
ಈಗಿನ ಯುವ ಪೀಳಿಗೆಯ ಕೆಲವು ಹುಡುಗಿಯರಿಗೆ ಅತಿಯಾದ ಸ್ವೇಚ್ಛಾಚಾರ ಜಾಸ್ತಿಯಾಗಿ ಕೆಲವು ಹುಡುಗರ ಜೀವನ ಹಾಳಾಗ್ತಾ ಇದೆ. ಮುಖ್ಯವಾಗಿ ಈಗ ಇರುವುದೇ ತಂದೆ ತಾಯಿಗಳಿಗೆ ಒಬ್ಬಳೇ ಮಗಳು ಅಥವಾ ಒಬ್ಬನೇ ಮಗ. ಆದ್ದರಿಂದ ಅವರನ್ನು ಚಿಕ್ಕಂದಿನಿಂದಲೇ ಅತಿಯಾದ ಮುದ್ದು ಮಾಡಿ ಸಾಕಿರ್ತಾರೆ. ಅವುಗಳಿಗೆ ತಮ್ಮ ಹೆತ್ತವರು ತಮ್ಮನ್ನು ಸಾಕಿ ಸಲಹಲು, ಒಳ್ಳೆ ವಿದ್ಯಾಭ್ಯಾಸ ಕೊಡಿಸಲು ಎಷ್ಟು ಕಷ್ಟ ಪಟ್ಟಿದ್ದಾರೆ ಅನ್ನುವ ಅರಿವು ಇರುವುದಿಲ್ಲ. ಹೆತ್ತವರೂ ಹಾಗೆ ತಾವು ಪಡುವ ಕಷ್ಟ ಮಕ್ಕಳಿಗೆ ಗೊತ್ತಾಗಬಾರದೆಂದು ಅದನ್ನು ಮುಚ್ಚಿಡುತ್ತಾರೆ. ಇದರಿಂದ ಮಕ್ಕಳಿಗೂ ಹೆತ್ತವರ ಕಷ್ಟ ಗೊತ್ತಿರುವುದಿಲ್ಲ. ಅವರಿಗೆ ತಾವು ಕೇಳಿದ್ದನ್ನೆಲ್ಲಾ ಹೆತ್ತವರು ತೆಗೆದು ಕೊಡುತ್ತಾರೆ. ಎಲ್ಲಾ ಸುಲಭದಲ್ಲಿ ಸಿಕ್ಕಿದ ಕೂಡಲೇ ಅವುಗಳಿಗೆ ಸ್ವೇಚ್ಛಾಚಾರ ಬೆಳೆಯುತ್ತದೆ. ತಾನು ಏನು ಮಾಡಿದರೂ ಮನೆಯವರು ನಮ್ಮನ್ನು ಪ್ರಶ್ನೆ ಮಾಡುವುದಿಲ್ಲವೆಂಬ ಹುಂಬ ಧೈರ್ಯದಿಂದ ನಿಧಾನವಾಗಿ ದಾರಿ ತಪ್ಪಲು ಶುರು ಮಾಡುತ್ತಾರೆ. ಇದರಲ್ಲಿ ಹೆತ್ತವರ ತಪ್ಪು ತುಂಬಾ ಇದೆ. ಯಾರೇ ಆಗಲಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಕಷ್ಟದ ಅರಿವು ಮೂಡಿಸಬೇಕು. ಮಕ್ಕಳಿಗೆ ಬರೀ ಶಾಲೆಯ ಓದು ಸಾಕಾಗುವುದಿಲ್ಲ. ಮನೆಯಲ್ಲಿ ಮಕ್ಕಳಿಗೆ ಎಳವೆಯಲ್ಲೇ ಸಂಸ್ಕಾರ ಕಲಿಸಬೇಕು. ಸ್ವಲ್ಪ ಮನೆಯಲ್ಲಿ ಮಕ್ಕಳಿಗೆ ದೈವ ದೇವರ ಬಗ್ಗೆ, ಗುರು ಹಿರಿಯರ ಬಗ್ಗೆ ಹೇಗಿರಬೇಕು ಎಂಬುದನ್ನು ತಿಳಿಸಿಕೊಡಬೇಕು.


