ರಸ್ತೆ, ಚರಂಡಿ, ಫುಟ್ಪಾತ್, ಪಾರ್ಕಿಂಗ್, ಬ್ಲಾಕ್ ಸಮಸ್ಯೆಗಳು ಇದು ಮಂಗಳೂರಿನ ಹಲವು ವರ್ಷಗಳ ನಿತ್ಯದ ಸಮಸ್ಯೆಯೇ!. ಅದರಲ್ಲೂ ಮಳೆಗಾಲ ಬಂತು ಎಂದರೆ ಈ ಸಮಸ್ಯೆ ತಾರಕಕ್ಕೆ ಏರುತ್ತದೆ ಮತ್ತು ಇದೊಂದು ನರಕ ಯಾತನೆ ಮತ್ತು ಅಭಿವೃದ್ಧಿಯ ನಿಜವಾದ ಪರೀಕ್ಷೆಯೇ!. ಮಂಗಳೂರು ಎಂದರೆ ದೇವಸ್ಥಾನ, ದೈವಸ್ಥಾನ, ಹಾಗೆಯೇ ಎಜುಕೇಶನ್ ಹಬ್, ಪ್ರಕೃತಿ ಸೌಂದರ್ಯ, ಹಸಿರು ಪರಿಸರ, ಸಮುದ್ರ ತೀರ ಮತ್ತು ಉತ್ತಮ ವಿಚಾರಗಳ ಆಸಕ್ತಿದಾಯಕ ಲವಲವಿಕೆಯಿಂದ ಕೂಡಿದ ಸಾಂಪ್ರದಾಯಿಕ ಮತ್ತು ಸಂಪತ್ಭರಿತ ನಗರ. ಇದೆಲ್ಲವೂ ಸತ್ಯ. ಆದರೆ ಈಗ ಮಳೆಗಾಲ ನಗರದ ಜನರಿಗೆ ಆಶೀರ್ವಾದಕ್ಕಿಂತ ಆತಂಕದ ವಿಷಯವಾಗುತ್ತಿದೆ. ಪ್ರತಿವರ್ಷ ಮಳೆಗಾಲ ಆರಂಭವಾದ ತಕ್ಷಣ ರಸ್ತೆಗಳು ಕೆರೆಗಳಾಗುತ್ತವೆ, ಚರಂಡಿಗಳು ತುಂಬಿ ಹರಿಯುತ್ತವೆ, ಮನೆಗಳಿಗೆ, ಅಂಗಡಿಗಳಿಗೆ ಕೃತಕ ನೆರೆ ನೀರು ನುಗ್ಗುತ್ತದೆ ಹಾಗೂ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ. ಈ ದೃಶ್ಯಗಳು ಹೊಸದೇನಲ್ಲ. ವರ್ಷದಿಂದ ವರ್ಷಕ್ಕೆ ಇದೇ ಸಮಸ್ಯೆಗಳು ಮರುಕಳಿಸುತ್ತಿವೆ. ಮತ್ತೆ ಹೆಚ್ಚಾಗುತ್ತಿದೆ. ಕೆಲವರ ಗೋಳು ಹೇಳತೀರದು.ಇದು ವಿಷಾದನೀಯ ಮತ್ತು ವಿವೇಚನೀಯ!. ನಗರ ಅಭಿವೃದ್ಧಿಯ ಸ್ಮಾರ್ಟ್ ಸಿಟಿಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚವಾಗುತ್ತಿದ್ದರೂ, ಮಳೆಗಾಲದ ಮೊದಲ ಮಳೆಯಲ್ಲೇ ಅಭಿವೃದ್ಧಿಯ ನೈಜ ಚಿತ್ರಣ ಜನರ ಕಣ್ಣಿಗೆ ಬೀಳುತ್ತದೆ. ಉತ್ತಮ ರಸ್ತೆ, ಸುಸಜ್ಜಿತ ಚರಂಡಿ ವ್ಯವಸ್ಥೆ ಹಾಗೂ ವೈಜ್ಞಾನಿಕ ನಗರ ಯೋಜನೆ ಇಲ್ಲದಿದ್ದರೆ ಎಷ್ಟೇ ಅಭಿವೃದ್ಧಿ ಹೇಳಿಕೊಂಡರೂ ಅದು ಅಪೂರ್ಣವೇ ಸರಿ. ಆದರೆ ಮಂಗಳೂರಿನ ಹೆಚ್ಚಿನ ಈ ಅಭಿವೃದ್ಧಿ ‘ಎಲ್ಲಾ ಬಣ್ಣ ಮಸಿ ನುಂಗಿತು’ ಎಂಬ ಮಾತಿನಂತೆ ಆಗಿದೆ. ಮಳೆಗಾಲದ ಮೊದಲು ಚಂದ ಕಾಣುವ ರಸ್ತೆಗಳು