ಪಟಾಕಿಗಳ ಸುರಿಮಳೆ, ಮಂತ್ರಾಕ್ಷತೆಯ ಕಳಶವನ್ನು ಹೊತ್ತ ವಿಶ್ವ ಹಿಂದೂ ಪರಿಷತ್ತಿನ ಮುಖಂಡರು, ಶುಭ ಕಳಶವನ್ನು ಹೊತ್ತ ಸುಮಾರು 300 ಕ್ಕೂ ಅಧಿಕ ಸುಮಂಗಲೆಯರು, ಹಾಗೂ ಸಾಗರೋಪಾದಿಯಲ್ಲಿ ಬಂದು ಸೇರಿದ ಜನಸಮುದಾಯದೊಂದಿಗೆ ಜಡತೆ ಜಾಡ್ಯವ ಕಡಿದು ನಮೋನ್ವೇಷದಲ್ಲಿ ಶೋಭಯಾತ್ರೆಯ ಹಿರಿಮೆ, ಗರಿಮೆಯನ್ನು ನೋಡುಗರ ಮನದಲ್ಲಿ ಭಕ್ತಿ, ಭಾವೋದ್ವೇಗ ಮೂಡುವಂತೆ ಬಹಳ ವಿಜೃಂಭಣೆಯಿಂದ ಆಚರಿಸಿದರು.
ಶೋಭಯಾತ್ರೆಯ ಉದ್ಘಾಟನೆಯನ್ನು ಬಂಟರ ಸಂಘ ಮುಂಬಯಿ ಇದರ ಉಪಾಧ್ಯಕ್ಷರು, ಬಾಬಾ ಗ್ರೂಪ್ಸ್ ಆಫ್ ಕಂಪನಿಯ ಮುಖ್ಯಸ್ಥರಾದ ಮಹೇಶ್ ಶೆಟ್ಟಿಯವರು ದೀಪ ಬೆಳಗಿಸುವುದರೊಂದಿಗೆ ನೆರವೇರಿಸಿದರು. ಬಂಟರ ಸಂಘ ಮುಂಬಯಿ ಇದರ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಅಶೋಕ್ ಪಕ್ಕಳ, ಬಂಟರವಾಣಿಯ ಕಾರ್ಯಾಧ್ಯಕ್ಷರಾದ ಕರ್ನೂರು ಮೋಹನ್ ರೈ, ಕುರ್ಲಾ ದಿವಾಕರ್ ಶೆಟ್ಟಿ ಮುಂತಾದ ಗಣ್ಯರು ಹಾಗೂ ಕನ್ನಡ ವೆಲ್ಫೇರ್ ಸೊಸೈಟಿಯ ಸಮಿತಿ ಸದಸ್ಯರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.