ನಾವು ಈಗ ಚಿಕ್ಕ ಮಗುವಿದ್ದಾಗಲೇ ಅವುಗಳ ಕೈಯಲ್ಲಿ ಮೊಬೈಲ್ ಕೊಟ್ಟು ಅದನ್ನು ಹೇಗೆ ಬಳಸಬೇಕೆಂದು ನಾವೇ ಹೇಳಿಕೊಟ್ಟು ಮಕ್ಕಳನ್ನು ಹಾಳಾಗಲು ಅಲ್ಲಿಂದಲೇ ಪ್ರಾರಂಭ ಮಾಡುತ್ತೇವೆ. ಈ ಮಕ್ಕಳಿಗೆ ಅದರ ಚಟ ಹತ್ತಿದ ಮೇಲೆ ಮತ್ತೆ ನಮ್ಮ ಮಾತು ಅವುಗಳು ಕೇಳುವುದಿಲ್ಲ. ಅದರ ಬದಲು ಆ ಮಕ್ಕಳಿಗೆ ಎಳವೆಯಲ್ಲೇ ನಮ್ಮ ಸನಾತನ ಸಂಸ್ಕೃತಿಯ ಬಗ್ಗೆ ಹೇಳಿ ಕೊಟ್ಟು ಚಿಕ್ಕಂದಿನಿಂದಲೇ ಮಕ್ಕಳಿಗೆ ಮನೆಯಲ್ಲಿ ಸಾಯಂಕಾಲ ಮನೆಯಲ್ಲಿ ದೀಪ ಹಚ್ಚುವ ಹೊತ್ತಿಗೆ ತಮ್ಮ ಬಳಿ ಕುಳ್ಳಿರಿಸಿ ಭಜನೆಯನ್ನು ಹೇಳಿಕೊಟ್ಟು, ಅವುಗಳಿಗೆ ತಮ್ಮ ಧರ್ಮದ ಬಗ್ಗೆ ಅರಿವು ಮೂಡಿಸಿ ಭಗವದ್ಗೀತೆ, ರಾಮಾಯಣದ ಬಗ್ಗೆ ಸ್ವಲ್ಪ ಹೇಳಿಕೊಟ್ಟು ಬೆಳೆಸಿದರೆ ಮುಂದಕ್ಕೆ ಮಕ್ಕಳು ಈ ರೀತಿ ಹಾದಿಯೂ ತಪ್ಪುವುದಿಲ್ಲ ಮತ್ತು ತಮ್ಮ ಹೆತ್ತವರ ಬಗ್ಗೆ ಗೌರವವೂ ಇರುತ್ತದೆ. ಆದರೆ ಈಗಿನ ಮಕ್ಕಳಿಗೆ ತಪ್ಪು ಮಾಡಿದಾಗ ಬುದ್ಧಿ ಹೇಳುವವರೂ ಇಲ್ಲ. ಹೇಳಿದರೆ ಅವುಗಳು ಕೇಳುವುದು ಇಲ್ಲ. ಸ್ವಲ್ಪ ಏನಾದರು ಮಕ್ಕಳು ಮಿತಿ ಮೀರಿದಾಗ ತಂದೆ ತಾಯಿ ಏನಾದರು ಸ್ವಲ್ಪ ಗದರಿದರೆ ಸಾಕು ಸ್ವಲ್ಪವೂ ತಾಳ್ಮೆಯೂ ಇಲ್ಲ. ಯೋಚಿಸುವ ಶಕ್ತಿಯೂ ಇಲ್ಲ. ಕೂಡಲೇ ಆತ್ಮಹತ್ಯೆ. ಆಮೇಲೆ ಹೆತ್ತವರಿಗೆ ಜೀವಮಾನವಿಡೀ ನೋವು. ಅದರಲ್ಲೂ ಈಗಿನ ಕೆಲವು ಹುಡುಗಿಯರಿಗೆ ಒಬ್ಬೊಬ್ಬರು ಬಾಯ್ ಫ್ರೆಂಡ್ ಸಾಕಾಗುವುದಿಲ್ಲ ಎರಡು ಮೂರಾದರು ಬೇಕು. ಒಟ್ಟಾರೆ ಅವರಿಗೆ ಬಿಂದಾಸ್ ಜೀವನ ಬೇಕು. ಅದಕ್ಕಾಗಿ ಯಾರಾದರೂ ಎರಡು ಮೂರು ಹುಡುಗರನ್ನು ಬಲೆಗೆ ಬೀಳಿಸಿ ಅವರಿಂದ ಎಲ್ಲಾ ಕಿತ್ತುಕೊಂಡು ಅವನ ಜೀವನ ಹಾಳುಮಾಡಿ ಮತ್ತೊಬ್ಬನನ್ನು ಹುಡುಕುವುದು. ಈ ಹುಡುಗರೂ ಅಷ್ಟೇ ಇಂತಹ ಹುಡುಗಿಯರ ವೈಯಾರಕ್ಕೆ ಮರುಳಾಗಿ ಅವಳು ಕೇಳಿದ್ದಕ್ಕೆಲ್ಲಾ ಹೂಂ ಅಂದು ಅವಳು ಹೇಳಿದ ಹಾಗೆ ಕುಣಿತಾರೆ. ಮನೆಯಲ್ಲಿ ಅಪ್ಪ ಅಮ್ಮನಿಗೆ ಒಂದು ರೂಪಾಯಿ ಖರ್ಚು ಮಾಡದಿದ್ದರೂ ಪರವಾಗಿಲ್ಲ ವಾಟ್ಸಪ್ ನಲ್ಲಿ ಪರಿಚಯವಾದವಳಿಗೆ ಕೇಳಿದ್ದನೆಲ್ಲಾ ಕೊಟ್ಟು ಕೊನೆಗೆ ಅವಳ ಕಾಟ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡು ಹೆತ್ತವರನ್ನು ಜೀವಮಾನವಿಡೀ ಅನಾಥರನ್ನಾಗಿ ಮಾಡಿ ಹೋಗ್ತಾರೆ. ದಯವಿಟ್ಟು ಹೆತ್ತವರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಒಳ್ಳೆಯ ಸಂಸ್ಕಾರ ಕೊಡಿ. ನಿಮ್ಮ ಮಕ್ಕಳು ಕೊನೆ ತನಕ ನಿಮ್ಮ ಬಳಿಯೇ ಇರುವ ಹಾಗೆ ನೋಡಿಕೊಳ್ಳಿ. ಅತಿಯಾದ ಮುದ್ದು ಒಳ್ಳೆಯದಲ್ಲ. ಹಿಂದಿನವರು ಅಪ್ಪ ಅಮ್ಮಂದಿರ ಬೈಗುಳ ಪೆಟ್ಟು ತಿಂದು ಬೆಳೆದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳಿ.

























































































