ದೂರದೃಷ್ಟಿಯ ಕೊರತೆಯಿಂದ ಮತ್ತು ನಮ್ಮ ಸೋಕಾಲ್ಡ್ ಸರಕಾರಿ ಇಂಜಿನಿಯರ್ಗಳ ವಿಚಿತ್ರ ತಲೆ ಖರ್ಚು ಮತ್ತು ಕಂಟ್ರಾಕ್ಟರ್ ಗಳ ಕಡಿಮೆ ಖರ್ಚು ಕಾಮಗಾರಿ ಒಟ್ಟು ಸೇರಿ ಜನಗಳಿಗೆ ಹುಚ್ಚು ಹಿಡಿಸಿದೆ. ಹೆಚ್ಚಿನವುಗಳೆಲ್ಲವೂ ಅಸಮರ್ಪಕ ಮತ್ತು ಅವೈಜ್ಞಾನಿಕ ಕಾಮಗಾರಿಗಳೇ.
ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಎಂಬ ಗಾದೆಯಂತೆ ಈ ಮಳೆಗಾಲವು ಈ ಕಾಮಗಾರಿಗಳ ನೈಜ ಬಣ್ಣವನ್ನು ಬಯಲಿಗೆಳೆಯುತ್ತಿದೆ. ಮಂಗಳೂರಿನ ಹಲವಾರು ಪ್ರಮುಖ ರಸ್ತೆಗಳಲ್ಲಿ ಮಳೆ ಬಂದಾಗ ಗುಂಡಿಗಳು ನಿರ್ಮಾಣವಾಗುತ್ತವೆ. ಕೆಲವು ಕಡೆ ಡಾಂಬರು ಕಿತ್ತುಹೋಗಿ ವಾಹನ ಸವಾರರು ಜೀವದ ಹಂಗು ತೆರೆದು ಚಲಾಯಿಸಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗುವುದು ಸಾಮಾನ್ಯವಾಗಿದೆ. ಶಾಲಾ ಮಕ್ಕಳು, ವೃದ್ಧರು ಮತ್ತು ಪಾದಚಾರಿಗಳು ಪ್ರತಿದಿನವೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಇನ್ನೊಂದು ಪ್ರಮುಖ ಸಮಸ್ಯೆ ಚರಂಡಿ ವ್ಯವಸ್ಥೆ. ಅನೇಕ ಕಡೆ ಚರಂಡಿಗಳು ಹೂಳು, ಪ್ಲಾಸ್ಟಿಕ್ ಹಾಗೂ ಕಸದಿಂದ ಮುಚ್ಚಿ ಹೋಗಿರುವುದರಿಂದ ಮಳೆನೀರು ಸರಾಗವಾಗಿ ಹರಿಯುವುದಿಲ್ಲ. ಪರಿಣಾಮವಾಗಿ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೂ ತೊಂದರೆಯಾಗುತ್ತದೆ. ಕೆಲವೇ ಗಂಟೆಗಳ ಭಾರಿ ಮಳೆಯಿಂದ ಮನೆ, ಅಂಗಡಿ ಮತ್ತು ಕಚೇರಿಗಳಿಗೆ ನೀರು ನುಗ್ಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಪ್ರತೀ ವರ್ಷದ ಪರಿಹಾರವೇ ಇರದ ಸಮಸ್ಯೆ. ಇನ್ನು ಡ್ರೈನೇಜ್ ಗೂ ನೀರು ನುಗ್ಗಿ ಎಲ್ಲೆಂದರಲ್ಲಿ ನರಕ ದರ್ಶನ ಮಾಡಿಸುತ್ತಿದೆ. ಪ್ರವಾಹದ ಸಮಸ್ಯೆಗೆ ಕೇವಲ ಅಧಿಕ ಮಳೆಯೇ ಕಾರಣವಲ್ಲ. ನಗರ ಯೋಜನೆಯಲ್ಲಿನ ಲೋಪಗಳು, ನೈಸರ್ಗಿಕ ನೀರು ಹರಿಯುವ ಮಾರ್ಗಗಳ ಒತ್ತುವರಿ, ಕೆರೆಗಳ ನಾಶ ಮಾಡಿ ಕಟ್ಟಿದ ವಸತಿ ಸಮುಚ್ಚಯಗಳು, ವಾಣಿಜ್ಯ ಕಟ್ಟೋಣಗಳು, ಅತಿಯಾದ ಕಾಂಕ್ರೀಟೀಕರಣ ಮತ್ತು ಕಸದ ಅಸಮರ್ಪಕ ನಿರ್ವಹಣೆಯೇ ಪ್ರಮುಖ ಕಾರಣಗಳಾಗಿವೆ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಹರಿವನ್ನು ತಡೆಯುವ ಕೆಲಸ ನಡೆದರೆ ಅದರ ಪರಿಣಾಮವನ್ನು ಜನರೇ ಅನುಭವಿಸಬೇಕಾಗುತ್ತದೆ. ನಮ್ಮಲ್ಲಿ ಕಾನೂನಿನ ರೀತಿಯಲ್ಲಿ ಇದ್ದ ಹಾಗೇ ಕೆಲಸ, ಕಾಮಗಾರಿ ನಡೆಯುವುದಲ್ಲ. ಆ ಫೈಲ್ ತೆಗೆದುಕೊಂಡ ಅಧಿಕಾರಿಗೆ ಫೈಲ್ ಜೊತೆಗೆ ಸಿಗುವ ಕವರ್ ಆಧಾರದಲ್ಲೇ ಕೆಲಸ ನಡೆಯುವುದು ಇದು ಓಪನ್ ಸೀಕ್ರೆಟ್!.





ಹಾಗೆಂದು ಮಳೆಗಾಲದಲ್ಲಿ ಸಾರ್ವಜನಿಕರಿಗೂ ಜವಾಬ್ದಾರಿ ಇದೆ. ಚರಂಡಿಗೆ ಪ್ಲಾಸ್ಟಿಕ್, ಕಸ ಕಡ್ಡಿ ಮತ್ತು ಕಟ್ಟಡ ತ್ಯಾಜ್ಯ ಎಸೆಯುವುದು ಸಾಮಾನ್ಯವಾಗಿದೆ. ನಂತರ ಅದೇ ಚರಂಡಿ ಮುಚ್ಚಿ ನೀರು ರಸ್ತೆಗಳಿಗೆ ಹರಿದಾಗ ಸರ್ಕಾರವನ್ನು ಮಾತ್ರ ದೂರುವುದು ಅದೂ ನ್ಯಾಯವಲ್ಲ. ನಾಗರಿಕರ ಜಾಗೃತಿಯೂ ಅಷ್ಟೇ ಮುಖ್ಯ. ಮಂಗಳೂರು ಮಹಾನಗರ ಪಾಲಿಕೆ, ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಗಳು ಮಳೆಗಾಲ ಆರಂಭವಾಗುವ ಮೊದಲೇ ಚರಂಡಿಗಳ ಸ್ವಚ್ಛತೆ, ಗುಂಡಿಗಳ ದುರಸ್ತಿ ಮತ್ತು ನೀರು ಹರಿಯುವ ಮಾರ್ಗಗಳ ನಿರ್ವಹಣೆಗೆ ಆದ್ಯತೆ ನೀಡಬೇಕು. ತಾತ್ಕಾಲಿಕ ದುರಸ್ತಿಗಳ ಬದಲಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಯೋಜನೆ ರೂಪಿಸಬೇಕು. ಪ್ರತಿಯೊಂದು ಕಾಮಗಾರಿಯ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಅಧಿಕಾರಿಗಳು, ಶಾಸಕರು ಸ್ಥಳೀಯರ ಅಭಿಪ್ರಾಯ ಪಡೆದು ಪರಿಶೀಲಿಸಬೇಕು. ಸಾರ್ವಜನಿಕ ಹಣದಿಂದ ನಿರ್ಮಾಣವಾಗುವ ರಸ್ತೆಗಳು ಕೆಲವು ತಿಂಗಳಲ್ಲೇ ಹಾಳಾಗುವುದು ಒಪ್ಪಲಾಗದ ಸಂಗತಿ.ಇದು ತೆರಿಗೆ ಹಣದ ಪೋಲು ಅಷ್ಟೇ. ನಗರದ ಅಭಿವೃದ್ಧಿ ಎಂದರೆ ಕೇವಲ ಎತ್ತರದ ಕಟ್ಟಡಗಳು, ಅಗಲವಾದ ರಸ್ತೆಗಳು ಅಥವಾ ಹೊಸ ಯೋಜನೆಗಳಲ್ಲ. ಮಳೆ ಬಂದಾಗ ಜನರು ಸುರಕ್ಷಿತವಾಗಿ ಸಂಚರಿಸಲು ಸಾಧ್ಯವಾಗಬೇಕು, ಮನೆಗಳಿಗೆ ನೀರು ನುಗ್ಗಬಾರದು ಮತ್ತು ದೈನಂದಿನ ಜೀವನ ಅಸ್ತವ್ಯಸ್ತವಾಗಬಾರದು. ಇದೇ ನಿಜವಾದ ಅಭಿವೃದ್ಧಿಯ ಮಾನದಂಡ. ಮಂಗಳೂರು ಶಿಕ್ಷಣ, ಆರೋಗ್ಯ, ಕೈಗಾರಿಕೆ ಮತ್ತು ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿದೆ. ಇಂತಹ ನಗರವು ಮಳೆಗಾಲದಲ್ಲಿ ಸಮಸ್ಯೆಗಳ ಆಗರವಾಗಬಾರದು. ಆಡಳಿತ, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು, ಶಾಸಕರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದರೆ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅಸಾಧ್ಯವೇನಲ್ಲ. ಹತ್ತಿಪ್ಪತ್ತು ವರ್ಷಗಳ ಹಿಂದಿನ ಮಳೆಗಾಲವೇ ಬೇರೆ. ಆ ಮಳೆ ಈಗ ಬರುವುದೇ ಇಲ್ಲ. ಆಗಿನ ಆ ಬಿಡದೇ ಬರುವ ಜಡಿಮಳೆ ಈಗ ಬರುತ್ತಿದ್ದರೆ ಸಿಟಿಯೇ ಮುಳಗಬಹುದೋ ಏನೋ? ಮಳೆ ನಮ್ಮ ಶತ್ರುವಲ್ಲ; ಅದು ಪ್ರಕೃತಿಯ ಅಮೂಲ್ಯ ಕೊಡುಗೆ. ಆದರೆ ನಮ್ಮ ಯೋಜನಾ ವೈಫಲ್ಯ ಮತ್ತು ನಿರ್ಲಕ್ಷ್ಯದಿಂದ ಮಳೆಯೇ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಇನ್ನಾದರೂ ಎಚ್ಚೆತ್ತುಕೊಂಡು ವೈಜ್ಞಾನಿಕ ನಗರ ಯೋಜನೆ, ಉತ್ತಮ ರಸ್ತೆ ನಿರ್ಮಾಣ, ಸುಸಜ್ಜಿತ ಚರಂಡಿ ವ್ಯವಸ್ಥೆ ಹಾಗೂ ಸಾರ್ವಜನಿಕರ ಸಹಭಾಗಿತ್ವದ ಮೂಲಕ ಮಂಗಳೂರನ್ನು ಮಳೆಗಾಲದಲ್ಲೂ ಸುರಕ್ಷಿತ ಮತ್ತು ಸುಂದರ ನಗರವನ್ನಾಗಿ ರೂಪಿಸಬೇಕಾಗಿದೆ. ಅಭಿವೃದ್ಧಿಯ ನಿಜವಾದ ಪರೀಕ್ಷೆ ಬೇಸಿಗೆಯಲ್ಲಲ್ಲ, ಮಳೆಗಾಲದಲ್ಲೇ ನಡೆಯುತ್ತದೆ.
ಬರಹ : ಶರತ್ ಶೆಟ್ಟಿ ಪಡುಪಳ್ಳಿ














































































































